ಶಿವಮೊಗ್ಗ: ತಮಿಳುನಾಡಿನಲ್ಲಿ ಹಿಂದು ಮುಖಂಡನ ಹತ್ಯೆ ಮತ್ತು ಹಲವು ಕಡೆ ಐಸಿಸ್ ಚಟುವಟಿಕೆಗಳಲ್ಲಿ ಭಾಗಿಯಾಗಿ ಕಳೆದ ಎರಡು ವರ್ಷದಿಂದ ನಾಪತ್ತೆಯಾಗಿರುವ ಶಿವಮೊಗ್ಗ ಮೂಲದ ಉಗ್ರ ಮತೀನ್ ಅಹಮದ್ ತಾಹಾನ ಬಗ್ಗೆ ಮಾಹಿತಿ ಕಲೆ ಹಾಕಲು ಈಗ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ಶಿವಮೊಗ್ಗಕ್ಕೆ ಕಾಲಿಟ್ಟಿದೆ.
ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈಗಾಗಲೇ ಈತನ ಮೇಲೆ ಕೇಸು ದಾಖಲಿಸಿಕೊಂಡಿದ್ದು, ಆತನ ಸುಳಿವು ನೀಡಿದವರಿಗೆ ಮೂರು ಲಕ್ಷ ರೂ. ಬಹುಮಾನ ಘೋಷಿಸಿದೆ. ರಾಜ್ಯದ ನಾನಾ ಕಡೆ ಐಸಿಸ್ ಚಟುವಟಿಕೆ ನಡೆಸಿದ ʻಅಲ್ ಹಿಂದ್ ಐಸಿಸ್ʼ ಎಂಬ ಸಂಘಟನೆಯ ಸದಸ್ಯನಾಗಿರುವ ಈತ ಶಿವಮೊಗ್ಗದಲ್ಲೂ ಬಾಂಬ್ ಸ್ಫೋಟಕ್ಕೆ ಸಂಚು ನಡೆಸಿದ್ದ ಎಂದು ಹೇಳಲಾಗಿದೆ. ಇದೀಗ ಶಿವಮೊಗ್ಗದಲ್ಲಿ ಪತ್ತೆಯಾಗಿರುವ ಉಗ್ರ ಜಾಲದ ಹಿಂದೆಯೂ ಆತನ ನೆರಳು ಕಾಣಿಸಿಕೊಂಡಿದೆ. ಹೊಸದಾಗಿ ಪತ್ತೆಯಾದ ಉಗ್ರ ಜಾಲದ ರೂವಾರಿ ಮಹಮ್ಮದ್ ಶಾರಿಕ್ ಮತ್ತು ಮತೀನ್ ಇಬ್ಬರೂ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯವರೇ ಆಗಿದ್ದಾರೆ. ಶಾರಿಕ್ ಈ ರೀತಿ ಉಗ್ರ ಚಟುವಟಿಕೆಗಳಿಗೆ ಸೇರಿಕೊಳ್ಳಲು ಮತೀನ್ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಅದರ ಜತೆಗೆ ಕಳೆದ ೪೦ ದಿನಗಳಿಂದ ನಾಪತ್ತೆಯಾಗಿರುವ ಶಾರಿಕ್ ಈಗ ಮತೀನ್ ಜತೆಗೆ ಇರಬಹುದು ಎಂದು ಹೇಳಲಾಗಿದೆ.
ಹೈದರಾಬಾದ್ ಟೀಮ್ ಆಗಮನ
ಭಯೋತ್ಪಾದನಾ ನಿಗ್ರಹ ಪಡೆ(ಎಟಿಎಸ್)ಯ ಹೈದರಾಬಾದ್ ಟೀಮ್ ಈಗಾಗಲೇ ಶಿವಮೊಗ್ಗಕ್ಕೆ ಬಂದಿದೆ. ಇದು ಈಗಾಗಲೇ ಬಂಧನದಲ್ಲಿರುವ ಮಹಮ್ಮದ್ ಯಾಸಿನ್, ಮಹಮ್ಮದ್ ಮಾಜ್ ಮುನೀರ್‌ನನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಇಬ್ಬರಿಗೆ ಮತೀನ್ ಜತೆಗಿರುವ ಸಂಬಂಧದ ಬಗ್ಗೆ ಪ್ರಧಾನವಾಗಿ ಎಟಿಎಸ್ ತನಿಖೆ ನಡೆಸಲಿದೆ.
ಮತೀನ್ ಯೋಧ ಮನ್ಸೂರ್ ಅವರ ಮಗ!
ಈಗ ದೇಶದ್ರೋಹಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಅಬ್ದುಲ್ ಮತೀನ್ ಅಹ್ಮದ್ ತಾಹಾ (28) ಮೂಲತಃ ಒಬ್ಬ ಯೋಧನ ಮಗ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿರುವ, ಸುಮಾರು ೨೬ ವರ್ಷ ಕಾಲದ ಸೇನೆಯಲ್ಲಿ ಕೆಲಸ ಮಾಡಿದ್ದ ಮನ್ಸೂರ್ ಖಾನ್ ಅವರ ಹಿರಿಯ ಪುತ್ರ. ಕೆಲವು ವರ್ಷಗಳ ಹಿಂದೆ ಎಂಜಿನಿಯರಿಂಗ್ ಓದಲೆಂದು ಬೆಂಗಳೂರಿಗೆ ಹೋಗಿದ್ದ ಆತ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಖಾಸಗಿ ಉದ್ಯೋಗ ಸೇರಿಕೊಂಡಿದ್ದ. ಬೆಂಗಳೂರಿನಲ್ಲಿರುವಾಗ ಆತನಿಗೆ ಉಗ್ರರ ಸಂಪರ್ಕ ಆಗಿತ್ತು ಎನ್ನಲಾಗಿದೆ.
೨೦೧೯ರಲ್ಲಿ ತಮಿಳುನಾಡಿನಲ್ಲಿ ನಡೆದ ಹಿಂದು ನಾಯಕರ ಕೊಲೆಗೆ ಸಂಬಂಧಿಸಿ ಐಸಿಸ್ ಪ್ರಚೋದಿತ ಗುಂಪಿನ ಮೆಹಬೂಬ್ ಪಾಷಾ, ಖಾಜಾ ಮೊಯಿದ್ದೀನ್ ಸೇರಿದಂತೆ ಇತರರನ್ನು ಎನ್ಐಎ ಬಂಧಿಸಿತ್ತು. ಈ ವೇಳೆ ಆರೋಪಿಗಳು ರಾಜ್ಯದ ಅಬ್ದುಲ್ ಮತೀನ್ ಜತೆ ನಂಟು ಹೊಂದಿರುವುದು ಬೆಳಕಿಗೆ ಬಂದಿತ್ತು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗುರಪ್ಪನಪಾಳ್ಯದ ಮನೆಯಲ್ಲಿ 2019ರಲ್ಲಿ ಮೆಹಬೂಬ್ ಪಾಷಾ ಐಸಿಸ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ನಡೆಸಿದ್ದ. ಆ ಸಭೆಯಲ್ಲಿ ಅಬ್ದುಲ್ ಮತೀನ್ ಕೂಡ ಭಾಗಿಯಾಗಿದ್ದ. ಆರೋಪಿಗಳು ಇನ್ನೂ ಕೆಲ ಆರೋಪಿಗಳೊಂದಿಗೆ ಸೇರಿ ಸಭೆ ನಡೆಸಿದ್ದರು. ಆಫ್ಘಾನಿಸ್ತಾನ, ಸಿರಿಯಾದಲ್ಲಿ ಐಸಿಸ್ ಸೇರಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮುಸ್ಲಿಂ ಯುವಕರನ್ನು ಇವರು ಪ್ರಚೋದಿಸುತ್ತಿದ್ದರು ಎನ್ನಲಾಗಿದೆ.
ಮತೀನ್‌ಗೆ ಬೆಂಗಳೂರಿನಲ್ಲಿ ಅಲ್ ಹಿಂದ್ ಟ್ರಸ್ಟ್‌ನ ಮೆಹಬೂಬ್ ಪಾಷಾನ ಪರಿಚಯವಾಗಿ ಉಗ್ರ ಚಟುವಟಿಕೆಗೆ ಸೇರಿಕೊಂಡಿದ್ದ. ಮತೀನ್ ವಿದೇಶಗಳಲ್ಲಿರುವ ಹ್ಯಾಂಡ್ಲರ್‌ಗಳ ಜತೆ ಆನ್‌ಲೈನ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ೨೦೧೯ರ ಬಳಿಕ ನಾಪತ್ತೆಯಾಗಿರುವ ಮತೀನ್‌ಗಾಗಿ ಎನ್‌ಐಎ ಸಾಕಷ್ಟು ಹುಡುಕಾಡಿದೆ. ಈಗ ಶಾರಿಕ್ ಮತ್ತು ಅವನ ಜತೆಗಿರಬಹುದಾದ ಸಂಪರ್ಕದ ನೆಲೆಯಲ್ಲಿ ಅವನನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.
ಅಬ್ದುಲ್ ಮತೀನ್‌ನ ತಂದೆ ಮತ್ತು ಕುಟುಂಬದ ಸದಸ್ಯರನ್ನೂ ಎಟಿಎಸ್ ಭೇಟಿಯಾಗಿ ಮಾಹಿತಿ ಪಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ |Shivamogga terror | ಎಂಥಾ ಅಪ್ಪನಿಗೆ ಎಂಥಾ ಮಗ: ಐಸಿಸ್ ಉಗ್ರ ಮತೀನ್‌ನ ತಂದೆ 26 ವರ್ಷ ಸೇನೆಯಲ್ಲಿದ್ದರು!