ಶಿವಮೊಗ್ಗ: ನಿಷೇಧಿತ ಉಗ್ರ ಸಂಘಟನೆಗಳ ಜತೆ ಸಂಬಂಧ ಹೊಂದಿದ್ದಲ್ಲದೆ, ಸ್ಥಳೀಯವಾಗಿ ಬಾಂಬ್ ಸ್ಫೋಟಕ್ಕೆ ತಯಾರಿ ನಡೆಸುತ್ತಿದ್ದರು ಎಂಬ ಆರೋಪದಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರನ್ನು ಬುಧವಾರ ಶಿವಮೊಗ್ಗ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರು ಬಾಂಬ್ ತಯಾರಿ, ಸ್ಫೋಟಕ ಪರೀಕ್ಷೆಗಳನ್ನು ನಡೆಸಿದ್ದಾರೆ ಎನ್ನಲಾಗಿದ್ದು ಈ ಚಟುವಟಿಕೆಗಳು ಎಲ್ಲೆಲ್ಲಿ ನಡೆದಿವೆ ಎನ್ನುವ ಮಾಹಿತಿಯ ಆಧಾರದಲ್ಲಿ ಅವರನ್ನು ಆಯಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡುವ ಪ್ರಕ್ರಿಯೆ ಮುಂದುವರಿಸಿದೆ. ಬಂಧಿತರು ಶಿವಮೊಗ್ಗ ಹಳೆ ಗುರುಪುರದ ತುಂಗಾ ನದಿ ತೀರದಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿಯ ನೇತ್ರಾವತಿ ನದಿ ತೀರದಲ್ಲೂ ಬಾಂಬ್ ಸ್ಫೋಟದ ತಾಲೀಮು ನಡೆಸಿದ್ದಾರೆ ಎನ್ನುವುದು ಬಯಲಾಗಿದೆ. ಹೀಗಾಗಿ ಬುಧವಾರ ಸಂಜೆಯ ಹೊತ್ತಿಗೆ ಅವರನ್ನು ಬಂಟ್ವಾಳಕ್ಕೆ ಕರೆ ತರಲಾಗಿದೆ.
ಶಿವಮೊಗ್ಗವನ್ನು ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿದ್ದ ಉಗ್ರರ ತಂಡವನ್ನು ಪೊಲೀಸರು ಕಳೆದ ಕೆಲವು ದಿನಗಳಿಂದ ಬೆನ್ನು ಹತ್ತುತ್ತಿದ್ದು, ಸೆಪ್ಟೆಂಬರ್ ೧೯ರಂದು ಸೊಪ್ಪು ಗುಡ್ಡೆಯ ಸಾರಿಕ್, ಮಂಗಳೂರಿನ ಮಹಮ್ಮದ್ ಮಾಝ್ ಮತ್ತು ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯದ್ ಯಾಸಿನ್ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಮಹಮ್ಮದ್ ಮಾಝ್ ಮತ್ತು ಯಾಸಿನ್‌ನನ್ನು ಬಂಧಿಸಿದ್ದರು. ಶಾರಿಕ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಮೂವರೂ ಆಗಾಗ ಶಿವಮೊಗ್ಗದಲ್ಲಿ ಸೇರುತ್ತಿದ್ದರು. ಯಾವುದೋ ಗುಪ್ತ ಜಾಗದಲ್ಲಿ ಬಾಂಬ್ ತಯಾರಿಸುತ್ತಿದ್ದರು, ರಾಜ್ಯದ ಯಾವುದೋ ಒಂದು ಭಾಗದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸರ ತನಿಖೆಯ ಸಂದರ್ಭದಲ್ಲಿ ಹಲವು ಮಹತ್ವದ ಅಂಶಗಳು ಬಯಲಾಗಿವೆ.
ಇನ್ನಷ್ಟು ದಾಳಿ, ಬಂಧನ ನಡೆಯಲಿದೆ
ಬಂಧಿತ ಇಬ್ಬರ ಮೇಲೆ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಕೇಸು ದಾಖಲಿಸಿ ವಿಚಾರಣೆ ನಡೆಯುತ್ತಿದೆ. ಶಿವಮೊಗ್ಗ ಸುತ್ತಮುತ್ತಲಿನ ಹಲವು ಭಾಗಗಳಲ್ಲಿ ಮಹಜರು ಮತ್ತು ಶೋಧ ಕಾರ್ಯ ನಡೆದಿದೆ. ಮಂಗಳೂರು ಮತ್ತು ಶಿವಮೊಗ್ಗ ಭಾಗದಲ್ಲಿ ಇನ್ನೂ ದಾಳಿ ಮಾಡುವುದು ಬಾಕಿ ಇದೆ ಎಂದು ಶಿವಮೊಗ್ಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಹೇಳಿದ್ದಾರೆ.
ಹಲವು ಕಚ್ಚಾವಸ್ತುಗಳು, ದಾಖಲೆಗಳು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಜೊತೆ ಸಂಪರ್ಕದಲ್ಲಿ ಇದ್ದವರ ವಿಚಾರಣೆ ಸಹ ಮಾಡಲಾಗುತ್ತದೆ ಎಂದು ಅವರು ಹೇಳಿದ್ದು, ಸೆಟಲೈಟ್ ಕರೆ ಸೇರಿದಂತೆ ಎಲ್ಲ ಕೋನಗಳಲ್ಲೂ ತನಿಖೆ ನಡೆಯಲಿದೆ ಎಂದಿದ್ದಾರೆ.
ಬೆಳಗ್ಗಿನಿಂದ ಏನೇನಾಯಿತು?
ಬಂಧಿತ ಉಗ್ರರಲ್ಲಿ ಒಬ್ಬನಾಗಿರುವ ಶಿವಮೊಗ್ಗದ ಸಿದ್ದ ನಗರ ನಿವಾಸಿ ಮಹಮ್ಮದ್ ಯಾಸಿನ್‌ನನ್ನು ಬುಧವಾರ ಬೆಳಗ್ಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯಿಂದ ಅಬ್ಬಲಗೆರೆಗೆ ಕರೆದುಕೊಂಡು ಹೋಗಲಾಯಿತು. ಅಬ್ಬಲಗೆರೆ ಬಳಿಯೂ ಸ್ಫೋಟ ನಡೆಸಿದ್ದ ಎಂಬ ಮಾಹಿತಿ ಸಿಕ್ಕಿದ್ದರಿಂದ ಅಲ್ಲಿಗೆ ಕರೆದುಕೊಂಡು ಹೋಗಿ ಮಹಜರು ನಡೆಸಲಾಯಿತು.
ಇನ್ನೊಂದೆಡೆ ಗುರುಪುರ ನದಿ ಬಳಿಯ ತೋಟದ ನಡುವಿನ ಖಾಲಿ ಜಾಗದಲ್ಲೂ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಅಲ್ಲಿ ನಡೆದ ಚಟುವಟಿಕೆಗಳ ಮಾಹಿತಿ ಪಡೆದರು.
ಬಂಧಿತ ಯಾಸಿನ್ ಮತ್ತು ಮಹಮ್ಮದ್ ಮಾಜ್ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಇನ್ಸ್‌ಪೆಕ್ಟರ್ ಅಭಯ ಪ್ರಕಾಶ್ ಅವರು ಅವರಿಬ್ಬರನ್ನು ಕರೆದೊಯ್ಯುವ ಪ್ರಕ್ರಿಯೆಯ ನೇತೃತ್ವ ವಹಿಸಿದ್ದರು.
ಈ ನಡುವೆ ಒಂದು ಪೊಲೀಸರ ತಂಡ ತೀರ್ಥಹಳ್ಳಿಗೂ ಹೋಗಿದ್ದು ಅಲ್ಲಿ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದೆ. ಯಾಸಿನ್ ಹಾಗೂ ಮಾಜ್ ಜೊತೆ ಸಂಪರ್ಕ ಹೊಂದಿರುವವರ ವಿಚಾರಣೆ ನಡೆದಿದೆ. ಯಾಸಿನ್‌ನ ಫೋನ್ ಸಂಪೂರ್ಣ ಜಾಲಾಡಿ ಮಾಹಿತಿ ಕಲೆ ಹಾಕುವ ಕೆಲಸವೂ ನಡೆದಿದೆ.
ಶಿವಮೊಗ್ಗದಿಂದ ಬಂಟ್ವಾಳಕ್ಕೆ
ಈ ನಡುವೆ, ಬಂಧಿತ ಉಗ್ರರಲ್ಲಿ ಒಬ್ಬನಾದ ಮಹಮ್ಮದ್ ಮಾಝ್‌ನನ್ನು ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳಕ್ಕೆ ಕರೆದೊಯ್ದಿದೆ.
ಬಂಟ್ವಾಳ ತಾಲೂಕಿನ ನಾವೂರ ಸಮೀಪದ ಸುಲ್ತಾನ್ ಕಟ್ಟೆ ಎಂಬಲ್ಲಿ ಆರೋಪಿಗಳು ಬಾಂಬ್ ಸ್ಫೋಟದ ರಿಹರ್ಸಲ್ ನಡೆಸಿತ್ತು ಎಂಬ ಮಾಹಿತಿಯ ಆಧಾರದಲ್ಲಿ ಮಹಜರು ನಡೆದಿದೆ. ನೇತ್ರಾವತಿ ನದಿ ತೀರದಲ್ಲಿ ಬರುವ ಸುಲ್ತಾನ್ ಕಟ್ಟೆ ಮತ್ತು ಅಗ್ರಹಾರ ಬಳಿ ಆರೋಪಿಯನ್ನು ಕರೆತಂದು ಮಾಹಿತಿ ಪಡೆಯಲಾಯಿತು. ಮಹಜರು ವೇಳೆ ಡಾಗ್ ಸ್ಕ್ವಾಡ್ ಮತ್ತು ಬಾಂಬ್ ದಳದ ಮೂಲಕ ಪರಿಶೀಲನೆ ನಡೆಸಲಾಗಿದೆ.
ಇದನ್ನೂ ಓದಿ | Shivamogga terror | ಗುರುಪುರ ನದಿ ತೀರದಲ್ಲಿ ನಡೀತಿತ್ತಾ ಐಇಡಿ ಪರೀಕ್ಷೆ? ಹಲವು ಕಚ್ಚಾ ವಸ್ತುಗಳು ಪತ್ತೆ