Site icon Vistara News

Shelter gumbaz | ಮೂಲ ನಕ್ಷೆಯಲ್ಲಿ ಗೋಪುರ ಇಲ್ಲವೇ ಇಲ್ಲ! ಶಾಸಕ ರಾಮದಾಸ್‌ ಆಪ್ತ ಸಹಾಯಕ ಬದಲಾಯಿಸಿದರೇ?

ಶೆಲ್ಟರ್‌ ವಿನ್ಯಾಸ ಬದಲಿಸಿದ್ದು ಯಾರು?

ಮೈಸೂರು: ಭಾರಿ ಚರ್ಚೆಗೆ ಕಾರಣವಾಗಿರುವ ಮೈಸೂರಿನ ಬಸ್‌ ನಿಲ್ದಾಣ ವಿವಾದ (Shelter gumbaz) ಕ್ಷಣ ಕ್ಷಣಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಸಂಸದ ಪ್ರತಾಪ್‌ಸಿಂಹ ಅವರು ಶೆಲ್ಟರ್‌ ಮೇಲಿನ ಗುಂಬಜ್‌ ಮಾದರಿಯ ರಚನೆಯನ್ನು ಪ್ರಶ್ನಿಸಿ ಅದನ್ನು ತೆರವುಗೊಳಿಸಲು ಆಗ್ರಹಿಸಿದ್ದರು. ಆದರೆ, ಇದು ಎಲ್ಲರೂ ಒಪ್ಪಿರುವ ಮಾದರಿ, ಇದು ಮೈಸೂರಿನ ಅರಮನೆ ಮಾದರಿ ಎಂದು ಹೇಳುವ ಮೂಲಕ ಪ್ರತಾಪ್‌ ಸಿಂಹ ಅವರನ್ನು ತಣ್ಣಗೆ ಮಾಡಲಾಯಿತು.

ಆದರೆ, ಮುಂದಿನ ಹಂತದಲ್ಲಿ ಇದು ಸಂಸದ ಪ್ರತಾಪ್‌ ಸಿಂಹ ಮತ್ತು ಶಾಸಕ ಎಸ್‌.ಎ ರಾಮದಾಸ್‌ ನಡುವಿನ ಕದನವಾಗಿ ಪರಿವರ್ತನೆಯಾಯಿತು. ರಾಮದಾಸ್‌ ಅವರು ಇದು ಮೂಲ ನಕ್ಷೆಯಲ್ಲಿ ಇರುವಂತೆ ಮಾಡಿದ ನಿರ್ಮಾಣ ಎಂದು ವಾದಿಸಿದರು. ಈಗ ಪ್ರತಾಪ್‌ ಸಿಂಹ ಅವರು ಶಾಸಕ ರಾಮದಾಸ್‌ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದಲ್ಲದೆ, ಹೆದ್ದಾರಿ ಕಾಮಗಾರಿ ನಡೆಸುವ ಕೆಆರ್‌ಐಡಿಎಲ್‌ ರೂಪಿಸಿದ ಮೂಲ ವಿನ್ಯಾಸ ಇದಲ್ಲ. ಇದನ್ನು ಶಾಸಕ ರಾಮದಾಸ್‌ ಅವರ ಆಪ್ತ ಸಹಾಯಕರಾದ ಮುದ್ದುಕೃಷ್ಣ ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂಲ ನಕ್ಷೆ ಮತ್ತು ಮುದ್ದು ಕೃಷ್ಣ ಅವರು ಬದಲಾಯಿಸಿ ಸಹಿ ಹಾಕಿದ ಎರಡೂ ವಿನ್ಯಾಸಗಳನ್ನು ಪ್ರತಾಪ್‌ ಸಿಂಹ ತೋರಿಸಿದ್ದಾರೆ. ಇದರ ಪ್ರಕಾರ, ಮೊದಲನೇ ವಿನ್ಯಾಸದಲ್ಲಿ ಗುಂಬಜ್‌ನ ರೂಪಗಳಿಲ್ಲ. ಆದರೆ, ಬದಲಾದ ವಿನ್ಯಾಸದಲ್ಲಿ ಗುಂಬಜ್‌ಗಳನ್ನು ರೂಪಿಸಲಾಗಿದೆ ಎಂದು ಪ್ರತಾಪ್‌ ಸಿಂಹ ವಿವರಿಸಿದ್ದಾರೆ.

ಪ್ರತಾಪ್‌ ಸಿಂಹ ಅವರ ಪ್ರಕಾರ, ನಿಯಮವನ್ನು ಉಲ್ಲಂಘಿಸಿದ್ದು ರಾಮದಾಸ್‌ ಅವರ ಆಪ್ತ ಸಹಾಯಕ ಮುದ್ದು ಕೃಷ್ಣ. ಮೂಲ ನಕ್ಷೆ ಬದಲಾಯಿಸಿ ಗೋಪುರದ ಹೊಸ ವಿನ್ಯಾಸ ಮಾಡಿ, ವಿನ್ಯಾಸದ ಕೆಳಗೆ ಸಹಿ ಕೂಡಾ ಮಾಡಿದ್ದಾರೆ ಎನ್ನುತ್ತಾರೆ ಅವರು. ಕೆ ಆರ್ ಐ ಡಿ ಎಲ್‌ಗೆ ನಿರ್ದೇಶನ ನೀಡುವ ಹಕ್ಕು ಸಂಸದನಾಗಿ ನನಗೂ ಇಲ್ಲ. ಆದರೂ ರಾಮದಾಸ್ ಆಪ್ತ ಸಹಾಯಕ ನೀಡುವ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಬಣ್ಣವನ್ನೂ ಬದಲಾಯಿಸಲಾಗಿದೆ!
ಆರಂಭದಲ್ಲಿ ಗುಂಬಜ್‌ ಮಾತ್ರ ಇದ್ದದ್ದು ಬಳಿಕ ಅದಕ್ಕೆ ಕಲಶ ಕೂರಿಸಲಾಗಿದೆ, ನಂತರ ಸ್ವಾಮೀಜಿಗಳು, ಬೊಮ್ಮಾಯಿ, ನರೇಂದ್ರ ಮೋದಿ ಫೋಟೊ ಹಾಕಲಾಗಿದೆ. ಈ ನಡುವೆ, ಗುಂಬಜ್‌ನಲ್ಲಿದ್ದ ಚಿನ್ನದ ಬಣ್ಣವನ್ನು ಬದಲಾಯಿಸಿ ಕೆಂಪು ಬಣ್ಣವನ್ನು ಬಳಿಯಲಾಗಿದೆ. ಈ ಮೂಲಕ ಅರಮನೆ ಮಾದರಿಯಂತೆ ಬಿಂಬಿಸುವಂತೆ ಪ್ರಯತ್ನಿಸಲಾಗಿದೆ ಎಂಬ ಮಾತೂ ಇದೆ.

ಮೊದಲ ಹಂತದಲ್ಲಿ ಇದು ಹಿಂದೂ-ಮುಸ್ಲಿಂ ಎಂಬಂತೆ ಬಿಂಬಿತವಾದರೂ ಮುಂದಿನ ಹಂತದಲ್ಲಿ ಇದು ಸಂಸದ ಪ್ರತಾಪ್‌ ಸಿಂಹ ಮತ್ತು ರಾಮದಾಸ್‌ ನಡುವಿನ ಖಾಸಗಿ ಜಗಳವಾಗಿ ಪರಿವರ್ತನೆಯಾಗಿದೆ. ಇವರಿಬ್ಬರೂ ಪರಸ್ಪರ ತಮಗಿರುವ ವೈಷಮ್ಯವನ್ನು ಈ ವಿಚಾರದಲ್ಲಿ ತೀರಿಸಿಕೊಳ್ಳುತ್ತಿರುವಂತೆ ಕಂಡುಬರುತ್ತಿದೆ. ಈ ಪ್ರಕರಣ ಬಿಜೆಪಿಗೆ ದೊಡ್ಡ ಡ್ಯಾಮೇಜ್‌ ಮಾಡುವ ಸಾಧ್ಯತೆ ಇರುವುದರಿಂದ ಇಬ್ಬರಿಗೂ ಬಹಿರಂಗ ಹೇಳಿಕೆ ನೀಡದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Shelter gumbaz| ರಾಮದಾಸ್‌ ಬಳಿ ನನ್ನನ್ನು ಸುಟ್ಟು ಹಾಕುವಷ್ಟು ಹಣವಿದೆ: ಪ್ರತಾಪ್‌ ಸಿಂಹ ತೀವ್ರ ವಾಗ್ದಾಳಿ

Exit mobile version