Site icon Vistara News

Shivamogga terror | ಶಿವಮೊಗ್ಗದಲ್ಲೂ ಬಾಂಬ್‌ ಸ್ಫೋಟಕ್ಕೆ ಸಂಚು ನಡೆಸಿದ್ದ ಐಸಿಸ್‌ ಉಗ್ರ ಮತೀನ್‌

matheen3

ಶಿವಮೊಗ್ಗ: ಇಲ್ಲಿನ ಸಾವರ್ಕರ್‌ ಪೋಸ್ಟರ್‌ ವಿವಾದದಲ್ಲಿ ಮೂಗು ತೂರಿಸಿದ್ದ ಉಗ್ರ ಮತೀನ್‌ ಅಹ್ಮದ್‌, ತಮಿಳುನಾಡಿನಲ್ಲಿ ಹಿಂದೂ ಮುಖಂಡನ ಹತ್ಯೆ ನಡೆಸಿದ್ದ ಹಾಗೂ ರಾಜ್ಯದಲ್ಲಿ ಐಸಿಸ್ ಚಟುವಟಿಕೆ ನಡೆಸಿದ ʻಅಲ್ ಹಿಂದ್ ಐಸಿಸ್’ ಸಂಘಟನೆ ಸದಸ್ಯ ಹಾಗೂ ಶಿವಮೊಗ್ಗದಲ್ಲೂ ನಾನಾ ಕಡೆ ಬಾಂಬ್‌ ಸ್ಫೋಟಕ್ಕೆ ಸಂಚು ನಡೆಸಿದ್ದ ಎಂಬುದು ಗೊತ್ತಾಗಿದೆ. ಈತನ ಸುಳಿವು ನೀಡಿದವರಿಗೆ 3 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.

ಅಬ್ದುಲ್ ಮತೀನ್ ಅಹ್ಮದ್ ತಾಹಾ (28) ಈತನ ಪೂರ್ತಿ ಹೆಸರು. ತಮಿಳುನಾಡಿನಲ್ಲಿ ಹಿಂದೂ ಮುಖಂಡನ ಹತ್ಯೆ ಹಾಗೂ ರಾಜ್ಯದಲ್ಲಿ ಐಸಿಸ್ ಚಟುವಟಿಕೆ ನಡೆಸಿದ ʻಅಲ್ ಹಿಂದ್ ಐಸಿಸ್’ ಸಂಘಟನೆಯ ಸಕ್ರಿಯ ಸದಸ್ಯನೀತ. ತಲೆಮರೆಸಿಕೊಂಡಿರುವ ಈತನ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) 3 ಲಕ್ಷ ರೂ. ಬಹುಮಾನ ಘೋಷಿಸಿದೆ.

ಐಸಿಸ್ ಪ್ರಚೋದಿತ ಗುಂಪಿನ ಮೆಹಬೂಬ್ ಪಾಷಾ, ಖಾಜಾ ಮೊಯಿದ್ದೀನ್ ಸೇರಿದಂತೆ ಇತರರನ್ನು ಎನ್ಐಎ ಬಂಧಿಸಿತ್ತು. ಈ ವೇಳೆ ಆರೋಪಿಗಳು ರಾಜ್ಯದ ಅಬ್ದುಲ್ ಮತೀನ್ ಜತೆ ನಂಟು ಹೊಂದಿರುವುದು ಬೆಳಕಿಗೆ ಬಂದಿತ್ತು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗುರಪ್ಪನಪಾಳ್ಯದ ಮನೆಯಲ್ಲಿ 2019ರಲ್ಲಿ ಮೆಹಬೂಬ್ ಪಾಷಾ ಐಸಿಸ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ನಡೆಸಿದ್ದ. ಆ ಸಭೆಯಲ್ಲಿ ಅಬ್ದುಲ್ ಮತೀನ್ ಕೂಡ ಭಾಗಿಯಾಗಿದ್ದ. ಆರೋಪಿಗಳು ಇನ್ನೂ ಕೆಲ ಆರೋಪಿಗಳೊಂದಿಗೆ ಸೇರಿ ಸಭೆ ನಡೆಸಿದ್ದರು. ಆಫ್ಘಾನಿಸ್ತಾನ, ಸಿರಿಯಾದಲ್ಲಿ ಐಸಿಸ್ ಸೇರಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮುಸ್ಲಿಂ ಯುವಕರನ್ನು ಇವರು ಪ್ರಚೋದಿಸುತ್ತಿದ್ದರು.‌

ಇದನ್ನೂ ಓದಿ | Shivamogga terror | ಸಾವರ್ಕರ್‌-ಟಿಪ್ಪು ಗಲಾಟೆಗೂ ಉಗ್ರ ಜಾಲ ಪತ್ತೆಗೂ ಲಿಂಕ್‌, ಜಬಿ ವಿಚಾರಣೆ ವೇಳೆ ಸಿಕ್ತು ಸುಳಿವು

ಮೆಹಬೂಬ್ ಪಾಷಾ, ಇಮ್ರಾನ್ ಖಾನ್, ಮೊಹಮದ್ ಹನೀಫ್ ಖಾನ್, ಮೊಹಮದ್ ಮನ್ಸೂರ್ ಅಲಿಖಾನ್, ಸಲೀಂಖಾನ್ ಅಲಿಯಾಸ್ ಕೋಲಾರ್ ಸಲೀಂ, ಹುಸೇನ್ ಷರೀಫ್, ಇಜಾಜ್ ಪಾಷಾ, ಜಬೀವುಲ್ಲಾ, ಸೈಯ್ಯದ್ ಅಜ್ಮತ್ಉಲ್ಲಾ, ಸೈಯದ್ ಫಸೀವುರ್ ರೆಹಮಾನ್, ಮೊಹಮ್ಮದ್ ಜಯಾದ್ ಮತ್ತು ಸಾದಿಕ್ ಬಾಷಾ ಈಗ ಬಂಧನದಲ್ಲಿರುವ ಆರೋಪಿಗಳು. ಅಬ್ದುಲ್ ಮತೀನ್ ಬಂಧಿತ ಸಲೀಂ ಮತ್ತು ಜಯಾದ್‌ನ ಸ್ನೇಹಿತ. ಬೆಂಗಳೂರಿನಲ್ಲಿ ಅಲ್ ಹಿಂದ್ ಟ್ರಸ್ಟ್‌ನ ಮೆಹಬೂಬ್ ಪಾಷಾನಿಗೆ ಈ ಮೂವರು ಪರಿಚಯವಾಗಿ ಸಂಪರ್ಕದಲ್ಲಿದ್ದರು. ಆರೋಪಿ ಅಬ್ದುಲ್ ಮತೀನ್ ವಿದೇಶಗಳಲ್ಲಿರುವ ಹ್ಯಾಂಡ್ಲರ್‌ಗಳ ಜತೆ ಆನ್‌ಲೈನ್ ಸಂಪರ್ಕದಲ್ಲಿದ್ದ.

ಶಿವಮೊಗ್ಗದಲ್ಲಿಯೂ ಇವರು ವಿವಿಧೆಡೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬುದು ಕೂಡ ಗೊತ್ತಾಗಿದೆ. ಬಾಂಬ್ ಸ್ಫೋಟಕ್ಕೆ ಆಯ್ಕೆ ಮಾಡಿದ್ದ ಸ್ಥಳಗಳು, ಅದಕ್ಕೆ ಐಸಿಸ್​ ಸಂಘಟನೆಯ ಪ್ಲಾನರ್ ಯಾರು, ಇವರಿಗೆ ಸಂದೇಶ ಕೊಡುತ್ತಿದ್ದ ವ್ಯಕ್ತಿ ಯಾರು, ಸ್ಫೋಟಕ್ಕೆ ದಿನ ನಿಗದಿಯಾಗಿತ್ತೆ, ಈ ಎಲ್ಲ ವಿಷಯಗಳ ಬಗ್ಗೆ ಪೊಲೀಸರು ಬಂಧಿತರ ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರಿಗೆ ಕರೆದೊಯ್ದಿರುವ ಮಾಜ್‌ನನ್ನು ಇಂದು ಶಿವಮೊಗ್ಗಕ್ಕೆ ಕರೆತರುವ ಸಾಧ್ಯತೆಯಿದ್ದು, ಶಿವಮೊಗ್ಗ, ತೀರ್ಥಹಳ್ಳಿಯ ಹಲವೆಡೆ ಕರೆದೊಯ್ದು ಸಾಕ್ಷ್ಯ ಸಂಗ್ರಹಿಸಲಿದ್ದಾರೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿರುವ ಶಾರೀಖ್ ಮನೆಯಲ್ಲೂ ತಪಾಸಣೆ ನಡೆಸಲಿದ್ದಾರೆ.

ಇದನ್ನೂ ಓದಿ | Shivamogga terror | ಉಗ್ರ ಮತೀನ್ ಜತೆ ನಿಕಟ ಸಂಪರ್ಕ ಹೊಂದಿದ್ದ ಶಾರಿಕ್

Exit mobile version