ಹಾಸನ: ಶಾಸಕ ಶಿವಲಿಂಗೇಗೌಡ ಮತ್ತು ಅವರ ಕಾರ್ಯಕರ್ತರು ಕಳ್ಳರು ಎಂದು ಬಿಜೆಪಿಯ ಎನ್.ಆರ್.ಸಂತೋಷ್ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪದ ಬಗ್ಗೆ ಶಾಸಕ ಶಿವಲಿಂಗೇಗೌಡ ಕಣ್ಣೀರಾಗಿದ್ದಾರೆ.
ಗುರುವಾರ ರಾತ್ರಿ ತಮ್ಮ ತೋಟದ ಮನೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಗಳಗಳನೆ ಅತ್ತ ಅವರು, ನನ್ನ ಬಗ್ಗೆ ಏನು ಬೇಕಾದರೂ ಹೇಳಿ. ಆದರೆ, ನನ್ನ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ಅಪಸ್ವರ ಎತ್ತಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ದಿನದ ಹಿಂದೆ ಬಿಜೆಪಿಯ ಎನ್.ಆರ್. ಸಂತೋಷ್, ರವಿಕುಮಾರ್ ನೇತೃತ್ವದ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಶಿವಲಿಂಗೇಗೌಡ ಹಾಗೂ ಅವರ ಕಾರ್ಯಕರ್ತರ ವಿರುದ್ಧ ವಾಗ್ದಾಳಿ ನಡೆಸಿದ್ದ ಇವರಿಬ್ಬರು, ಶಿವಲಿಂಗೇಗೌಡ ಮತ್ತವರ ಬೆಂಬಲಿಗರನ್ನು ರಾಗಿ, ಸಿಮೆಂಟ್, ಕಬ್ಬಿಣ ಕಳ್ಳರು ಎಂದು ಆರೋಪಿಸಿದ್ದರು ಎನ್ನಲಾಗಿದೆ.
ಕಾರ್ಯಕರ್ತರ ಸಭೆಯಲ್ಲಿ ಶಿವಲಿಂಗೇಗೌಡ ಭಾವುಕ
ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಶಿವಲಿಂಗೇಗೌಡ, ನನ್ನ ಕಾರ್ಯಕರ್ತರ ಬಗ್ಗೆ ಮಾತನಾಡಲು ಅವರು ಯಾರು? ತಿಂಡಿ ತಿನ್ನಲು, ಕಾಫಿ ಕುಡಿಯಲೂ ಸಹ ಹಿಂದೆ ಮುಂದೆ ನೋಡುವ ಕಾರ್ಯಕರ್ತರ ನನ್ನ ಬಳಿ ಇದ್ದಾರೆ. ಅವರನ್ನ ದುಷ್ಟರು ಎಂದು ಅದು ಹೇಗೆ ಕರೆಯುತ್ತೀರಿ? ನನ್ನ ಕಾರ್ಯಕರ್ತರು ಕೆಲವೊಮ್ಮೆ ಮಧ್ಯಾಹ್ನದ ಊಟವನ್ನೂ ಮಾಡದೆ ಕೆಲಸ ಮಾಡುವವರು. ಅವರು ಸ್ವಾಭಿಮಾನಕ್ಕೆ ಬದುಕಿದ್ದಾರೆ ಎಂದು ತಿಳಿಸಿದರು.
ನನಗೆ ಏನು ಬೇಕಾದರೂ ಹೇಳಿ
ನನ್ನ ಬಗ್ಗೆ ಏನು ಬೇಕಾದರೂ ಹೇಳಲಿ, ನಾನು ಸಹಿಸಿಕೊಳ್ಳುತ್ತೇನೆ. ಆದರೆ, ನನ್ನ ಕಾರ್ಯಕರ್ತರ ಬಗ್ಗೆ ಇಂತಹ ಆರೋಪ ಸರಿ ಅಲ್ಲ. ಶಾಸಕರ ಹಿಂಬಾಲಕರು ದುಷ್ಟರು, ಕಳ್ಳರು ಎಂದೆಲ್ಲಾ ಬೈದರೆ ಅವರ ಶಾಪ ನಿಮಗೆ ತಟ್ಟಲ್ವಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ಬಿಜೆಪಿಯ ಎನ್. ರವಿಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ: ಅರಸೀಕೆರೆ ಶಾಸಕ ಶಿವಲಿಂಗೇಗೌಡ