ಶಿವಮೊಗ್ಗ: ಎಸ್‌ಸಿ-ಎಸ್‌ಟಿ ಮೀಸಲಾತಿ (SC ST Reservation) ಜಾರಿ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಸೋಮವಾರ (ಮಾ. 27) ಶಿಕಾರಿಪುರದಲ್ಲಿ ಲಂಬಾಣಿ ಸಮುದಾಯದವರು ಸಿಡಿದೆದ್ದಿದ್ದರೆ, ಶಿವಮೊಗ್ಗದಲ್ಲಿ ಮಂಗಳವಾರ (ಮಾ. 28) ಬಂಜಾರ ಸಮುದಾಯದವರಿಂದ ಭಾರಿ ಪ್ರತಿಭಟನೆ ಆರಂಭವಾಗಿದೆ. ಅಲ್ಲದೆ, ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಒಳ ಮೀಸಲಾತಿ ಜಾರಿ ವಿರೋಧಿಸಿ ಬಂಜಾರ ಸಮುದಾಯದವರು ಶಿವಮೊಗ್ಗದ ಕುಂಚೇನಹಳ್ಳಿಯಲ್ಲಿ ಮಂಗಳವಾರ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಟಯರ್‌ಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಶಿವಮೊಗ್ಗ-ಶಿಕಾರಿಪುರ ರಸ್ತೆ ತಡೆ ನಡೆಸಲಾಗಿದ್ದು, ಒಳ ಮೀಸಲಾತಿ ಜಾರಿಗೆ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಗಿದ್ದು, ಈಗಿರುವ ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಗ್ರಹಿಸಲಾಗಿದೆ. ರಸ್ತೆ ತಡೆಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಿ.ಮೀ.ಗಟ್ಟಲೆ ವಾಹನಗಳು ನಿಂತಿದ್ದು, ಸವಾರರು ಕಿರಿಕಿರಿ ಅನುಭವಿಸುವಂತಾಗಿತ್ತು.
ಇದನ್ನೂ ಓದಿ: ದಶಮುಖ ಅಂಕಣ: ʻತಿರುತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ…ʼ
ಶಿಕಾರಿಪುರದಲ್ಲಿ ಗೃಹ ಸಚಿವರ ರೌಂಡ್ಸ್
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆ ಮೇಲೆ ಸೋಮವಾರ ಬಂಜಾರ ಸಮುದಾಯದ ಪ್ರತಿಭಟನಾಕಾರರು ಕಲ್ಲು, ಚಪ್ಪಲಿ ತೂರಾಟ ನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಲ್ಲದೆ, ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ಪರಿಸ್ಥಿತಿಯನ್ನು ನಿಯಂತ್ರಿಸಲು ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿತ್ತು. ಈ ಘಟನೆ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಂಗಳವಾರ ಶಿಕಾರಿಪುರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ಅವರು, ಶಿಕಾರಿಪುರದಲ್ಲಿ ನಡೆದ ಘಟನೆ ದುರದೃಷ್ಟಕರ ಎಂದು ಹೇಳಿದರು.
ಎಸ್‌ಸಿ, ಎಸ್‌ಟಿ ಮೀಸಲಾತಿ ಸಂಬಂಧ ಬಂಜಾರ ಸಮುದಾಯದವರಿಗೆ ತಪ್ಪು ತಿಳಿವಳಿಕೆಯಿಂದ ಪ್ರತಿಭಟನೆ ನಡೆದಿದೆ. ಕೆಲವರು ಈ ಘಟನೆಗೆ ಪ್ರಚೋದನೆ ಮಾಡಿದ್ದಾರೆ. ಯಡಿಯೂರಪ್ಪ ಅವರ ರಾಜಕಾರಣವನ್ನು ನಾನು ಆರಂಭದಿಂದಲೂ ನೋಡಿಕೊಂಡು ಬಂದವನು. ಅವರು ಬಂಜಾರ ಸಮುದಾಯದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವರಿಗೆ ಸಂಸದ ಬಿ.ವೈ. ರಾಘವೇಂದ್ರ ಜತೆಗಿದ್ದರು.
ಮಾಜಿ ಶಾಸಕಿ ಆಪ್ತ ಸಹಾಯಕ ಭಾಗಿ
ಶಿಕಾರಿಪುರದಲ್ಲಿ ಸೋಮವಾರ ನಡೆದಿದ್ದ ಬಂಜಾರ ಸಮುದಾಯದ ಪ್ರತಿಭಟನೆ ವೇಳೆ ನಡೆದ ಕಲ್ಲು ತೂರಾಟದಲ್ಲಿ 8 ಮಂದಿ ಪೊಲೀಸರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಕಲ್ಲು ತೂರಾಟ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡ ಇರುವ ಶಂಕೆ ಇದೆ. ಜೆಡಿಎಸ್ ಕೈವಾಡವೂ ಇದೆಯಾ ಎಂಬ ಅನುಮಾನ ಮೂಡಿದೆ ಎಂದು ಆರೋಪಿಸಿದೆ. ಪ್ರತಿಭಟನೆ, ಕಲ್ಲು ತೂರಾಟದ ವೇಳೆ ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದ ಪೂರ್ಯ ನಾಯ್ಕ ಆಪ್ತ ಸಹಾಯಕ ಹರೀಶ್ ಭಾಗವಹಿಸಿರುವ ಫೋಟೊ ಈಗ ವೈರಲ್ ಆಗಿದೆ.
ಇದನ್ನೂ ಓದಿ: Karnataka Elections : ಬಿಜೆಪಿಯ ಮತ್ತೊಂದು ವಿಕೆಟ್ ಪತನ, ಕೂಡ್ಲಿಗಿ ಶಾಸಕ ಎನ್.ವೈ ಗೋಪಾಲಕೃಷ್ಣ ಕಾಂಗ್ರೆಸ್‌ಗೆ
ಶಿಕಾರಿಪುರ ಶಾಂತ, ಮೂವರ ಬಂಧನ; ಬಂಧನ ವಿರೋಧಿಸಿ ಪ್ರತಿಭಟನೆ
ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಯ ಮುಂದೆ ಮೀಸಲಾತಿ ವಿಚಾರದಲ್ಲಿ ಗಲಾಟೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಪುನೀತ್ ನಾಯ್ಕ , ಕುಮಾರನಾಯ್ಕ , ರಾಘವೇಂದ್ರ ನಾಯ್ಕ ಎಂಬವರನ್ನು ಬಂಧಿಸಲಾಗಿದೆ. ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಿಕಾರಿಪುರದಲ್ಲಿ ಪರಿಸ್ಥಿತಿ ಸದ್ಯ ಶಾಂತವಾಗಿದ್ದು, ಭದ್ರತೆಗಾಗಿ ಹೆಚ್ಚುವರಿ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿ ಹಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಕಲ್ಲು ತೂರಿ ಗಲಭೆಗೆ ಕಾರಣರಾದವರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಘಟನೆಯಲ್ಲಿ ಎಂಟು ಮಂದಿ ಪೊಲೀಸರಿಗೆ ಗಾಯಗಳಾಗಿವೆ. ಇನ್ಸ್ಪೆಕ್ಟರ್ ರುದ್ರೇಶ್, ಲಕ್ಷ್ಮಣ್, ಕಾಂತರಾಜ್, ಶಂಕರ್ಗೌಡ ಸೇರಿದಂತೆ ಒಟ್ಟು 8 ಮಂದಿಗೆ ಗಾಯವಾಗಿದೆ. ಇಬ್ಬರ ತಲೆಗೆ ಗಾಯವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರಿಗೆ ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ: Murder Case : ತನ್ನ ಜತೆ ಬರಲು ಒಪ್ಪದ 8 ವರ್ಷದ ಮಗನನ್ನು ಚೂರಿಯಿಂದ ಇರಿದು ಕೊಂದ ಪಾಪಿ ತಂದೆ
ಗಲಭೆ ಶಂಕಿತರ ಬಂಧನ ಖಂಡಿಸಿ ಶಿವಮೊಗ್ಗದಲ್ಲಿ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ರಾತ್ರಿ ಬಂಜಾರ ಸಮುದಾಯದ ಕೆಲವರು ಪ್ರತಿಭಟನೆ ನಡೆಸಿ, ಬಂಧಿತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ಧಿಕ್ಕಾರ ಕೂಗಲಾಗಿದೆ. ʼಮೀಸಲಾತಿ ಭಿಕ್ಷೆಯಲ್ಲ, ನಮ್ಮ ಹಕ್ಕುʼ ಎಂದು ಇವರು ಘೋಷಿಸಿದ್ದಾರೆ.