ಮೈಸೂರು: ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಕೊಡಲಿ. ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ: ಹೀಗೆಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ ಮೈಸೂರಿನ ಕೃಷ್ಣರಾಜ ಶಾಸಕ ಎಸ್.ಎ. ರಾಮದಾಸ್. ಮೈಸೂರಿನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಬಸ್ ಶೆಲ್ಟರ್‌ಗಳ (Shelter gumbaz) ಮೇಲೆ ಗುಂಬಜ್ ಮಾದರಿಯನ್ನು ಕಟ್ಟಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ತಾನು ಕಿರುಕುಳ ಅನುಭವಿಸುತ್ತಿರುವುದಾಗಿ ಹೇಳಿಕೊಂಡರು. ಜತೆಗೆ ಇದು ತಮ್ಮನ್ನು ಪಕ್ಷ ಬಿಡಿಸಲು ಮಾಡುತ್ತಿರುವ ಹುನ್ನಾರ ಎಂದು ಪರೋಕ್ಷವಾಗಿ ಹೇಳಿದರು.
ʻʻಬಸ್ ಶೆಲ್ಟರ್ ಕಟ್ಟುವ ವಿಚಾರದಲ್ಲಿ ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಕೊಡಲಿ. ಒಂದು ವೇಳೆ ನನ್ನ ಕೆಲಸದಿಂದ ನಷ್ಟವಾಗಿದ್ದರೆ ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆʼʼ ಎಂದು ಕಣ್ಣೀರು ಹಾಕುತ್ತಾ ಹೇಳಿದ ಎಸ್.ಎ. ರಾಮದಾಸ್ ಅವರು, ನನ್ನನ್ನು ಬಿಟ್ಟು ಬಿಡಿ ಎಂದು ಕೈಮುಗಿದು ಕೇಳಿಕೊಂಡರು.
ʻʻಶೆಲ್ಟರ್ ವಿವಾದಕ್ಕೆ ಸಂಬಂಧಿಸಿ ತನಿಖೆ ನಡೆಸಲು ಸಮಿತಿ ರಚಿಸುವಂತೆ ಮನವಿ ಮಾಡಿದ್ದೇನೆ. ಸಮಿತಿ ಯಾವುದೇ ವರದಿ ಕೊಟ್ಟರೂ ಅದಕ್ಕೆ ಬದ್ಧʼʼ ಎಂದು ಹೇಳಿದರು ಎಸ್.ಎ ರಾಮದಾಸ್.
ʻʻ30 ವರ್ಷಗಳ ಹಿಂದೆ ಬಿಜೆಪಿಯ 11 ಜನ ಶಾಸಕರು ಇದ್ದರು. ಅವರಿಗೆ ಕಿರುಕುಳ ನೀಡಿದ ಪರಿಣಾಮವಾಗಿ 10 ಜನ ಬೇರೆ ಪಕ್ಷಕ್ಕೆ ಹೊರಟು ಹೋದರು. ಉಳಿದಿರುವವನು ನಾನೊಬ್ಬನೇʼʼ ಎಂದು ಹೇಳುವ ಮೂಲಕ ತನ್ನನ್ನೂ ಪಕ್ಷ ಬಿಟ್ಟು ಹೋಗುವಂತೆ ಮಾಡುವ ಹುನ್ನಾರವಿದೆ ಎಂದು ಪರೋಕ್ಷವಾಗಿ ಹೇಳಿದರು.
ʻʻದಯಮಾಡಿ ನನ್ನನ್ನು ಬಿಟ್ಟು ಬಿಡಿ.. ಏನೂ ಪ್ರಶ್ನೆ ಕೇಳಬೇಡಿ. ನಾನು ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ.
ಪಾರ್ಕ್, ಸ್ಮಶಾನ ಅಭಿವೃದ್ಧಿ ನನ್ನ ಕನಸು. ಸಾಯುವ ಮುನ್ನ ಸಾಧನೆ ಮಾಡಬೇಕು ಎಂಬುದು ನನ್ನ ಗುರಿ. ಈ ಬಗ್ಗೆ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇನೆʼʼ ಎಂದರು.
ಇದನ್ನೂ ಓದಿ | Shelter gumbaz | ಇದು ಮುಸ್ಲಿಂ ಶೈಲಿಯಲ್ಲ, ಅರಮನೆ ಮಾದರಿ: ಪ್ರತಾಪ್ ಸಿಂಹಗೆ ರಾಮದಾಸ್ ತಿರುಗೇಟು