Site icon Vistara News

ಶಿವಮೊಗ್ಗ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಬಿಜೆಪಿಗೆ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು

Karnataka Election 2023 shivamogga district constituency wise election analysis

#image_title

ವಿವೇಕ ಮಹಾಲೆ, ವಿಸ್ತಾರ ನ್ಯೂಸ್‌, ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಬಾರಿ 7ರಲ್ಲಿ 6 ಕ್ಷೇತ್ರ ಗೆದ್ದಿದ್ದ ಬಿಜೆಪಿ ಈ ಬಾರಿ (Karnataka Election 2023) ತನ್ನ ಪ್ರಾಬಲ್ಯ ಉಳಿಸಿಕೊಳ್ಳುವ ಒತ್ತಡದಲ್ಲಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಬಲ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ. ಮಾಜಿ ಶಾಸಕರಾದ ಆಯನೂರು ಮಂಜುನಾಥ, ಕೆ. ಬಿ. ಪ್ರಸನ್ನಕುಮಾರ್ ಆಗಮನದಿಂದ ಜೆಡಿಎಸ್ ಚೇತರಿಸಿಕೊಂಡಿದೆ. ಮಾಜಿ ಶಾಸಕ ಮಧು ಬಂಗಾರಪ್ಪ ಈ ಬಾರಿ ಜತೆಗಿರುವುದು ಕಾಂಗ್ರೆಸ್‌ಗೆ ಬಲ‌ ನೀಡಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಒಂದೇ ಸಮುದಾಯದ ಅಭ್ಯರ್ಥಿಗಳನ್ನು ಪ್ರಮುಖ ಮೂರು ಪಕ್ಷಗಳು ಕಣಕ್ಕಿಳಿಸಿರುವುದು ತುರುಸಿನ ಸ್ಪರ್ಧೆಗೆ ಕಾರಣವಾಗಿದೆ. ಶಿವಮೊಗ್ಗ, ಸಾಗರ, ಭದ್ರಾವತಿ, ಶಿಕಾರಿಪುರದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜನಾರ್ದನ ರೆಡ್ಡಿ ಅವರ ಕೆಆರ್‌ಪಿಪಿ ಪಕ್ಷದಿಂದ ಜಿಲ್ಲೆಯ ಏಕೈಕ ಅಭ್ಯರ್ಥಿಯಾಗಿ ಬಿ.ಕೆ.ವಿಜಯಾ ಕಣದಲ್ಲಿದ್ದಾರೆ.

ಶಿವಮೊಗ್ಗ, ಗ್ರಾಮಾಂತರ, ಭದ್ರಾವತಿ ಕ್ಷೇತ್ರದಿಂದ ಆರು ಮಹಿಳೆಯರು ಕಣದಲ್ಲಿದ್ದಾರೆ. ಏಳೂ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಬಿಜೆಪಿ, ಕಾಂಗ್ರೆಸ್, ಆಪ್ ಕಣಕ್ಕಿಳಿಸಿದೆ. ಜೆಡಿಎಸ್‌ನಿಂದ ಆರು, ಎಸ್‌ಪಿ, ಬಿಎಸ್‌ಪಿ, ಎಂಇಪಿಯಿಂದ ತಲಾ ಓರ್ವ ಅಭ್ಯರ್ಥಿ ಕಣದಲ್ಲಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪ ಹೊರತುಪಡಿಸಿ ಉಳಿದ ಐವರು ಹಾಲಿ ಶಾಸಕರು ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಅತಿ ಹೆಚ್ಚು 15 ಅಭ್ಯರ್ಥಿಗಳು, ತೀರ್ಥಹಳ್ಳಿಯಲ್ಲಿ ಅತಿ ಕಡಿಮೆ ಐವರು ಕಣದಲ್ಲಿದ್ದಾರೆ.

ಶಿವಮೊಗ್ಗ : ಬಿಜೆಪಿಗೆ ಪ್ರತಿಷ್ಠೆಯ ಕಣ

ಶಾಸಕ ಕೆ.ಎಸ್. ಈಶ್ವರಪ್ಪ ಅವರ ರಾಜಕೀಯ ನಿವೃತ್ತಿ ಘೋಷಣೆಯಿಂದ ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಹೊಸ ಮುಖವನ್ನು ಪರಿಚಯಿಸಲಾಗಿದೆ. ಹಿರಿಯ ಕಾರ್ಯಕರ್ತ, ಪಾಲಿಕೆ ಸದಸ್ಯ ಚನ್ನಬಸಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದು, ಕ್ಷೇತ್ರ ಉಳಿಸಿಕೊಳ್ಳುವ ಪ್ರತಿಷ್ಠೆ ಬಿಜೆಪಿಯದ್ದಾಗಿದೆ. ಇತ್ತ ಕಾಂಗ್ರೆಸ್‌ನಲ್ಲೂ ಪಾಲಿಕೆ ಸದಸ್ಯ, ಯುವ ಮುಖಂಡ ಎಚ್.ಸಿ.ಯೋಗೀಶ್ ಅವರನ್ನು ಕಣಕ್ಕಿಳಿಸಲಾಗಿದೆ. ಮಾಜಿ ಶಾಸಕ ಕೆ ಬಿ ಪ್ರಸನ್ನಕುಮಾರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿ ಎಮ್ಮೆಲ್ಸಿಯಾಗಿದ್ದ ಆಯನೂರು ಮಂಜುನಾಥ ಆ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇಬ್ಬರು ಮಾಜಿ ಶಾಸಕರ ಸೇರ್ಪಡೆಯಿಂದ ಜೆಡಿಎಸ್ ಕ್ಷೇತ್ರದಲ್ಲಿ ಚೇತರಿಸಿಕೊಂಡಿದೆ. ಕೆ.ಬಿ.ಪ್ರಸನ್ನಕುಮಾರ್ ಜತೆಯಲ್ಲಿ ಹಲವಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ ಆಗುತ್ತಿರುವುದು ಕಾಂಗ್ರೆಸ್‌ಗೆ ತಲೆನೋವಾಗಿದೆ.

ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಅಲ್ಪಸಂಖ್ಯಾತರ ಮತಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದ್ದು, ಚನ್ನಬಸಪ್ಪ ಅವರ ಪ್ರಖರ ಹಿಂದುತ್ವವಾದ ಮತ್ತು ಅಯೋಧ್ಯೆ ರಾಮಮಂದಿರ ವಿಷಯದಲ್ಲಿ ಯೋಗೀಶ್ ಸ್ವೀಟ್ ಹಂಚಿದ್ದನ್ನು ದಾಳವಾಗಿಸಿಕೊಂಡಿದೆ. ಪ್ರಮುಖ ಮೂವರೂ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಸಮುದಾಯದ ಮತಗಳು ಕೂಡ ಅಭ್ಯರ್ಥಿ ಗೆಲುವಿಗೆ ನಿರ್ಣಾಯಕವಾಗಲಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಕೆ.ಎಸ್.ಈಶ್ವರಪ್ಪ (ಬಿಜೆಪಿ): 1,04,027 | ಕೆ ಬಿ ಪ್ರಸನ್ನಕುಮಾರ್ (ಕಾಂಗ್ರೆಸ್): 57,920 | ಗೆಲುವಿನ ಅಂತರ: 46,107

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಗ್ರೌಂಡ್‌ ರಿಪೋರ್ಟ್‌

ಶಿಕಾರಿಪುರ : ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ನಾಲ್ಕೂವರೆ ದಶಕಗಳ ಕಾಲ ಶಿಕಾರಿಪುರ ಕ್ಷೇತ್ರವನ್ನಾಳಿದ ಮಾಜಿ ಸಿಎಂ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಮೊದಲ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕಾಂಗ್ರೆಸ್‌ನ ಗೋಣಿ ಮಾಲತೇಶ್ ಅವರಿಗೆ ಬಂಡಾಯದ ಬಿಸಿ ತಟ್ಟಿದ್ದು, ಕಾಂಗ್ರೆಸ್ ಟಿಕೆಟ್ ವಂಚಿತ ನಾಗರಾಜ ಗೌಡ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ತಲೆನೋವಾಗಿ ಪರಿಣಮಿಸಿದೆ. ಇನ್ನೊಂದೆಡೆ ಜೆಡಿಎಸ್‌ಗೆ ಅಭ್ಯರ್ಥಿ ಸಿಗದೆ ಸ್ಪರ್ಧೆಯಿಂದ ದೂರ ಉಳಿದಿದ್ದು, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡರಿಗೆ ಬೆಂಬಲ ಸೂಚಿಸಿದೆ.

ಕಾಂಗ್ರೆಸ್‌ನ ಹಲವಾರು ಕಾರ್ಯಕರ್ತರು, ಮುಖಂಡರು ನಾಗರಾಜ್ ಗೌಡ ಬೆಂಬಲಕ್ಕೆ ನಿಂತಿದ್ದು, ಕಾಂಗ್ರೆಸ್ ಶಕ್ತಿ ಕ್ಷೀಣಿಸಿದೆ. ನಾಗರಾಜ್ ಗೌಡ ಸ್ಪರ್ಧೆ ತಮಗೆ ವರವಾಗಲಿದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡ ನಡುವೆ ನೇರ ಪೈಪೋಟಿ ಇದೆ.

ಕಳೆದ ಬಾರಿಯ ಫಲಿತಾಂಶ ಏನು?
ಬಿ.ಎಸ್.ಯಡಿಯೂರಪ್ಪ (ಬಿಜೆಪಿ): 86,983 | ಗೋಣಿ ಮಾಲತೇಶ: 51,586 | ಗೆಲುವಿನ ಅಂತರ: 35,397

ಭದ್ರಾವತಿ : ವ್ಯಕ್ತಿ ರಾಜಕಾರಣಕ್ಕೆ ಇಲ್ಲಿ ಮಹತ್ವ

ಬಿಜೆಪಿಯ ಶಕ್ತಿ ಕೇಂದ್ರ ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಭದ್ರಾವತಿಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ವಿಶೇಷವೆಂದರೆ, ಭದ್ರಾವತಿಯಲ್ಲಿ ಬಿಜೆಪಿ ಈವರೆಗೆ ಒಮ್ಮೆಯೂ ಗೆಲುವು ದಾಖಲಿಸಿಲ್ಲ.

ಭದ್ರಾವತಿ ರಾಜಕಾರಣ ಇತರೆ ವಿಧಾನಸಭಾ ಕ್ಷೇತ್ರಕ್ಕಿಂತ ತುಂಬಾ ಭಿನ್ನ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ರಾಜಕಾರಣಕ್ಕೆ ಹೆಚ್ಚು ಮಹತ್ವ. ಈವರೆಗೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಆಗದ ಬಿಜೆಪಿಯಿಂದ ಮಂಗೋಟೆ ರುದ್ರೇಶ್ ಅವರನ್ನು ಕಣಕ್ಕಿಳಿಸಲಾಗಿದ್ದು, ಬಿಜೆಪಿ ಈ ಬಾರಿ ಶತಾಯಗತಾಯ ಗೆಲಲ್ಲೇ ಬೇಕೆಂಬ ಪಣ ತೊಟ್ಟಿದೆ.

ಕಳೆದ 30 ವರ್ಷಗಳಿಂದ ಸಂಗಮೇಶ್ ಮತ್ತು ಅಪ್ಪಾಜಿ ಅವರ ನೇರ ಸ್ಪರ್ಧೆಗೆ ಯಾರಿಗೂ ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಅಪ್ಪಾಜಿ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಶಾರದಾ ಅಪ್ಪಾಜಿ ಗೌಡ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಅನುಕಂಪದ ಅಲೆಯ ಲಾಭದ ನಿರೀಕ್ಷೆಯಲ್ಲಿ ಜೆಡಿಎಸ್ ಇದೆ.

ಶಾಸಕ ಬಿ.ಕೆ.ಸಂಗಮೇಶ್ವರ್ ಮತ್ತೊಮ್ಮೆ ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದಿದ್ದು, ಅಭಿವೃದ್ಧಿ ಕಾರ್ಯದ ಮೇಲೆ ಮತಯಾಚನೆ ಆರಂಭಿಸಿದ್ದಾರೆ. ಈ ಬಾರಿಯೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇರುವುದು ಕ್ಷೇತ್ರದಲ್ಲಿ ಗೋಚರಿಸುತ್ತಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್): 75,722 | ಅಪ್ಪಾಜಿ ಎಂ ಜೆ (ಜೆಡಿಎಸ್): 64,155 | ಗೆಲುವಿನ ಅಂತರ: 11,567

ಶಿವಮೊಗ್ಗ ಗ್ರಾಮಾಂತರ : ಬಿಜೆಪಿ, ಜೆಡಿಎಸ್‌ ನಡುವೆ ಜಿದ್ದಾಜಿದ್ದಿ

1978ರಿಂದ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿಯನ್ನು ಕೇಂದ್ರವಾಗಿರಿಸಿಕೊಂಡು ಅಸ್ತಿತ್ವದಲ್ಲಿದ್ದ ಹೊಳೆಹೊನ್ನೂರು ಮೀಸಲು ಕ್ಷೇತ್ರ, 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದಾಗ ಶಿವಮೊಗ್ಗ ಗ್ರಾಮಾಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಿದೆ.

ದಲಿತ ಮತದಾರರ ಸಂಖ್ಯೆ ಹೆಚ್ಚಾಗಿದ್ದರೂ ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತಗಳು ಕೂಡ ಪ್ರಭಾವ ಹೊಂದಿವೆ. ಬಿಜೆಪಿ ಇಲ್ಲಿ ತನ್ನ ನೆಲೆ ಕಂಡುಕೊಂಡಿದ್ದು, ಹಾಲಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಮಾಡಿರುವ ಅಭಿವೃದ್ಧಿ ಕಾರ್ಯಗಳು ಬಿಜೆಪಿಗೆ ಶ್ರೀರಕ್ಷೆಯಾಗಿದೆ. 2013ರಲ್ಲಿ ಕೆಜಿಪಿ ಸ್ಪರ್ಧೆಯ ಲಾಭದಿಂದ ಗೆಲುವು ಸಾಧಿಸಿದ್ದ ಜೆಡಿಎಸ್ನ ಶಾರದಾ ಪೂರ್ಯಾ ನಾಯ್ಕ್ ಕಳೆದ ಬಾರಿ ಸೋತಿದ್ದರು.

ಈ ಬಾರಿ ಮತ್ತೆ ಗೆಲುವಿನ ಭರವಸೆಯಲ್ಲಿ ಕಣದಲ್ಲಿದ್ದು, ಬಿಜೆಪಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಮೀಸಲು ಕ್ಷೇತ್ರವಾದ ನಂತರ ಗೆಲುವನ್ನೇ ಕಾಣದ ಕಾಂಗ್ರೆಸ್‌ ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ ಡಾ. ಶ್ರೀನಿವಾಸ್ ಕರಿಯಣ್ಣ ಅವರನ್ನು ಎರಡನೇ ಬಾರಿ ಕಣಕ್ಕಿಳಿಸಿದೆ. ಅವರು ಬದಲಾವಣೆಯ ಮಂತ್ರ ಜಪಿಸುತ್ತಿದ್ದಾರೆ. ಈ ಬಾರಿ ತ್ರಿಕೋನ ಸ್ಪರ್ಧೆಯಿದ್ದರೂ, ಬಿಜೆಪಿ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿ ಇರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಕೆ.ಬಿ.ಅಶೋಕ ನಾಯ್ಕ (ಬಿಜೆಪಿ): 69,326 | ಶಾರದಾ ಪೂರ್ಯಾ ನಾಯ್ಕ (ಜೆಡಿಎಸ್): 65,549 | ಗೆಲುವಿನ ಅಂತರ: 3,777

ಸಾಗರ : ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ

ಕಾಗೋಡು ಚಳವಳಿಯ ಮೂಲಕ ಗಮನ ಸೆಳೆದಿದ್ದ ಸಾಗರ ಕ್ಷೇತ್ರ ಹಿಂದೊಮ್ಮೆ ಸಮಾಜವಾದಿಗಳ, ಸಮಾಜವಾದಿ ಬೆಂಬಲಿಸುವ ಕಾಂಗ್ರೆಸಿಗರ ಗಟ್ಟಿ ನೆಲೆಯಾಗಿತ್ತು. ಹಾಲಿ ಶಾಸಕ ಹರತಾಳು ಹಾಲಪ್ಪ ಅವರಿಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್ ನೀಡಿದ್ದು, ಅವರ ಬಗ್ಗೆ ಈ ಹಿಂದೆ ಇದ್ದ ಸ್ವಪಕ್ಷೀಯರ ಅಸಮಾಧಾನ ಕ್ರಮೇಣ ಕ್ಷೀಣಿಸುತ್ತ ಬಂದಿರುವುದು ಬಿಜೆಪಿಗೆ ಸಮಾಧಾನ ತಂದಿದೆ.

ಇತ್ತ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಣದಲ್ಲಿದ್ದು, ಚುರುಕಿನ ಪ್ರಚಾರದಿಂದಾಗಿ ಹಾಲಪ್ಪ ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಬಿಜೆಪಿ ಸೇರ್ಪಡೆಗೊಂಡು ಕಾಂಗ್ರೆಸ್‌ಗೆ ಶಾಕ್ ನೀಡಿದ್ದಾರೆ.

ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆಯಲ್ಲಿರುವ ಕೆ. ದಿವಾಕರ್ ಗಮನ ಸೆಳೆದಿದ್ದರೆ, ಜೆಡಿಎಸ್ ಸೈಯದ್‌ ಜಾಕೀರ್‌ ಅವರನ್ನು ಕಣಕ್ಕಿಳಿಸಿದೆ. ಇವರ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಒಟ್ಟಾರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಎದ್ದುಕಾಣುತ್ತಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಎಚ್. ಹಾಲಪ್ಪ ಹರತಾಳು (ಬಿಜೆಪಿ): 78,475 | ಕಾಗೋಡು ತಿಮ್ಮಪ್ಪ (ಕಾಂಗ್ರೆಸ್): 70,436 | ಗೆಲುವಿನ ಅಂತರ: 8,045

ತೀರ್ಥಹಳ್ಳಿ : ಆರಗ-ಕಿಮ್ಮನೆ ನಡುವೆ ನೇರ ಪೈಪೋಟಿ

40 ವರ್ಷಗಳ ಕಾಲ ಕ್ಷೇತ್ರದಲ್ಲಿ ರಾಜಕಾರಣ ಮಾಡಿರುವ ಆರಗ ಜ್ಞಾನೇಂದ್ರ ಮೊದಲ ಬಾರಿ ಸಚಿವರಾಗಿ ಕ್ಷೇತ್ರದಲ್ಲಿ ಅನುದಾನದ ಹೊಳೆಯನ್ನೇ ಹರಿಸಿದ್ದಾರೆ. 9 ಬಾರಿ ಸ್ಪರ್ಧಿಸಿ 4 ಬಾರಿ ಗೆಲುವನ್ನು ಸಾಧಿಸಿರುವ ಅವರು ಇದು ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿದ್ದಾರೆ. ಅಭಿವೃದ್ಧಿಯ ಮಂತ್ರದೊಂದಿಗೆ ಕಣಕ್ಕಿಳಿದಿದ್ದಾರೆ.

ಇತ್ತ ಕಾಂಗ್ರೆಸ್‌ನಿಂದ ಸ್ಪರ್ಧೆಯಲ್ಲಿರುವ ಕಿಮ್ಮನೆ ರತ್ನಾಕರ್ ಕೂಡ ಕೊನೆಯ ಚುನಾವಣೆಯ ಟ್ರಂಪ್ ಕಾರ್ಡ್ ಹಿಡಿದು ಅನುಕಂಪದ ನಿರೀಕ್ಷೆಯಲ್ಲಿ ಪ್ರಚಾರಕ್ಕಿಳಿದಿದ್ದಾರೆ. ಕಾಂಗ್ರೆಸ್‌ಗೆ ವಲಸೆ ಬಂದಿರುವ ಆರ್‌ ಎಂ ಮಂಜುನಾಥ್ ಗೌಡ ಮತ್ತು ಕಿಮ್ಮನೆ ನಡುವಿನ ಮುನಿಸು ತಿಳಿಯಾಗಿದ್ದು, ಇಬ್ಬರೂ ಒಟ್ಟಾಗಿ ʻಈ ಬಾರಿ ಕಿಮ್ಮನೆ ಉಳಿದವರು ಸುಮ್ಮನೆʼ ಎಂದು ಪ್ರಚಾರ ನಡೆಸುತ್ತಿರುವುದು ಕಾಂಗ್ರೆಸ್‌ಗೆ ಬಲ ತಂದಿದೆ.

ಜೆಡಿಎಸ್‌ನಿಂದ ಯಡೂರು ರಾಜಾರಾಮ್ ಕಣದಲ್ಲಿದ್ದು, ಪಕ್ಷದ ಅಲೆ ಕ್ಷೇತ್ರದಲ್ಲಿ ಎದ್ದುಕಾಣುತ್ತಿಲ್ಲ. ಒಟ್ಟಿನಲ್ಲಿ ಬಿಜೆಪಿ – ಕಾಂಗ್ರೆಸ್ ನಡುವೆ ನೇರ ಪೈಪೋಟಿ ನಡೆಯುತ್ತಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಆರಗ ಜ್ಞಾನೇಂದ್ರ (ಬಿಜೆಪಿ): 67,527 | ಕಿಮ್ಮನೆ ರತ್ನಾಕರ್ (ಕಾಂಗ್ರೆಸ್): 45,572 | ಗೆಲುವಿನ ಅಂತರ: 11,955

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಗ್ರೌಂಡ್‌ ರಿಪೋರ್ಟ್‌

ಸೊರಬ : ಈ ಬಾರಿಯೂ ಸಹೋದರರ ಸವಾಲ್

ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಸತತ ಏಳು ಬಾರಿ ಗೆದ್ದು ಮೂರು ದಶಕಗಳ ಕಾಲ ಶಾಸಕರಾಗಿದ್ದವರು. ದೀವರು ಮತ್ತು ಲಿಂಗಾಯತರು ಬಹುಸಂಖ್ಯೆಯಲ್ಲಿರುವ ಈ ಕ್ಷೇತ್ರ ಆರಂಭದಿಂದಲೂ ಬಂಗಾರಪ್ಪ ಕುಟುಂಬದ ಹಿಡಿತದಲ್ಲಿದೆ.

2004ರಲ್ಲಿ ಸೊರಬ ಕ್ಷೇತ್ರ ಮೊದಲ ಬಾರಿಗೆ ಬಂಗಾರಪ್ಪ ಪುತ್ರದ್ವಯರ ಸೆಣಸಾಟಕ್ಕೆ ಸಾಕ್ಷಿಯಾಯಿತು. ಅಲ್ಲಿಂದ ಪುತ್ರದ್ವಯರ ಜುಗಲ್‌ಬಂದಿ ನಡೆಯುತ್ತಲೇ ಬಂದಿದೆ. ಈ ಬಾರಿಯೂ ಸಹೋದರರ ನಡುವೆ ಜಿದ್ದಾಜಿದ್ದಿ ನಡೆಯುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌ನಲ್ಲಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೊಂಡು ಅಭ್ಯರ್ಥಿಯಾಗಿದ್ದಾರೆ.

ಬಿಜೆಪಿಯಿಂದ ಸ್ಪರ್ಧೆಯಲ್ಲಿರುವ ಕುಮಾರ್ ಬಂಗಾರಪ್ಪ ಮೂಲ ಬಿಜೆಪಿಗರಿಂದ ಆರಂಭದಿಂದಲೂ ಅಂತರ ಕಾಪಾಡಿಕೊಂಡಿರುವುದು ತೊಡರಾಗಿದೆ. ಇವರ ವಿರುದ್ಧವಾಗಿ ಸ್ಥಾಪನೆಯಾಗಿರುವ ʻನಮೋ ವೇದಿಕೆʼ ಕುಮಾರ್ ಅವರನ್ನು ಸೋಲಿಸುವುದಾಗಿ ಹೇಳಿಕೊಂಡಿದೆ. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯಿದ್ದು, ಮಧು ಬಂಗಾರಪ್ಪ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಜೆಡಿಎಸ್‌ನಿಂದ ಚಂದ್ರೇಗೌಡ ಬಾಸೂರು ಸ್ಪರ್ಧೆಯಲ್ಲಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ನೇರ ಸ್ಪರ್ಧೆ ಎದ್ದುಕಾಣುತ್ತಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಎಸ್. ಕುಮಾರ್ ಬಂಗಾರಪ್ಪ (ಬಿಜೆಪಿ): 72,091 | ಎಸ್. ಮಧು ಬಂಗಾರಪ್ಪ (ಜೆಡಿಎಸ್): 58,805 | ಗೆಲುವಿನ ಅಂತರ: 13,286

ಸೊರಬ ವಿಧಾನಸಭಾ ಕ್ಷೇತ್ರದ ಗ್ರೌಂಡ್‌ ರಿಪೋರ್ಟ್‌

ಇದನ್ನೂ ಓದಿ : ಬಳ್ಳಾರಿ ಜಿಲ್ಲೆ ಸಮೀಕ್ಷೆ : ಕಾಂಗ್ರೆಸ್‌, ಬಿಜೆಪಿ ಗೆಲುವಿನ ಮೇಲೆ ಪಕ್ಷಾಂತರಿಗಳ, ರೆಡ್ಡಿ ಪಕ್ಷದ ಎಫೆಕ್ಟ್‌

Exit mobile version