ಶಿವಮೊಗ್ಗ: ಶಿವಮೊಗ್ಗ ಪೊಲೀಸರು ಬಂಧಿಸಿರುವ ಶಂಕಿತ ಉಗ್ರರು ಹಳೆ ಗುರುಪುರದ ತುಂಗಾ ನದಿ ತೀರದಲ್ಲಿ ದೊಡ್ಡ ಪ್ರಮಾಣದ ಸ್ಫೋಟಗಳಲ್ಲಿ ಬಳಸುವ ಸುಧಾರಿತ ಸ್ಫೋಟಕ ಸಾಧನಗಳನ್ನು (IED-Improvised Explosive Devices) ತಯಾರಿಸುತ್ತಿದ್ದ ಬಗ್ಗೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ.
ಶಿವಮೊಗ್ಗ ಪೊಲೀಸರು ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಮಹಮ್ಮದ್ ಶಾರಿಕ್, ಶಿವಮೊಗ್ಗ ಸಿದ್ಧ ನಗರದ ಮಹಮ್ಮದ್ ಯಾಸಿನ್ ಮತ್ತು ಮಂಗಳೂರಿನ ಮಾಝ್ ಮುನೀರ್ ಎಂಬವರು ಉಗ್ರ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಬಗ್ಗೆ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿ ಎಫ್‌ಐಆರ್ ದಾಖಲಿಸಿದ್ದಾರೆ. ಇವರ ಪೈಕಿ ಯಾಸಿನ್ ಮತ್ತು ಮಾಝ್‌ನನ್ನು ಬಂಧಿಸಲಾಗಿದೆ.
ಶಂಕಿತ ಉಗ್ರರು ಬಾಂಬ್ ತಯಾರಿಕೆಯಲ್ಲಿ ಪರಿಣತಿ ಸಾಧಿಸಿರುವುದನ್ನು ಮೊದಲೇ ಕಂಡುಕೊಂಡಿದ್ದ ಪೊಲೀಸರು ಅವರು ಅವುಗಳ ಪರೀಕ್ಷೆ ನಡೆಸುತ್ತಿರುವ ಜಾಗಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ಮಂಗಳವಾರ ಸಂಜೆಯೇ ಬಂಧಿತ ಯಾಸಿನ್ ಮತ್ತು ಮಾಝ್‌ನನ್ನು ಶಿವಮೊಗ್ಗದ ಹೊರವಲಯದಲ್ಲಿರುವ ಹಳೇ ಗುರುಪುರದ ತುಂಗಾ ನದಿ ತೀರಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದರು. ತಾವು ಇಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಿದ್ದಾಗಿ ಅವರಿಬ್ಬರೂ ಒಪ್ಪಿಕೊಂಡಿದ್ದರು. ಮತ್ತು ತನಿಖೆಯಲ್ಲೂ ಇದು ಸ್ಪಷ್ಟವಾಗಿತ್ತು.
ಎಫ್‌ಎಸ್‌ಎಲ್ ತಜ್ಞರಿಂದ ಖಾತ್ರಿ
ಗುರುಪುರ ನದಿ ತೀರದಲ್ಲಿ ಸ್ಫೋಟಕ ಪರೀಕ್ಷೆ ನಡೆಸುತ್ತಿರುವುದು ಈಗ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳಿಂದಲೂ ದೃಢವಾಗಿದೆ. ದಾವಣಗೆರೆಯಿಂದ ಬಂದಿದ್ದ ಎಫ್‌ಎಸ್‌ಎಲ್ ತಜ್ಞರು ಶಿವಮೊಗ್ಗದ ಹಳೇಗುರುಪುರದಲ್ಲಿ ತುಂಗಾನದಿ ಸಮೀಪ ತಪಾಸಣೆ ನಡೆಸಿದ್ದರು. ಜತೆಗೆ ಆರೋಪಿಗಳ ಬಳಿಯಿದ್ದ ಸ್ಫೋಟಕಕ್ಕೆ ಬಳಸುವ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಬಾಂಬ್ ನಿಷ್ಕ್ರಿಯ ದಳದ ವಶಕ್ಕೆ ನೀಡಲಾಗಿದೆ. ಆದರೆ, ಇದರಲ್ಲಿ ಯಾವುದೇ ಜೀವಂತ ಸ್ಫೋಟಕಗಳು ಇರಲಿಲ್ಲ ಎಂದು ಬಾಂಬ್ ನಿಷ್ಕ್ರಿಯ ದಳ ತಿಳಿಸಿದೆ.
ನದಿ ತೀರದಲ್ಲಿ ಏನೇನು ಸಿಕ್ಕಿವೆ?
ಹಳೇ ಗುರುಪುರದಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ. ವಯರ್‌ಗಳು ಹಾಗೂ ಸರ್ಕಿಟ್ಗಳು, ಎಲ್ಇಡಿ (ಲೈಟ್ ಎಮಿಷನ್ ಡಿವೈಸ್) ದೊರೆತಿದೆ. ಆರೋಪಿಗಳ ಬಳಿ ರಂಜಕ ಮತ್ತು ಗಂಧಕ ಸಿಕ್ಕಿದೆ. ಅದಕ್ಕಿಂತಲೂ ಗಂಭೀರವಾದ ಸಂಗತಿ ಎಂದರೆ, ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳಲ್ಲಿ ಬಳಸುವ ಸಾಮಗ್ರಿಗಳು ಇಲ್ಲಿ ಪತ್ತೆಯಾಗಿವೆ.
ಆಕ್ಸಿವೇಟರ್( ಸ್ಫೋಟಗೊಳಿಸುವ ಸ್ವಿಚ್), ಇನಿಶಿಯೇಟರ್(ಫ್ಯೂಸ್), ಕಂಟೈನರ್(ಸ್ಫೋಟಕ ಇಡುವ ವಸ್ತು), ಚಾರ್ಜ್(ಸ್ಫೋಟಕ) ಮತ್ತು ಬ್ಯಾಟರಿ (ಸ್ಫೋಟಿಸಲು ಬೇಕಿರುವ ವಿದ್ಯುತ್ ಪೂರೈಕೆ ವ್ಯವಸ್ಥೆ ಇಐಡಿಯಲ್ಲಿ ಇರುತ್ತದೆ. ಇದೇ ಮಾದರಿಯ ವಸ್ತುಗಳು ಹಳೇ ಗುರುಪುರದಲ್ಲಿ ಪತ್ತೆಯಾಗಿವೆ.
ಐಇಡಿ ಹೇಗೆ ಭಿನ್ನ?
ಐಇಡಿಗಳಲ್ಲಿ ಸರ್ಕಿಟ್ ಸ್ಫೋಟಕಗಳಿಗೆ ಮದರ್ ಬೋರ್ಡ್ನಂತೆ ಕೆಲಸ ಮಾಡುತ್ತದೆ. ಎಲ್ಇಡಿಗಳನ್ನು ಡಿಟೋನೇಟರ್ಗಳಿಗೆ ಬದಲಾಗಿ ಬಳಕೆ ಮಾಡಲಾಗುತ್ತದೆ. ಯಾವುದೇ ಮೂಲ ರಸಾಯನಿಕಗಳು ತನ್ನಿಂದ ತಾನೇ ಸ್ಫೋಟಗೊಳ್ಳುವುದಿಲ್ಲ. ಸ್ಫೋಟಗೊಳ್ಳುವಂತೆ ಮಾಡಲು ಸ್ಪಾರ್ಕ್ ಮಾಡಲಾಗುತ್ತದೆ. ಪಟಾಕಿಯ ತುದಿಗೆ ಬೆಂಕಿ ಕೊಡುವಂತೆ, ಸ್ಫೋಟಕಗಳನ್ನು ಸ್ಪಾರ್ಕ್ ಮಾಡಿ ಸ್ಫೋಟಗೊಳ್ಳುವಂತೆ ಮಾಡಲಾಗುತ್ತದೆ. ಅದಕ್ಕಾಗಿ ಡಿಟೋನೇಟರ್ ಬಳಸಲಾಗುತ್ತದೆ. ಆದರೆ, ಐಇಡಿಗಳಲ್ಲಿ ಡಿಟೋನೇಟರ್ಸ್ ಬದಲಾಗಿ ಎಲ್ಇಡಿ ಬಳಕೆಯಾಗುತ್ತದೆ.
ಆರೋಪಿಗಳ ಬಳಿಯಲ್ಲಿ ಗ್ಲಾಸ್ ಪೀಸ್ಗಳು, ನಟ್ಗಳು ಹಾಗೂ ಮೊಳೆಗಳು ಕೂಡ ಪತ್ತೆಯಾಗಿವೆ. ಇವುಗಳನ್ನು ವಿಧ್ವಂಸಕ ಕೃತ್ಯಗಳಲ್ಲಿ ಸ್ಫೋಟಕಗಳಿಗೆ ತುಂಬಿ ಸ್ಫೋಟಿಸಲಾಗುತ್ತದೆ. ಇದರಿಂದ ಸ್ಫೋಟದ ತೀವ್ರತೆ ಹೆಚ್ಚಾಗಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಹುನ್ನಾರ ಇದರಲ್ಲಿದೆ.
ಎಲ್ಲ ರೀತಿಯ ಮಾದರಿಯ ಸಂಗ್ರಹ
ಎಫ್‌ಎಸ್‌ಎಲ್ ತಂಡ ನದಿ ಮತ್ತು ತೀರ ಭಾಗದಿಂದ ಕೆಲವು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸ್ಫೋಟಗೊಂಡಿದ್ದ ಸ್ಥಳದ ಮಣ್ಣನ್ನು ಸಂಗ್ರಹಿಸಿರುವ ತಂಡ ಅದರ ಮೂಲಕ ಸ್ಫೋಟಕಕ್ಕೆ ಯಾವ ಕಚ್ಚಾವಸ್ತು ಬಳಸುತ್ತಿದ್ದರು? ಅದರ ತೀವ್ರತೆ ಏನು ಎಂಬಿತ್ಯಾದಿ ಮಾಹಿತಿಯನ್ನು ಕಲೆ ಹಾಕಲಿದೆ.
ಕಲಿಕಾ ಹಂತದಲ್ಲಿದ್ದ ಶಂಕಿತ ಉಗ್ರರು
ತುಂಗಾ ನದಿ ತೀರ ಟೆರರ್ ಲಾಂಚ್ ಪ್ಯಾಡ್ ಆಗಿತ್ತು ಎಂದು ಹೇಳಲಾಗಿದೆ. ಸ್ಫೋಟಕ ವಿಷಯದಲ್ಲಿ ಶಂಕಿತ ಉಗ್ರರು ಕಲಿಕೆಯ ಹಂತದಲ್ಲಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Shivamogga terror | ಎಂಥಾ ಅಪ್ಪನಿಗೆ ಎಂಥಾ ಮಗ: ಐಸಿಸ್ ಉಗ್ರ ಮತೀನ್‌ನ ತಂದೆ 26 ವರ್ಷ ಸೇನೆಯಲ್ಲಿದ್ದರು!