ಹುಬ್ಬಳ್ಳಿ: ಶಿವಮೊಗ್ಗದಲ್ಲಿ ಫೆಬ್ರವರಿ 27ರಂದು ಉದ್ಘಾಟನೆಯಾದ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರನ್ನು ಪ್ರಸ್ತಾಪಿಸುವ ಮೂಲಕ ನರೇಂದ್ರ ಮೋದಿ ನಾಮಕರಣ ಮಾಡಿದ್ದಾರೆ. ಐಐಟಿ-ಧಾರವಾಡ ಕ್ಯಾಂಪಸ್ ಹೊರಗಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಐಐಟಿ ಧಾರವಾಡ ಲೋಕಾರ್ಪಣೆ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಲೋಕಾರ್ಪಣೆ, ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿದ್ಯುದೀಕರಣ ಉದ್ಘಾಟನೆ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಕಾಮಗಾರಿಗಳ ಉದ್ಘಾಟನೆ, ಜಯದೇವ ಆಸ್ಪತ್ರೆಯ ಶಂಕುಸ್ಥಾಪನೆ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಶಂಕುಸ್ಥಾಪನೆ, ಹೈಟೆಕ್ ಕ್ರೀಡಾ ಸಂಕೀರ್ಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಮಂಡ್ಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಸಮರ್ಪಿಸಿದೆ. ಕರ್ನಾಟಕವನ್ನು ವಿಶ್ವದ ಸಾಫ್ಟ್‌ವೇರ್ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಮುಂದಕ್ಕೆ ಒಯ್ಯುತ್ತದೆ. ಇತ್ತೀಚೆಗೆ, ಬೆಳಗಾವಿಯಲ್ಲಿ, ಶಿವಮೊಗ್ಗದಲ್ಲೂ ಭಾಗವಹಿಸಿದ್ದೆ ಎಂದು ಮೋದಿ ಹೇಳಿದರು. ಈ ಸಮಯದಲ್ಲಿ, ಶಿವಮೊಗ್ಗದಲ್ಲಿ ಅನೇಕ ಯೋಜನೆಗಳ ಜತೆಗೆ ಕುವೆಂಪು ವಿಮಾನ ನಿಲ್ದಾಣದ ಉದ್ಘಾಟನೆ ಆಗಿತ್ತು ಎಂದರು.
ವಿಮಾನ ನಿಲ್ದಾಣವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪ ಹೆಸರಿಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಅನೇಕರು ಆಶಿಸಿದ್ದರು. ಆದರೆ ಸ್ವತಃ ಯಡಿಯೂರಪ್ಪ ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ರಾಷ್ಟ್ರಕವಿ ಕುವೆಂಪು ಅವರ ಹೆಸರಿಡುವಂತೆ ಕೋರಿದ್ದರು.
ಉದ್ಘಾಟನೆಯ ದಿನ ನಿಲ್ದಾಣಕ್ಕೆ ಯಾವುದೇ ಹೆಸರನ್ನು ಅಂತಿಮಗೊಳಿಸಲಾಗಿರಲಿಲ್ಲ. ಇದೀಗ ಹುಬ್ಬಳ್ಳಿಯಲ್ಲಿ ಮಾತನಾಡುವ ವೇಳೆ ಕುವೆಂಪು ವಿಮಾನ ನಿಲ್ದಾಣ ಎಂದು ಮೋದಿ ಉಲ್ಲೇಖಿಸುವ ಮೂಲಕ, ಅದೇ ಹೆಸರನ್ನು ಇರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಏರ್‌ಪೋರ್ಟ್‌ಗೆ ಕುವೆಂಪು, ರೈಲು ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕನ ಹೆಸರು ಅಂತಿಮ, ರಾಜ್ಯ ಸಂಪುಟ ಸಭೆ ಅಸ್ತು