Site icon Vistara News

Shikaripura Election Results: ಮೊದಲ ಇನಿಂಗ್ಸ್‌ನಲ್ಲೇ ಸೆಂಚುರಿ ಬಾರಿಸಿದ ಬಿ.ವೈ. ವಿಜಯೇಂದ್ರ

shikharipura Assembly Election results winner BY vijayendra

ಶಿಕಾರಿಪುರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಕ್ಷೇತ್ರಗಳಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರವೂ (Shikaripura Election Results) ಒಂದು. ಕಾರಣ, ನಾಲ್ಕೂವರೆ ದಶಕಗಳ ಕಾಲ ಶಿಕಾರಿಪುರ ಕ್ಷೇತ್ರವನ್ನಾಳಿದ ಮಾಜಿ ಸಿಎಂ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪುತ್ರ ಬಿ.ವೈ ವಿಜಯೇಂದ್ರ ಅವರು ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರಿಂದ ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ಫಲಿತಾಂಶ ಹೊರಬಿದ್ದಿದ್ದು, ಬಿ.ವೈ. ವಿಜಯೇಂದ್ರ ಅವರೇ ಜಯಗಳಿಸಿದ್ದಾರೆ. ಈ ಮೂಲಕ ಬಿಜೆಪಿ ಪಾರುಪತ್ಯ ಈ ಕ್ಷೇತ್ರದಲ್ಲಿ ಮುಂದುವರಿದಿದೆ.

ವಿಜಯೇಂದ್ರ ಪಾರುಪತ್ಯ

ಇಷ್ಟು ದಿನ ಚುನಾವಣಾ ಕಣದ ಹೊರಗೆ ರಣತಂತ್ರ ಹೆಣೆಯುತ್ತಿದ್ದ ಬಿ.ವೈ. ವಿಜಯೇಂದ್ರ ಈ ಬಾರಿ ಸ್ವತಃ ಅಖಾಡಕ್ಕೆ ಇಳಿದಿದ್ದರು. ಅಲ್ಲದೆ, ಭರ್ಜರಿ ಪ್ರಚಾರವನ್ನೂ ಮಾಡಿದ್ದರು. ಇನ್ನು ತಮ್ಮ ಕ್ಷೇತ್ರದ ಜತೆ ಜತೆಗೆ ಬೇರೆ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರಕ್ಕೆ ಹೋಗಿದ್ದ ಅವರು ಗೆಲ್ಲುವ ವಿಶ್ವಾಸವನ್ನು ಹೊಂದಿದ್ದರು. ಅದರಂತೆ ಈಗ ಫಲಿತಾಂಶ ಬಂದಿದ್ದು, ಜಯದ ನಗೆ ಬೀರಿದ್ದಾರೆ.

ಕಾಂಗ್ರೆಸ್‌ ಸೋಲಿಗೆ ಬಂಡಾಯದ ಬಿಸಿ ಕಾರಣ

ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕಾಂಗ್ರೆಸ್‌ನ ಗೋಣಿ ಮಾಲತೇಶ್ ಅವರಿಗೆ ಈ ಬಾರಿ ಬಂಡಾಯದ ಬಿಸಿ ತಟ್ಟಿದ್ದೇ ಸೋಲಿಗೆ ಮತ್ತೊಂದು ಕಾರಣ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಟಿಕೆಟ್ ವಂಚಿತ ನಾಗರಾಜ ಗೌಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರಿಂದ ಪಕ್ಷದ ಮತಗಳು ವಿಭಜನೆಯಾಗಿವೆ. ಇನ್ನೊಂದೆಡೆ ಜೆಡಿಎಸ್‌ಗೆ ಅಭ್ಯರ್ಥಿ ಸಿಗದೆ ಸ್ಪರ್ಧೆಯಿಂದ ದೂರ ಉಳಿದರೂ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡರಿಗೆ ಬೆಂಬಲ ಸೂಚಿಸಿತ್ತು. ಕಾಂಗ್ರೆಸ್‌ನ ಹಲವಾರು ಕಾರ್ಯಕರ್ತರು, ಮುಖಂಡರು ನಾಗರಾಜ್ ಗೌಡ ಬೆಂಬಲಕ್ಕೆ ನಿಂತಿದ್ದು, ಕಾಂಗ್ರೆಸ್ ಶಕ್ತಿ ಕ್ಷೀಣಿಸಿತ್ತು.

ಪಕ್ಷೇತರ ಅಭ್ಯರ್ಥಿಯ ಭಾರಿ ಪೈಪೋಟಿ

ಕಾಂಗ್ರೆಸ್ ಟಿಕೆಟ್ ವಂಚಿತ ನಾಗರಾಜ ಗೌಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಲ್ಲದೆ, ತಮ್ಮ ಶಕ್ತಿ ಏನೆಂಬುದನ್ನು ಪ್ರದರ್ಶನ ಮಾಡಿದ್ದಾರೆ. ಒಂದು ಹಂತದಲ್ಲಿ ಮುನ್ನಡೆ ಸಾಧಿಸಿದರಾದರೂ ಹಲವು ಸುತ್ತಿನ ಎಣಿಕೆಗಳಲ್ಲಿ ಹಿಂದುಳಿದರು. ಆದರೆ, ಭಾರಿ ಪೈಪೋಟಿಯನ್ನೇ ಇವರು ನೀಡಿದ್ದಾರೆ.

35,397 ಅಂತರದಲ್ಲಿ ಜಯಗಳಿಸಿದ್ದ ಬಿ.ಎಸ್. ಯಡಿಯೂರಪ್ಪ

ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಬಿ.ಎಸ್. ಯಡಿಯೂರಪ್ಪ ಅವರು 86,983‌ ಮತಗಳನ್ನು ಗಳಿಸುವ ಮೂಲಕ ಜಯ ಗಳಿಸಿದ್ದರು. ಕಾಂಗ್ರೆಸ್‌ನ ಗೋಣಿ ಮಾಲತೇಶ ಅವರು 51,586 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಅಲ್ಲದೆ, 35,397 ಅಂತರದಲ್ಲಿ ಜಯಗಳಿಸಿದ್ದರು.

ಕಳೆದ ಬಾರಿಯ ಫಲಿತಾಂಶ ಏನು?
ಬಿ.ಎಸ್. ಯಡಿಯೂರಪ್ಪ (ಬಿಜೆಪಿ): 86,983 | ಗೋಣಿ ಮಾಲತೇಶ: 51,586 | ಗೆಲುವಿನ ಅಂತರ: 35,397

ಈ ಬಾರಿ ಚುನಾವಣಾ ಫಲಿತಾಂಶ ಇಂತಿದೆ
ಬಿ.ವೈ. ವಿಜಯೇಂದ್ರ (ಬಿಜೆಪಿ) 81810 | ನಾಗರಾಜ ಗೌಡ (ಪಕ್ಷೇತರ) 70802 | ಗೋನಿ ಮಾಲತೇಶ್‌ (ಕಾಂಗ್ರೆಸ್‌) 8038 | ನೋಟಾ: 680

ಏನಿದೆ ಜಾತಿ ಲೆಕ್ಕಾಚಾರ?

ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದವರ ಸಂಖ್ಯೆಯು ಅತಿ ಹೆಚ್ಚಿದೆ. ಆದರೆ, ಇಲ್ಲಿ ಲಿಂಗಾಯತರಲ್ಲಿಯೇ ಒಳ ಪಂಗಡಗಳೂ ಇವೆ. ಸಾದರ ಲಿಂಗಾಯತರು ಹೆಚ್ಚಿದ್ದು, ಗಾಣಿಗ ಸಮುದಾಯದವರ ಪ್ರಮಾಣ ಕಡಿಮೆ ಇದೆ. ಇನ್ನುಳಿದಂತೆ ಲಂಬಾಣಿ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಈಡಿಗರು, ಮುಸ್ಲಿಮರು, ಕುರುಬರು ಹಾಗೂ ವಾಲ್ಮೀಕಿ ಜನಾಂಗದವರು ಕ್ಷೇತ್ರದಲ್ಲಿದ್ದಾರೆ. ಇಲ್ಲಿ ಪ್ರಮುಖವಾಗಿ ಲಂಬಾಣಿ ಮತಗಳೇ ನಿರ್ಣಾಯಕವಾಗಿವೆ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ…

Exit mobile version