Site icon Vistara News

Karnataka Election 2023: 3ನೇ ಪಟ್ಟಿಯಲ್ಲೂ ಇಲ್ಲ ಶಿಗ್ಗಾಂವಿ ಅಭ್ಯರ್ಥಿ; ಸಿಎಂ ಕಟ್ಟಿಹಾಕಲು ಕಾಂಗ್ರೆಸ್‌ ಮಾಸ್ಟರ್‌ಪ್ಲ್ಯಾನ್‌ ಏನು?

Shiggavi Congress candidate not announced in 3rd list What is the master plan Karnataka Election 2023 updates

ಹಾವೇರಿ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕೆಲವೊಂದು ಕ್ಷೇತ್ರಗಳು ಕುತೂಹಲವನ್ನು ಹುಟ್ಟುಹಾಕಿವೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವರುಣ ಕ್ಷೇತ್ರದಲ್ಲಿ ಬಿಜೆಪಿ ಲಿಂಗಾಯತ ಸಮುದಾಯದ ಮುಖಂಡ, ಸಚಿವ ವಿ. ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಒಕ್ಕಲಿಗ ಸಮುದಾಯ ನಾಯಕ ಆರ್. ಅಶೋಕ್‌‌ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಸ್ಪರ್ಧೆ ಮಾಡುತ್ತಿರುವ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಇನ್ನೂ ಪ್ರಕಟ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿಹಾಕಲು ಕಾಂಗ್ರೆಸ್‌ ಮಾಸ್ಟರ್‌ ಪ್ಲ್ಯಾನ್‌ ಏನಾದರೂ ಮಾಡಿದೆಯೇ ಎಂಬ ಲೆಕ್ಕಾಚಾರಗಳು ಈಗ ಹುಟ್ಟಿಕೊಂಡಿವೆ.

ಕಾಂಗ್ರೆಸ್‌ ಈಗಾಗಲೇ ಮೂರು ಹಂತದಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಮೂರನೇ ಪಟ್ಟಿಯಲ್ಲಿಯೂ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಭ್ಯರ್ಥಿ ಯಾರು ಎಂದು ಪ್ರಕಟ ಮಾಡಿಲ್ಲ. ಹೀಗಾಗಿ ಕಾಂಗ್ರೆಸ್‌ ಇಲ್ಲಿ ಯಾವ ಹೆಜ್ಜೆಯನ್ನು ಇಡುತ್ತಿದೆ ಎಂಬುದೇ ನಿಗೂಢವಾಗಿದೆ.

‘ಕೈ’ ಪಡೆ ಮಾಸ್ಟರ್ ಪ್ಲ್ಯಾನ್

ಸಿಎಂ ಬೊಮ್ಮಾಯಿ‌ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿ ಹಾಕುವ ಸಂಬಂಧ ‘ಕೈ’ ಪಡೆ ಮಾಸ್ಟರ್ ಪ್ಲ್ಯಾನ್ ಮಾಡಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಆತುರಕ್ಕೆ ಬೀಳುತ್ತಿಲ್ಲ. ಬೊಮ್ಮಾಯಿ‌ ವಿರುದ್ಧ ಅಳೆದೂ ತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮುಂದಾಗಿದ್ದು, ಅಚ್ಚರಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Karnataka Election 2023 : ಕಾಂಗ್ರೆಸ್‌ನಿಂದ ಒಟ್ಟು 209 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ; ಯಾವ ಜಾತಿಗೆ ಎಷ್ಟು ಟಿಕೆಟ್‌?

ಶತಾಯಗತಾಯ ಸಿಎಂ ಬೊಮ್ಮಾಯಿ‌ ಅವರನ್ನು ಸೋಲಿಸುವ ನಿಟ್ಟಿನಲ್ಲಿ ತಂತ್ರಗಾರಿಕೆಯನ್ನು ಹೂಡಲಾಗುತ್ತಿದೆ ಎಂದು ಹೇಳಲಾಗಿದ್ದು, ಇದಕ್ಕಾಗಿ ಜಾತಿ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ. ವೀರಶೈವ ಪಂಚಮಸಾಲಿ ಹಾಗೂ ಅಲ್ಪಸಂಖ್ಯಾತ ಮತಗಳು ಶಿಗ್ಗಾಂವಿಯಲ್ಲಿ ನಿರ್ಣಾಯಕವಾಗಿದ್ದು, ಕಾಂಗ್ರೆಸ್‌ ಯಾವ ಸಮುದಾಯದ ಅಭ್ಯರ್ಥಿಯತ್ತ ಒಲವು ಹೊಂದಿದೆ ಎಂಬುದೇ ಸದ್ಯದ ಕುತೂಹಲವಾಗಿದೆ.

ಈ ಹಿಂದೆ ಶಿಗ್ಗಾಂವಿಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತಿದ್ದ ಕಾಂಗ್ರೆಸ್‌ ಸೋಲನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಬಲ ಲಿಂಗಾಯತ ಸಮುದಾಯದವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆಯೂ ಚಿಂತನೆ ನಡೆದಿತ್ತು. ಹೀಗಾಗಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಹೆಸರು ಬಲವಾಗಿ ಕೇಳಿಬಂದಿತ್ತು. ಅವರೊಂದಿಗೆ ಒಂದೆರೆಡು ಸುತ್ತಿನ ಮಾತುಕತೆ ನಡೆಸಿ ಮನವೊಲಿಸಲಾಗಿತ್ತು. ಆದರೆ, ತಮಗೆ ಧಾರವಾಡದಲ್ಲಿಯೇ ಟಿಕೆಟ್‌ ಬೇಕು ಎಂದು ಕೇಳಿಕೊಂಡಿದ್ದ ವಿನಯ್‌ ಕುಲಕರ್ಣಿ ಶಿಗ್ಗಾಂವಿಯಿಂದ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದರು. ಈ ನಡುವೆ ಅವರು ಅಲ್ಲಿನ ಟಿಕೆಟ್‌ ಆಕಾಂಕ್ಷಿ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಅವರನ್ನು ಸಹ ಭೇಟಿ ಮಾಡಿದ್ದರು. ಜತೆಗೆ ಕ್ಷೇತ್ರದಲ್ಲಿ ಒಂದೆರೆಡು ಕಡೆ ಕಾಣಿಸಿಕೊಳ್ಳುವ ಮೂಲಕ ತಾವೇ ಸ್ಪರ್ಧಾಳು ಎಂಬ ಸೂಚನೆಯನ್ನೂ ನೀಡಿದ್ದರು. ಕೊನೇ ಕ್ಷಣದಲ್ಲಿ ಅವರಿಗೆ ಧಾರವಾಡದಲ್ಲಿ ಟಿಕೆಟ್‌ ಘೋಷಣೆಯಾಗಿದ್ದರಿಂದ ಸಿಎಂ ಕೊಂಚ ನಿರಾಳರಾಗಿದ್ದರು. ಆದರೆ, ಮತ್ತೆ ವಿನಯ್‌ ಕುಲಕರ್ಣಿಗೆ ಶಿಗ್ಗಾಂವಿಯಲ್ಲೂ ಟಿಕೆಟ್‌ ನೀಡಬೇಕು ಎಂಬ ಆಗ್ರಹವೂ ಕೇಳಿ ಬರುತ್ತಿದೆ.

ಈ ನಡುವೆ ಕಾಂಗ್ರೆಸ್‌ ಲೆಕ್ಕಾಚಾರಗಳೇನಿದೆ ಎಂಬುದು ಮಾತ್ರ ಇನ್ನೂ ರಹಸ್ಯವಾಗಿದೆ. ಅಲ್ಪಸಂಖ್ಯಾತ ಮತಗಳು ಹೇಗೂ ತಮ್ಮ ಖಾತೆಗೆ ಬೀಳುವುದರಿಂದ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ, ಆ ಸಮುದಾಯದ ಮತಗಳೂ ವಿಭಜನೆಯಾಗಿ ಬಂದರೆ ಗೆಲುವು ಹತ್ತಿರವಾಗುತ್ತದೆ ಎಂಬ ಬಗ್ಗೆಯೂ ಚಿಂತನೆಗಳು ನಡೆದಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Karnataka Elections 2023: ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್‌ ವಿರುದ್ಧ ಪ್ರದೀಪ್‌ ಈಶ್ವರ್‌; ಜಾಲಪ್ಪ ಮೊಮ್ಮಗ ಬಂಡಾಯ!

ಯಾಸೀರ್‌ ಖಾನ್ ಪಠಾಣ್ ಒಲಿಯಲಿದೆಯೇ ಕೈ ಟಿಕೆಟ್?

ಒಂದು ವೇಳೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೇ ಟಿಕೆಟ್‌ ನೀಡುವುದಾದರೆ ಮಾಜಿ ಶಾಸಕ‌ ಅಜ್ಜಂಪೀರ್ ಖಾದ್ರಿ ಅಥವಾ ಕಾಂಗ್ರೆಸ್‌ ಮುಖಂಡ ಯಾಸೀರ್ ಖಾನ್ ಪಠಾಣ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಲಾಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ. ಅಂತಿಮವಾಗಿ ಯಾಸೀರ್‌ ಖಾನ್ ಪಠಾಣ್ ಪಾಲಾಗಲಿದೆಯೆ ಎಂಬ ಗುಸು ಗುಸು ಸುದ್ದಿ ಹರಿದಾಡುತ್ತಿದೆ.

Exit mobile version