Site icon Vistara News

ಎಲೆಕ್ಷನ್‌ ಹವಾ | ಸೊರಬ | ಅಭಿವೃದ್ಧಿಯಲ್ಲಿ ಸೊರಗಿರುವ ಕ್ಷೇತ್ರ ಮತ್ತೊಮ್ಮೆ ಸಹೋದರರ ಸವಾಲ್‌ಗೆ ಅಣಿ

Shivamogga Soraba

ವಿವೇಕ ಮಹಾಲೆ, ಶಿವಮೊಗ್ಗ
ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಸತತ ಏಳು ಬಾರಿ ಗೆದ್ದು, ಮೂರು ದಶಕಗಳ ಕಾಲ ಶಾಸಕರಾಗಿದ್ದವರು. ದೀವರು ಮತ್ತು ಲಿಂಗಾಯತರು ಬಹುಸಂಖ್ಯೆಯಲ್ಲಿರುವ ಈ ಕ್ಷೇತ್ರ ಆರಂಭದಿಂದಲೂ ಬಂಗಾರಪ್ಪ ಕುಟುಂಬದ ಹಿಡಿತದಲ್ಲಿದೆ. ಈ ಕ್ಷೇತ್ರದ ಅಧಿಪತಿಯಂತಿದ್ದ ಎಸ್​. ಬಂಗಾರಪ್ಪ ವಿವಿಧ ಅಧಿಕಾರ ಅನುಭವಿಸಿದ್ದರೂ ಕ್ಷೇತ್ರದ ಸ್ಥಿತಿಗತಿ ಮಾತ್ರ ಬದಲಾಗಲೇ ಇಲ್ಲ. 2008ರಲ್ಲಿ ಕ್ಷೇತ್ರ ಪುನರ್​ ವಿಂಗಡಣೆ ನಂತರ ಸೊರಬ ವಿಧಾನಸಭೆ ಕ್ಷೇತ್ರದ ವ್ಯಾಪ್ತಿ ಬದಲಾಗಿದೆ. ಸಾಗರ ಕ್ಷೇತ್ರದಲ್ಲಿದ್ದ ತಾಳಗುಪ್ಪ ಹೋಬಳಿ ಸೊರಬ ಕ್ಷೇತ್ರಕ್ಕೆ ಸೇರ್ಪಡೆಯಾಗಿದೆ.

ಚುನಾವಣಾ ಇತಿಹಾಸ
1967ರಲ್ಲಿ ಸೊರಬ ವಿಧಾನಸಭಾ ಕ್ಷೇತ್ರ ರಚನೆಯಾದ ಬಳಿಕ 12 ಸಾರ್ವತ್ರಿಕ ಮತ್ತು ಒಂದು ಉಪ ಚುನಾವಣೆ ನಡೆದಿದೆ. ಈ ಪೈಕಿ ಎಸ್​. ಬಂಗಾರಪ್ಪ ಸತತ 7 ಬಾರಿ ನಿರಾಯಾಸವಾಗಿ ಗೆದ್ದಿದ್ದಾರೆ. 1996ರಲ್ಲಿ ಬಂಗಾರಪ್ಪ ಶಾಸಕ ಸ್ಥಾನ ತ್ಯಜಿಸಿ, ಲೋಕಸಭೆಗೆ ಕಾಲಿಟ್ಟಾಗ ನಡೆದ ಉಪಚುನಾವಣೆಯಲ್ಲಿ  ಹಿರಿಯ ಮಗ ಕುಮಾರ್ ಬಂಗಾರಪ್ಪನವರಿಗೆ ತಮ್ಮ ಕ್ಷೇತ್ರ ಬಿಟ್ಟುಕೊಟ್ಟರು. ಕುಮಾರ್ ಒಂದು ಉಪ ಚುನಾವಣೆ ಮತ್ತು 3 ಸಾರ್ವತ್ರಿಕ ಚುನಾವಣೆಯಲ್ಲಿ ಶಾಸಕರಾಗಿದ್ದಾರೆ. ಬಂಗಾರಪ್ಪನವರ ಎರಡನೆ ಮಗ ಮಧು ಬಂಗಾರಪ್ಪ ಒಮ್ಮೆ ಜಯಶಾಲಿಯಾಗಿದ್ದಾರೆ. ಒಂದು ಚುನಾವಣೆಯಲ್ಲಿ ಮಾತ್ರ ಬಂಗಾರಪ್ಪ ಪರಿವಾರ ಕ್ಷೇತ್ರ ಕಳೆದುಕೊಂಡರೂ, ಇವರ ವಿರುದ್ಧ ಬಂಗಾರಪ್ಪನವರೆ ರಾಜಕೀಯ ದೀಕ್ಷೆ ಕೊಟ್ಟಿದ್ದ ಅವರ ದೂರದ ಸಂಬಂಧಿ ಹರತಾಳು ಹಾಲಪ್ಪ ಗೆಲುವು ಕಂಡಿದ್ದು ವಿಶೇಷ. ಅಂದರೆ, 1967ರಿಂದ ಈವರೆಗೆ ಸೊರಬ ಕ್ಷೇತ್ರ ಬಂಗಾರಪ್ಪ ಪರಿವಾರದ ಹಿಡಿತದಲ್ಲಿಯೇ ಇದೆ ಎನ್ನಬಹುದು.

ಲಿಂಗಾಯತ ಮತಗಳೇ ನಿರ್ಣಾಯಕ
191864 ಮತದಾರರಿರುವ ಈ ಕ್ಷೇತ್ರದಲ್ಲಿ ದೀವರು(ಈಡಿಗರು) ಸಮುದಾಯದವರು ಬಹುಸಂಖ್ಯಾತರಾಗಿದ್ದು, ಸುಮಾರು 60 ಸಾವಿರ ಮತದಾರರಿದ್ದಾರೆ. ಲಿಂಗಾಯತರು 40 ಸಾವಿರದಷ್ಟಿದ್ದು, ಪರಿಶಿಷ್ಟರು 35 ಸಾವಿರ, ಮಡಿವಾಳರು 15 ಸಾವಿರ, ಮುಸ್ಲಿಮರು 12 ಸಾವಿರ ಗಂಗಾಮತಸ್ಥರು 10 ಸಾವಿರ, ಒಕ್ಕಲಿಗರು 9 ಸಾವಿರ, ಬ್ರಾಹ್ಮಣರು 8 ಸಾವಿರ ಇರಬಹುದೆಂಬ ಅಂದಾಜಿದೆ. ಹಿಂದುಳಿದ ದೀವರ ಸಮುದಾಯದ 2004ರವರೆಗೆ ಬಂಗಾರಪ್ಪ ಮತ್ತವರ ಮಕ್ಕಳನ್ನು ಒಗ್ಗಟ್ಟಾಗಿ ಗೆಲ್ಲಿಸುತ್ತಲೇ ಬಂದಿದೆ. ಬಹುಸಂಖ್ಯಾತ ಸ್ವಜಾತಿ ದೀವರ ಮತದೊಂದಿಗೆ ಅಲ್ಪಸಂಖ್ಯಾತ ದಲಿತ ಹಾಗು ಇನ್ನಿತರ ಒಬಿಸಿ ಮತಗಳು ಬಂಗಾರಪ್ಪ ಅವರಿಗೆ ಬರುತ್ತಿದ್ದರಿಂದ ಗೆಲುವು ಸುಲಭವಾಗುತ್ತಿತ್ತು. ಆದರೆ 2008ರಿಂದ ಬಂಗಾರಪ್ಪ ಪುತ್ರರಿಬ್ಬರ ಸೆಣಸಾಟಕ್ಕೆ ಮತಗಳು ಹಂಚಿಹೋದವು.

2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹರತಾಳು ಹಾಲಪ್ಪ ಅದೇ ಸಮುದಾಯದವರಾಗಿದ್ದರಿಂದ ಮತಗಳು ಮೂರು ಕಡೆ ಹಂಚಿಹೋದವು. ಮೇಲಾಗಿ ಯಡಿಯೂರಪ್ಪ ಅವರ ಕೃಪಾಕಟಾಕ್ಷದಿಂದ ಎರಡನೇ ಅತಿ ದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತ ಮತಗಳು ಹಾಲಪ್ಪ ಅವರಿಗೆ ಬಂದಿದ್ದರಿಂದ ಜಯಗಳಿಸಿದ್ದರು. 2013ರಲ್ಲಿ ಈ ಮೂವರ ನಡುವೆ ತ್ರಿಕೋನ ಸ್ಪರ್ಧೆ ಇದ್ದರೂ ಹಾಲಪ್ಪ ಕೆಜೆಪಿಯಿಂದ ನಿಂತಿದ್ದರಿಂದ ಬಿಜೆಪಿ ಮತಗಳು ಹಂಚಿಹೋಗಿದ್ದರಿಂದ ಜೆಡಿಎಸ್​ನ ಮಧು ಬಂಗಾರಪ್ಪ ಗೆಲುವು ಸಾಧಿಸಿದರು. 2018ರಲ್ಲಿ ಕುಮಾರ್​ ಬಂಗಾರಪ್ಪ ಬಿಜೆಪಿ ಸೇರ್ಪಡೆಗೊಂಡು ಮತ್ತೆ ಗೆಲುವು ಸಾಧಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಹುಸಂಖ್ಯಾತ ದೀವರ ಮತಗಳು ಹರಿದು ಹಂಚಿಹೋಗುತ್ತಿದ್ದು, ಎರಡನೇ ಬಹುಸಂಖ್ಯಾತ ಲಿಂಗಾಯತ ಮತಗಳು ನಿರ್ಣಾಯಕವಾಗುತ್ತಿವೆ. 

ಶರವೇಗದ ಸರದಾರ

1967ರಲ್ಲಾದ ಸೊರಬದ ಮೊಟ್ಟಮೊದಲ ಅಸೆಂಬ್ಲಿ ಚುನಾವಣೆಯಲ್ಲಿ ಸೋಷಲಿಸ್ಟ್‌ ಪಾರ್ಟಿ ಅಭ್ಯರ್ಥಿಯಾಗಿದ್ದ ಎಸ್. ಬಂಗಾರಪ್ಪ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಂ.ಪಿ. ಈಶ್ವರಪ್ಪರನ್ನು 10,734 ಮತಗಳಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲಿಂದ ಬಂಗಾರಪ್ಪ ಹಿಂತಿರುಗಿ ನೋಡಲೇ ಇಲ್ಲ. ಪಕ್ಷ ಬದಲಾಯಿಸಿದರೂ, ಹೊಸ ಪಕ್ಷ ಕಟ್ಟಿದರೂ 1994ರವರೆಗೂ ಅಸೆಂಬ್ಲಿ ಪ್ರವೇಶಿಸುತ್ತಲೇ ಬಂದರು. 1978ರಲ್ಲಿ ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಗೊಂಡ ಬಂಗಾರಪ್ಪ ವಿವಿಧ ಇಲಾಖೆಗಳ ಸಚಿವರಾಗಿ, ಮುಖ್ಯಮಂತ್ರಿಯೂ ಆದರು. 1996ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆ ಚುನಾವಣೆ ಸ್ಪರ್ಧಿಸಿ ಅಲ್ಲಿಯೂ ಗೆಲುವಿನ ನಗೆ ಬೀರಿದ್ದರು. 1998ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಆಯನೂರು ಮಂಜುನಾಥ ಗೆದ್ದು, ಸೋಲರಿಯದ ಸರದಾರ ಎಂದೆನಿಸಿದ್ದ ಬಂಗಾರಪ್ಪ ಅವರಿಗೆ ಮೊದಲ ಬಾರಿ ಸೋಲಿನ ಅನುಭವವಾಯಿತು. 1999ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಜತೆಯಲ್ಲಿಯೇ ಚುನಾವಣೆ ನಡೆದಾಗ ಬಂಗಾರಪ್ಪ ಸಂಸದರಾಗಿ, ಅವರ ಮಗ ಕುಮಾರ್​ ಶಾಸಕರಾಗಿ ಆಯ್ಕೆಯಾಗಿದ್ದರು. 

ಪುತ್ರರ ಜುಗಲ್​ಬಂದಿ
2004ರಲ್ಲಿ ಮತ್ತೆ ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಇಲೆಕ್ಷನ್ ಒಟ್ಟಿಗೆ ಬಂದಾಗ, ಬಂಗಾರಪ್ಪ ಕುಟುಂಬದ ಜಗಳ ತಾರಕ್ಕೇರಿತ್ತು. ಈವರೆಗೆ ಹಿರಿಯ ಪುತ್ರನನ್ನು ರಾಜಕೀಯವಾಗಿ ಬೆಳೆಸಿದ್ದ ಬಂಗಾರಪ್ಪ, 2004ರಲ್ಲಿಬಿಜೆಪಿ ಸೇರ್ಪಡೆಗೊಂಡು ಸಂಸದರಾಗಿ ಆಯ್ಕೆಯಾದರೆ, ತಮ್ಮ ಎರಡನೇ ಪುತ್ರನಿಗೆ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್​ ಕೊಡಿಸಿದರು. ಇದರಿಂದ ಸಿಟ್ಟಾದ ಕುಮಾರ್,​ ಕಾಂಗ್ರೆಸ್​ನಿಂದ ಟಿಕೆಟ್​ ಪಡೆದರು. ಸೊರಬ ಕ್ಷೇತ್ರ ಮೊದಲ ಬಾರಿಗೆ ಬಂಗಾರಪ್ಪ ಪುತ್ರದ್ವಯರ ಸೆಣಸಾಟಕ್ಕೆ ಸಾಕ್ಷಿಯಾಯಿತು. ಬಂಗಾರಪ್ಪ ಅವರನ್ನು ವಿರೋಧಿಸುತ್ತಲೇ ಬಂದಿದ್ದ ಕ್ಷೇತ್ರದ ಎರಡನೇ ಬಹುಸಂಖ್ಯಾತ ಲಿಂಗಾಯತರು ಕುಮಾರ್​ ಅವರನ್ನು ಬೆಂಬಲಿಸಿದ್ದರಿಂದ, ದೀವರು ಮತ್ತು ದಲಿತರ ಒಂದು ಪಾಲು ಮತಗಳನ್ನೂ ಬಾಚಿದ್ದರಿಂದ ಕುಮಾರ್​ ಗೆದ್ದು ಅಪ್ಪನಿಗೆ ಶಾಕ್​ ನೀಡಿದರು.

ಅಲ್ಲಿಂದ ಪುತ್ರದ್ವಯರ ಜುಗಲ್​ಬಂದಿ ನಡೆಯುತ್ತಲೇ ಬಂದಿದೆ. 2008ರಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಆಯ ಎಂಬಂತೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಹರತಾಳು ಹಾಲಪ್ಪ ಗೆದ್ದರೆ, 20013ರಲ್ಲಿ ಕೆಜೆಪಿ ಸ್ಪರ್ಧೆ ಮತ್ತು ಬಂಗಾರಪ್ಪ ಸಾವಿನ ಅನುಕಂಪದ ಅಲೆಯಿಂದ ಮಧು ಬಂಗಾರಪ್ಪ ಗೆದ್ದರು. ಎರಡು ಚುನಾವಣೆಯಲ್ಲಿ ಸತತ ಸೋಲಿನ ನಂತರ 20018ರಲ್ಲಿ ಯಡಿಯೂರಪ್ಪ ಅನುಯಾಯಿಯಾಗಿ ಕುಮಾರ್​ ಬಿಜೆಪಿಯಿಂದ ಸ್ಪರ್ಧಿಸಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2023ರಲ್ಲೂ ಸಹೋದರರ ಸವಾಲ್​

ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಸಹೋದರರ ನಡುವೆ ಜಿದ್ದಾಜಿದ್ದಿ ನಡೆಯುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್​ನಲ್ಲಿದ್ದ ಮಧು ಬಂಗಾರಪ್ಪ ಕಾಂಗ್ರೆಸ್​ ಸೇರ್ಪಡೆಗೊಂಡಿದ್ದಾರೆ. ಎರಡು ದಿನದ ಹಿಂದಷ್ಟೆ (ಸೆ. 18) ಮಧು ಬಂಗಾರಪ್ಪ ಅವರನ್ನು ಕೆಪಿಸಿಸಿ ಒಬಿಸಿ ಕೋಶದ ಅಧ್ಯಕ್ಷರಾಗಿ ನೇಮಕ ಮಾಡಿರುವುದು, ಪಕ್ಷದಲ್ಲಿ ಅವರ ಕುರಿತು ಒಲವನ್ನು ತೋರಿಸಿರುವುದರಿಂದ ಅವರಿಗೆ ಕಾಂಗ್ರೆಸ್​ ಟಿಕೆಟ್​ ಸಿಗುವುದು ಬಹುತೇಕ ಖಚಿತವಾಗಿದೆ. ಬಿಜೆಪಿಯಿಂದ ಕುಮಾರ್​ ಸ್ಪರ್ಧೆಯ ನಿರೀಕ್ಷೆಯಲ್ಲಿದ್ದರೂ ಮೂಲ ಬಿಜೆಪಿಗರಿಂದ ಆರಂಭದಿಂದಲೂ ಅಂತರ ಕಾಪಾಡಿಕೊಂಡಿರುವುದು ತೊಡರಾಗುವ ಸಾಧ್ಯತೆ ಇದೆ. ಒಂದೆರಡು ಬಾರಿ ಯಡಿಯೂರಪ್ಪ ಅವರಿಂದಲೂ ಮುನಿಸಿಕೊಂಡಿರುವುದು ಅವರಿಗೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಸೆಪ್ಟೆಂಬರ್‌ 20ರಂದು ಇದಕ್ಕೆ ನಿದರ್ಶನ ಎಂಬಂತೆ, ನಮೋ ಸೊರಬ ವೇದಿಕೆ ಎಂಬ ವೇದಿಕೆಯು ಕುಮಾರ್‌ ಬಂಗಾರಪ್ಪ ವಿರುದ್ಧವಾಗಿ ಸ್ಥಾಪನೆಗೊಂಡಿದೆ. ಅಷ್ಟೆ ಅಲ್ಲದೆ ಕುಮಾರ್‌ ಬಂಗಾರಪ್ಪ ಪರ ಹಾಗೂ ವಿರುದ್ಧ ಬಣಗಳ ನಡುವೆ ವಾಗ್ವಾದ ನಡೆದು ಠಾಣೆ ಮೆಟ್ಟಿಲೂ ಏರಿದೆ. (ಈ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ) ಕುಮಾರ್​ ಬದಲಿಗೆ ದೀವರ ಸುಮುದಾಯದವರೇ ಆದ ದಂತ ವೈದ್ಯ ಡಾ. ಜ್ಕ್ಷಾನೇಶ್​ ಅವರನ್ನು ಕಣಕ್ಕಿಳಿಸಲು ಒಂದು ಗುಂಪು ಪ್ರಯತ್ನ ನಡೆಸಿದೆ.

ಬಿಜೆಪಿ ಟಿಕೆಟ್​ ತಪ್ಪಿದರೆ ಕುಮಾರ್​ ಜೆಡಿಎಸ್‌ಗೆ ಹೋಗಬಹುದು ಅಥವಾ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಇತ್ತ ಕಾಂಗ್ರೆಸ್​ನಲ್ಲಿ 2008ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಸೋತಿದ್ದ ರಾಜು ತಲ್ಲೂರು ಕೂಡ ಮತ್ತೆ ಟಿಕೆಟ್​ ಆಕಾಂಕ್ಷಿಯಾಗಿದ್ದಾರೆ. ಆದರೆ ಕಾಂಗ್ರೆಸ್​ನಿಂದ ಟಿಕೆಟ್​ ಸಿಗದಿದ್ದರೂ ಸ್ಪರ್ಧೆ ಖಚಿತ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ.  

2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಬಿಜೆಪಿ- ಕುಮಾರ್ ಬಂಗಾರಪ್ಪ, ಹಾಲಪ್ಪ ಹರತಾಳು
2. ಕಾಂಗ್ರೆಸ್‌- ಮಧು ಬಂಗಾರಪ್ಪ, ರಾಜು ಎಂ ತಲ್ಲೂರ
3. ಜೆಡಿಎಸ್‌- ರಾಜು ಎಂ ತಲ್ಲೂರ

ಇದನ್ನೂ ಓದಿ | ಎಲೆಕ್ಷನ್‌ ಹವಾ | ಸಾಗರ | ಕಾಂಗ್ರೆಸ್‌ ಟಿಕೆಟ್‌ ಬೇಳೂರುಗೋ, ಕಾಗೋಡು ಪುತ್ರಿಗೋ ?

Exit mobile version