Site icon Vistara News

Karnataka Election: ವರ್ಚಸ್ಸು ಕುಂದಿದ್ದೇ ಶೆಟ್ಟರ್‌ಗೆ ಟಿಕೆಟ್‌ ಕೈತಪ್ಪಲು ಕಾರಣ; ಲಿಂಗಾಯತರಿಗೆ ಅನ್ಯಾಯ ಆಗಿಲ್ಲ: ವಿಜಯ ಸಂಕೇಶ್ವರ

Shettar loses ticket due to low image No injustice done to Lingayats by BJP says Vijay Sankeshwar Karnataka Election updates

ಹುಬ್ಬಳ್ಳಿ: ಪ್ರತಿಯೊಂದು ಚುನಾವಣೆಯಲ್ಲಿ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿಗೆ ಆಶೀರ್ವಾದ ಮಾಡಿದ್ದೀರಿ. ಆದರೆ, ಈ ಹಿಂದೆ ಪಕ್ಷದ ಶಾಸಕರಾಗಿದ್ದ ಜಗದೀಶ್‌ ಶೆಟ್ಟರ್‌ ಅವರು ಯಾರೋ ಮಾಡಿದ ಕೆಲಸವನ್ನು ತಾವೇ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಈ ಬಾರಿ ಪಕ್ಷದ ಅಭ್ಯರ್ಥಿ ಮಹೇಶ್‌ ಟೆಂಗಿನಕಾಯಿ ಅವರಿಗೆ ಮತ ನೀಡಿ ಗೆಲ್ಲಿಸಿ. ಶೆಟ್ಟರ್‌ಗೆ ಟಿಕೆಟ್‌ ಕೈತಪ್ಪಲು ಕಾರಣ ಅವರು ಕಳೆದ ಬಾರಿ ಕ್ಷೇತ್ರದಲ್ಲಿ ಪಡೆದುಕೊಂಡ ಮತಗಳೇ ವಿನಃ ಬೇರೆ ಯಾವುದೂ ಅಲ್ಲ. ಅವರ ವರ್ಚಸ್ಸು ಕ್ಷೇತ್ರದಲ್ಲಿ ಕಡಿಮೆ ಆಗಿತ್ತು. ಬಿಜೆಪಿಯಿಂದ ಲಿಂಗಾಯತರಿಗೆ ಯಾವುದೇ ಅನ್ಯಾಯವಾಗಿಲ್ಲ ಎಂದು ಉದ್ಯಮಿ, ಮಾಜಿ‌ ಸಂಸದ ಡಾ. ವಿಜಯ ಸಂಕೇಶ್ವರ ಸ್ಪಷ್ಟನೆ ನೀಡಿದರು.

ಲಿಂಗರಾಜ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ವಿಜಯ ಸಂಕೇಶ್ವರ ಅವರು, ಮತದಾರರೇ, ತಾವೆಲ್ಲರೂ ಇಷ್ಟು ದಿನ ನನಗಿರಬಹುದು, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರಿಗೆ ಇರಬಹುದು ಬಹಳ ಖುಷಿಯಿಂದ ಮತವನ್ನು ಹಾಕುತ್ತಿದ್ದಿರಿ. ಅದೇ ಜಗದೀಶ್‌ ಶೆಟ್ಟರ್ ಅವರಿಗೆ ನಮ್ಮ ಕರ್ಮ, ಮತವನ್ನು ಹಾಕಬೇಕಲ್ಲವಾ ಎಂದು ಮತ ಚಲಾವಣೆ ಮಾಡುತ್ತಿದ್ದಿರಿ, ಇನ್ನೂ ಕೆಲವರು ಕಾಂಗ್ರೆಸ್‌ಗೆ ಮತ ಹಾಕಲು ಸಾಧ್ಯವಿಲ್ಲ ಎಂದು ಅವರಿಗೆ ಮತ ಹಾಕುತ್ತಿದ್ದರು. ಆದರೆ, ಈ ಬಾರಿ ನಮ್ಮ ಅಭ್ಯರ್ಥಿ ಮಹೇಶ್‌ ಟೆಂಗಿನಕಾಯಿ ಅವರಿಗೆ ಮತವನ್ನು ಖುಷಿಯಿಂದ ಚಲಾಯಿಸಿ ಎಂದು ವಿಜಯ ಸಂಕೇಶ್ವರ ಅವರು ಕರೆ ನೀಡಿದರು.

ಬೇರೆ ಬೇರೆ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾದ ಯುವಕರು.

ಕ್ಷೇತ್ರದಲ್ಲಿ ಶೆಟ್ಟರ್‌ಗೆ ವರ್ಚಸ್ಸು ಕಡಿಮೆ ಆಗಿದ್ದರಿಂದಲೇ ಟಿಕೆಟ್‌ ತಪ್ಪಿತು

ಕಳೆದ ಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌ ಅವರು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ 22 ಸಾವಿರ ಮತಗಳ ಅಂತರದಿಂದ ಗೆದ್ದು ಬಂದಿದ್ದರು. ಆದರೆ, ಅದಾಗಿ ಹನ್ನೊಂದು ತಿಂಗಳಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಲ್ಹಾದ್‌ ಜೋಶಿಯವರು 52 ಸಾವಿರ ಮತಗಳ ಅಂತರದಿಂದ ಗೆದ್ದು ಬಂದರು. ಈ ವಿಚಾರವನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದು, ಕ್ಷೇತ್ರದಲ್ಲಿ ಸರ್ವೇ ಮಾಡಿಸಿದ್ದರು. ಇವರಿಗೆ ಈ ಬಾರಿ ವರ್ಚಸ್ಸು ಕಡಿಮೆ ಆದ ಹಿನ್ನೆಲೆಯಲ್ಲಿ ಟಿಕೆಟ್‌ ಕೊಡಲಿಲ್ಲ. ಹೀಗಾಗಿ ಈ ಬಾರಿ ಜಗದೀಶ್‌ ಶೆಟ್ಟರ್‌ ಅವರಿಗೆ ಮತ ಚಲಾಯಿಸುವುದಿಲ್ಲ ಎಂದು ನೀವೇ ನಿರ್ಧರಿಸಿ. ಅದೂ ನಾನು ಹೇಳುತ್ತಿದ್ದೇನೆ ಎಂದಲ್ಲ. ಇಲ್ಲಿರುವ ನಂಬರ್‌ಗಳನ್ನು ನೋಡಿ ನಿರ್ಧರಿಸಿ ಎಂದು ವಿಜಯ ಸಂಕೇಶ್ವರ ಅವರು ಕರೆ ನೀಡಿದರು.

ಇದನ್ನೂ ಓದಿ: Murder Case: ಅಸೆಂಬ್ಲಿ ಎಲೆಕ್ಷನ್‌ ಟಿಕೆಟ್‌ ಕೇಳಿದ್ದಕ್ಕೆ ರೌಡಿಶೀಟರ್‌ ಕಗ್ಗೊಲೆ?; ಅಸಾದುದ್ದೀನ್ ಓವೈಸಿ ಜತೆ ಮಾತಾಡಿದ ಆಡಿಯೊ ವೈರಲ್‌

ಲಿಂಗಾಯತರಿಗೆ ಅನ್ಯಾಯವಾಗಿಲ್ಲ

ಚುನಾವಣೆ ಬಂದಾಗ ಜಾತಿಯ ವಿಷ ಬೀಜವನ್ನು ಬಿತ್ತಲಾಗುತ್ತಿದೆ. ಲಿಂಗಾಯತರನ್ನೇ ಟಾರ್ಗೆಟ್‌ ಮಾಡಲಾಗುತ್ತಿದೆ. ಹಾಗಾಗಿ ಲಿಂಗಾಯತರಿಗೆ ಬಿಜೆಪಿಯಿಂದ ಯಾವುದೇ ಅನ್ಯಾಯವಾಗಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಈ ಪಕ್ಷವು ಎಲ್ಲರಿಂದಲೂ ನಿರ್ಮಾಣವಾಗಿದೆ. ಯಾವುದೇ ಒಬ್ಬ ವ್ಯಕ್ತಿಯಿಂದ ಅಲ್ಲ ಎಂದು ವಿಜಯ ಸಂಕೇಶ್ವರ ಹೇಳಿದರು.

ಮೂರ್ನಾಲ್ಕು ವರ್ಷದಲ್ಲಿ ಹುಬ್ಬಳ್ಳಿ ಸುಂದರ ನಗರಗಳ ಟಾಪ್‌ 10 ಪಟ್ಟಿಯಲ್ಲಿ

ಪ್ರತಿ ವರ್ಷ ದೇಶದ ಅತ್ಯಂತ ಸುಂದರ ನಗರಗಳ 10 ಹೆಸರನ್ನು ಪ್ರಕಟ ಮಾಡಲಾಗುತ್ತದೆ. ಸಾಮಾನ್ಯವಾಗಿ ಕರ್ನಾಟಕದಿಂದ ಮೈಸೂರು, ಮಧ್ಯಪ್ರದೇಶದಿಂದ ಇಂಧೋರ್‌ ಆಯ್ಕೆಯಾಗುತ್ತಾ ಬಂದಿದೆ. ಆದರೆ, ಇನ್ನು ಮೂರ್ನಾಲ್ಕು ವರ್ಷದಲ್ಲಿ ಈ ಗೌರವಕ್ಕೆ ನಮ್ಮ ಹುಬ್ಬಳ್ಳಿ ನಗರವು ಪಾತ್ರವಾಗಲಿದೆ. ಏಕೆಂದರೆ, ಅರವಿಂದ ಬೆಲ್ಲದ್‌, ಮಹೇಶ್‌ ಟೆಂಗಿನಕಾಯಿ ಹಾಗೂ ಡಾ. ಕ್ರಾಂತಿಕಿರಣ್‌ ಅವರು ಬಹಳ ಯುವ ನಾಯಕರಾಗಿದ್ದಾರೆ. ಇವರೆಲ್ಲರಿಗೂ ಒಂದು ವಿಷನ್‌ ಎಂಬುದು ಇದೆ. ಅಭಿವೃದ್ಧಿಯ ದೂರದೃಷ್ಟಿ ಇದೆ. ಇನ್ನು ಮೂರ್ನಾಲ್ಕು ವರ್ಷದಲ್ಲಿ ಹುಬ್ಬಳ್ಳಿಯನ್ನು ಸುಂದರ ಸ್ವಚ್ಛ ನಗರದ ಟಾಪ್‌ 10ರ ಪಟ್ಟಿಯಲ್ಲಿ ತರಲಾಗುವುದು ಎಂದು ಈ ಮೂರೂ ನಾಯಕರು ನನಗೆ ವಚನ ಕೊಟ್ಟಿದ್ದಾರೆ ಎಂದು ವಿಜಯ ಸಂಕೇಶ್ವರ ಹೇಳಿದರು.

ಅರವಿಂದ ಬೆಲ್ಲದ್‌ ಅವರು ಪ್ರಧಾನಮಂತ್ರಿ ಫಂಡ್‌ ಮುಖಾಂತರ ಧಾರವಾಡದಲ್ಲಿ 7280 ಮನೆಗಳನ್ನು ಬಡವರಿಗೆ ಉಚಿತವಾಗಿ ಹಂಚಿಕೆ ಮಾಡಿದ್ದಾರೆ. ಕಾಂಗ್ರೆಸ್‌ನವರು ಮಂಜೂರು ಮಾಡಿದ ಮನೆಗಳನ್ನೂ ನಾವು ನೋಡಿದ್ದೇವೆ. ಮಳೆಗಾಲದಲ್ಲಿ ಜೋರು ಗಾಳಿಗೆ ಆ ರೂಫ್‌ಗಳು ಹಾರಿಹೋಗುತ್ತಿದ್ದವು. ಆದರೆ, ಇಲ್ಲಿ ಅತ್ಯಂತ ಸದೃಢವಾದ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಆದರೆ, ಈ ಕೆಲಸವನ್ನು ಕಾಂಗ್ರೆಸ್‌ಗರಿಗೆ ಕಳೆದ ನೂರು ವರ್ಷಗಳಿಂದ ಏಕೆ ಮಾಡಲಾಗಿಲ್ಲ? ಎಂದು ವಿಜಯ ಸಂಕೇಶ್ವರ ಅವರು ಪ್ರಶ್ನೆ ಮಾಡಿದರು.

ರಾಜ್ಯಕ್ಕೆ ಒಂದು ಲಕ್ಷ ಕೋಟಿ ರೂ. ಬಿಡುಗಡೆ ಮಾಡಿರುವ ಮೋದಿ

ಕರ್ನಾಟಕವು ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಹೀಗಾಗಿ ಕರ್ನಾಟಕದ ಜನತೆ ಪೂರ್ಣ ಪ್ರಮಾಣದಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ ನೀವೆಲ್ಲರೂ ಬಿಜೆಪಿಗೆ ಮತ ಹಾಕಿ, ಇನ್ನೂ ಹೆಚ್ಚಿನ ಪ್ರಮಾಣದ ಅಭಿವೃದ್ಧಿಯಾಗಲಿದೆ. ಕಳೆದ ನಾಲ್ಕು ವರ್ಷದಲ್ಲಿ ಕರ್ನಾಟಕದಲ್ಲಿ ರಸ್ತೆ ಮತ್ತು ಬ್ರಿಡ್ಜ್‌ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಒಂದು ಲಕ್ಷ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ವಿಜಯ ಸಂಕೇಶ್ವರ ಹೇಳಿದರು.

ಬಿಜೆಪಿಯಲ್ಲಿ ಲಿಂಗಾಯತರಿಗೆ ಟಿಕೆಟ್‌ ಸಿಕ್ಕಿಲ್ಲ ಎಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದಾರೆ. ಅಲ್ಲದೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.‌ ಸಂತೋಷ್‌ ಅವರು ಯಾವುದೋ ಸಮಾವೇಶದಲ್ಲಿ ಮಾತನಾಡಿದ ಫೋಟೊವನ್ನು ಬಳಸಿ, ಲಿಂಗಾಯತರ ವಿರುದ್ಧವಾಗಿ ಮಾತನಾಡಿದ್ದಾರೆಂದು ಸುಳ್ಳು ಸುದ್ದಿಯನ್ನು ಬರೆದು ಎಲ್ಲೆಡೆ ಹಂಚಿದ್ದಾರೆ ಎಂದು ವಿಜಯ ಸಂಕೇಶ್ವರ ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಪಾಯಕಾರಿ ಬೆಳವಣಿಗೆ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಒಂದು ಸಮಾವೇಶದಲ್ಲಿ ಮಾತನಾಡುತ್ತಾ ತಾವು ಮುಸ್ಲಿಂ ಸಮುದಾಯದ ಪರವಾಗಿ ನಿಲ್ಲುವುದಾಗಿ ಹೇಳಿದ್ದರು. ಯಾವುದೇ ಒಂದು ಪಕ್ಷ, ಅದರಲ್ಲೂ ರಾಷ್ಟ್ರೀಯ ಪಕ್ಷವೊಂದು ಒಂದು ಸಮುದಾಯದ ಪರವಾಗಿ ನಿಲ್ಲುತ್ತದೆ ಎಂದು ಹೇಳಿಕೆ ನೀಡುವುದು ಬಹಳ ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಚುನಾವಣೆ ಹಾಗೂ ಮುಂದಿನ ಚುನಾವಣೆಯು ಭಾರತದವರ ಭವಿಷ್ಯವನ್ನು ಬರೆಯುವುದಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿದ್ದಾರೆ. ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಸಾವಿನ ಸರದಾರ ಎಂದು ಕಾಂಗ್ರೆಸ್‌ನವರು ಬಿಂಬಿಸಿದ್ದರು. ವಿಶ್ವದೆಲ್ಲೆಡೆ ಅವರ ವಿರುದ್ಧ ನಕಾರಾತ್ಮಕವಾಗಿ ಹೇಳಿದ್ದರು. ಆದರೆ, ಇಂದು ವಿಶ್ವದ 160ಕ್ಕೂ ಹೆಚ್ಚು ದೇಶಗಳು ಮೋದಿ ಅವರನ್ನು ವಿಶ್ವ ನಾಯಕ ಎಂದು ಒಪ್ಪಿಕೊಂಡಿವೆ. ಈಗ ಮೋದಿ ಅವರು ದೇಶದ ಆಸ್ತಿ ಮಾತ್ರವಲ್ಲ. ವಿಶ್ವದ ಆಸ್ತಿಯಾಗಿದ್ದಾರೆ ಎಂದು ವಿಜಯ ಸಂಕೇಶ್ವರ ಅವರು ಬಣ್ಣಿಸಿದರು.

ಲಿಂಗಾಯತರಿಗೆ ಸಂದೇಶ ರವಾನೆ

ಈ ಬಾರಿಯ ವಿಧಾನಸಭಾ ಚುನಾವಣೆ ಕಣ ರಂಗೇರಿದೆ. ಮತದಾನಕ್ಕೆ ಇನ್ನು ಮೂರು ದಿನ ಮಾತ್ರವೇ ಬಾಕಿ ಇದೆ. ಈ ವೇಳೆ ಬಹು ಚರ್ಚಿತ ಕಣವಾಗಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಮುಖರ ಸಭೆಯನ್ನು ನಡೆಸಲಾಗಿದ್ದು, ಲಿಂಗಾಯತ ಸಮುದಾಯ ನೂರಾರು ಮುಖಂಡರು ಭಾಗಿಯಾಗಿದ್ದರು. ಈ ಮೂಲಕ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ಕೈತಪ್ಪಿದರೂ ಲಿಂಗಾಯತ ಸಮುದಾಯಕ್ಕೆ ಯಾವುದೇ ಅನ್ಯಾಯ ಮಾಡಲಾಗಿಲ್ಲ ಎಂಬ ಸಂದೇಶವನ್ನು ಬಿಜೆಪಿ ಮುಖಂಡರು ರವಾನೆ ಮಾಡಿದ್ದಾರೆ.

ಇದನ್ನೂ ಓದಿ: Karnataka Election: ಮೊದಲ ಸಂಪುಟದಲ್ಲೇ ಗ್ಯಾರಂಟಿ ಜಾರಿ ಮಾಡೋಣ; ಸಿದ್ದು-ಡಿಕೆಶಿ ಆಪ್ತ ಮಾತುಕತೆ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ್ ಕೊರೆ, ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.

Exit mobile version