ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಸಾವರ್ಕರ್ ಫ್ಲೆಕ್ಸ್ ವಿವಾದಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ಎಂಬ ಏರಿಯಾದಲ್ಲಿ ಸಾವರ್ಕರ್ ಅವರ ಫ್ಲೆಕ್ಸ್ ಹಾಕಿದ್ದೇ ಮುಸ್ಲಿಮರನ್ನು ಪ್ರಚೋದಿಸಲು ಎಂದು ಹೇಳಿದ್ದಾರೆ.
ʻʻಬಿಜೆಪಿಯವರಿಗೆ ಕಾಮಾಲೆ ರೋಗ ಬಂದಿದೆ. ಸುಳ್ಳನ್ನು ಹೇಳುವುದು ಅದನ್ನು ಕಾಂಗ್ರೆಸ್ ಮೇಲೆ ಹಾಕುವುದು ಅವರ ಜಾಯಮಾನ. ಇದನ್ನ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಈಗ ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿರುವುದು ಮುಸ್ಲಿಮರ ಏರಿಯಾದಲ್ಲಿ. ಮುಸ್ಲಿಂ ಏರಿಯಾದಲ್ಲಿ ಯಾಕೆ ಹಾಕೋಕೆ ಹೋಗಬೇಕಿತ್ತುʼʼ ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಲ್‌ನಲ್ಲಿ ಸಾವರ್ಕರ್ ಫೋಟೊ ಹಾಕಲು ಹೋದವರು ಮುಸ್ಲಿಮರ ಕೋರಿಕೆಯಂತೆ ಟಿಪ್ಪು ಫೋಟೊ ಹಾಕಲೂ ಬಿಡಬೇಕಿತ್ತು. ಇವರು ಬೇಕೆಂದೇ ಕಿತಾಪತಿ ಮಾಡಲು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಆಪಾದಿಸಿದರು.
ಎಸ್‌ಡಿಪಿಐ, ಪಿಎಫ್‌ಐ ವಿರುದ್ಧ ಕ್ರಮ ಕೈಗೊಳ್ಳಿ
ಎಸ್ ಡಿಪಿಐ, ಪಿಎಫ್‌ಐ ಸಂಘಟನೆಗಳು ಸಮಾಜದ ಸಾಮರಸ್ಯ ಹಾಳು ಮಾಡುತ್ತಿವೆ ಅಂದರೆ ಅದೆ ವಿರುದ್ಧ ಕ್ರಮ ತೆಗೆದುಕೊಳ್ಳಿ. ಅವರು ಸಾಮರಸ್ಯ, ಸ್ವಾಸ್ಥ್ಯ ಹಾಳು ಮಾಡುವ ದಾಖಲೆ ಇದ್ದರೆ ಕೂಡಲೇ ಕ್ರಮ ತಗೊಳ್ಳಿʼʼ ಎಂದು ಹೇಳಿದರು.
ಇಬ್ಬಗೆಯ ನೀತಿಯನ್ನು ಮೊದಲು ಬಿಡಿ
ʻʻಮಗುವನ್ನೂ ಚಿವುಟುವುದು ಇವರೇ. ತೊಟ್ಟಿಲ ತೂಗುವುದು ಇವರೇ. ಇಂಥ ಇಬ್ಬಗೆ ನೀತಿಯನ್ನು ಬಿಜೆಪಿಯವರು ಬಿಡಬೇಕು. ತಪ್ಪು ಮಾಡಿದ್ದಾರೆ ಎಂದಾದರೆ ಕ್ರಮ ಕೈಗೊಳ್ಳಿ. ಅದಕ್ಕೆ ಯಾಕೆ ಮುಂದಾಗುತ್ತಿಲ್ಲʼʼ ಎಂದು ಪ್ರಶ್ನಿಸಿದರು ಸಿದ್ದರಾಮಯ್ಯ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರ್ ಅವರ ಮನೆಗೆ ಮುಖ್ಯಮಂತ್ರಿ ಭೇಟಿ ನೀಡುತ್ತಾರೆ. ಇನ್ನಿಬ್ಬರು ಮುಸ್ಲಿಮರು ಕೊಲೆಯಾಗಿದ್ದರೂ ಅವರ ಮನೆಗೆ ಯಾಕೆ ಹೋಗೊಲ್ಲ. ಅವರ ಮನೆಗೆ ಹೋಗಿಲ್ಲ. ಪರಿಹಾರವನ್ನೂ ಕೊಟ್ಟಿಲ್ಲ. ಇದು ಇಬ್ಬಗೆ ನೀತಿಯಲ್ಲವೇ ಎಂದು ಸಿದ್ದರಾಮಯ್ಯ ಕೇಳಿದರು.
ಕೇಂದ್ರದಲ್ಲಿ ಒಂದು ಕಡೆ ನರೇಂದ್ರ ಮೋದಿ ಅವರು ನೆಹರು ಸ್ಮರಣೆ ಮಾಡುತ್ತಾರೆ. ಇನ್ನೊಂದು ಕಡೆ ರಾಜ್ಯದಲ್ಲಿ ನೆಹರೂ ಅವರ ಫೋಟೊವನ್ನೇ ಹಾಕುವುದಿಲ್ಲ. ಇದೆಂಥ ದ್ವಂದ್ವ ನೀತಿ ಎಂದು ಪ್ರಶ್ನಿಸಿದರು ಸಿದ್ದರಾಮಯ್ಯ.
ಮುಚ್ಚಳಿಕೆ ಬರೆದುಕೊಟ್ಟ ಮೇಲೆ..
ವೀರ್ ಸಾವರ್ಕರ್ ವಿಚಾರದಲ್ಲಿ ಬಿಜೆಪಿಯವರಿಗೆ ಇತಿಹಾಸವೇ ಗೊತ್ತಿಲ್ಲ. ಸಾವರ್ಕರ್ ಅವರು ಜೈಲಿಗೆ ಹೋಗಿದ್ದು ನಿಜ. ಆದರೆ, ಮುಚ್ಚಳಿಕೆ ಬರೆದುಕೊಟ್ಟ ಮೇಲೆ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು ಎಂದು ಪ್ರಶ್ನಿಸಿದರು.
ಕೈಗೊಂಬೆ ಅಲ್ಲದೆ ಮತ್ತೇನು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೆಸ್ಸೆಸ್ ಕೈಗೊಂಬೆ ಅಲ್ಲದೆ ಮತ್ತೇನು? ಕೈಗೊಂಬೆಯೇ ಎಂದು ಮತ್ತೊಮ್ಮೆ ಹೇಳಿದರು ಕಾಂಗ್ರೆಸ್ ನಾಯಕ.
ಇದನ್ನೂ ಓದಿ| Shimogga Clash | ಶಿವಮೊಗ್ಗದ ಆ 15 ದುಷ್ಕರ್ಮಿಗಳನ್ನು ಗಡಿಪಾರು ಮಾಡಿ ಎಂದ ನಾರಾಯಣ ಸ್ವಾಮಿ