ಸಾಗರ: ಮೊಬೈಲ್‌ಗೆ ವಿದ್ಯುತ್ ಚಾರ್ಜ್ ಮಾಡಿಕೊಡಲು ನಿರಾಕರಿಸಿದ ನೆರೆಯವನ ಜೊತೆ ಆರಂಭಗೊಂಡ ಜಗಳದಿಂದ ನಡೆದ ಹಲ್ಲೆ ವ್ಯಕ್ತಿಯೊಬ್ಬನ ಸಾವಿನಲ್ಲಿ ಅಂತ್ಯಗೊಂಡ ಘಟನೆ ತಾಲೂಕಿನ ಕಾರ್ಗಲ್ ಸಮೀಪದ ಗ್ರಾಮವೊಂದರಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತನಿಂದಲೇ ಹೊಡೆತ ತಿಂದ ಮುರಳ್ಳಿಯ ತಿಮ್ಮಪ್ಪ(53) ಕೊಲೆಯಾಗಿರುವ ದುರ್ದೈವಿ.
ಕಾರ್ಗಲ್ ಪೋಲೀಸ್ ಠಾಣಾ ವ್ಯಾಪ್ತಿಯ ಮುರಳ್ಳಿ ಗ್ರಾಮದ ತನ್ನ ಮನೆಯಲ್ಲಿ ವಿದ್ಯುತ್ ಸಮಸ್ಯೆಯಿದ್ದ ಹಿನ್ನೆಲೆಯಲ್ಲಿ ಸಿದ್ದು ಎಂಬಾತ ಅದೇ ಊರಿನ ಸ್ನೇಹಿತ ತಿಮ್ಮಪ್ಪ ಅವರ ಮನೆಗೆ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಸೋಮವಾರ ರಾತ್ರಿ ತೆರಳಿದ್ದಾನೆ. ಆದರೆ ತಿಮ್ಮಪ್ಪ ಮೊಬೈಲ್ ಚಾರ್ಜ್ ಮಾಡಿಕೊಡಲು ನಿರಾಕರಿಸಿದ್ದಾನೆ. ಇದು ಮಾತಿಗೆ ಮಾತು ಬೆಳೆಯಲು ಕಾರಣವಾಗಿ, ಒಂದು ಹಂತದಲ್ಲಿ ಆರೋಪಿ ಸಿದ್ದು ತಿಮ್ಮಪ್ಪ ಅವರ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ.
ಈ ಹೊಡೆದಾಟದ ಸಂದರ್ಭದಲ್ಲಿ ಕಣ್ಣಿಗೆ ಬಲವಾದ ಏಟು ಬಿದ್ದರೂ ಸಾರಿಗೆ ವ್ಯವಸ್ಥೆಯ ಕೊರತೆಯ ಹಿನ್ನೆಲೆಯಲ್ಲಿ ಮರುದಿನ ತಿಮ್ಮಪ್ಪ ಅವರನ್ನು ಚಿಕಿತ್ಸೆಗೆ ಬ್ಯಾಕೋಡು ಪ್ರಾಥಮಿಕ ಆರೋಗ್ಯ ಕೇಂದ್ರ, ಅಲ್ಲಿಂದ ಸಾಗರ ಮತ್ತು ನಂತರದಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಪರಿಸ್ಥಿತಿ ಬಿಗಡಾಯಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಿಮ್ಮಪ್ಪ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿರುವ ಕಾರ್ಗಲ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ | ಪೆಟ್ರೋಲ್ ಸುರಿದು ಯುವಕನ ಕೊಲೆ: ಠಾಣೆಗೆ ಬಂದು ಹೇಳಿದ್ದ ಹಂತಕ! ಹತ್ಯೆಯ ಹಿಂದೆ ಸಲಿಂಗ ಕಾಮದ ನೆರಳು