Site icon Vistara News

Shivamogga terrror | ಬಂಧಿತರಿಗೆ ಮಂಗಳೂರು ಗೋಡೆಬರಹ ಲಿಂಕ್‌, ಲಷ್ಕರ್‌ ಜತೆ ಸಂಬಂಧ, ಬಾಂಬ್‌ ಸ್ಫೋಟಕ್ಕೆ ಸ್ಕೆಚ್‌?

Terror link

ಶಿವಮೊಗ್ಗ:‌ ಶಿವಮೊಗ್ಗದಲ್ಲಿ ಪತ್ತೆಯಾಗಿರುವ ಉಗ್ರ ಜಾಲದ ಹಿಂದಿನ ರೂವಾರಿಗಳು ರಾಜ್ಯದ ಒಂದು ನಿರ್ದಿಷ್ಟ ಭಾಗದಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಚು ಹೂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ತೀರ್ಥಹಳ್ಳಿಯ ಸೊಪ್ಪು ಗುಡ್ಡೆಯ ಮಹಮ್ಮದ್‌ ಶಾರೀಕ್‌ ಈ ಜಾಲದ ಕಿಂಗ್‌ ಪಿನ್‌ ಆಗಿದ್ದು, ಶಿವಮೊಗ್ಗದ ಸಿದ್ಧೇಶ್ವರ ನಗರದ‌ ಸೈಯದ್‌ ಯಾಸಿನ್‌ ಮತ್ತು ಮಂಗಳೂರಿನ ಮಾಜ್‌ ಮುನೀರ್‌ ಅಹಮ್ಮದ್ ಎಂಬಿಬ್ಬರು ಆತನ ಜತೆಗೆ ಸೇರಿ ದುಷ್ಕೃತ್ಯಗಳಿಗೆ ಸಂಚು ನಡೆಸುತ್ತಿದ್ದರು. ಮಾಜ್‌ ಮುನೀರ್‌ ಅಹ್ಮದ್‌ ಮತ್ತು ಸೈಯದ್‌ ಯಾಸಿನ್‌ ಬಂಧಿತರಾಗಿದ್ದಾರೆ. ಶಾರೀಕ್‌ ಇನ್ನೂ ಸಿಕ್ಕಿಲ್ಲ. ಮಾಜ್‌ ಮತ್ತು ಶಾರೀಕ್‌ ೨೦೨೦ರಲ್ಲಿ ಮಂಗಳೂರಿನಲ್ಲಿ ನಡೆದ ಗೋಡೆ ಬರಹ ಪ್ರಕರಣದಲ್ಲಿ ಆರೋಪಿಗಳಾಗಿ ಬಂಧನಕ್ಕೆ ಒಳಗಾಗಿದ್ದರು. ೨೦೨೧ರಲ್ಲಿ ಜಾಮೀನು ಪಡೆದಿದ್ದರು.

ಎಂಜಿನಿಯರಿಂಗ್‌ ಕಲಿತವರು
ಬಂಧಿತ ಮಾಜ್‌ ಮುನೀರ್‌ ಅಹಮದ್‌ ಎಂಟೆಕ್‌ ಪದವೀಧರನಾಗಿದ್ದರೆ, ಸೈಯದ್‌ ಯಾಸಿನ್‌ ಎಲೆಕ್ಟ್ರಿಕಲ್‌ ಎಂಜಿನಿಯರ್‌. ಇಬ್ಬರೂ ೨೨-೨೩ ವರ್ಷದವರು. ಇಬ್ಬರೂ ತಾಂತ್ರಿಕ ಪರಿಣತರಾಗಿರುವುದರಿಂದ ಅವರು ಬಾಂಬ್‌ ತಯಾರಿಕೆ ಕೃತ್ಯದಲ್ಲಿ ಪರಿಣತಿ ಪಡೆಯುವುದು ಸುಲಭ ಸಾಧ್ಯವಾಗಿದೆ ಎನ್ನಲಾಗಿದೆ.

ಒಂದೊಮ್ಮೆ ಪೊಲೀಸರು ಇವರನ್ನು ಬಂಧಿಸದೆ ಹೋಗಿದ್ದರೆ ಈ ಜಾಲವನ್ನು ಬೇಧಿಸದೆ ಹೋಗಿದ್ದರೆ ರಾಜ್ಯದ ಒಂದು ಪ್ರಮುಖ ಭಾಗದಲ್ಲಿ ಬಾಂಬ್‌ ಸ್ಫೋಟ ನಡೆಯುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ.

ಯುಎಪಿಎ ಕಾಯಿದೆಯಡಿ ಬಂಧನ
ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಶಾರೀಕ್‌ ಮತ್ತು ಆತನ ಸಹಚರರಾದ ಮಂಗಳೂರಿನ ಮಾಜ್‌ ಮುನೀರ್‌ ಅಹಮ್ಮದ್, ಶಿವಮೊಗ್ಗದ ಸಯ್ಯದ್‌ ಯಾಸೀನ್‌ ಅವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯಿದೆ, ೧೯೬೭(ಯುಎಪಿಎ) ಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಶೇಷ ತನಿಖಾ ತಂಡವು ಆರೋಪಿತರಾದ ಮಾಜ್ ಮುನೀರ್‌ ಅಹಮ್ಮದ್‌(೨೨) ಮತ್ತು ಸಯ್ಯದ್‌ ಯಾಸೀನ್‌ ಅಲಿಯಾಸ್‌ ಬೈಲು(೨೧) ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಅವರಿಬ್ಬರನ್ನು ಸೆಪ್ಟೆಂಬರ್‌ ೨೦ರಿಂದ ೨೯ರವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ಎರಡು ವರ್ಷದ ಹಿಂದೆ ಬಂಧನವಾಗಿತ್ತು!
ಎರಡು ವರ್ಷದ ಹಿಂದೆ ಮಂಗಳೂರಿನಲ್ಲಿ ಲಷ್ಕರೆ ತಯ್ಬಾ ಉಗ್ರ ಸಂಘಟನೆ ಪರವಾಗಿ ಗೋಡೆ ಬರಹಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿ ೨೦೨೦ರ ನವೆಂಬರ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಆ ಇಬ್ಬರು ವ್ಯಕ್ತಿಗಳೇ ಈಗ ಶಿವಮೊಗ್ಗದಲ್ಲಿ ಪತ್ತೆಯಾದ ಶಂಕಿತ ಉಗ್ರರಾದ ಮಾಜ್‌ ಮುನೀರ್‌ ಅಹಮದ್‌ ಮತ್ತು ಶಾರೀಕ್‌.

ನವೆಂಬರ್‌ ೨೭ರ ಮುಂಜಾನೆ ಮಂಗಳೂರಿನ ಕದ್ರಿಯಲ್ಲಿರುವ ಕೋರ್ಟ್‌ ರಸ್ತೆಯ ಹಳೆ ಪೊಲೀಸ್‌ ಔಟ್‌ ಪೋಸ್ಟ್‌ನ ಗೋಡೆಯಲ್ಲಿ ಲಷ್ಕರ್‌ ತಯ್ಬಾ ಮತ್ತು ತಾಲಿಬಾನ್‌ ಪರವಾಗಿ ಗೋಡೆಬರಹ ಬರೆದಿದ್ದರು. ಅದಕ್ಕಿಂತ ಮೊದಲು ಬೇರೊಂದು ಕಡೆ ಇದೇ ರೀತಿ ಬರೆದಿದ್ದರೂ ಅದರು ಗಮನ ಸೆಳೆದಿರಲಿಲ್ಲ. ಹೀಗಾಗಿ ಎಲ್ಲರಿಗೂ ಕಾಣುವ ಜಾಗದಲ್ಲಿ ಮತ್ತೊಮ್ಮೆ ಬರೆದಿದ್ದರು. ಟವರ್‌ ಲೊಕೇಶನ್‌ ಮತ್ತು ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಆಗ ಮಾಜ್‌ ಮುನೀರ್‌ ಅಹ್ಮದ್‌ ಎಂಟೆಕ್‌ ವಿದ್ಯಾಭ್ಯಾಸ ಮಾಡುತ್ತಿದ್ದರೆ ಶಾರೀಕ್‌ ತನ್ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಜತೆಗೆ ಫುಡ್‌ ಡೆಲಿವರಿ ಸೇವೆಯಲ್ಲೂ ಇರುತ್ತಿದ್ದ. ಆಗಾಗ ಮಂಗಳೂರಿಗೆ ಬಂದು ಮಾಝ್‌ನನ್ನು ಭೇಟಿಯಾಗುತ್ತಿದ್ದ.

ಏನು ಬರೆಯಲಾಗಿತ್ತು?
ಲಷ್ಕರ್‌ ಜಿಂದಾಬಾದ್‌ ಎಂಬ ಹ್ಯಾಷ್‌ ಟ್ಯಾಗ್‌ ಹಾಕಿ ʻಸಂಘಿಗಳೇ ನಿಮ್ಮದು ಅತಿಯಾದರೆ ಲಷ್ಕರೆ ತಯ್ಬಾ ಮತ್ತು ತಾಲಿಬಾನ್‌ ಬರಬೇಕಾಗುತ್ತದೆʼʼ ಎಂದು ಎಚ್ಚರಿಕೆ ನೀಡಲಾಗಿತ್ತು. ಈ ಬರಹ ಉರ್ದುವಿನಲ್ಲಿತ್ತು.
ಅಂದು ರಾಷ್ಟ್ರೀಯ ತನಿಖಾ ದಳವೇ ದಿಲ್ಲಿಯಿಂದ ಬಂದು ಇಲ್ಲಿ ತನಿಖೆಯನ್ನು ನಡೆಸಿತ್ತು. ಈ ಇಬ್ಬರು ವ್ಯಕ್ತಿಗಳಿಗೆ ಉಗ್ರ ಸಂಘಟನೆಗಳ ಜತೆ ಸಂಪರ್ಕವಿದೆ ಎಂಬ ಮಾಹಿತಿಯನ್ನು ಅಂದೂ ನೀಡಲಾಗಿತ್ತು. ಆದರೆ, ಅಚ್ಚರಿ ಎಂದರೆ, ಇದೇ ವ್ಯಕ್ತಿಗಳಿಗೆ ಕೋರ್ಟ್‌ ೨೦೨೧ರ ಸೆಪ್ಟೆಂಬರ್‌ ೮ರಂದು ಕೋರ್ಟ್‌ ಜಾಮೀನು ನೀಡಿತ್ತು.

ಮಂಗಳೂರಿನ ಹಳೆ ಮನೆಯೊಂದರ ಗೋಡೆಯಲ್ಲಿ ಪತ್ತೆಯಾಗಿದ್ದ ಬರಹ.

ಮಾಝ್‌ ಮತ್ತು ಶಾರೀಕ್‌ ಕಳೆದ ಒಂದು ವರ್ಷದ ಅವಧಿಯಲ್ಲಿ ಮತ್ತೆ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಈಗ ಅವರನ್ನು ಮತ್ತೆ ಬಂಧಿಸಲು ಮುಂದಾಗಿರುವ ವಿದ್ಯಮಾನದಿಂದ ಸ್ಪಷ್ಟವಾಗಿದೆ.
ಇದನ್ನೂ ಓದಿ | Terror link | ಶಿವಮೊಗ್ಗದಲ್ಲಿ ಉಗ್ರ ಜಾಲ ಪತ್ತೆ, ಎಂಜಿನಿಯರ್ ಯಾಸಿನ್‌ ಸಹಿತ ಇಬ್ಬರು ಅರೆಸ್ಟ್‌, ಕಿಂಗ್‌ಪಿನ್‌ಗೆ ಶೋಧ

Exit mobile version