ಶಿವಮೊಗ್ಗ: ನಗರದ ಅಮೀರ್ ವೃತ್ತದಲ್ಲಿ ಸಾವರ್ಕರ್ ಫೋಟೊ ವಿವಾದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಗಲಾಟೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಒಂದೇ ಕೋಮಿನ ಇಬ್ಬರಿಗೆ ಪ್ರತ್ಯೇಕ ಕಡೆಗಳಲ್ಲಿ ಚಾಕು ಇರಿತವಾಗಿದ್ದು, (Shivamogga Clash) ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದೇ ವೇಳೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.
ಅಮೀರ್ ಅಹಮದ್ ಸರ್ಕಲ್‌ನಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ಹಿನ್ನೆಲೆಯಲ್ಲಿ ಎರಡು ಕೋಮುಗಳ ನಡುವೆ ಗಲಾಟೆ ನಡೆದಿದೆ. ಒಂದು ಗುಂಪು ಸಾವರ್ಕರ್ ಫೋಟೊವನ್ನು ತೆರವುಗೊಳಿಸಿದರೆ, ಮತ್ತೊಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಫೋಟೊ ತೆರವುಗೊಳಿಸಿದ ಗುಂಪು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ವೇಳೆ ಟಿಪ್ಪು ಫೋಟೊ ಇಟ್ಟು ಆಚರಣೆ ಮಾಡುವುದಾಗಿ ಹೇಳಿಕೊಂಡಿತ್ತು. ಈ ಎಲ್ಲ ಸಂಗತಿಗಳು ತೀವ್ರ ವಾಗ್ವಾದ ಹಾಗೂ ಗಲಾಟೆಗೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.
ಶಿವಮೊಗ್ಗದಲ್ಲಿ ಹೈ ಅಲರ್ಟ್
ಶಿವಮೊಗ್ಗ ನಗರಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಘಟನೆ ನಡೆದ ಸ್ಥಳ ಸಹಿತ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ. ಎಲ್ಲೂ ಸಹ ಯಾರೂ ಗುಂಪು ಗುಂಪಾಗಿ ಓಡಾದಂತೆ ಕ್ರಮ ವಹಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ತಡೆದು ವಿಚಾರಣೆ ನಡೆಸಲಾಗುತ್ತಿದೆ.
ಅಲ್ಲದೆ, ನಗರ ಗುಪ್ತಚರ ಪೊಲೀಸರಿಂದ ತೀವ್ರ ಕಟ್ಟೆಚ್ಚರದ ಸೂಚನೆ ಬಂದಿದ್ದು, ನಗರದ ಪ್ರತಿ ದಿಕ್ಕುಗಳಲ್ಲೂ ಪೊಲೀಸರ ನಿಯೋಜನೆ ಮಾಡಲಾಗಿದೆ. ಅಗತ್ಯ ಬಿದ್ದರೆ ಪಕ್ಕದ ಜಿಲ್ಲೆಗಳಿಂದ ಪೊಲೀಸರನ್ನು ಕರೆತರಲು ಚಿಂತನೆ ನಡೆಸಲಾಗಿದೆ.
ಅಶ್ರುವಾಯು ಸಿಡಿಸಲು ಯತ್ನ
ಶಿವಮೊಗ್ಗದಲ್ಲಿ ಗಲಾಟೆ ಪ್ರಕರಣ ಸಂಬಂಧಿಸಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಶಿವಪ್ಪನಾಯಕ ವೃತ್ತದಲ್ಲಿ ಪೊಲೀಸರು ಟಿಯರ್ ಗ್ಯಾಸ್ (ಅಶ್ರುವಾಯು) ಸಿಡಿಸಲು ಮುಂದಾಗಿದ್ದರು. ಈ ವೇಳೆ, ಟಿಯರ್ ಗ್ಯಾಸ್ ಸಿಡಿಸಲು ಹಿಂದು ಕಾರ್ಯಕರ್ತರ ತೀವ್ರ ವಿರೋಧ ವ್ಯಕ್ತಪಡಿಸಿದರು. ಟಿಯರ್ ಗ್ಯಾಸ್ ಸಿಡಿಸುವಂತಹ ತಪ್ಪು ನಮ್ಮಿಂದ ಆಗಿಲ್ಲ ಎಂದು ವಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಹ ಪ್ರತಿಭಟನಾಕಾರರಿಗೆ ತಿಳಿಹೇಳಿ ಟಿಯರ್ ಗ್ಯಾಸ್‌ಅನ್ನು ಒಳಗಿಟ್ಟಿದ್ದಾರೆ.
ಸದ್ಯ ಶಿವಮೊಗ್ಗ ನಗರಾದ್ಯಂತ ಹಾಗೂ ಪಕ್ಕದ ಭದ್ರಾವತಿಯಲ್ಲೂ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಎಲ್ಲೂ ಸಹ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲಾಗುತ್ತಿದೆ. ಅಲ್ಲದೆ, ಅಂಗಡಿ ಮುಂಗಟ್ಟುಗಳನ್ನು ಸಹ ಮುಚ್ಚಿಸಲಾಗುತ್ತಿದೆ.
ಇದನ್ನೂ ಓದಿ | ಶಿವಮೊಗ್ಗ ಉದ್ವಿಗ್ನ: ಸಾವರ್ಕರ್ ಭಾವಚಿತ್ರ ತೆರವು ಬೆನ್ನಲ್ಲೇ ಯುವಕನಿಗೆ ಇರಿತ