Site icon Vistara News

Sexual rejection : ಮದುವೆ ಆದ್ಮೇಲೆ ಸೆಕ್ಸ್‌ಗೆ ನಿರಾಕರಿಸುವುದು ಕ್ರೌರ್ಯ ಎಂದ ಹೈಕೋರ್ಟ್‌

Sexual rejection

#image_title

ಬೆಂಗಳೂರು: ಮದುವೆ ಆದ ಮೇಲೆ ಗಂಡ ಅಥವಾ ಹೆಂಡತಿ ಪರಸ್ಪರರ ದೈಹಿಕ ಸಂಬಂಧಕ್ಕೆ ನಿರಾಕರಿಸುವುದು (Sexual rejection) ಕ್ರೌರ್ಯವಾಗಿ ಪರಿಗಣಿತವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ (Karnataka High court) ಹೇಳಿದೆ. ಅದೇ ಹೊತ್ತಿಗೆ ಇನ್ನೊಂದು ಅಂಶವನ್ನು ಸ್ಪಷ್ಟಪಡಿಸಿರುವ ಕೋರ್ಟ್‌, ಈ ನಿರಾಕರಣೆ ಪ್ರಕ್ರಿಯೆಯು ಭಾರತೀಯ ದಂಡ ಸಂಹಿತೆಯ (Indian penal code) ಪ್ರಕಾರ ದಂಡನೀಯ ಅಪರಾಧವೇನೂ ಆಗುವುದಿಲ್ಲ ಎಂದೂ ಹೇಳಿದೆ.

ಗಂಡು ಮತ್ತು ಹೆಣ್ಣು ಮದುವೆ ಆಗುವುದರ ಮೂಲ ಉದ್ದೇಶವೇ ದೈಹಿಕ ಆಸೆಗಳ ಪೂರೈಕೆ. ಇಂಥ ದೈಹಿಕ/ಲೈಂಗಿಕ ಸಂಬಂಧಕ್ಕೆ (Sexual consummation) ಅವಕಾಶವೇ ಸಿಗಲಿಲ್ಲ ಎಂದರೆ ಮದುವೆಯ ಮೂಲ ಉದ್ದೇಶವನ್ನೇ ನಿರಾಕರಿಸಿದಂತಾಗುತ್ತದೆ. ಹೀಗಾಗಿ ಹಿಂದೂ ವಿವಾದ ಕಾಯಿದೆ 1995ರ (Hindu Marriage act 1995) ಅಡಿಯಲ್ಲಿ ಕ್ರೌರ್ಯವಾಗಿ ಪರಿಗಣಿಸಲ್ಪಡುತ್ತದೆ. ಹಾಗಂತ, ವಿವಾಹಿತ ಗಂಡು ಮತ್ತು ಹೆಣ್ಣು ಪರಸ್ಪರ ಲೈಂಗಿಕ ಸಂಬಂಧ ಹೊಂದದೆ ಇರುವುದು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧವಲ್ಲ. ಕಾನೂನನ್ನು ಬಳಸಿಕೊಂಡು ಅಂಥವರಿಗೆ ಶಿಕ್ಷೆ ಕೊಡಲು ಬರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ (Justice M Nagaprasanna) ಅವರು ಅಭಿಪ್ರಾಯಪಟ್ಟರು.

ಅತ್ಯಂತ ವಿಶೇಷವಾದ ಪ್ರಕರಣವೊಂದರಲ್ಲಿ ಇಂಥ ಮಹತ್ವದ ತೀರ್ಪನ್ನು ನೀಡುವ ಮೂಲಕ ಆಪಾದನೆಗೆ ಒಳಗಾದ ಗಂಡ ಮತ್ತು ಆತನ ಪೋಷಕರ ಮೇಲಿನ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಿ, ಶಿಕ್ಷೆಯಿಂದ ಪಾರು ಮಾಡಿದ್ದಾರೆ.

ಏನಿದು ಕ್ರೌರ್ಯ, ಆಪಾದನೆ ಪ್ರಕರಣ?

ಅವರಿಬ್ಬರ ನಡುವೆ ಮದುವೆ ನಡೆದಿದ್ದು 2019ರ ಡಿಸೆಂಬರ್‌ 18ರಂದು. ಆದರೆ ಆತ ಮಾತ್ರ ಆರಂಭದ ದಿನದಿಂದಲೇ ದೈಹಿಕ ಸಂಬಂಧವನ್ನು ನಿರಾಕರಿಸಿದ್ದ. ಇದು ಆ ಯುವತಿಯನ್ನು ಸಿಟ್ಟಿಗೆಬ್ಬಿಸಿತ್ತು. ಆಕೆ ಮೊದಲ 28 ದಿನ ನೋಡಿ ಪತಿಯ ಮನೆಯಿಂದ ಹೊರಬಿದ್ದಿದ್ದಾಳೆ.

2022ರ ಫೆಬ್ರವರಿ 5ರಂದು ಪತ್ನಿಯು ಗಂಡ ಮತ್ತು ಆತನ ಹೆತ್ತವರ ವಿರುದ್ಧ ಐಪಿಸಿ ಸೆಕ್ಷನ್ 498ರ (IPC section 498) ಹಾಗೂ ವರದಕ್ಷಿಣೆ ಕಾಯಿದೆ (Dowry Act) ಅಡಿ ವಿರುದ್ಧ ಕೇಸ್ ದಾಖಲಿಸಿದ್ದರು. ಇದರ ಜತೆಗೆ ಕೌಟುಂಬಿಕ ನ್ಯಾಯಾಲಯದಲ್ಲಿಯೂ ಪ್ರಕರಣ ದಾಖಲಾಗಿತ್ತು.

ದೀರ್ಘ ಕಾಲ ವಿಚಾರಣೆ ನಡೆದು 2022ರ ನವಂಬರ್‌ 16ರಂದು ಮದುವೆ ರದ್ದುಗೊಳಿಸಲಾಯಿತು. ಆದರೆ, ಯುವತಿ ಅಲ್ಲಿಗೇ ಪ್ರಕರಣವನ್ನು ನಿಲ್ಲಿಸಲು ಒಪ್ಪಲಿಲ್ಲ. ಪತಿಯ ಕ್ರಿಮಿನಲ್‌ ಕೇಸನ್ನು ಮುಂದುವರಿಸಲು ನಿರ್ಧರಿಸಿದರು. ಆಗ ಯುವಕ ಹೈಕೋರ್ಟ್‌ ಮೆಟ್ಟಿಲು ಹತ್ತಿ, ನಮ್ಮ ನಡುವಿನ ಸಂಬಂಧವನ್ನು ರದ್ದುಪಡಿಸಲಾಗಿದೆ. ಹೀಗಾಗಿ ಕ್ರಿಮಿನಲ್‌ ಪ್ರಕರಣ ಮುಂದುವರಿಸಲು ಅವಕಾಶ ನೀಡಬಾರದು ಎಂದು ಕೋರಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಹಾಗೂ 1961ರ ವರದಕ್ಷಿಣೆ ವಿರೋಧಿ ಕಾಯ್ದೆಯ ಸೆಕ್ಷನ್ 4ರ ಅಡಿ ತನ್ನ ಪೋಷಕರು ಹಾಗೂ ತನ್ನ ವಿರುದ್ಧ ಪತ್ನಿ ದಾಖಲಿಸಿದ್ದ ಆರೋಪಪಟ್ಟಿ ವಿರುದ್ಧ ಪತಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು ಅದರ ವಿಚಾರಣೆ ನಡೆದು ಈಗ ಕ್ರಿಮಿನಲ್‌ ಪ್ರಕರಣ ಮುಂದುವರಿಸಲು ಅವಕಾಶ ನಿರಾಕರಿಸಲಾಗಿದೆ.

ಹಾಗಿದ್ದರೆ ಇಲ್ಲಿ ನಿಜಕ್ಕೂ ಆಗಿದ್ದೇನು?

ಅವರಿಬ್ಬರ ಮದುವೆಯಾದ ಆರಂಭದಲ್ಲೇ ಯುವಕ ತನ್ನ ಪತ್ನಿಯ ಜತೆಗೆ ದೈಹಿಕ ಸಂಬಂಧವನ್ನು ನಿರಾಕರಿಸಿದ್ದ. ಅದಕ್ಕೆ ಅವನು ನೀಡಿದ್ದ ಕಾರಣವೆಂದರೆ, ಪ್ರೀತಿ ಎಂದರೆ ದೈಹಿಕ ಸಂಬಂಧವಲ್ಲ, ಅದು ಆತ್ಮಗಳ ಸಮ್ಮಿಲನ! ಅವನು ಈ ರೀತಿ ಬೋಧಿಸುವ ಒಬ್ಬ ಧಾರ್ಮಿಕ ಗುರುವಿನ ಅನುಯಾಯಿಯಾಗಿರುವುದೇ ಇದಕ್ಕೆ ಕಾರಣವಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಆತ ಹೆಂಡತಿ ಜತೆ ದೈಹಿಕವಾಗಿ ಬೆರೆಯಲು ನಿರಾಕರಿಸಿದ್ದ. ಆತ ಬ್ರಹ್ಮಕುಮಾರಿ ಸಮಾಜದ ಅನುಯಾಯಿಯಾಗಿದ್ದ ಎಂದು ಹೇಳಲಾಗಿದೆ.

ನ್ಯಾಯಾಧೀಶರು ಹೇಳಿದ್ದೇನು?

ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ಈ ವಿಚಾರವನ್ನು ಗಮನಿಸಿದ ನ್ಯಾಯಾಧೀಶರಾದ ನಾಗರತ್ನ ಅವರು, ಆ ಯುವಕ ಮದುವೆಯಾದರೂ ತನ್ನ ಹೆಂಡತಿ ಜತೆ ದೈಹಿಕವಾಗಿ ಒಂದಾಗುವ ವಿಚಾರವನ್ನು ಯೋಚಿಸಿಯೇ ಇರಲಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡರು.

ಈ ರೀತಿ ಮದುವೆಯಾದ ಬಳಿಕ ಪರಸ್ಪರ ಲೈಂಗಿಕ/ದೈಹಿಕ ಸಂಬಂಧವನ್ನು ನಿರಾಕರಿಸುವುದು, ಪರಸ್ಪರ ಆಸೆಗಳನ್ನು ಪೂರೈಸದೆ ಇರುವುದು ಕ್ರೌರ್ಯವಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದರು. ಅದಕ್ಕಾಗಿಯೇ ಅವರಿಬ್ಬರ ನಡುವಿನ ಮದುವೆಯನ್ನು ರದ್ದುಪಡಿಸಿದ್ದನ್ನು ವಿವರಿಸಿದರು. ಹಾಗಂತ, ಇದನ್ನೇ ಮುಂದಿಟ್ಟುಕೊಂಡು ಆ ವ್ಯಕ್ತಿಗೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಹಾಗೆ ಮಾಡಿದರೆ ಅದು ಕಾನೂನಿನ ದುರುಪಯೋಗ ಆಗುತ್ತದೆ ಎಂದು ಮನವರಿಕೆ ಮಾಡಿದರು.

ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದ್ದೇನೆಂದರೆ, ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 12(1)(ಎ) ಪ್ರಕಾರ, ಗಂಡು ಮತ್ತು ಹೆಣ್ಣು ಒಬ್ಬರಿಗೊಬ್ಬರು ದೈಹಿಕವಾಗಿ ಒಂದಾಗದೆ ಇದ್ದರೆ ಮದುವೆ ಪರಿಪೂರ್ಣವಾಗುವುದೇ ಇಲ್ಲ. ಹೀಗಾಗಿ ವಿವಾಹ ಕಾಯಿದೆಯ ಪ್ರಕಾರ ಅದು ಕ್ರೌರ್ಯವೇ ಆಗುತ್ತದೆ. ಆದರೆ, ಇದು ಐಪಿಸಿ ಕಾಯಿದೆಯ ಸೆಕ್ಷನ್‌ 498ಎ ಅಡಿ ಅಪರಾಧ ಎಂದು ಪರಿಗಣಿತವಾಗುವುದಿಲ್ಲ.

ಇದನ್ನೂ ಓದಿ: Allahabad High Court: ದೀರ್ಘ ಕಾಲದವರೆಗೆ ಸಂಗಾತಿಗೆ ಸೆಕ್ಸ್ ನಿರಾಕರಿಸಿದರೆ, ಅದು ಮಾನಸಿಕ ಕ್ರೌರ್ಯ! ಕೋರ್ಟ್ ಹೀಗೆ ಹೇಳಿದ್ದೇಕೆ?

Exit mobile version