ಶಿವಮೊಗ್ಗ : ಶಿವಮೊಗ್ಗದ ಶಿರಾಳಕೊಪ್ಪದಲ್ಲಿ ಸಿಡಿಮದ್ದು ಸ್ಫೋಟಗೊಂಡು ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಶಿರಾಳಕೊಪ್ಪದ ಬಸ್ ಸ್ಟ್ಯಾಂಡ್ ಬಳಿ ಈ ಘಟನೆ ನಡೆದಿದೆ. ಸಿಡಿಮದ್ದು ತಂದಿದ್ದ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರಾಳಕೊಪ್ಪದಲ್ಲಿ ನಡೆಯುವ ಸಂತೆಗಾಗಿ ಹಾವೇರಿ ಮೂಲದ ಉಮೇಶ್ ಹಾಗೂ ರೂಪ ದಂಪತಿ ಬ್ಯಾಗ್‌ವೊಂದರಲ್ಲಿ ಸಿಡಿಮದ್ದು ತಂದಿದ್ದರು. ಅಂಗಡಿ ಬಳಿ ಇಟ್ಟಿದ್ದ ಸಿಡಿಮದ್ದು ಏಕಾಏಕಿ ಸ್ಫೋಟಗೊಂಡಿದೆ. ಈ ವೇಳೆ ಸಮೀಪದಲ್ಲಿದ್ದ ಇಬ್ಬರು ಗಾಯಗೊಂಡಿದ್ದರು.
ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಸಿಡಿಮದ್ದು ತಂದಿದ್ದ ಹಾವೇರಿ ಮೂಲದ ಉಮೇಶ್ ಹಾಗೂ ರೂಪ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು. ಇದರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಜೋರಾಗಿ ಕೇಳಿ ಬಂತು ಶಬ್ಧ
ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ಜೋರಾದ ಶಬ್ಧ ಬಂತು. ಶಬ್ಧ ಬಂದ ಜಾಗದಲ್ಲಿ ಸ್ಟವ್ ಮೇಲೆ ಹಾರಿತ್ತು.
ನಾವು ಓಡಿ ಹೋಗಿ ನೋಡಿದಾಗ, ಬೆಡ್ ಶೀಟ್ ಮಾರುವ ವ್ಯಾಪಾರಿಗಳಿಗೆ ಗಾಯಗಳಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ಪ್ರತ್ಯಕ್ಷದರ್ಶಿ ಶಾರುಖ್ ಎಂಬುವವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಜೋರಾಗಿ ಶಬ್ಧ ಬಂದಾಗ ಎಲ್ಲರೂ ಭಯಭೀತರಾಗಿದ್ದರು. ನೋಡನೋಡುತ್ತಿದ್ದಂತೆ ಸ್ಫೋಟಗೊಂಡ ಜಾಗದಲ್ಲಿ ಜನರು ಸೇರಿದ್ದರು. ಸದ್ಯ ಯಾವುದೇ ಹೆಚ್ಚು ಅನಾಹುತ ನಡೆದಿಲ್ಲ ಎಂದರು.
ಶಿವಮೊಗ್ಗದ ಶಿಕಾರಿಪುರದಲ್ಲಿ ಎಸ್‌ಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಆಕಸ್ಮಿಕವಾಗಿ ಸಿಡಿಮದ್ದು ಸ್ಫೋಟವಾಗಿದೆ. ಘಟನೆಯಲ್ಲಿ ಅಂಥೋನಿ ದಾಸ್ ಎಂಬುವರಿಗೆ ಗಾಯವಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಶಿರಾಳಕೊಪ್ಪ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿಡಿಮದ್ದು ಎಲ್ಲಿಂದ ತಂದಿದ್ದಾರೆ ಎಂಬುದನ್ನು ತನಿಖೆ ನಡೆಯುತ್ತಿದೆ. ಸಿಡಿಮದ್ದು ಬ್ಯಾಗಿನಲ್ಲಿಟ್ಟು ಉಮೇಶ್ ಹಾಗೂ ರೂಪ ದಂಪತಿ ಸಂತೆಗೆ ತೆರಳಿದ್ದರು. ಈ ವೇಳೆ ಸ್ಫೋಟಗೊಂಡು ಅಂಥೋನಿ ದಾಸ್ ಕಾಲಿಗೆ ತಗುಲಿದೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮದಲ್ಲೂ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಅಂಥೋಣಿ ದಾಸ್ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶಿರಾಳಕೊಪ್ಪದಲ್ಲಿ ಸಿಡಿಮದ್ದು ಸ್ಫೋಟ ಹಿನ್ನೆಲೆಯಲ್ಲಿ ಎಸ್‌ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ