ಶಿವಮೊಗ್ಗ: ಮುಸ್ಲಿಂ ಗೂಂಡಾಗಳಿಗೆ ಪೊಲೀಸ್ ಇಲಾಖೆ ಮತ್ತು ಸರ್ಕಾರದ ಭಯ ಇಲ್ಲ. ಹೀಗಾಗಿ ಶಿವಮೊಗ್ಗದಲ್ಲಿ ಮತ್ತೆ ದುಷ್ಕರ್ಮಿ ಕೃತ್ಯಗಳು ಮತ್ತೆ ಶುರುವಾಗಿವೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ರಾತ್ರಿ ಶಿವಮೊಗ್ಗ ಸೀಗೆ ಹಟ್ಟಿ ಮತ್ತು ಧರ್ಮಪ್ಪ ನಗರದಲ್ಲಿ ಕೆಲವು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಪ್ರಕಾಶ್ ಎಂಬವರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಕೆಲವು ಬೈಕ್‌ಗಳಿಗೆ ಹಾನಿ ಮಾಡಿದ್ದರು. ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ್ದರು. ಜತೆಗೆ ಕೆಲವು ತಿಂಗಳ ಹಿಂದೆ ಕೊಲೆಯಾದ ಹರ್ಷ ಅವರ ಮನೆ ಮುಂದೆ ನಿಂತು ʻನಿಮ್ಮನ್ನು ನೋಡಿಕೊಳ್ಳುತ್ತೇವೆʼʼ ಎಂದು ಬೆದರಿಕೆ ಕೂಡಾ ಹಾಕಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಹರ್ಷ ಅವರ ಸೋದರಿ ಸರಕಾರದ ತಮಗೆ ರಕ್ಷಣೆ ರಕ್ಷಣೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಹೇಳಿಕೆ ಮಹತ್ವ ಪಡೆದಿದೆ.
ʻʻಹರ್ಷನ ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿದ ನಂತರ ಸಾಕಷ್ಟು ವಿಚಾರಗಳು ಬಯಲಿಗೆ ಬಂದಿದೆ. ಸೀಗೆಹಟ್ಟಿ ದಾಳಿಯಲ್ಲಿ ಲಾಂಗ್ ಮಚ್ವು ಬಳಸಿಲ್ಲ, ಕಲ್ಲಿನಿಂದ ಹೊಡೆದಿದ್ದಾರೆ. ಇದರ ಹಿಂದೆ ಪಿಎಫ್ ಐ ಸಂಘಟನೆ ಕೈವಾಡ ಇದೆಯೋ ಅಥವಾ ಬೇರೆ ಗೂಂಡಾಗಳ ಕೈವಾಡ ಇದೆಯೋ ಎನ್ನುವುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ. ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳಬೇಕು. ಸರಕಾರ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದರು.
ʻʻಶಿವಮೊಗ್ಗದಲ್ಲಿ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿತ್ತು. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಧರ್ಮದ ಬಗ್ಗೆ ಮಾತನಾಡಲಾಗಿದೆಯೇ ಹೊರತು ಯಾರನ್ನೂ ಪ್ರಚೋದಿಸುವ ಮಾತು ಆಡಿಲ್ಲʼʼ ಎಂದು ಈಶ್ವರಪ್ಪ ಹೇಳಿದ್ದಾರೆ.
ʻಧರ್ಮಪ್ಪ ನಗರದ ಪ್ರಕರಣದಲ್ಲಿ ಪ್ರಕಾಶ್ ಅವರನ್ನು ಹಿಂದೂ ಅಂತ ಗುರುತಿಸಿಯೇ ಹಲ್ಲೆ ನಡೆಸಲಾಗಿದೆ. ಇದರ ಹಿಂದಿನ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು. ಶಿವಮೊಗ್ಗದಲ್ಲಿ ಪಿಎಫ್ ಐ ಸಂಘಟನೆ ಇನ್ನೂ ಜೀವಂತವಾಗಿ ಇದೆಯೋ ಇಲ್ಲವೋ ಎಂಬುದನ್ನು ಪೊಲೀಸರು ಗಮನಿಸಬೇಕುʼʼ ಎಂದು ಈಶ್ವರಪ್ಪ ಆಗ್ರಹಿಸಿದರು.
ಮಕ್ಕಳಿಗೆ ಬುದ್ಧಿ ಹೇಳಿ ಎಂದ ಈಶ್ವರಪ್ಪ
ʻʻಮುಸ್ಲಿಂ ಸಮುದಾಯದ ಹಿರಿಯರು ಅವರ ಮಕ್ಕಳಿಗೆ ಬುದ್ಧಿ ಹೇಳಬೇಕು. ರಾಷ್ಟ್ರ ದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಬೇಕು. ನೀವು ಬುದ್ಧಿ ಹೇಳದಿದ್ದರೆ ಅರೆಸ್ಟ್ ಆಗ್ತಾರೆ. ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಬೇಕಾಗುತ್ತದೆʼʼ ಎಂದು ಎಚ್ಚರಿಸಿದರು.
ʻʻಶಿವಮೊಗ್ಗದಲ್ಲಿ ಹಿಂದುತ್ವ ಜಾಗೃತಿ ಆಗಿರೋದು ಕಂಡು ಸಹಿಸದೆ ಇಂತಹ ದುಷ್ಕೃತ್ಯ ನಡೆಸಿದ್ದಾರೆ. ಮುಸ್ಲಿಂ ಗೂಂಡಾಗಳೇ ಇಂಥ ಕೆಲಸ ಮಾಡಿದ್ದಾರೆʼʼ ಎಂದು ಹೇಳಿದ ಅವರು, ಹರ್ಷನ ಮನೆ ಬಳಿ ಹೋಗಿ ಬೆದರಿಕೆ ಹಾಕಿದವರ ಬಂಧಿಸಬೇಕು. ಬೆದರಿಕೆ ಹಾಕಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಸರಕಾರವನ್ನು ಒತ್ತಾಯಿಸಿದರು.
ಕಾಂಗ್ರೆಸ್ ಬೆಂಬಲವಿದೆ ಎಂಬ ಮನೋಭಾವವಿದೆ
ʻʻಹರ್ಷನ ಕೊಲೆ ನಂತರ ಇಂತಹ ಘಟನೆ ಕಡಿಮೆಯಾಗಿತ್ತು. ಆದರೆ, ಸೋಮವಾರ ರಾತ್ರಿ ಮತ್ತೆ ಘಟನೆ ಮರುಕಳಿಸಿದೆ. ಶಿವಮೊಗ್ಗವನ್ನು ಹಾಳು ಮಾಡಬೇಕು ಎಂಬ ಉದ್ದೇಶದಿಂದ ಕೆಲವೇ ಮುಸ್ಲಿಮರು ಇಂಥ ಕೆಲಸ ಮಾಡ್ತಿದ್ದಾರೆ/ ಇಂತಹ ಘಟನೆ ನಡೆದಾಗ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷದವರು ಬಾಯಿ ಬಿಡೋದೇ ಇಲ್ಲ. ನಮ್ಮ ಜೊತೆ ಕಾಂಗ್ರೆಸ್ ಇದೆ ಎಂಬ ಮನೋಭಾವನೆ ಮುಸಲ್ಮಾನ ಗೂಂಡಾಗಳಿಗಿದೆʼʼ ಎಂದರು ಈಶ್ವರಪ್ಪ.