ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿ ಗರ್ಭಿಣಿಯಾಗಿ, ಈಗ ೨೫ ವಾರಗಳ ಭ್ರೂಣವನ್ನು ಹೊತ್ತಿರುವ 13 ವರ್ಷದ ಸಂತ್ರಸ್ತ ಬಾಲಕಿಯ ಗರ್ಭಪಾತ ಮಾಡಿಸಿಕೊಳ್ಳಲು ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ. ಆದರೆ, ಇದರಿಂದ ಅಪಾಯವಿದೆಯೇ ಎನ್ನುವುದನ್ನು ಪರಿಗಣಿಸಿ ವೈದ್ಯರು ಅಂತಿಮ ತೀರ್ಮಾನವನ್ನು ಕೈಗೊಳ್ಳಬಹುದು ಎಂದೂ ಅದು ಹೇಳಿದೆ.
ಸಂತ್ರಸ್ತೆಯು ತಾಯಿಯ ಮೂಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಅಧೀಕ್ಷಕರಿಗೆ ಗರ್ಭಪಾತ ಮಾಡಿಸುವುದಕ್ಕೆ ನಡೆಸಬೇಕಾದ ಪ್ರಕ್ರಿಯೆಯನ್ನು ನಡೆಸಲು ಸೂಚಿಸಿದೆ. ಇದರ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ವೈದ್ಯರು ಅಂತಿಮ ತೀರ್ಮಾನ ಕೈಗೊಳ್ಳಬೇಕು
ವೈದ್ಯರು ಪರಿಶೀಲಿಸಿ ಅವರು ನೀಡುವ ಅಭಿಪ್ರಾಯ ಆಧರಿಸಿ ಗರ್ಭಪಾತ ಪ್ರಕ್ರಿಯೆ ನಡೆಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಗರ್ಭಪಾತ ನಡೆಸುವ ಪ್ರಕ್ರಿಯೆಯಿಂದ ಅರ್ಜಿದಾರರ ಜೀವಕ್ಕೆ ಅಪಾಯವಿದೆ ಎಂಬ ಅಭಿಪ್ರಾಯವನ್ನು ವೈದ್ಯರು ನೀಡಿದರೆ ಅಂತಿಮ ನಿರ್ಧಾರವನ್ನು ವೈದ್ಯರು ಕೈಗೊಳ್ಳಬಹುದಾಗಿದೆ ಎಂದು ಪೀಠವು ಆದೇಶದಲ್ಲಿ ಅಭಿಪ್ರಾಯಪಟ್ಟಿಸಿದೆ.
ಭ್ರೂಣ ಸಂರಕ್ಷಣೆಗೆ ಸೂಚನೆ
ವೈದ್ಯಕೀಯವಾಗಿ ಗರ್ಭಪಾತ ನಡೆಸಲು ವೈದ್ಯರು ತೀರ್ಮಾನಿಸಿದರೆ ಹೈದರಾಬಾದ್ ಅಥವಾ ಬೆಂಗಳೂರಿನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ವಂಶವಾಹಿ (ಡಿಎನ್‌ಎ) ಪರೀಕ್ಷೆ ನಡೆಸಲು ಅನುಕೂಲವಾಗುವಂತೆ ಭ್ರೂಣವನ್ನು ರಕ್ಷಿಸಬೇಕು ಎಂದು ಪೀಠವು ಆದೇಶಲ್ಲಿ ಉಲ್ಲೇಖಿಸಿದೆ.
ಎಲ್ಲ ವೆಚ್ಚಗಳನ್ನು ಸರಕಾರ ಭರಿಸಬೇಕು
ಗರ್ಭಪಾತ ಮಾಡಿಸಿಕೊಳ್ಳಲು ಸಂತ್ರಸ್ತೆ ಮತ್ತು ಆಕೆಯ ನೆರವಿಗೆ ಇರುವವರು ಆಸ್ಪತ್ರೆಗೆ ಹೋಗಲು ಮತ್ತು ಪ್ರಕ್ರಿಯೆ ಮುಗಿದ ಬಳಿಕ ಅವರನ್ನು ಮನೆಗೆ ಬಿಡಲು ಸಾರಿಗೆ ವ್ಯವಸ್ಥೆ ಮಾಡಬೇಕು. ವೈದ್ಯರು ಸೂಚನೆಯಂತೆ ಮತ್ತೆ ತಪಾಸಣೆಗೆ ಆಸ್ಪತ್ರೆಗೆ ಹೋಗಬೇಕಾದಲ್ಲಿ ಅದಕ್ಕೂ ಸಾರಿಗೆ ವ್ಯವಸ್ಥೆಯನ್ನು ಪೊಲೀಸರು ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಗರ್ಭಪಾತ ಮಾಡಿಸಿಕೊಳ್ಳಲು, ಆನಂತರದ ಚಿಕಿತ್ಸೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಉಚಿತವಾಗಿ ಮಾಡಬೇಕು. ಸಂತ್ರಸ್ತ ಬಾಲಕಿಯ ಪರವಾಗಿ ಯಾವುದೇ ತೆರನಾದ ಹಣ ಪಡೆಯುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಬೆಂಗಳೂರು ಪೊಲೀಸರು ನಡೆಸುತ್ತಿದ್ದಾರೆ. ಅಧಿಕೃತ ಪ್ರತಿವಾದಿಗಳು ಎರಡು ವಾರಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಪೀಠವು ಆದೇಶ ಮಾಡಿದೆ. ವಕೀಲ ಕರಣ್ ಜೋಸೆಫ್ ಅವರು ಸಂತ್ರಸ್ತರ ಪರವಾಗಿ ವಾದ ಮಂಡಿಸಿದ್ದರು.
ಇದನ್ನೂ ಓದಿ | Legal Abortion | ವಿವಾಹಿತರಿಗೂ ಸುರಕ್ಷಿತ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್ ಐತಿಹಾಸಿಕ ಆದೇಶ