ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವ ವೇಳೆ ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಶಿವಮೊಗ್ಗದಲ್ಲಿ (Shivamogga Clash) ಹತ್ತಿಕೊಂಡ ಕಿಡಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿ ಮಾಡಿದೆ. ಚಾಕು ಇರಿತಕ್ಕೆ ಒಳಗಾದ ಹಿಂದು ಯುವಕನ ಹಲ್ಲೆಗೆ ಹಣೆಗೆ ತಿಲಕ ಇಟ್ಟಿದ್ದೇ ಕಾರಣವಾಯಿತಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ರಾಜಸ್ಥಾನ ಮೂಲದ ಪ್ರೇಮ್ ಸಿಂಗ್ ತಿಲಕ ಇಟ್ಟುಕೊಂಡಿದ್ದನ್ನು ನೋಡಿಯೇ ದಾಳಿಕೋರರು ಹಲ್ಲೆ ನಡೆಸಿರುವುದಾಗಿ ಆತನ ಸ್ನೇಹಿತರು ಆರೋಪಿಸಿದ್ದಾರೆ. ಹಲ್ಲೆ ನಡೆದ ಸಂದರ್ಭದಲ್ಲಿ ಉಪ್ಪಾರ ಕೇರಿಯಲ್ಲಿ ಬಹಳಷ್ಟು ಜನರಿದ್ದರು. ಆದರೂ ಅಮಾಯಕನ ಮೇಲೆಯೇ ಟಾರ್ಗೆಟ್ ಮಾಡಿರುವುದಾಗಿ ಪ್ರೇಮ್ ಸಿಂಗ್ ಪರಿಚಿತರು ಆಕ್ರೋಶ ಹೊರಹಾಕಿದ್ದಾರೆ.
ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಳ್ಳದ ಪ್ರೇಮ್ ಸಿಂಗ್, ಪ್ರತಿ ದಿನ ತಿಲಕ ಇಟ್ಟುಕೊಂಡು ಬರುತ್ತಿದ್ದರು ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ. ಇದನ್ನು ನೋಡಿಯೇ ಚಾಕುವಿನಿಂದ ಇರಿದಿರುವುದಾಗಿ ಆರೋಪಿಸಿದ್ದಾರೆ.
ಏನಿದು ಘಟನೆ?
75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಶಿವಮೊಗ್ಗ ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ಸೋಮವಾರ (ಆ.15) ವೀರ ಸಾವರ್ಕರ್ ಫ್ಲೆಕ್ಸ್ ಹಾಕಲಾಗಿತ್ತು. ಫ್ಲೆಕ್ಸ್‌ಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯ ಯುವಕರು ಫೋಟೋ ತೆಗೆದು ಹಾಕಿದ್ದರು. ಸಾವರ್ಕರ್ ಫೋಟೊ ತೆಗೆದು ಟಿಪ್ಪು ಸುಲ್ತಾನ್ ಫೋಟೊ ಇಡಲು ಮುಂದಾದ ವಿವಾದ ತಾರಕಕ್ಕೇರುತ್ತಿದ್ದಂತೆಯೇ ಅಂಗಡಿ ಮುಚ್ಚಿ ವಾಪಸ್ ಆಗುತ್ತಿದ್ದ ವೇಳೆ ಉಪ್ಪಾರ ಕೇರಿ ವಾಸಿ ಪ್ರೇಮ್ ಸಿಂಗ್ (22) ಎಂಬ ಯುವಕನ ಮೇಲೆ ಚಾಕುವಿನಿಂದ ಇರಿಯಲಾಗಿತ್ತು.
ಇದನ್ನೂ ಓದಿ | Shimogga Clash | ಶಿವಮೊಗ್ಗದ ಆ 15 ದುಷ್ಕರ್ಮಿಗಳನ್ನು ಗಡಿಪಾರು ಮಾಡಿ ಎಂದ ನಾರಾಯಣ ಸ್ವಾಮಿ