Site icon Vistara News

ಶಿವಮೊಗ್ಗ ಸುಬ್ಬಣ್ಣ | ಸಾಹಿತ್ಯವನ್ನು ತಲುಪಿಸಲು ಹಾಡುತ್ತಿದ್ದ ಗಾಯಕ: ರಂಜನಿ ಕೀರ್ತಿ

shivamogga subbanna

ಹಾಡಿನ ಸಾಹಿತ್ಯವನ್ನು ಕೇಳುಗನಿಗೆ ತಲುಪಿಸುವುದು ಸುಗಮ ಸಂಗೀತದ ಗುರಿ. ಇದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಹಾಡುತ್ತಿದ್ದವರು ಶಿವಮೊಗ್ಗ ಸುಬ್ಬಣ್ಣ. ಹಾಡಿನ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸುತ್ತಿದ್ದವರು ಅವರು ಎಂದು ಗಾಯಕಿ, ವಿದುಷಿ ರಂಜನಿ ಕೀರ್ತಿ ಹೇಳಿದ್ದಾರೆ. ಸುಬ್ಬಣ್ಣ ನಿಧನ ಹಿನ್ನೆಲೆಯಲ್ಲಿ ಅವರನ್ನು ನೆನಪಿಸಿಕೊಂಡು ರಂಜನಿ ಮಾತನಾಡಿದ್ದು ಇಷ್ಟು:

ಅಶ್ವಥ್‌, ಮೈಸೂರು ಅನಂತಸ್ವಾಮಿ ಮುಂತಾದ ಸುಗಮ ಸಂಗೀತದ ಆದಿ ಗಾಯಕರ ಕಾಲದಿಂದಲೂ ಹಾಡುತ್ತಾ ಬಂದು ಈ ಕ್ಷೇತ್ರವನ್ನು ಸಂಪನ್ನಗೊಳಿಸಿದವರು ಶಿವಮೊಗ್ಗ ಸುಬ್ಬಣ್ಣ. ಹಾಡಿನ ಸಾಹಿತ್ಯದ ಬಗ್ಗೆ ಹೆಚ್ಚಿನ ಗಮನ ಕೊಟ್ಟು, ಸ್ಪಷ್ಟವಾದ ಉಚ್ಚಾರಣೆಯೊಂದಿಗೆ ಹಾಡುತ್ತಿದ್ದರು. ಅವರ ಹಾಡನ್ನು ಕೇಳುತ್ತಾ ಹಾಗೇ ಬರೆದುಕೊಳ್ಳಬಹುದಾಗಿತ್ತು. ಶಿಶುನಾಳ ಷರೀಫರ ಹಾಡುಗಳು, ಕೈಲಾಸಂ ಅವರ ಹಾಡುಗಳು ನಮ್ಮನ್ನು ಹಾಗೇ ತಲುಪಿದವು. ಶಾಸ್ತ್ರೀಯ ಸಂಗೀತದಲ್ಲಿ ನಾದವನ್ನು ತಲುಪಿಸಲು ಸಾಹಿತ್ಯ ದುಡಿದರೆ, ಸುಗಮ ಸಂಗೀತದಲ್ಲಿ ಸಾಹಿತ್ಯವನ್ನು ತಲುಪಿಸಲು ನಾದ ದುಡಿಯಬೇಕು. ಇದು ಸುಬ್ಬಣ್ಣ ಅವರ ದಾರಿಯಾಗಿತ್ತು.

ಸುಬ್ಬಣ್ಣನವರು ಉಚ್ಛ ಸ್ಥಾಯಿಯಲ್ಲಿ ಹಾಡುತ್ತಿರಲಿಲ್ಲ. ವಾಸ್ತವವಾಗಿ, ಸುಗಮ ಸಂಗೀತ ಕ್ಷೇತ್ರ ಅಶ್ವಥ್‌, ಕಾಳಿಂಗರಾವ್‌ ಕಾಲದಿಂದಲೂ ಉಚ್ಛ ಸ್ಥಾಯಿಯ ಹಾಡುಗಳಿಂದಲೇ ಬೆಳೆದು ಬಂದಿದೆ. ಸುಗಮ ಸಂಗೀತಕ್ಕೆ ಉಚ್ಛ ಸ್ಥಾಯಿಯೇ ಮಾದರಿ ಎನಿಸಿಕೊಂಡಿತ್ತು. ಆ ಕಾಲದಲ್ಲಿ ಈ ಮಾದರಿಯನ್ನು ಸುಬ್ಬಣ್ಣ ಮುರಿದರು. ಮಂದ್ರ ಶ್ರುತಿಯಲ್ಲಿ ಇದ್ದ ಅವರ ಕಂಠ ಮಧುರವಾದ ಹಾಡುಗಳಿಗೆ ಹೆಚ್ಚು ಹೊಂದಿಕೊಳ್ಳುತ್ತಿತ್ತು. ಬಿದ್ದೀಯಬ್ಬೇ ಮುದುಕಿ, ಆನಂದಮಯ ಈ ಜಗಹೃದಯ ಮುಂತಾದ ಹಾಡುಗಳು ಹಾಗೆ ಜನಪ್ರಿಯವಾದವು.

ಸುಬ್ಬಣ್ಣನವರು ಹಾಡಿನಲ್ಲಿ ಅನಗತ್ಯವಾಗಿ ಗಮಕಗಳನ್ನು ಸೇರಿಸಲು ಹೋಗುತ್ತಿರಲಿಲ್ಲ. ಇಂದಿನ ಹಲವು ಗಾಯಕರು ಗಮಕಗಳನ್ನು ಅಗತ್ಯವಿಲ್ಲದಿದ್ದರೂ ಸೇರಿಸಿ ಆಕರ್ಷಕಗೊಳಿಸಲು ನೋಡುತ್ತಾರೆ. ಆದರೆ ಸುಬ್ಬಣ್ಣ ಒಂದು ಮಿತಿಯಲ್ಲಿ ಮಾತ್ರ ಅದನ್ನು ಮಾಡುತ್ತಿದ್ದರು. ಹೀಗೆ ಸುಗಮ ಸಂಗೀತದಲ್ಲಿ ತಮ್ಮದೇ ಆದ ಹಾದಿಯೊಂದನ್ನು ರೂಪಿಸಿದವರು ಸುಬ್ಬಣ್ಣ.

ಇದನ್ನೂ ಓದಿ: ಶಿವಮೊಗ್ಗ ಸುಬ್ಬಣ್ಣ | ಕಳಚಿಬಿದ್ದ ಸುಗಮ ಸಂಗೀತದ ಕೊನೆಯ ಪಿಲ್ಲರ್:‌ ಅರ್ಚನಾ ಉಡುಪ

Exit mobile version