Site icon Vistara News

B.S. Yediyurappa Birthday: ಬಿ.ಎಸ್‌. ಯಡಿಯೂರ್‌ʼಅಪ್ಪʼ ಕುರಿತು ಐವರು ಮಕ್ಕಳ ಭಾವನಾತ್ಮಕ ನುಡಿಗಳಿವು

children shares emtion on the occation of b-s-yediyurappa-birthday

#image_title

ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ 80ನೇ ವರ್ಷವನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಮೊದಲುಗೊಂಡು ನಾಡಿನ ಸಾಮಾನ್ಯ ಜನರವರೆಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ಹೋರಾಟವನ್ನೇ ಜೀವನವಾಗಿಸಿಕೊಂಡ ಯಡಿಯೂರಪ್ಪ ಕುರಿತು ರಾಜಕೀಯ ವಿರೋಧಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೆಲ್ಲದರ ನಡುವೆ, ಯಡಿಯೂರಪ್ಪ ಅವರ ಕುಟುಂಬದವರು ಏನು ಹೇಳುತ್ತಾರೆ ಎನ್ನುವುದು ಮುಖ್ಯ. ಯಡಿಯೂರಪ್ಪ ಅವರ ಮೂವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ತಮ್ಮ ತಂದೆಯ ಕುರಿತು ಭಾವನಾತ್ಮಕ ನುಡಿಗಳನ್ನು ಹಂಚಿಕೊಂಡಿದ್ದಾರೆ.

ಬಿ.ವೈ.‌ ಪದ್ಮಾವತಿ, ಜ್ಯೇಷ್ಠ ಪುತ್ರಿ
ನಾವು ಮಕ್ಕಳೆಲ್ಲರಿಗೂ ತಂದೆಯವರನ್ನು ಅಣ್ಣ ಎಂದು ಕರೆದೇ ಅಭ್ಯಾಸ. ಇದು ನಮ್ಮ ಸೋದರತ್ತೆಯಿಂದ ರೂಢಿಗೆ ಬಂದಿತು. ಚಿಕ್ಕಂದಿನಿಂದಲೂ ನಮಗೆಲ್ಲಾ ಬೇರೆಯವರ ಹಾಗೆ ಪ್ರತಿ ದಿವಸ ತಂದೆಯವರ ಜೊತೆಯೇ ಇರುವ ಅವಕಾಶ ಸಿಗಲಿಲ್ಲ. ಅದಕ್ಕೆಲ್ಲ ನಮ್ಮ ತಂದೆಯವರ ಕೆಲಸದ ರೀತಿಯೇ ಕಾರಣ. ಬಹಳಷ್ಟು ಸಮಯ ಅವರು ರಾಜಕೀಯ ಕಾರಣಗಳಿಗಾಗಿ ಪ್ರವಾಸದಲ್ಲಿರಬೇಕಾಗುತ್ತಿತ್ತು. ಹಾಗಾಗಿ ಮನೆಯ ಜವಾಬ್ದಾರಿ ಸಂಪೂರ್ಣವಾಗಿ ಅಮ್ಮನದೇ ಆಗಿತ್ತು. ಆದರೂ ಸಹ ನಮ್ಮ ತಂದೆಯವರಿಗೆ ತಮ್ಮ ಮಕ್ಕಳ ಬಗ್ಗೆ ಇದ್ದ ಕಾಳಜಿ ಕಡಿಮೆ ಏನಿರಲಿಲ್ಲ. ಆಯಾ ಕಾಲಕ್ಕೆ ಅವರ ಜವಾಬ್ದಾರಿಯನ್ನು ಯಾವುದೇ ಕೊರತೆಯಾಗದಂತೆ ನಿಭಾಯಿಸಿದರು. ನಾವು ಸ್ವಲ್ಪ ಸಮಯ ಒಟ್ಟಿಗೆ ಇದ್ದರೂ ನಾವೂ ಯಾವಾಗಲೂ ಅವರಿಂದ ಸುರಕ್ಷಿತವಾಗಿರುವ ಭಾವನೆ. ಈಗಲೂ ಸಹ ತಾವು ಎಷ್ಟೇ ಕಷ್ಟಪಟ್ಟರೂ ಕುಟುಂಬದಲ್ಲಿ ಎಲ್ಲರೂ ನೆಮ್ಮದಿಯಿಂದಿರಬೇಕು, ಸುಖದಿಂದಿರಬೇಕು ಎಂದು ಆಸೆ ಪಡುವವರು, ತಮಗೆ ಏನೇ ಬೇಸರವಿರಲಿ, ದುಃಖವಿರಲಿ ತಮ್ಮಲ್ಲೇ ಇಟ್ಟುಕೊಂಡು ಸುಮ್ಮನೆ ಇದ್ದುಬಿಡುತ್ತಾರೆ.

ಒಂದು ವಿಷಯ ನಾನೀಗ ಬರೆಯಬೇಕೆನಿಸುತ್ತಿದೆ. ಅದು ಅಮ್ಮ ಅಪ್ಪಾಜಿಯ ಸಿನಿಮಾ ಪ್ರೀತಿ. ಇಬ್ಬರು ಬಿಡುವು ಸಿಕ್ಕಾಗ ಸದ್ದಿಲ್ಲದೆ ಚಿತ್ರ ಮಂದಿರಕ್ಕೆ ಹೊರಟು ಬಿಡುತ್ತಿದ್ದರು. ಕೆಲವು ಚಲನಚಿತ್ರಗಳಿಗೆ ನಮ್ಮನ್ನೂ ಕರೆದುಕೊಂಡು ಹೋಗುತ್ತಿದ್ದರು. ಕಲ್ಪನಾರ “ಬೆಳ್ಳಿಮೋಡ’ ಆಡ್ವಾಣಿಗೆ ಬಹಳ ಇಷ್ಟವಾದ ಚಿತ್ರ.

1999ರಲ್ಲಿ ನಡೆದ ಚುನಾವಣೆಯಲ್ಲಿ ತಂದೆಯವರು ಸೋಲನ್ನನುಭವಿಸಬೇಕಾಗಿ ಬಂತು. ಆಗ ದೊರೆತ ಬಿಡುವಿನಲ್ಲಿ ಬಹಳಷ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಉಪಯೋಗಿಸದೇ ಖಾಲಿ ಬಿಟ್ಟಿದ್ದ ಜಮೀನನ್ನು ಒಂದು ತಿಂಗಳ ಕಾಲ ಹಗಲು ರಾತ್ರಿ ಎನ್ನದೇ ಪುತ್ರ ರಾಘವೇಂದ್ರನನ್ನೂ ಜೊತೆಗಿಟ್ಟುಕೊಂಡು ಹದ ಮಾಡಿಸಿದರು. ಅದು ಈಗ ನಂದನವನವಾಗಿದೆ. ಯಾವಾಗಲೂ ಅಷ್ಟೇ, ಅವರೊಬ್ಬ ಉತ್ತಮ ಗೃಹಸ್ಥ. ಪ್ರತಿನಿತ್ಯ ಬೆಳಿಗ್ಗೆ ಜಮೀನಿಗೆ ಭೇಟಿ ಕೊಟ್ಟು ಅಲ್ಲಿಯ ಕೆಲಸ ಕಾರ್ಯಗಳಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಫಸಲು ಕೈಗೆ ಬಂದು ಹಣ ಮಾಡುವಾಗ ಒಂದೊಂದು ವಾರ ಮನೆಗೆ ಬರದೆ ತೋಟದ ಮನೆಯಲ್ಲಿಯೇ ಇದ್ದು ಬಿಡುತ್ತಿದ್ದರು, ಮನೆಯಿಂದ ಊಟ ತಿಂಡಿ ರವಾನೆಯಾಗುತ್ತಿತ್ತು.

ಬಿ.ವೈ. ಅರುಣಾದೇವಿ, ದ್ವಿತೀಯ ಪುತ್ರಿ
ನನ್ನ ತಂದೆಯೇ ನನ್ನ ಬದುಕಿನ ʼಹೀರೊʼ, ʼಗಾಡ್‌ ಫಾದರ್‌ʼ- ಹೀಗೆ ಎಲ್ಲ ಏಳಿಗೆಗೆ ಅವರೇ ಕಾರಣ. ನನ್ನ ಅಮ್ಮ ಮೃದು ಸ್ವಭಾವದವರು. ತಂದೆ ಇದಕ್ಕೆ ತದ್ವಿರುದ್ಧ. ನಾನು ಆರು ವರ್ಷದವಳಿದ್ದಾಗಿನ ನೆನಪಿಗೂ, ಇಂದಿನ ತಂದೆ ಯಡಿಯೂರಪ್ಪ ಅವರ ಬದುಕನ್ನು ನೋಡಿದರೆ ಒಂದೇ ತೆರನಾಗಿದೆ. ಬೆಂಗಳೂರಿನಿಂದ ಶಿಕಾರಿಪುರಕ್ಕೆ ಬೆಳಗಿನ ಜಾವ ಬಂದಾಗ ಮನೆ ಗೇಟ್‌ನಿಂದಲೇ ʼಮೈತ್ರಾʼ ಎಂದು ಕೂಗಿಕೊಂಡೇ ಬಾಗಿಲು ಬಡಿಯುತ್ತಿದ್ದರು ಎಂದು ನನ್ನಮ್ಮ ಸಂಕೋಚದಿಂದ ನಮ್ಮೊಂದಿಗೆ ಹೇಳುತ್ತಿದ್ದರು. ಅಪ್ಪನ ಬಾಯಲ್ಲಿ ಅಮ್ಮನ ಹೆಸರು ಬಹಳ ಸುಂದರ ಎನ್ನಿಸುತ್ತಿತ್ತು. ಒಮ್ಮೆ ನಾನು 7ನೇ ತರಗತಿಯಲ್ಲಿದ್ದಾಗಆಗತಾನೆ ಸೈಕಲ್‌ ಕಲಿತು ರಸ್ತೆಯಲ್ಲಿ ಚಲಾಯಿಸುತ್ತಿದ್ದೆ. ಸೈಕಲ್‌ ಮೇಲೆ ಕೂಡಬಾರದು ಎಂದು ಅವತ್ತು ಅಪ್ಪ ಗದರಿದ್ದರು. ಆದರೆ ಮಾರನೆಯ ದಿನವೇ, ಸೈಕಲ್‌ ತೆಗೆದುಕೊಂಡು ಹೋಗಿ ತಮ್ಮ ಸ್ನೇಹಿತರನ್ನು ಸಭೆಗೆ ಆಹ್ವಾನಿಸುವಂತೆ ಕಳಿಸಿದ್ದರು. ಇದೇ ಅಪ್ಪ ಉಪಮುಖ್ಯಮಂತ್ರಿಯಾದಾಗ, ಹೆಣ್ಣುಮಕ್ಕಳಿಗೆ ಉಚಿತ ಸೈಕಲ್‌ ಯೋಜನೆ ಜಾರಿ ಮಾಡಿದಾಗ ಈ ಘಟನೆ ನೆನಪಾಯಿತು.

ಭಾವಗೀತೆಗಳನ್ನು ಕೇಳುವುದೆಂದರೆ ಅಪ್ಪನಿಗೆ ತುಂಬಾ ಇಷ್ಟ. ಅಮ್ಮನ ಧ್ವನಿ ಮಧುರವಾಗಿತ್ತು. ಅಮ್ಮನ ಭಾವಗೀತೆಗಳನ್ನು ರೆಕಾರ್ಡ್‌ ಮಾಡಿಡುತ್ತಿದ್ದರು. ಎಲ್ಲಿಗೇ ಪ್ರವಾಸ ಹೋದರೂ ಅಮ್ಮನೊಂದಿಗೇ ಹೋಗುತ್ತಿದ್ದರು. ಬಹಳಷ್ಟು ವಿದೇಶ ಪ್ರವಾಸ ಮಾಡಿದ್ದಾರೆ. ಅಪ್ಪ ನಮಗೆ ತರುತ್ತಿದ್ದ ಬಟ್ಟೆ, ಶೂಗಳ ಕುರಿತು ಬೆಂಗಳೂರಿನಲ್ಲಿ ನಮ್ಮ ಕಾಲೇಜಿನ ಸ್ನೇಹಿತರು ಆಶ್ಚರ್ಯಪಡುತ್ತಿದ್ದರು. ಅವರಿಂದ ದೊರಕಿದ ಸಮಾಜಮುಖಿ ಜೀವನದ ದೃಷ್ಟಿಯ ಕಾರಣದಿಂದಲೇ ಇಂದು ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲದಿದ್ದರೆ ನಾನು ಒಬ್ಬ ಗೃಹಿಣಿಯಾಗಷ್ಟೆ ಇರುತ್ತಿದ್ದೆ ಎನ್ನಿಸುತ್ತದೆ.

ಬಿ.ವೈ. ಉಮಾದೇವಿ, ತೃತೀಯ ಪುತ್ರಿ
ತಮ್ಮ ಅರ್ಧ ಶತಮಾನಕ್ಕೂ ಅಧಿಕವಾದ ರಾಜಕೀಯ ಬದುಕಿನಲ್ಲಿ ಶಿಕಾರಿಪುರದ ಮುನಿಸಿಪಲ್‌ ಅಧ್ಯಕ್ಷರಾಗಿ, ಶಾಸಕರಾಗಿ, ಬಿಜೆಪಿಯ ರಾಜ್ಯಾಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ, ಉಪ ಮುಖ್ಯಮಂತ್ರಿಗಳಾಗಿ, ಮುಖ್ಯಮಂತ್ರಿಗಳ ಹುದ್ದೆಯನ್ನೂ ಅಲಂಕರಿಸಿ ಈ ದೇಶಕ್ಕೇ ಚಿರಪರಿಚಿತರಾದರೂ ನನಗೆ ಮಾತ್ರ ನನ್ನ ಪ್ರೀತಿಯ ‘ಅಣ್ಣ’. ಶಾಲೆಯಲ್ಲಿ ಓದುತ್ತಿರುವಾಗ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳಿಗೆ ತಂದೆಯವರು ‘ಅತಿಥಿಗಳಾಗಿ ವೇದಿಕೆಯ ಮೇಲಿರುವಾಗ ನನಗೂ ಸ್ವಾಗತ ಭಾಷಣವೋ, ವಂದನಾರ್ಪಣೆಯೋ ಮಾಡುವ ಅವಕಾಶ ಬಂದರೆ, ನನಗೆ ಈ ತಾಲ್ಲೂಕಿನ ಜನಪ್ರಿಯ ಶಾಸಕರಾಗಿರುವ ಶ್ರೀ…… ಎನ್ನಬೇಕಾಗಿರುವ ಅನಿವಾರ್ಯತೆ, ಸ್ವಲ್ಪ ಮುಜುಗರ/ಹಿಂಜರಿಕೆ. ಗೆಳತಿಯರೆಲ್ಲಾ ನಂತರ ತಮಾಷೆ ಮಾಡುತ್ತಿದ್ದುದು ಈಗಲೂ ನೆನಪು.

ಹಾಸ್ಟೆಲ್ಲಿಂದ ಒಮ್ಮೆ ರಜೆಗಾಗಿ ಮನೆಗೆ ಬಂದಿದ್ದೆ. ತಂದೆ ಮನೆಯಲ್ಲಿಯೇ ಕಾರ್ಯಕರ್ತರ ಮೀಟಿಂಗ್ ಕರೆದಿದ್ದರು. ಅಯೋಧ್ಯೆಗೆ ರಾಮಮಂದಿರ ನಿರ್ಮಾಣದ ವಿಷಯದಲ್ಲಿ ಹೋಗಲು ಕರಸೇವಕರ ಆಯ್ಕೆ ನಡೆದಿತ್ತು. ನಾನೂ ಬಾಗಿಲ ಹಿಂದೆಯೇ ನಿಂತು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಆಗ ತಂದೆಯವರು ಕಾರ್ಯಕರ್ತರಿಗೆ ಹೇಳಿದ ಮಾತು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿರುತ್ತದೆ. ಈ ಹೋರಾಟದಲ್ಲಿ ಜೀವ ಕೊಡುವ ಸಂದರ್ಭ ಬಂದರೂ ಬರಬಹುದು. ಹಾಗಾಗಿ ಪೂರ್ತಿ ಧೈರ್ಯ ಇರುವವರು ಮಾತ್ರ ನನ್ನ ಜೊತೆ ಬನ್ನಿ ಎಂದು. ಎಷ್ಟೊಂದು ಸುಲಭವಾಗಿ ಅಣ್ಣ ಈ ಮಾತನ್ನು ಹೇಳುತ್ತಿದ್ದಾರಲ್ಲ ಎಂದು ನನಗೆ ದಿಗ್ಧಮೆಯಾಗಿತ್ತು.

ಅಕ್ಟೋಬರ್ 1, 2004 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ತಂದೆಯವರಿಗೆ ಸನ್ಮಾನ ಕಾರ್ಯಕ್ರಮವಿತ್ತು. ವಾಜಪೇಯಿಯವರ ಅಧ್ಯಕ್ಷತೆ. ಕಾರಿನಲ್ಲಿ ನಾನೂ ಕುಳಿತಿದ್ದೆ. ಲಕ್ಷಾಂತರ ಕಾರ್ಯಕರ್ತರು ಸಮಾರಂಭಕ್ಕೆ ಆಗಮಿಸುತ್ತಿದ್ದನ್ನು ನೋಡಿ ತಂದೆಯವರು ಅಮ್ಮನಿಗೆ “ಮೈತ್ರಾ ನಿನ್ನ ಕಾಲ್ಗುಣದಿಂದ ಈ ರೀತಿಯ ಅಪರೂಪದ ಜನಾಭಿಮಾನ ನನ್ನ ಮೇಲೆ ಬಂದಿದೆ,” ಎಂದು ಕಣ್ಣಲ್ಲಿ ನೀರು ತಂದುಕೊಂಡು ಭಾವುಕರಾಗಿ ನುಡಿದಿದ್ದರು.

ಬಿ.ವೈ. ರಾಘವೇಂದ್ರ, ಹಿರಿಯ ಪುತ್ರ
ನನ್ನ ತಂದೆ ಎಷ್ಟೇ ಬ್ಯುಸಿಯಾಗಿದ್ದರೂ ಮಕ್ಕಳ ಆರೈಕೆ, ಪೋಷಣೆಗಳಲ್ಲಿ ಹಿಂದೆ ಬಿದ್ದವರಲ್ಲ, ನನಗೆ ಶಿಕ್ಷಣ ಸಮಯದಲ್ಲಿ ಆರೋಗ್ಯ ಹದಗೆಟ್ಟು ಬೆಂಗಳೂರಿನಲ್ಲಿ ಆಸ್ಪತ್ರೆ ಸೇರಿದ್ದೆ. ಆಗ ನನ್ನ ತಾಯಿ ಜೊತೆ ನಿತ್ಯ ಬಂದು ನನ್ನ ಉಪಚರಿಸಿ ಮಮತೆಯ ಮಡಿಲು ನೀಡಿದವರು. ಈಗಲೂ ನನ್ನ ತಾಯಿ ಕಳೆದುಕೊಂಡರೂ ನಿತ್ಯ ತಾಯಿ ಮಮತೆ ತೋರುವ ಮಮಕಾರದ ಮೂರ್ತಿ ಅವರು, ತನ್ನ ಒತ್ತಡದ ಬದುಕಲ್ಲಿ ಕುಟುಂಬವನ್ನೆಂದೂ ಮರೆತವರಲ್ಲ, ನಾವು ಶಿವಮೊಗ್ಗದಲ್ಲಿ ಓದುತ್ತಿದ್ದಾಗ ಶಿಕಾರಿ ಪುರದಿಂದ ಬೆಂಗಳೂರಿಗೆ ಹೋಗುವಾಗ ಪ್ರತೀಬಾರಿ ಬಂದು ನಮ್ಮ ಜೊತೆ ಕಾಲಕಳೆದು ಹೋಗುತ್ತಿದ್ದುದು ನನಗಿನ್ನೂ ಹಸಿರಾದ ನೆನಪು. ಹಾಗೆಯೇ ನನ್ನ ಎಲ್ಲಾ ಅಕ್ಕಂದಿರನ್ನು ತಮ್ಮನನ್ನು ಸಮಾನವಾಗಿ ಪ್ರೀತಿಸಿ ನಮ್ಮ ಜೊತೆ ಮಧುರ ಕ್ಷಣ ಕಳೆಯುತ್ತಲೇ ಮಾಸದಂತೆ ಪಾಠ ಕಲಿಸುತ್ತಿದ್ದ ಅವರ ವ್ಯಕ್ತಿತ್ವ ಅನನ್ಯ.
ಸಂಘಟನೆ ವಿಷಯ ಬಂದಾಗ ನಮ್ಮಣ್ಣ ಶಿಕಾರಿಪುರದಲ್ಲಿ ಪ್ರಾರಂಭಿಸಿದ ಸಣ್ಣ ಸಾರ್ವಜನಿಕ ಗಣಪತಿ ಹಬ್ಬದಿಂದ ರಾಜ್ಯ ಸಂಘಟನೆವರೆಗೆ ಮನೆ-ಮಠ ತೊರೆದು ಹಗಲಿರುಳು ದುಡಿದ, ಪರಿ ನಮಗೆ ಪಾಠವಾಗಿದೆ.

ಎಷ್ಟೋ ಸಾರಿ ಸಂಘಟನೆಗೆ ಹಣದ ಕೊರತೆಯಾದಾಗ ನಮ್ಮ ಮನೆಯಲ್ಲಿದ್ದ ಫಸಲು ಮಾರಿ, ಅಮ್ಮನ ಬಂಗಾರ ಮಾರಿ ಸಂಘಟನೆಯ, ಪಕ್ಷದ ಕೆಲಸ ಮಾಡಿದ್ದು ನಮಗೆ ನೆನಪಿದೆ. ಅವರು ವಿಶ್ರಾಂತಿ ಎಂದರೆ ಪುಸ್ತಕ ಪ್ರೀತಿ, ಜ್ಞಾನಾರ್ಜನೆ, ಅವರ ಹತ್ತಿರ ದೊಡ್ಡ ಪುಸ್ತಕ ಭಂಡಾರವೇ ಇದೆ. ಸಮಯ ಸಿಕ್ಕಾಗಲೆಲ್ಲ ಓದುತ್ತಾರೆ. ತಮ್ಮ ದಿನಚರಿಯ ಪ್ರಸ್ತಕದಲ್ಲಿ ವಿಶಿಷ್ಟ ಜ್ಞಾನದ ಸಾಲುಗಳನ್ನು ದಾಖಲಿಸುತ್ತಾರೆ, ಪ್ರತಿ ದಿನದ ಕಾರ್ಯಕ್ರಮ ಪಟ್ಟಿ, ಕೆಲಸಗಳ ವಿವರಗಳನ್ನು ಈಗಲೂ ದಿನಚರಿಯಲ್ಲಿ ಬರೆದಿಡುತ್ತಾರೆ. ಯಾರಾದರೂ ತಜ್ಞರು ಮಾತನಾಡುವಾಗ ಈಗಲೂ ವೇದಿಕೆಯಲ್ಲೇ ಕುಳಿತು Learning Points ನ್ನು Note ಮಾಡಿಕೊಳ್ಳುತ್ತಾರೆ. ಅವರ ಅಕ್ಷರವೇ ಚೆಂದ, ಪ್ರಯಾಣದಲ್ಲಿ ಬರೆದರೂ ಮುದ್ದಾಗಿ ಬರೆಯುತ್ತಾರೆ… ಅದೇ ನೀತಿಪಾಠ ನನಗೂ ಸಹಾಯಕವಾಗಿದೆ.

ಸೋಲು ಗೆಲುವು, ನೋವು – ನಲಿವು, ಸಂಕಟ ಸಂಭ್ರಮ, ನಗೆ – ಹಗೆ ಎಲ್ಲವನ್ನೂ ಸಮಾನವಾಗಿ ಅನುಭವಿಸಿದವರು ನನ್ನ ತಂದೆ. ಪುರಸಭೆ ಅಧ್ಯಕ್ಷತನದಿಂದ ರಾಜ್ಯದ ಮುಖ್ಯಮಂತ್ರಿಯಾಗುವ ತನಕ ಹಲವು ಏರು – ಪೇರುಗಳನ್ನು ಕಂಡ ಹಿರಿಜೀವ ಅವರದ್ದು. ಅವರ ಪಯಣ, ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಕಂಡಾಗ ನಮಗನಿಸುವುದೇನೆಂದರೆ ನಿಶ್ಚಿತ ಗುರಿ, ನಿರಂತರ ಪರಿಶ್ರಮ, ಪ್ರಾಮಾಣಿಕ ಶ್ರದ್ಧಾವಂತ ನಿರ್ಧಾರಗಳೊಂದಿಗೆ ಉದಾತ್ತ ಧೈರ್ಯವನ್ನು ಎದುರಿಗಿಟ್ಟುಕೊಂಡು ಮುನ್ನಡೆದಾಗ ಯಾವುದೇ ಅಡ್ಡಿ – ಆತಂಕಗಳನ್ನೂ ಜಯಿಸಬಹುದೆಂಬುದು. ಅಂತಹ ಮಾದರಿಯ ಬದುಕೇ ನನಗೆ ದೊರೆತ ದೊಡ್ಡ ಜೀವನ ಪಾಠ, ಅವರು ಕಲಿಸಿದ ಪಾಠಗಳನ್ನು ಸ್ಮರಿಸಿಕೊಳ್ಳುತ್ತೇನೆ. ಅವರ ಆದರ್ಶಗಳನ್ನು ಪಾಲಿಸುತ್ತೇನೆ, ಅವರ ನೀತಿ, ಜೀವನ ಪ್ರೀತಿಗಳನ್ನು ಮೈಗೂಡಿಸಿಕೊಂಡಿದ್ದೇನೆ. ಅವರ ದೃಢ ಹೆಜ್ಜೆ, ಗಂಭೀರ ನಡೆ, ಸಾಹಸ ಗಾಥೆಗಳನ್ನು ಧೈಯವಾಗಿಸಿಕೊಂಡು ಮುಂದೆ ಸಾಗುತ್ತಿದ್ದೇನೆ. ನನ್ನ ದೃಷ್ಟಿಯಲ್ಲಿ ನನ್ನ ತಂದೆಯವರು ಸಾಧನೆಯ ಶಿಖರ, ಅವರು ಸವೆದ ಹಾದಿಯಲ್ಲೇ ನನ್ನ ಹೆಜ್ಜೆಗಳು. ಅವರ ಜೀವನ ನಿದರ್ಶನಗಳೇ ನನ್ನ ಬದುಕಿನ ಆದರ್ಶ ಎಂದು ಮನದುಂಬಿ ಸ್ಮರಿಸುತ್ತೇನೆ.

ಬಿ.ವೈ. ವಿಜಯೇಂದ್ರ, ಕಿರಿಯ ಪುತ್ರ
ಸ್ವಂತ ಬದುಕಿನ ಸಿಹಿಯನ್ನು ತ್ಯಾಗ ಮಾಡಿ ಜನಸಾಮಾನ್ಯರ ಬದುಕಿನ ಕಹಿಯನ್ನು ರುಚಿಸಿ ಅವರ ಮುಖದಲ್ಲಿ ಮಂದಹಾಸ ಮೂಡಿಸಲು ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿರುವ ನನ್ನ ತಂದೆ ನನಗೆ ಮಾದರಿ. ಅವರು ನನ್ನ ಹೀರೋ, ನಾನು ಎದೆಯುಬ್ಬಿಸಿ ಹೇಳಬಲ್ಲ ನಿಜವಾದ ಜನನಾಯಕ – ಬಾಲ್ಯದಿಂದ ತಂದೆಯ ಪ್ರೀತಿ ವಾತ್ಸಲ್ಯದ ಬಂಧನದಲ್ಲಿ ಬೆಳೆದ ನನಗೆ ನನ್ನ ತಂದೆಯಲ್ಲಿ ಕಂಡ ಗುಣ ವಿಶೇಷವಿದೆ.

ಸ್ವಚ್ಛತೆ, ಶಿಸ್ತು, ಡ್ರೆಸ್ ಸೆನ್ಸ್ ಹಾಗೂ ಸಮಯ ಪಾಲನೆಯಲ್ಲಿ ನನಗವರೇ ರೋಲ್ ಮಾಡೆಲ್. ಪ್ರತಿದಿನ ಸ್ನಾರದ ನಂತರ ಅವರು ತಲ್ಲೀನರಾಗಿ ಮಾಡುತ್ತಿದ್ದ ದೇವರ ಪೂಜೆ, ಸದಾ ಧರಿಸುತ್ತಿದ್ದ ಇಸ್ತ್ರಿ ಮಾಡಿದ ಡ್ರೆಸ್, ಎಣ್ಣೆ ಹಾಕಿ ಬಾಚಿದ ತಲೆಗೂದಲು ಮತ್ತು ಹಣೆಗಿಡುವ ತಿಲಕ ನನಗರಿವಿಲ್ಲದಂತೆಯೂ ನನ್ನ ಮೇಲೆ ಪ್ರಭಾವ ಬೀರುತ್ತಿದ್ದವು. ಮುಂಚಿತವಾಗಿಯೂ ತಾವು ಡೈರಿಯಲ್ಲಿ ಬರೆದಿಟ್ಟುಕೊಂಡ ಕಾರ್ಯಕ್ರಮಗಳ ಪಟ್ಟಿ ಹಾಗೂ ಅವುಗಳಲ್ಲಿ ವ್ಯತ್ಯಾಸವಾಗದಂತೆ ಪಾಲ್ಗೊಳ್ಳುತ್ತಿದ್ದ ಅವರ ಸಮಯ ಪಾಲನೆ ನನ್ನ ತಂದೆಯವರಲ್ಲಿ ನಾನು ತುಂಬಾ ಇಷ್ಟಪಟ್ಟಿರುವ ಒಳ್ಳೆ ಅಭ್ಯಾಸಗಳು.

ನಾನು ಹುಟ್ಟಿದ್ದು 1975ರಲ್ಲಿ, ನನ್ನ ಹಂದೆಯವರೇ ಹೇಳಿದಂತೆ ಆಗ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ನಾನು ತಾಯಿಗರ್ಭದಲ್ಲಿದ್ದ ಸಮಯದಲ್ಲಿ, ಕರಾಳ ದಿನಗಳನ್ನು ವಿರೋಧಿಸಿದ ನನ್ನ ತಂದೆ ಜೈಲಿನಲ್ಲಿದ್ದರು. ತುಂಬು ಗರ್ಭಿಣಿಯವರು ತಂದೆಯವರನ್ನು ನೋಡಲು ಜೈಲಿಗೆ ಹೋಗಿದ್ದರಂತೆ. ಗುರುರಾಘವೇಂದ ಮೇಲೆ ನಮ್ಮ ತಂದೆಗೆ ಅಪಾರ ಭಕ್ತಿ. ಹಾಗೆಯೇ ಮಂತ್ರಾಲಯಕ್ಕೆ ಹೋಗಿ ಅವರ ದರ್ಶನ ಮಾಡಿಕೊಂಡು ಬಂದ ನಂತರ ಜನಿಸಿದ ನನ್ನ ಅಣ್ಣನಿಗೆ ರಾಘವೇಂದ್ರ ಎಂದೇ ಹೆಸರಿಡಲಾಯಿತು. ಶ್ರೀ ರಾಘವೇಂದ್ರ ಸ್ವಾಮಿಗಳ ಗುರುಗಳಾದ ಶ್ರೀ ವಿಜಯೇಂದ್ರ ಸರಸ್ವತಿಗಳ ಆಶೀರ್ವಾದಗಳಿಂದ ನನ್ನ ಹೆಸರನ್ನು ವಿಜಯೇಂದ್ರ ಎಂದು ಕರೆಯಲಾಯಿತಂತೆ. ಅನ್ನದ ಬಗ್ಗೆ ಅಪ್ಪನಿಗೆ ತುಂಬಾ ಗೌರವ. ಊಟ ಮಾಡುವಾಗ ಒಂದು ಅನ್ನದ ಅಗುಳು ಚೆಲ್ಲಿದರೆ ಅನ್ನದ ಬೆಲೆ, ಅದನ್ನು ಬೆಳೆಯುವ ರೈತನ ಬೆಲೆ ನಿಮಗೆ ಗೊತ್ತಾ ಎಂದು ಕೋಪಿಸಿಕೊಳ್ಳುತ್ತಿದ್ದರು.

(ಮೂಲ: ʼದಣಿವರಿಯದ ಧೀಮಂತʼ ಕೃತಿಯಿಂದ ಆಯ್ದ ಭಾಗಗಳು)

Exit mobile version