Site icon Vistara News

Shivamogga Election Results: ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಚನ್ನಬಸಪ್ಪ

Shivamogga Election results winner channabasappa

ಶಿವಮೊಗ್ಗ: ಈ ಬಾರಿ ಹಲವು ಕಾರಣಗಳಿಂದ ಗಮನ ಸೆಳೆದಿರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರವೂ (Shivamogga Election Results) ಒಂದು. ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಈಶ್ವರಪ್ಪ ಅವರೇ ಜಯ ಸಾಧಿಸುತ್ತಾ ಬಂದಿದ್ದರು. ಈಗ ಮತ್ತೆ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರಿದಿದ್ದು, ಅದೇ ಪಕ್ಷದ ಅಭ್ಯರ್ಥಿ ಚನ್ನಬಸಪ್ಪ ಜಯ ಸಾಧಿಸಿದ್ದಾರೆ.

ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು

ಹಲವು ಕಾರಣಗಳಿಂದ ಶಾಸಕರಾಗಿದ್ದ ಕೆ.ಎಸ್. ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರು. ಇದರಿಂದ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಹೊಸ ಮುಖವನ್ನು ಪರಿಚಯಿಸಲಾಗಿತ್ತು. ಹಿರಿಯ ಕಾರ್ಯಕರ್ತ, ಪಾಲಿಕೆ ಸದಸ್ಯ ಚನ್ನಬಸಪ್ಪ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಬಿಜೆಪಿಯ ಚನ್ನಬಸಪ್ಪ ಅವರು ಹೊಸ ಮುಖವಾದರೂ ಬಿಜೆಪಿ ಕಟ್ಟಾ ಕಾರ್ಯಕರ್ತರಾಗಿದ್ದಾರೆ. ಇದು ಅವರಿಗೆ ಪ್ಲಸ್‌ ಆಗಲು ಕಾರಣವಾಗಿದೆ. ಅಲ್ಲದೆ, ಕಾರ್ಯಕರ್ತನೊಬ್ಬನಿಗೆ ಟಿಕೆಟ್‌ ಸಿಕ್ಕಿದ್ದು, ಉಳಿದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಲು ಇನ್ನೊಂದು ಕಾರಣವಾಗಿತ್ತು. ಹೀಗಾಗಿ ಬಿಜೆಪಿಯಲ್ಲಿದ್ದರೆ ಕುಟುಂಬ ರಾಜಕೀಯಕ್ಕೆ ಅವಕಾಶವಿಲ್ಲ. ಕಾರ್ಯಕರ್ತನೊಬ್ಬನಿಗೆ ಟಿಕೆಟ್‌ ನೀಡುವ ಮೂಲಕ ಉಳಿದವರಿಗೂ ಒಂದಲ್ಲಾ ಒಂದು ದಿನ ಪಕ್ಷದಿಂದ ಸ್ಥಾನಗಳು ಒಲಿಯಬಹುದು ಎಂಬ ಸಂದೇಶವನ್ನು ವರಿಷ್ಠರು ರವಾನಿಸಿದ್ದರು. ಇನ್ನು ಈ ಹಿಂದೆ ಈಶ್ವರಪ್ಪ ಅವರ ವಿರುದ್ಧ ಸ್ಪರ್ಧೆ ಮಾಡಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಕೆ.ಬಿ. ಪ್ರಸನ್ನಕುಮಾರ್ ಬಿಜೆಪಿ ಸೇರ್ಪಡೆಯಾಗಿದ್ದೂ ಇನ್ನೊಂದು ಪ್ಲಸ್‌ ಎಂದು ಹೇಳಬಹುದು. ಈ ಎಲ್ಲದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಯನೂರಿನಲ್ಲಿ ನಡೆಸಿದ ಬೃಹತ್‌ ಸಮಾವೇಶವೂ ಗೆಲುವಿಗೆ ಶ್ರೀರಕ್ಷೆಯಾಗಿದೆ.

ಪೈಪೋಟಿ ನಡೆಸಿ ಸೋತ ಕಾಂಗ್ರೆಸ್‌

ಪಾಲಿಕೆ ಸದಸ್ಯ, ಯುವ ಮುಖಂಡ ಎಚ್.ಸಿ. ಯೋಗೀಶ್ ಅವರು ಪಕ್ಷದಲ್ಲಿ ಬಹಳ ಹಿಂದಿನಿಂದಲೂ ಗುರುತಿಸಿಕೊಂಡವರು. ಅಲ್ಲದೆ, ಈ ಬಾರಿ ಅರ್ಜಿ ಸಲ್ಲಿಸಿದವರಿಗೇ ಟಿಕೆಟ್‌ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದ 10ಕ್ಕೂ ಹೆಚ್ಚು ಮಂದಿ ಪಟ್ಟು ಹಿಡಿದಿದ್ದರು. ಜತೆಗೆ ನಮ್ಮಲ್ಲಿಯೇ ಒಬ್ಬರಿಗೆ ಟಿಕೆಟ್‌ ನೀಡಿದರೆ ಒಟ್ಟಾಗಿಯೇ ದುಡಿಯುವುದಾಗಿಯೂ ಹೇಳಿಕೊಂಡಿದ್ದರು. ಹೀಗಾಗಿ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಪ್ರದರ್ಶನವಾಗಿತ್ತು. ಅಲ್ಲದೆ, ಈ ಮೊದಲಿನಿಂದಲೂ ಕಾಂಗ್ರೆಸ್‌ ಶಿವಮೊಗ್ಗ ನಗರದಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೂ ಗೆಲುವು ಕಾಣಲು ಇವರಿಗೆ ಸಾಧ್ಯವಾಗಿಲ್ಲ.

ಜೆಡಿಎಸ್‌ನ ಆಯನೂರು ಮಂಜುನಾಥ್‌ ಹೀನಾಯ ಸೋಲು

ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯರಾಗಿದ್ದ ಆಯನೂರು ಮಂಜುನಾಥ್‌ ಅವರು ಬಿಜೆಪಿಯಿಂದ ಸಿಡಿದು ಕೊನೇ ಘಳಿಗೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದರೂ ಮ್ಯಾಜಿಕ್‌ ಮಾಡಿದ್ದಾರೆ. ಹಿರಿಯ, ಅನುಭವಿ ನಾಯಕರಾಗಿರುವ ಆಯನೂರು ಮಂಜುನಾಥ್‌ ಅವರಿಗೆ ಅವರದ್ದೇ ಆದ ಒಂದು ಅಭಿಮಾನಿ ಬಳಗವಿದೆ. ಅಲ್ಲದೆ, ಉತ್ತಮ ವಾಗ್ಮಿ ಆಗಿರುವ ಅವರು ಲಿಂಗಾಯತರೇ ಆಗಿದ್ದರಿಂದ ಇದೂ ಸಹ ಈ ಕ್ಷೇತ್ರದಲ್ಲಿ ಕೈಹಿಡಿದಿರುವ ಸಾಧ್ಯತೆ ಹೆಚ್ಚಿದೆ. ಇನ್ನು ಈ ಭಾಗದಲ್ಲಿ ಜೆಡಿಎಸ್‌ ಅಷ್ಟಾಗಿ ಗಟ್ಟಿಯಾಗಿಲ್ಲದಿದ್ದರೂ ಎಚ್.ಡಿ. ಕುಮಾರಸ್ವಾಮಿ ಅವರ ಪಂಚರತ್ನ ಘೋಷಣೆಗಳೂ ಜನರ ಮನಸ್ಸನ್ನು ಗೆದ್ದಿರಬಹುದು ಎಂದು ಅಂದಾಜಿಸಲಾಗಿದ್ದರೂ ಉಲ್ಟಾ ಹೊಡೆದಿದೆ.

ಇದನ್ನೂ ಓದಿ: Karnataka Election Results Live Updates: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಬೆಳವಣಿಗೆ

ಕಳೆದ ಬಾರಿಯ ಫಲಿತಾಂಶ ಏನು?
ಕೆ.ಎಸ್.ಈಶ್ವರಪ್ಪ (ಬಿಜೆಪಿ): 1,04,027 | ಕೆ.ಬಿ. ಪ್ರಸನ್ನಕುಮಾರ್ (ಕಾಂಗ್ರೆಸ್): 57,920 | ಗೆಲುವಿನ ಅಂತರ: 46,107

ಈ ಬಾರಿ ಫಲಿತಾಂಶ ಇಂತಿದೆ
ಚನ್ನಬಸಪ್ಪ (ಬಿಜೆಪಿ) – 95399 | ಎಚ್.ಸಿ. ಯೋಗೇಶ್‌ (ಕಾಂಗ್ರೆಸ್‌) 68071 | ಆಯನೂರು ಮಂಜುನಾಥ್ (ಜೆಡಿಎಸ್‌)‌: 8623 | ನೋಟಾ: 1205
| ಗೆಲುವಿನ ಅಂತರ: 27328

Exit mobile version