ಶಿವಮೊಗ್ಗ: ನಗರದಲ್ಲಿ ನಡೆದ ಪ್ರೇಮ್ ಸಿಂಗ್ ಎಂಬಾತನಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜೆ.ಸಿ. ನಗರದ ನದೀಮ್ (25), ಬುದ್ಧ ನಗರ ನಿವಾಸಿ ಅಬ್ದುಲ್ ರೆಹಮಾನ್ (25) ಬಂಧಿತ ಆರೋಪಿಗಳು.
ಆರೋಪಿಗಳ ವಿರುದ್ಧ 334/2022 ಕಲಂ 307 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಒಟ್ಟು ನಾಲ್ವರು ಈ ಕೃತ್ಯ ನಡೆಸಿರಬಹುದೆಂದು ಅಂದಾಜಿಸಲಾಗಿದೆ ಎಂದು ನಗರಕ್ಕೆ ಭೇಟಿ ನೀಡಿದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ನಗರದ ಗಾಂಧಿ ಬಜಾರ್ ನ ತರಕಾರಿ ಮಾರುಕಟ್ಟೆ ಬಳಿ ಮನೆಗೆ ತೆರಳುತ್ತಿದ್ದ ೨೦ ವರ್ಷದ ಪ್ರೇಮ್‌ಸಿಂಗ್ ರನ್ನು ಚೂರಿಯಿಂದ ಇರಿಯಲಾಗಿತ್ತು. ಗಂಭೀರ ಗಾಯಗೊಂಡಿದ್ದ ಪ್ರೇಮ್ ಸಿಂಗ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ ವೇಳೆ ವಾಹನ ಸಂಚಾರಕ್ಕೆ ನಿಷೇಧ
ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಡಿಜಿಪಿ ಅಲೋಕ್ ಕುಮಾರ್, ತುಂಗಾನಗರ, ದೊಡ್ಡಪೇಟೆ, ವಿನೋಬಾ ನಗರ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮೂರು ದಿನ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಮೂರು ದಿನಗಳ ಕಾಲ ಬೈಕ್‌ಗಳಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ, ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Shimogga tense | ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲ: ಕಾಂಗ್ರೆಸ್ ಆರೋಪ
ಪ್ರಕರಣದ ಆರೋಪಿಗಳನ್ನು ಅದಷ್ಟು ಬೇಗ ಬಂಧಿಸಲಾಗುತ್ತದೆ. ತನಿಖೆಗಾಗಿ ಮೂವರು ಅಡಿಷನಲ್ ಎಸ್‌ಪಿ, ಒಬ್ಬ ಎಸ್‌ಪಿ ಲೆವೆಲ್ ಆಫಿಸರ್, 10 ಡಿಎಸ್ಪಿ, 30 ಪಿಎಸ್ಐ ನಗರಕ್ಕೆ ಬಂದಿದ್ದಾರೆ. ಗಣಪತಿ ಹಬ್ಬದ ಸಮಯದಲ್ಲಿ ಐಜಿ ಕೂಡ ನಗರಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.
ಭದ್ರತಾ ವೈಫಲ್ಯಕ್ಕಾಗಿ ತರಾಟೆ
ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಂತೆ ಸಿಟ್ಟಿಗೆದ್ದ ಎಡಿಜಿಪಿ ಅಲೋಕ್ ಕುಮಾರ್, ಸ್ಥಳೀಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಗರದ ಅಮೀರ್ ಅಹಮದ್ ವೃತ್ತದಲ್ಲಿ ಪರಿಸ್ಥಿತಿ ಅವಲೋಕನ ಮಾಡಿ, ಮಧ್ಯಾಹ್ನದಿಂದ ನಡೆದ ಘಟನೆಗಳ ಬಗ್ಗೆ ಮಾಹಿತಿ ಪಡೆದು, ಭದ್ರತಾ ವೈಫಲ್ಯವಾದ ಹಿನ್ನೆಲೆಯಲ್ಲಿ ಗರಂ ಆದರು. ಇತ್ತೀಚೆಗೆ ಮಾಲ್‌ನಲ್ಲಿ ಸಾವರ್ಕರ್ ಭಾವಚಿತ್ರ ಸಂಬಂಧಿತ ಗಲಾಟೆ ನಡೆದರೂ ನೀವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ, ಇಂತಹವುಗಳನ್ನು ನಾನು ಸಹಿಸಲ್ಲ ಎಂದರು.
ವಾಹನಗಳಲ್ಲಿ ಸಂಚರಿಸುವ ಯುವಕರ ಮೇಲೆ ನಿಗಾ ಇಡಬೇಕು ಎಂದು ಜಿಲ್ಲಾರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್‌ಗೆ ಸೂಚನೆ ನೀಡಿದರು. ಈಗಾಗಲೇ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದು, ಮಾರ್ಗದರ್ಶನ ನೀಡಿದರು.
ಇದನ್ನೂ ಓದಿ | Shimogga tense | ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲ: ಕಾಂಗ್ರೆಸ್ ಆರೋಪ