Site icon Vistara News

Shivamogga terror | ಉಗ್ರ ಯಾಸಿನ್ ಭಟ್ಕಳ್ ಅಡಗುತಾಣವಾಗಿತ್ತು ಮಲೆನಾಡು, ಬಾಂಬ್‌ ತಯಾರಿ ಅಡ್ಡೆ?

Yasin Bhatkal

ವಿವೇಕ್‌ ಮಹಾಲೆ ವಿಸ್ತಾರ ನ್ಯೂಸ್‌ ಶಿವಮೊಗ್ಗ
ಶಿವಮೊಗ್ಗವನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಉಗ್ರ ಜಾಲವೊಂದನ್ನು ಪೊಲೀಸರು ಭೇದಿಸುವುದರೊಂದಿಗೆ ಮಲೆನಾಡು ಮತ್ತೆ ಸುದ್ದಿಯಲ್ಲಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಮೊಹಮ್ಮದ್‌ ಶಾರಿಕ್‌, ಶಿವಮೊಗ್ಗ ಸಿದ್ದನಗರದ ಮಹಮ್ಮದ್‌ ಯಾಸಿನ್‌ ಮತ್ತು ಮಂಗಳೂರಿನ ಮೊಹಮ್ಮದ್‌ ಮಾಝ್‌ ಎಂಬವರು ಉಗ್ರ ಚಟುವಟಿಕೆ, ಬಾಂಬ್‌ ತಯಾರಿಕೆ, ಸ್ಫೋಟ ರಿಹರ್ಸಲ್‌ ಮತ್ತಿತರ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವಾಗ ಪೊಲೀಸರ ಚುರುಕು ಕಣ್ಣಿಗೆ ಬಿದ್ದಿದ್ದಾರೆ. ಮೂವರು ಶಂಕಿತ ಉಗ್ರರ ಪೈಕಿ ಇಬ್ಬರನ್ನು ಬಂಧಿಸಲಾಗಿದೆ.

ನಿಜವೆಂದರೆ, ಶಿವಮೊಗ್ಗದ ಈ ಮಲೆನಾಡು ಭಾಗ ಉಗ್ರ ಚಟುವಟಿಕೆಯಿಂದಾಗಿ ಸುದ್ದಿಯಾಗುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಮಲೆನಾಡಿಗೆ ದಶಕದಿಂದಲೂ ಉಗ್ರರ ನಂಟಿದೆ. ದೇಶಾದ್ಯಂತ ಭಾರಿ ಸದ್ದು ಮಾಡಿದ ಇಂಡಿಯನ್‌ ಮುಜಾಹಿದೀನ್‌ ಸಂಘಟನೆಯ ಮುಖ್ಯಸ್ಥ ಯಾಸಿನ್‌ ಭಟ್ಕಳ್‌ ತನ್ನ ರಹಸ್ಯ ಚಟುವಟಿಕೆಗಳ ತಾಣವಾಗಿ ಮಲೆನಾಡನ್ನೇ ಆಯ್ಕೆ ಮಾಡಿಕೊಂಡಿದ್ದ. ಬಾಂಬ್ ತಯಾರಿಕೆಯಲ್ಲಿ ನಿಪುಣನಾಗಿರುವ ಯಾಸಿನ್ ಭಟ್ಕಳ್ ಶಿವಮೊಗ್ಗದ ಸಿಲ್ವರ್ ವುಡ್ ಅನ್ನು ಬಾಂಬ್ ತಯಾರಿಕೆಗೆ ಬಳಸುತ್ತಿದ್ದ!

ಶಿವಮೊಗ್ಗದ ಸಿಲ್ವರ್‌ವುಡ್‌ನಿಂದಲೇ ಬಾಂಬ್‌!
2008ರಲ್ಲಿ ಅಹ್ಮದಾಬಾದ್‌ನಲ್ಲಿ 21 ಕಡೆ ಸರಣಿ ಬಾಂಬ್ ಸ್ಫೋಟಿಸಿದ್ದ ಯಾಸಿನ್ ಭಟ್ಕಳ್ ಆ ಕೃತ್ಯಕ್ಕೆ ಬಳಸಿದ ಬಾಂಬ್ ಅನ್ನು ಶಿವಮೊಗ್ಗದ ಸಿಲ್ವರ್ ವುಡ್‌ನಿಂದಲೇ ತಯಾರಿಸಲಾಗಿತ್ತು ಎಂಬ ಮಾಹಿತಿಯನ್ನು ಸ್ವತಃ ಯಾಸಿನ್ ಭಟ್ಕಳ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ.
ಆಗ ಯಾಸಿನ್‌ ಭಟ್ಕಳ್‌ ಹಲವು ದಿನಗಳ ಕಾಲ ಮಲೆನಾಡಿನಲ್ಲಿ ತಂಗಿರುವ ಮಾಹಿತಿ ಇದ್ದು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಹಲವೆಡೆ ಬಹಳಷ್ಟು ಸಮಯ ವಾಸ್ತವ್ಯ ಮಾಡಿರುವುದಕ್ಕೆ ಪೊಲೀಸ್ ಇಲಾಖೆಯಲ್ಲಿ ಪುರಾವೆಗಳಿವೆ. ಬಾಂಬ್ ಗೆ ಬೇಕಾದ ಅಲ್ಯುಮಿನಿಯಂ ಹಾಳೆ ಉಡುಪಿಯಿಂದ ತರಿಸುತ್ತಿದ್ದಾಗಿಯೂ ಆತ ಹೇಳಿಕೊಂಡಿದ್ದ.

ಹೆಂಡತಿಗೆ ಕರೆ ಮಾಡಿ ಸಿಕ್ಕಿಬಿದ್ದಿದ್ದ.. ಆದರೆ..
ಹಲವು ವರ್ಷಗಳ ಕಾಲ ತಲೆಮರೆಸಿಕೊಂಡು ಓಡಾಡುತ್ತಿದ್ದ ಯಾಸಿನ್ ಭಟ್ಕಳ್ 2013ರ ಆಗಸ್ಟ್ ನಲ್ಲಿ ನೇಪಾಳದಲ್ಲಿದ್ದ ಆತ ಯಾವುದೋ ತುರ್ತು ಕೆಲಸಕ್ಕಾಗಿ ತನ್ನ ಪತ್ನಿಗೆ ಕರೆ ಮಾಡಿ ಸಿಕ್ಕಿಬಿದ್ದಿದ್ದ . 2013 ಆಗಸ್ಟ್ 28ರಂದು ಭಾರತ-ನೇಪಾಳದ ಗಡಿಯಲ್ಲಿ ಆತನ ಬಂಧನವಾಗಿತ್ತು. ಆತನ ಬಂಧನಕ್ಕೆ ಆರು ವರ್ಷ ಮೊದಲೇ ಯಾಸಿನ್ ಭಟ್ಕಳ್ ಶಿವಮೊಗ್ಗಕ್ಕೆ ಬರುತ್ತಿರುವ ಮಾಹಿತಿ ಪೊಲೀಸರಿಗೆ ಇತ್ತು. 2007ರಲ್ಲೇ ಗುಪ್ತಚರ ಇಲಾಖೆಗೆ ಆತ ಶಿವಮೊಗ್ಗದ ಸಿಲ್ವರ್ ವುಡ್ ಅನ್ನು ಕೊಂಡೊಯ್ಯುತ್ತಿರುವ ಮಾಹಿತಿ ಸಿಕ್ಕಿತ್ತು. ಆತನನ್ನು ಬಂಧಿಸುವುದಕ್ಕೆ ಪೊಲೀಸರೂ ಸನ್ನದ್ಧರಾಗಿದ್ದರು. ಆದರೆ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬ ಈ ವಿಷಯ ಮಾಧ್ಯಮಗಳಿಗೆ ಸೋರಿಕೆ ಮಾಡಿಬಿಟ್ಟಿದ್ದರಿಂದ ಯಾಸಿನ್ ಭಟ್ಕಳ್ ಅಲರ್ಟ್ ಆದ. ಯಾಸಿನ್ ಭಟ್ಕಳ್ ಎಂಬ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಸುಲಭವಾಗಿ ತಪ್ಪಿಸಿಕೊಳ್ಳುವುದಕ್ಕೆ ಅಂದು ಕಾರಣವಾಗಿತ್ತು. ನಂತರ ಆರು ವರ್ಷದವರೆಗೆ ಆತನನ್ನು ಹಿಡಿಯುವುದಕ್ಕೆ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲೇ ಆತ ಅಹಮದಾಬಾದ್, ಬೆಂಗಳೂರು, ಪುಣೆ ಸೇರಿದಂತೆ ಹಲವೆಡೆ ಬಾಂಬ್ ಸ್ಫೋಟಿಸಿ ಹಲವು ಅಮಾಯಕರ ಸಾವಿಗೆ ಕಾರಣನಾಗಿದ್ದ. ಮುಂದೆ ಆತನನ್ನು ಬಂಧಿಸಿ ಜೀವಾವಧಿ ಶಿಕ್ಷೆ ನೀಡಲಾಗಿದೆ.

ಶಿವಮೊಗ್ಗದಲ್ಲಿ ಹೊಸದಾಗಿ ಉಗ್ರ ಚಟುವಟಿಕೆ ಆರಂಭಿಸಿದ ಯಾಸಿನ್‌, ಶಾರಿಕ್‌ ಮತ್ತು ಮಾಝ್‌

ತೀರ್ಥಹಳ್ಳಿ ನಾಟಾ ವ್ಯಾಪಾರಿ ಕೊಲೆಯಲ್ಲಿ ಕೈವಾಡ?:
ತೀರ್ಥಹಳ್ಳಿಯ ನಾಟಾ ವ್ಯಾಪಾರಿ ಮಂಜುನಾಥ್ ಕೊಲೆ ಪ್ರಕರಣದಲ್ಲಿ ಉಗ್ರ ಯಾಸಿನ್ ಭಟ್ಕಳ ಕೈವಾಡವಿರುವ ಆರೋಪವಿದೆ. ಈ ವಿಚಾರವಾಗಿ ಯಾಸಿನ್ ಭಟ್ಕಳ್ ಬಂಧನದ ವೇಳೆ ಹಿಂದು ಸಂಘಟನೆಗಳು ಆರೋಪಿಸಿದ್ದವು. ನಾಟಾ ವ್ಯಾಪಾರದ ಸೋಗಿನಲ್ಲಿ ಮಂಜುನಾಥ ಅವರೊಂದಿಗೆ ಓಡಾಡಿಕೊಂಡಿದ್ದ. ಕೊಲೆಯಾದ ಮಂಜುನಾಥ ಅವರ ಪತ್ನಿ ಯಶೋಧಾರ ಚಿಕ್ಕಮ್ಮನ ಗಂಡ ಯಾಸಿನ್ ಭಟ್ಕಳನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಂದ ಯಾಸಿನ್‌ ಮಂಜುನಾಥನ ಸಂಪರ್ಕಕ್ಕೆ ಬಂದಿದ್ದ.
ಯಾಸಿನ್ ಕೊಪ್ಪ ತಾಲೂಕು ವಿಟ್ಲಮಕ್ಕಿ ಅರಣ್ಯದಲ್ಲಿ ಅಡಗಿಕೊಂಡು ಬಾಂಬ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಪೊಲೀಸ್ ಇಲಾಖೆಯ ಪುಟಗಳಲ್ಲಿ ದಾಖಲಾಗಿದೆ. ಇದೇ ಸಮಯದಲ್ಲಿ ಆತ ಮಂಜುನಾಥನ ಸಖ್ಯ ಬೆಳೆಸಿಕೊಂಡಿದ್ದ. ನಾಟಾ ವ್ಯಾಪಾರದ ಮೇಲೆ ತೀರ್ಥಹಳ್ಳಿಗೆ ಯಾಸಿನ್ ಭಟ್ಕಳ್ ಆಗಾಗ ಬರುತ್ತಿದ್ದ.

ಆತಂಕ ಸೃಷ್ಟಿಸಿದ್ದ ಸ್ಯಾಟಲೈಟ್ ಫೋನ್ ಬಳಕೆ
ಮಲೆನಾಡಿನ ದಟ್ಟಾರಣ್ಯದಲ್ಲಿ ನಿಷೇಧಿತ ತುರಾಯಾ ಸ್ಯಾಟಲೈಟ್ ಫೋನ್ ಕಳೆದ ವರ್ಷ ರಿಂಗುಣಿಸಿತ್ತು.
ಇಲ್ಲಿಂದ ವಿದೇಶಕ್ಕೆ ಕನೆಕ್ಟ್ ಆಗಿರುವುದನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದರು. ಶಂಕಿತ ಉಗ್ರ ಶಾರಿಕ್‌ ಎಂಡ್ ಗ್ಯಾಂಗ್ ಸ್ಯಾಟಲೈಟ್ ಫೋನ್ ಬಳಸಿದ್ದರೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತುರಾಯಾ ಸ್ಯಾಟಲೈಟ್ ಫೋನ್ ಬಳಕೆ ಭಾರತದಲ್ಲಿ ನಿಷೇಧವಿದ್ದರೂ, ಈ ನಿಷೇಧಿತ ಫೋನ್ನಲ್ಲಿ ಹಲವು ಬಾರಿ ವಿದೇಶಕ್ಕೆ ಸಂಪರ್ಕ ಹೊಂದಿರುವುದು ಗುಪ್ತಚರ ಇಲಾಖೆಯಿಂದ ದೃಢಪಟ್ಟಿತ್ತು, ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಉಗ್ರರ ಸ್ಲೀಪರ್‌ ಸೆಲ್‌ ಸಕ್ರಿಯವಾಗಿದ್ದು, ಉಗ್ರರ ಸ್ಲೀಪರ್ ಸೆಲ್‌ಗಳಿಂದಲೇ ಈ ಸ್ಯಾಟಲೈಟ್ ಫೋನ್ ಸಂಪರ್ಕ ಆಗುತ್ತಿದ್ದ ಶಂಕೆಯಿದೆ. ತುರಾಯಾ ಫೋನ್‌ಗಳ ಬಳಕೆಯನ್ನು ಭಾರತದಲ್ಲಿ 2012ರಲ್ಲೇ ನಿಷೇಧಿಸಲಾಗಿದ್ದು, ಈ ಫೋನ್ ಬಳಕೆಯಾದ ಒಂದು ದಿನದ ಬಳಿಕ ಗುಪ್ತಚರ ಇಲಾಖೆಗೆ ಸಂದೇಶ ಬರುತ್ತದೆ ಎನ್ನಲಾಗಿದೆ.

ಇದನ್ನೂ ಓದಿ| Shivamogga terror | ಗುರುಪುರ ನದಿ ತೀರದಲ್ಲಿ ನಡೀತಿತ್ತಾ ಐಇಡಿ ಪರೀಕ್ಷೆ? ಹಲವು ಕಚ್ಚಾ ವಸ್ತುಗಳು ಪತ್ತೆ

Exit mobile version