ಶಿವಮೊಗ್ಗ: ಶಿವಮೊಗ್ಗ ಪೊಲೀಸರ ಕಸ್ಟಡಿಯಲ್ಲಿರುವ ಬಂಧಿತ ಉಗ್ರರಾದ ಮೊಹಮ್ಮದ್ ಯಾಸಿನ್ ಮತ್ತು ಮೊಹಮದ್ ಮಾಜ್ ಮುನೀರ್‌ನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ನಾಲ್ಕು ದಿನ ವಿಸ್ತರಿಸಲಾಗಿದೆ.
ಶಿವಮೊಗ್ಗ ಪೊಲೀಸರು ಇತ್ತೀಚೆಗೆ ಸೆಪ್ಟೆಂಬರ್ ೨೦ರಂದು ಉಗ್ರ ಜಾಲವೊಂದನ್ನು ಭೇದಿಸಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅದರ ಜತೆಗೇ ಶಿವಮೊಗ್ಗದ ಸಿದ್ದೇಶ್ವರ ನಗರ ನಿವಾಸಿ ಮಹಮ್ಮದ್ ಯಾಸಿನ್ ಮತ್ತು ಮಂಗಳೂರಿನ ಮಹಮ್ಮದ್ ಮಾಜ್ ಮುನೀರ್‌ನನ್ನು ಬಂಧಿಸಿದ್ದರು. ಈ ಜಾಲದ ಕಿಂಗ್‌ಪಿನ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಮಹಮ್ಮದ್ ಶಾರಿಕ್ ತಲೆಮರೆಸಿಕೊಂಡಿದ್ದಾನೆ. ಬಂಧಿತ ಇಬ್ಬರನ್ನು ಅವರು ಬಾಂಬ್ ತಯಾರಿ ಮಾಡುತ್ತಿದ್ದ, ಸ್ಫೋಟದ ರಿಹರ್ಸಲ್ ನಡೆಸುತ್ತಿದ್ದ ತುಂಗಾ ಮತ್ತು ನೇತ್ರಾವತಿ ತೀರಗಳಿಗೆ ಕರೆದುಕೊಂಡು ಹೋಗಿ ತೀವ್ರ ತನಿಖೆಗೆ ಒಳಪಡಿಸಿದ್ದರು. ಈ ನಡುವೆ ಸೆಪ್ಟೆಂಬರ್ ೨೭ಕ್ಕೆ ಅವರ ಪೊಲೀಸ್ ಕಸ್ಟಡಿ ಅವಧಿ ಮುಗಿಯುತ್ತಿದೆ. ಹೀಗಾಗಿ ಸೋಮವಾರ ಅವರನ್ನು ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ಸೋಮವಾರ ಬೆಳಗ್ಗೆ ಇಬ್ಬರೂ ಉಗ್ರರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ೨ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಉಗ್ರರನ್ನು ಹಾಜರುಪಡಿಸಿದ ಪೊಲೀಸರು ವಿಚಾರಣೆ ಬಾಕಿ ಇರುವುದರಿಂದ ಇನ್ನಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು. ಕೋರ್ಟ್ ಪೊಲೀಸರ ಮನವಿಗೆ ಸಹಮತ ಸೂಚಿಸಿ ಸೆಪ್ಟೆಂಬರ್ ೩೦ರವರೆಗೆ ಪೊಲೀಸ್ ಕಸ್ಟಡಿಯನ್ನು ವಿಸ್ತರಿಸಿದೆ.
ಶಾರಿಕ್ ಸುಳಿವು ದೊರೆತಿಲ್ಲ ಎಂದ ಎಸ್ಪಿ
ಬಂಧಿತ, ಶಂಕಿತ ಉಗ್ರರ ಪೊಲೀಸ್ ಕಸ್ಟಡಿ ವಿಸ್ತರಣೆಯ ವಿಚಾರವನ್ನು ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್, ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಟೆಕ್ನಿಕಲ್ ತನಿಖೆ ಮುಂದುವರಿದಿದೆ ಎಂದರು.
ಪ್ರಧಾನ ಆರೋಪಿಯಾಗಿರುವ ಮಹಮ್ಮದ್ ಶಾರಿಕ್‌ನ ಸುಳಿವು ಸಿಕ್ಕಿಲ್ಲ. ಆತನ ಪತ್ತೆಗೆ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಸದ್ಯಕ್ಕೆ ಆತನ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದಲ್ಲಿ ಯಾರನ್ನೂ ಬಂಧಿಸಿಲ್ಲ ಎಂದೂ ಎಸ್‌ಪಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ | Shivamogga terror ಉಗ್ರ ಮತೀನ್ ಮಾಹಿತಿ ಕಲೆ ಹಾಕಲು ಶಿವಮೊಗ್ಗಕ್ಕೆ ಕಾಲಿಟ್ಟ ಎಟಿಎಸ್, ಶಾರಿಕ್ ಕೂಡಾ ಮತೀನ್ ಜತೆಗಿದ್ದಾನಾ?