ಹಾವೇರಿ: ಜಿಲ್ಲೆಯ ಹಿರೇಕೆರೂರ ನ್ಯಾಯಾಲಯದಲ್ಲಿ ಶಿರಸ್ತೇದಾರ್ ಆಗಿರುವ ಮಲ್ಲಿಕಾರ್ಜುನ ಶಂಕರಪ್ಪ ಭರಗಿ (42) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರೇಕೆರೂರಿನ ನೌಕರರ ಭವನದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಪ್ರಾಣ ತ್ಯಾಗ ಮಾಡುತ್ತಿರುವುದಾಗಿ ಅವರು ವಾಟ್ಸ್ ಆಪ್ ಸ್ಟೇಟಸ್‌ನಲ್ಲಿ ಬರೆದುಕೊಂಡು ಕೃತ್ಯ ಎಸಗಿದ್ದಾನೆ. ಮನೆಯಲ್ಲಿ ಮಡದಿ ಮತ್ತು ಮಕ್ಕಳಿದ್ದರೂ ಇನ್ನೊಬ್ಬಳ ಮೋಹಕ್ಕೆ ಬಿದ್ದು ಬದುಕನ್ನೇ ಕಳೆದುಕೊಂಡೆ ಎಂದು ಆತ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಮಲ್ಲಿಕಾರ್ಜುನ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಟಗೇರ ಗ್ರಾಮದವರು. ಪ್ರಸಕ್ತ ಹಿರೇಕೆರೂರಿನ ತಂಬಾಕದ ನಗರದಲ್ಲಿ ವಾಸವಾಗಿದ್ದರು. ನಾಲ್ಕು ಜನರು ತನಗೆ ಕಿರುಕುಳ ನೀಡಿದ್ದರಿಂದ ಬೇರೆ ದಾರಿ ಕಾಣದೆ ಪ್ರಾಣ ಕಳೆದುಕೊಳ್ಳುತ್ತಿರುವುದಾಗಿ ವಾಟ್ಸ್ ಆಪ್ ಸ್ಟೇಟಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. ಭಾನುವಾರ ರಜಾ ದಿನವಾಗಿದ್ದು, ಮಧ್ಯಾಹ್ನ ೨.೧೫ರ ಹೊತ್ತಿಗೆ ಹೊರಗೆ ಸ್ವಲ್ಪ ಕೆಲಸವಿದೆ ಎಂದು ಹೊರಟ ಮಲ್ಲಿಕಾರ್ಜುನ ಅವರು, ರಾತ್ರಿ ೭.೩೦ರ ಹೊತ್ತಿಗೆ ಕೋರ್ಟ್ ಸಮೀಪ ಇರುವ ನೌಕರರ ಭವನಕ್ಕೆ ಬಂದಿದ್ದಾರೆ. ಅಲ್ಲಿ ವಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿ, ಅದರಲ್ಲಿ ತನಗೆ ಕಿರುಕುಳ ನೀಡುತ್ತಿದ್ದವರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಲಿಕಾರ್ಜುನ ಅವರಿಗೆ ಅಕ್ರಮ ಸಂಬಂಧವಿದ್ದು, ಈ ವಿಚಾರದಲ್ಲಿ ಅವರಿಗೆ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪವಿದೆ.
ಯಾರ್ಯಾರ ಹೆಸರಿದೆ?
ಸ್ಟೇಟಸ್‌ನಲ್ಲಿ ಹಶೀನಾ ಮೂಲಿಮನಿ, ಜಿವಿ ಕುಲಕರ್ಣಿ, ಕೆಬಿ ಕುರಿಯವರ, ವಾಸಿಮ್ ಎಂಬವರ ಹೆಸರಿದೆ. ಇದನ್ನು ಆಧರಿಸಿ ಮೃತರ ಪತ್ನಿ ಈ ನಾಲ್ವರ ವಿರುದ್ಧ ಪತಿಗೆ ಕಿರುಕುಳ ನೀಡಿ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಮೊದಲ ಆರೋಪಿ ನಾಲ್ಕು ವರ್ಷಗಳಿಂದ ಫೋನ್ ಮಾಡಿ, ಮೆಸೇಜ್ ಮಾಡಿ, ಫೋಟೊಗಳನ್ನು ಕಳುಹಿಸಿ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಉಳಿದವರು ನ್ಯಾಯಾಲಯದಲ್ಲಿ ಮನಸು ನೊಂದುಕೊಳ್ಳುವಂತೆ ಮಾತನಾಡುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
೨೬ ಪುಟಗಳ ಡೆತ್ ನೋಟ್
ಮಲ್ಲಿಕಾರ್ಜುನ ಸುಮಾರು ೨೬ ಪುಟಗಳ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನಗೆ ಕಚೇರಿಯಲ್ಲಿ ಒಬ್ಬ ಮಹಿಳೆಯ ಜತೆ ಇದ್ದ ಅಕ್ರಮ ಸಂಬಂಧದ ಬಗ್ಗೆ ಬರೆದುಕೊಂಡಿದ್ದಾನೆ. ಆಕೆ ಹತ್ತಿರವಾಗಿದ್ದು, ದೂರವಾಗಿದ್ದು, ಬೇರೆಯವರು ಬೆದರಿಕೆ ಹಾಕಿದ್ದು.. ಹೀಗೆ ಹಲವು ವಿಚಾರಗಳನ್ನು ಬರೆದಿದ್ದಾನೆ..
ಡೆತ್ ನೋಟ್‌ನ ಮೊದಲ ಪುಟದಲ್ಲೇ ಆತನ ಎಲ್ಲ ಅಪಸವ್ಯಗಳು ಬಯಲಾಗುತ್ತವೆ. ಅದು ಈ ರೀತಿ ಇದೆ..
ʻʻನನ್ನ ಪ್ರೀತಿಯ ಹೆಂಡತಿ….., ಈ ಪಾಪಿಯನ್ನು ಕೊನೆಯ ಸಲ ಕ್ಷಮಿಸು. —- ಮತ್ತು —- ನನ್ನಂಥ ತಂದೆಯನ್ನು ಪಡೆದ ನೀವು ದುರದೃಷ್ಟವಂತರು. ನಿಮಗೆ ತಿಳುವಳಿಕೆ ಮೂಡಿದ ಮೇಲೆ ನನ್ನ ಕ್ಷಮಿಸಿ. ನಾನು ನಿಮಗೆ ತಂದೆಯ ಪ್ರೀತಿಯನ್ನು ಕೊಡಲಿಲ್ಲ.
ಹೆಂಡತಿ.. ನೀನು ನನ್ನನ್ನು ಎಷ್ಟು ಪ್ರೀತಿ ಮಾಡಿದರೂ ನಾನು ಮಾಯಾಂಗನೆಯಾದ ಆಕೆಯ ಹಿಂದೆ ಹೋಗಿ ನಿನಗೆ ತುಂಬಾ ಅನ್ಯಾಯ ಮಾಡಿದ್ದೇನೆ. ಅವಳ ಮೋಹ ನನ್ನನ್ನು ನಿನಗೆ ಅನ್ಯಾಯ ಮಾಡುವ ಹಾಗೆ ಮಾಡಿಬಿಟ್ಟಿತು. ನಿನಗೆ ಗೊತ್ತಿರುವ ಹಾಗೆ ನನ್ನ ಮತ್ತು ಅವಳ ಸ್ನೇಹ ನಾಲ್ಕು ವರ್ಷದಷ್ಟು ಹಳೆಯದು. ಅವಳನ್ನು ನಾನು ಮೊದಲು ಮೇಡಂ ಅಂತ ಕರೆಯುತ್ತಿದ್ದೆ. ಅವಳು ಸರ್ ಎಂದು ಕರೆಯುತ್ತಿದ್ದಳು.. ಮುಂದೆ.. – ಹೀಗೆ ಪತ್ರ ಮುಂದುವರಿಯುತ್ತದೆ.
ಇದನ್ನೂ ಓದಿ.. suicide death | 3 ತಿಂಗಳ ಹಿಂದೆ ಪರಿಚಯವಾದ ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ನೊಂದು ಯುವತಿ ಆತ್ಮಹತ್ಯೆ