Site icon Vistara News

Shivamogga violence| ಎಲ್ಲಾ ಕಡೆ ಬಿಜೆಪಿಯೇ ಅಧಿಕಾರದಲ್ಲಿದೆ, ಆದರೆ, ನಮಗೆ ರಕ್ಷಣೆ ಇಲ್ಲ: ಹರ್ಷ ಸೋದರಿ ಆಕ್ರೋಶ

Ashwini Harsha

ಶಿವಮೊಗ್ಗ: ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಮೇಲಾಗಿ ಶಿವಮೊಗ್ಗ ನಗರದಲ್ಲೂ ಬಿಜೆಪಿಯೇ ಇದೆ. ಹಾಗಿದ್ದರೂ ನಮಗೆ ರಕ್ಷಣೆ ಇಲ್ಲ ಎಂದು ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಅವರ ಸೋದರಿ ಅಶ್ವಿನಿ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಸಾವರ್ಕರ್‌ ಸಾಮ್ರಾಜ್ಯ ಕಾರ್ಯಕ್ರಮದ ವೇಳೆ ಅಶ್ವಿನಿ ಮತ್ತು ಇತರರು ಮುಸ್ಲಿಂ ವ್ಯಕ್ತಿಯೊಬ್ಬರ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಎಫ್‌ಐಆರ್‌ ದಾಖಲಾಗಿರುವುದು, ಸೋಮವಾರ ರಾತ್ರಿ ಅಶ್ವಿನಿ ಅವರ ಮನೆ ಮುಂದೆಯೇ ದುಷ್ಕರ್ಮಿಗಳು ಬಂದು ಬೆದರಿಕೆ ಹಾಕಿದ ಘಟನೆಗಳು ನಡೆದ ಬಳಿಕ ಹರ್ಷನ ಸೋದರಿ ಈ ಹೇಳಿಕೆ ನೀಡಿದ್ದಾರೆ.

ʻʻನಾವು ಹರ್ಷನನ್ನು ಕಳೆದುಕೊಂಡು 8 ತಿಂಗಳು ಆಗಿದೆ. ಅದಾದ ಬಳಿಕ ಪ್ರೇಮ್‌ ಸಿಂಗ್‌ಗೆ ಚೂರಿಯಿಂದ ಇರಿತವೂ ಸೇರಿದಂತೆ ಹಲವು ಘಟನೆಗಳು ನಡೆಯುತ್ತಲೇ ಇದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಸರಕಾರ. ಶಿವಮೊಗ್ಗ ನಗರದಲ್ಲೂ ಬಿಜೆಪಿ ಇದೆ. ಇಷ್ಟಿದ್ದರೂ ನಮಗೆ ರಕ್ಷಣೆ ಯಾವಾಗ ಸಿಗುತ್ತದೆʼʼ ಎಂದು ಅವರು ಪ್ರಶ್ನಿಸಿದ್ದಾರೆ.

ʻʻಹರ್ಷ ಹಿಂದುತ್ವದ ಕೆಲಸ ಮಾಡುತ್ತಿದ್ದ ಅಂತ ಅವನನ್ನೇ ಟಾರ್ಗೆಟ್‌ ಮಾಡಿದ್ರು. ಅಂಥವನನ್ನೇ ಕೊಲೆ ಮಾಡ್ತಾರೆ ಅಂದರೆ ನಮಗೆ ಯಾವ ರಕ್ಷಣೆ ಕೊಡ್ತೀರಾ?ʼʼ ಎಂದು ಬಿಜೆಪಿ ಸರಕಾರದ ಬಗ್ಗೆ ಅಶ್ವಿನಿ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ನಾಳೆ ನಾನು ಸತ್ತಾಗಲೂ ಹೀಗೇ ಹೇಳ್ತಾರೆ..
ʻʻಇವತ್ತು ನಮ್ಮ ಮನೆ ಪರಿಸ್ಥಿತಿ ಕೇಳುವುದಕ್ಕೆ ಯಾರೂ ಇಲ್ಲ. ಹರ್ಷ ಸತ್ತಾಗ ಪ್ರತಿಯೊಬ್ಬರೂ ಬಂದು ನಾವಿದೀವಿ ಅಂದ್ರು. ನಾಳೆ ನಾವು ಸತ್ತಾಗಲೂ ಇದನ್ನೇ ಹೇಳ್ತಾರೆ. ಮಕ್ಕಳನ್ನು ಸಾಯಿಸಿದಾಗ ನಮ್ಮ ಅಪ್ಪ-ಅಮ್ಮನ ಗತಿ ಏನಾಗಬೇಕು? ನಾವು ಯಾರ ಹತ್ರ ಹೋಗಿ ಕೇಳೋಣ? ಯಾರಿಗೆ ನೀವು ಮೊದಲು ರಕ್ಷಣೆ ಕೊಡೋದು? ನಾವಿಬ್ಬರೂ ಹೆಣ್ಣು ಮಕ್ಕಳು ಇರೋದು. ಅಣ್ಣ-ತಮ್ಮ ನಮಗಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರಿಗೆಲ್ಲ ಹೊಡೀತೀವಾ ನಾವು?
ಸಾವರ್ಕರ್‌ ಸಾಮ್ರಾಜ್ಯ ಕಾರ್ಯಕ್ರಮದ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬರ ಕಾರಿನ ಮೇಲೆ ಅಶ್ವಿನಿ ಮತ್ತು ಇತರರು ದಾಳಿ ಮಾಡಿದರು ಎಂಬ ವಿಷಯದಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅಶ್ವಿನಿ ಅವರು, ʻಸಮಾಜದಲ್ಲಿ ಇರೋರೆಲ್ಲ ಅಣ್ಣ ತಮ್ಮಂದಿರು. ಯಾವ ಧರ್ಮದವರನ್ನೂ ನಾವು ಬೈದಿಲ್ಲ. ಬೇರೆ ಧರ್ಮದವರು ಮಾಡಿದ್ದೂಂತ ಗೊತ್ತಿದ್ದೂ ನಾವು ಸುಮ್ಮನಿದ್ವಿ. ಯಾರೋ ಹತ್ತು ಜನ ಮಾಡಿದ್ದಕ್ಕೆ ಇಡೀ ಸಮಾಜವನ್ನು ಬೈಬಾರದು. ಇಷ್ಟಾದರೂ ನಮ್ಮ ಮೇಲೆ ಆರೋಪಗಳು ಬರುತ್ತಿವೆ. ಜೈರಾಮ, ಶ್ರೀರಾಮ ಎಂದು ಹೇಳಿಕೊಂಡು ಕಾರಿಗೆ ಹಾನಿ ಮಾಡಿದ್ದೀವಂತೆ. ಹುಲಿಯಂತಹ ತಮ್ಮನನ್ನು ಕಳಕೊಂಡಿದ್ದೇನೆ. ಇನ್ನು ಈ ತರ ಕಾರನ್ನೆಲ್ಲ ಹೊಡಿಯೊ ಕೆಲಸಕ್ಕೆ ಹೋಗ್ತೀವಾ ನಾವುʼʼ ಎಂದು ಅವರು ಪ್ರಶ್ನಿಸಿದರು.

ʻʻಇಡೀ ಕರ್ನಾಟಕವನ್ನು ಹೆದರಿಸಲು ಹರ್ಷನನ್ನು ಕೊಂದಿದ್ದಾರೆ. ಅವನು ಹಿಂದುತ್ವಕ್ಕಾಗಿ ಕೆಲಸ ಮಾಡ್ತಿದ್ದ. ಅವನನ್ನು ದೇವರಂತೆ ಪೂಜಿಸುತ್ತೇವೆʼʼ ಎಂದು ಹೇಳಿದ ಅಶ್ವಿನಿ ಅವರು ತಮ್ಮ ಮನೆಗೆ ರಕ್ಷಣೆ ಕೊಡಬೇಕು ಎಂದು ಕೋರಿದರು.

ಸೋಮವಾರ ರಾತ್ರಿ ದಾಂಧಲೆ
ಸೋಮವಾರ ರಾತ್ರಿ ಶಿವಮೊಗ್ಗದ ಸೀಗೆಹಟ್ಟಿ ಬಳಿ ಧರ್ಮಪ್ಪ ನಗರದಲ್ಲಿ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದರು. ಅಶ್ವಿನಿ ಅವರ ಮನೆ ಇರುವುದು ಸೀಗೆಹಟ್ಟಿಯಲ್ಲಿ. ಸೋಮವಾರ ರಾತ್ರಿ 11.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಧರ್ಮಪ್ಪ ನಗರದ ಎರಡನೇ ಕ್ರಾಸ್ ನಿವಾಸಿ ಪ್ರಕಾಶ್ (25)ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯ ಪ್ರತ್ಯಕ್ಷದರ್ಶಿ, ಪ್ರಕಾಶ್ ಅವರ ಸೋದರ ಸಂಬಂಧಿ ಕೃಷ್ಣ ಮಾತನಾಡಿ, ಮೂರು ಬೈಕ್‌ಗಳಲ್ಲಿ ಒಂಬತ್ತು ಜನರು ಬಂದಿದ್ದರು. ಕೈಯಲ್ಲಿ ಶಸ್ತ್ರಾಸ್ತ್ರಗಳಿದ್ದವು. ಆರ್‌ಎಸ್ಎಸ್, ಭಜರಂಗದಳಕ್ಕೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಎಲ್ಲರೂ ಮುಖವನ್ನು ಮುಚ್ಚಿಕೊಂಡಿದ್ದರು ಎಂದು ಹೇಳಿದ್ದಾರೆ.

ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಹಿಂದು ಹರ್ಷನ ಸಹೋದರಿ ಅಶ್ವಿನಿ ಅವರು ಮಾತನಾಡಿ, ಮೂರು ಬೈಕ್‌ಗಳು ಭರ್ಮಪ್ಪ ನಗರದಿಂದ ಓಟಿ ರಸ್ತೆ ಕಡೆಗೆ ಹೋಗುವುದನ್ನು ನೋಡಿರುವುದಾಗಿ ಹೇಳಿದ್ದಾರೆ. ಬೈಕ್‌ನಲ್ಲಿ ಹೋಗುವಾಗ ಸೀಗೆಹಟ್ಟಿಯ ರಸ್ತೆ ಪಕ್ಕ ನಿಂತಿದ್ದ ಬೈಕ್‌ಗಳಿಗೆ ಗುದ್ದಿದ್ದಾರೆ. ಓರ್ವ ಮಹಿಳೆಯ ಮುಖಕ್ಕೂ ಹೊಡೆದಿದ್ದಾರೆ. ಬಿಡೊಲ್ಲ ಅಂತ ಕೂಗುತ್ತ ಹೋಗುವುದನ್ನು ಮನೆಯ ಓಣಿಯಲ್ಲಿ ನಿಂತಿದ್ದಾಗ ನೋಡಿರುವುದಾಗಿ ಅಶ್ವಿನಿ ಮತ್ತು ಅವರ ತಾಯಿ ಪದ್ಮಾ ತಿಳಿಸಿದ್ದರು. ಈ ಘಟನೆ ಶಿವಮೊಗ್ಗ ನಗರದಲ್ಲಿ ಆತಂಕ ಸೃಷ್ಟಿ ಮಾಡಿದೆ.

ಇದನ್ನೂ ಓದಿ | ಶಿವಮೊಗ್ಗ ಮತ್ತೆ ಉದ್ವಿಗ್ನ | ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ, ಆರ್‌ಎಸ್‌ಎಸ್‌ಗೆ ನಿಂದನೆ, ಸೇಡಿನ ಕೃತ್ಯ ಶಂಕೆ

Exit mobile version