ವಿವೇಕ ಮಹಾಲೆ, ಶಿವಮೊಗ್ಗ
ಕಾಗೋಡು ಚಳವಳಿ ಮೂಲಕ ರಾಷ್ಟ್ರದ ಗಮನ ಸೆಳೆದ ಕ್ಷೇತ್ರ ಸಾಗರ. ಹಿಂದೊಮ್ಮೆ ಸಮಾಜವಾದಿಗಳ, ಸಮಾಜವಾದ ಬೆಂಬಲಿಸುವ ಕಾಂಗ್ರೆಸಿಗರ ಗಟ್ಟಿ ನೆಲೆಯಾಗಿತ್ತು ಈ ಕ್ಷೇತ್ರ. 2007ರ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಕ್ಷೇತ್ರದ ಗಡಿ ಬದಲಾಯ್ತು. ಹೊಸನಗರ ಕ್ಷೇತ್ರ ರದ್ದಾಗಿದ್ದರಿಂದ ಅಲ್ಲಿನ ಎರಡು ಹೋಬಳಿ ಸಾಗರ ಕ್ಷೇತ್ರಕ್ಕೆ ಸೇರ್ಪಡೆಗೊಂಡರೆ, ಸಾಗರದ ತಾಳಗುಪ್ಪ ಹೋಬಳಿ ಸೊರಬಕ್ಕೆ ಬಿಟ್ಟುಕೊಡಲಾಯಿತು.
ಸಾಗರ ಕ್ಷೇತ್ರ ಈವರೆಗೆ ಐವರನ್ನು ಶಾಸಕರನ್ನಾಗಿ ಕಂಡಿದೆ. ಮಾಜಿ ಸಚಿವ, ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಐದು ಬಾರಿ ಗೆದ್ದಿದ್ದರೆ, ಕಾಂಗ್ರೆಸ್ನ ಎಲ್.ಟಿ ತಿಮ್ಮಪ್ಪ ಹೆಗಡೆ ಮತ್ತು ಬಿಜೆಪಿಯಿಂದ ಬೇಳೂರು ಗೋಪಾಲಕೃಷ್ಣ ತಲಾ ಎರಡು ಬಾರಿ ಸತತ ಗೆಲುವು ಕಂಡಿದ್ದಾರೆ. ಜನತಾಪಕ್ಷದಿಂದ ಬಿ. ಧರ್ಮಪ್ಪ 1985ರಲ್ಲಿ ಅಂದಿನ ಹಾಲಿ ಶಾಸಕ ತಿಮ್ಮಪ್ಪ ಹೆಗಡೆ ಅವರನ್ನು ಸೋಲಿಸಿ ಒಮ್ಮೆ ಶಾಸಕರಾಗಿದ್ದರು. ಪ್ರಸ್ತುತ ಮಾಜಿ ಸಚಿವ, ಬಿಜೆಪಿಯ ಹರತಾಳು ಹಾಲಪ್ಪ ಶಾಸಕರಾಗಿದ್ದಾರೆ. ಈ ಕ್ಷೇತ್ರದಲ್ಲಿ ಮೊದಲ ಬಾರಿ ಸ್ಪರ್ಧಿಸಿ ಗೆಲ್ಲುವ ಮೂಲಕ ಮೂರು ಕ್ಷೇತ್ರಗಳಲ್ಲಿ ಜಯ ಕಂಡ ಏಕೈಕ ರಾಜಕಾರಣಿ ಎಂಬ ಹೆಗ್ಗಳಿಕೆ ಹರತಾಳು ಹಾಲಪ್ಪ ಅವರದ್ದು.
5 ಬಾರಿ ಗೆದ್ದಿರುವ ಕಾಗೋಡು ತಿಮ್ಮಪ್ಪ
1972 ರಿಂದಲೂ ಕ್ಷೇತ್ರದಲ್ಲಿ ಹಿರಿಯ ಮುತ್ಸದ್ದಿ ರಾಜಕಾರಣಿ ಕಾಗೋಡು ತಿಮ್ಮಪ್ಪ ಸೋಲು-ಗೆಲುವನ್ನು ಕಂಡಿದ್ದಾರೆ. ಕಾಗೋಡು ತಿಮ್ಮಪ್ಪ ಅವರು ಐದು ಬಾರಿ ಈ ಕ್ಷೇತ್ರದಲ್ಲಿ ಜಯಕಂಡಿದ್ದಾರೆ. 1972ರಲ್ಲಿ ಸೋಷಿಯಲಿಸ್ಟ್ ಪಾರ್ಟಿಯಿಂದ ಮೊದಲ ಬಾರಿಗೆ ಗೆದ್ದಿದ್ದರೆ, ಆ ನಂತರ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದಾರೆ. ಇವರನ್ನು ಬಿಟ್ಟರೆ ಇನ್ಯಾರೂ ಎರಡಕ್ಕಿಂತ ಹೆಚ್ಚು ಬಾರಿ ಗೆದ್ದಿಲ್ಲ. 1989, 1994, 1999ರ ಚುನಾವಣೆಯಲ್ಲಿ ಸತತ ಮೂರು ಬಾರಿ ಚುನಾವಣೆಯಲ್ಲಿ ಗೆದ್ದು ದಾಖಲೆ ನಿರ್ಮಿಸಿದ್ದೂ ಕಾಗೋಡು ತಿಮ್ಮಪ್ಪ. ಕಳೆದ 2018ರ ಚುನಾವಣೆಯಲ್ಲಿ ಹರತಾಳು ಹಾಲಪ್ಪ ವಿರುದ್ಧ8039 ಮತಗಳಿಂದ ಸೋತಿದ್ದ ಕಾಗೋಡು ತಿಮ್ಮಪ್ಪ, ವಯಸ್ಸಿನ ಕಾರಣದಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ. ಕಳೆದ ಬಾರಿಯೂ ಇದೇ ಕಾರಣಕ್ಕೆ ಟಿಕೆಟ್ ಸಿಗುವುದಿಲ್ಲ ಎಂಬ ಮಾತು ಕೇಳಿಬಂದಿತ್ತು. ಆದರೆ ಪಕ್ಷ ಟಿಕೆಟ್ ನೀಡಿದರೂ ಗೆಲುವು ದಾಖಲಿಸಲಾಗದೆ, ನಾಲ್ಕನೇ ಬಾರಿ ಸೋಲಿನ ಅನುಭವವಾಗಿತ್ತು.
ಮಾವ ವರ್ಸಸ್ ಅಳಿಯ
ಕಾಗೋಡು ತಿಮ್ಮಪ್ಪ ಮತ್ತು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾವ-ಅಳಿಯ ಸಂಬಂಧಿಯಾಗಿದ್ದರೂ ಇವರಿಬ್ಬರ ನಡುವೆ ರಾಜಕೀಯ ಜಿದ್ದಾಜಿದ್ದಿ ಇದೆ. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬೇಳೂರು ಗೋಪಾಲಕೃಷ್ಣ ಅವರು ಕಾಗೋಡು ತಿಮ್ಮಪ್ಪ ಅವರನ್ನು 15,173 ಮತಗಳ ಅಂತರದಿಂದ ಸೋಲಿಸಿದ್ದರು. ಆ ನಂತರದ 2008ರಲ್ಲೂ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸಿದ ಬೇಳೂರು ಮತ್ತೆ ಶಾಸಕರಾಗಿದ್ದರು. ಆದರೆ ಗೆಲುವಿನ ಅಂತರ 2845ಕ್ಕೆ ಇಳಿಯಿತು. ಆದರೆ 2013ರಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಬೇಳೂರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಮಾವ ಕಾಗೋಡು ತಿಮ್ಮಪ್ಪ ಅವರು ಭರ್ಜರಿ 41,248 ಮತಗಳ ದಾಖಲೆ ಅಂತರದಿಂದ ಗೆದ್ದರು. 2018ರಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತ ಬೇಳೂರು ಗೋಪಾಲಕೃಷ್ಣ ಚುನಾವಣಾ ಕಣದಿಂದ ಹಿಂದಕ್ಕೆ ಸರಿದು ಶತ್ರುವಿನ ಶತ್ರು ಮಿತ್ರ ಎಂಬಂತೆ ತಮ್ಮರಾಜಕೀಯ ಎದುರಾಳಿ ಮಾವನ ಗೆಲುವಿಗಾಗಿ ಪ್ರಚಾರಕ್ಕಿಳಿದಿದ್ದರು.
ವಯಸ್ಸಿನ ಕಾರಣದಿಂದ ಕಾಗೋಡು ತಿಮ್ಮಪ್ಪರಿಗೆ ಮುಂದಿನ ಚುನಾವಣೆಗೆ ಟಿಕೆಟ್ ಲಭಿಸುವುದಿಲ್ಲ, ಪರ್ಯಾಯವಾಗಿ ಪಕ್ಷ ತಮಗೆ ಟಿಕೆಟ್ ನೀಡಲಿದೆ ಎಂದು ಬೇಳೂರು ಗೋಪಾಲಕೃಷ್ಣ ಭಾವಿಸಿದ್ದರು. ಆದರೆ, ಚುನಾವಣೆ ನಂತರ ಒಂದೇ ಪಕ್ಷದಲ್ಲಿದ್ದರೂ ಮತ್ತೆ ಇಬ್ಬರ ಸಂಬಂಧ ಹದಗೆಟ್ಟಿದೆ. ಟಿಕೆಟ್ಗಾಗಿ ಮಾವ-ಅಳಿಯನ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಅನಾರೋಗ್ಯದ ನಡುವೆಯೂ ಕಾಗೊಡು ತಿಮ್ಮಪ್ಪ ಯುವಕರನ್ನು ನಾಚಿಸುವಂತೆ ಕ್ಷೇತ್ರಾದ್ಯಂತ ಸುತ್ತಾಡುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಮಾವನ ನೆರಳಿನಂತಿದ್ದ ಬೇಳೂರು ಗೋಪಾಲಕೃಷ್ಣ ಈಗ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಬೇಳೂರು ಕೂಡ ಕ್ಷೇತ್ರಾದ್ಯಂತ ಚುರುಕಿನ ಪ್ರವಾಸ ನಡೆಸುತ್ತಿದ್ದಾರೆ. ಬೇಳೂರು ಗೋಪಾಲಕೃಷ್ಣ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಡಿ.ಕೆ.ಶಿವಕುಮಾರ್ ಗರಡಿಯಲ್ಲಿ ಕಾಣಿಸಿಕೊಂಡು ಪ್ರಯತ್ನ ನಡೆಸಿದ್ದರೆ, ಕಾಗೋಡು ತಿಮ್ಮಪ್ಪ ಅವರು ತಮ್ಮ ಪುತ್ರಿ ಡಾ. ರಾಜನಂದಿನಿಗಾಗಿ ಟಿಕೆಟ್ ಕೊಡಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್-ಬಿಜೆಪಿ ಕಾಳಗ
1972ರ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಸೋಷಿಯಲಿಸ್ಟ್ ಪಾರ್ಟಿಯಿಂದ ಜಯಗಳಿಸಿದ್ದರು. ಅದು ಬಿಟ್ಟರೆ 1985ರಲ್ಲಿ ಜನತಾಪಕ್ಷದ ಬಿ.ಧರ್ಮಪ್ಪ ಗೆದ್ದಿದ್ದರು. ಉಳಿದಂತೆ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಗೆಲುವು ಸಾಧಿಸಿವೆ. ಕಾಂಗ್ರೆಸ್ 6 ಬಾರಿ ಗೆದ್ದಿದ್ದರೆ, ಬಿಜೆಪಿ ಮೂರು ಗೆಲುವು ದಾಖಲಿಸಿದೆ. 1999ರಲ್ಲಿ ಕಾಂಗ್ರೆಸ್ನಿಂದ ಎರಡು ಬಾರಿ ಗೆದ್ದಿದ್ದ ಮಾಜಿ ಶಾಸಕ ತಿಮ್ಮಪ್ಪ ಹೆಗಡೆ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿ, ಎರಡನೇ ಸ್ಥಾನಕ್ಕೆ ಬರುವ ಮೂಲಕ ಬಿಜೆಪಿ ಮೊದಲ ಬಾರಿಗೆ ತನ್ನ ಅಸ್ತಿತ್ವ ತೋರಿಸಿತ್ತು. ಆ ನಂತರ 2004ರಲ್ಲಿ ಗೋಪಾಲಕೃಷ್ಣ ಬೇಳೂರು ಜಯಗಳಿಸುವ ಮೂಲಕ ಬಿಜೆಪಿ ತನ್ನ ಖಾತೆ ತೆರೆಯಿತು. 20008ರಲ್ಲೂ ಬಿಜೆಪಿ ಗೆದ್ದರೆ, 2013ರಲ್ಲಿ ಕೆಜೆಪಿಗೆ ಮತಗಳು ಹಂಚಿಹೋಗಿ ಸೋಲನ್ನಪ್ಪಿತು. 2018ರಲ್ಲಿ ಹರತಾಳು ಹಾಲಪ್ಪ ಗೆದ್ದು, ಮತ್ತೆ ಬಿಜೆಪಿ ತನ್ನ ಅಸ್ತಿತ್ವ ತೋರಿಸಿದೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಸ್ಪರ್ಧೆ ನಡೆಯುವುದು ನಿಶ್ಚಿತ.
ಹೈವೋಲ್ಟೇಜ್ ಕ್ಷೇತ್ರ
ಸಾಗರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳಿಂದ ಪ್ರಭಾವಿ ಅಭ್ಯರ್ಥಿಗಳು ಕಣಕ್ಕಿಳಿಯುವುದರಿಂದಲೇ ಇದನ್ನು ಹೈವೋಲ್ಟೇಜ್ ಕ್ಷೇತ್ರ ಎಂದೇ ಪರಿಗಣಿಸಲಾಗುತ್ತದೆ. ಹಾಲಿ ಶಾಸಕ, ಎಂಎಸ್ಐಎಲ್ ಅಧ್ಯಕ್ಷರಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ರಾಜಕೀಯ ಜೀವನದಲ್ಲಿ ಈ ಚುನಾವಣೆ ಮಹತ್ವದ್ದಾಗಿದ್ದು, ಗೆಲ್ಲಲೇಬೇಕಾದ ಒತ್ತಡ ಮತ್ತು ಅನಿವಾರ್ಯತೆಯಲ್ಲಿದ್ದಾರೆ. ಬಿಜೆಪಿಯಲ್ಲೇ ಕೆಲವರು ಹಾಲಿ ಶಾಸಕರ ವಿರುದ್ಧ ತೆರೆಮರೆಯಲ್ಲಿ ಕತ್ತಿ ಮಸೆಯುತ್ತಿರುವುದು ಸುಳ್ಳಲ್ಲ. ಅದು ಬಿಟ್ಟರೆ ಮೇಲ್ನೋಟಕ್ಕೆ ಬಿಜೆಪಿ ಪ್ರಬಲ ಎನಿಸಿಕೊಂಡರೂ, ಕಾಂಗ್ರೆಸ್ ಪಕ್ಷವನ್ನು ಅಲಕ್ಷಿಸುವಂತಿಲ್ಲ. ಆದರೆ, ಕಾಂಗ್ರೆಸ್ ಟಿಕೆಟ್ಗಾಗಿ ಸ್ಪರ್ಧೆಗಿಳಿದಿರುವ ಮಾವ-ಅಳಿಯ ಚುನಾವಣೆಯಲ್ಲಿ ತೋರಿಸುವ ಒಗ್ಗಟ್ಟಿನ ಮೇಲೆ ಅದು ಅವಲಂಬಿಸಿದೆ. ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಅಭ್ಯರ್ಥಿಯಾದರೆ, ಕಾಗೋಡು ತಿಮ್ಮಪ್ಪ ಬೆಂಬಲಿಸಬೇಕಾದ ಅನಿವಾರ್ಯತೆ ತಲೆದೋರಬಹುದು. ಅದೇ, ಡಾ. ರಾಜನಂದಿನಿ ಟಿಕೆಟ್ ಗಿಟ್ಟಿಸಿಕೊಂಡರೆ, ಬೇಳೂರು ಬೆಂಬಲಿಸುತ್ತಾರೋ, ಮತ್ತೆ ಪಕ್ಷಾಂತರ ಮಾಡುತ್ತಾರೋ ಕಾಲವೇ ಉತ್ತರಿಸಬೇಕಿದೆ. ಆದರೆ ಕ್ಷೇತ್ರದ ರಾಜಕೀಯ ಚಿತ್ರಣ ಗಮನಿಸಿದರೆ, ಬಿಜೆಪಿಯು ಕಾಂಗ್ರೆಸ್‌ಗೆ ಸುಲಭದ ತುತ್ತಲ್ಲ. ಹಾಗೆಯೇ ಬಿಜೆಪಿ ಕೂಡ ಅಷ್ಟು ಸುಲಭವಾಗಿ ಕಾಂಗ್ರೆಸನ್ನು ಮಣಿಸಿ, ಕ್ಷೇತ್ರದಲ್ಲಿ ಮತ್ತೆ ತನ್ನ ಅಧಿಪತ್ಯ ಸ್ಥಾಪಿಸಲು ಸಾಧ್ಯವಿಲ್ಲವಾಗಿದೆ. ಇದಕ್ಕಾಗಿ ಸಾಕಷ್ಟು ಬೆವರು ಹರಿಸುವುದರ ಜೊತೆಗೆ ಕಸರತ್ತು ನಡೆಸಬೇಕಾಗಿದೆ.
ಈಡಿಗರಿಗೇ ಮಣೆ
ಸಾಗರದ ಒಟ್ಟು ಮತದಾರರ ಸಂಖ್ಯೆ 2,04,302. ಇದರಲ್ಲಿ ಈಡಿಗರು 65 ಸಾವಿರವಿದ್ದರೆ, ಹವ್ಯಕರು ಮತ್ತು ವಿವಿಧ ಬ್ರಾಹ್ಮಣ ಪಂಗಡಗಳು ಸೇರಿ 39 ಸಾವಿರ, ಮುಸ್ಲಿಮರು 21 ಸಾವಿರ, ಲಿಂಗಾಯತರು 19 ಸಾವಿರ, ಜೈನರು 14 ಸಾವಿರ, ಮಡಿವಾಳರು ಮತ್ತು ಮರಾಠರು ತಲಾ 7 ಸಾವಿರ, ಕ್ರಿಶ್ಚಿಯನ್ನರು 5 ಸಾವಿರ, ಕುರುಬರು 3 ಸಾವಿರ ಮತ್ತು ಸಣ್ಣ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತದಾರರಿದ್ದಾರೆ. 1978 ಮತ್ತು 1983ರಲ್ಲಿ ಕಾಂಗ್ರೆಸ್ನಿಂದ ಬ್ರಾಹ್ಮಣ ಸಮುದಾಯದ ತಿಮ್ಮಪ್ಪ ಹೆಗಡೆ ಎರಡು ಬಾರಿ ಗೆದ್ದಿದ್ದು, ಬಿಟ್ಟರೆ ಉಳಿದೆಲ್ಲ ಚುನಾವಣೆಗಳಲ್ಲಿ ಬಹುಸಂಖ್ಯಾತ ಈಡಿಗರಿಗೇ ಮತದಾರ ಮಣೆ ಹಾಕುತ್ತಿದ್ದಾನೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿ ಬಾರಿ ಚುನಾವಣೆಯಲ್ಲಿ ಈಡಿಗ ಸಮುದಾಯದವರನ್ನೇ ಅಭ್ಯರ್ಥಿಯಾಗಿಸುತ್ತಿದೆ. ಹೀಗಾಗಿ, ಮತ್ತೊಮ್ಮೆ ಪ್ರಬಲ ಸಮುದಾಯವಾಗಿರುವ ಬ್ರಾಹ್ಮಣ ಜಾತಿಗೆ ಈ ಬಾರಿ ಟಿಕೆಟ್ ನೀಡಬೇಕೆಂಬ ಒತ್ತಡ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಕೇಳಿಬರುತ್ತಿದೆ. ಆದರೆ, ಜಾತಿ ಸಮೀಕರಣ, ವ್ಯಕ್ತಿಗತ ಪ್ರಭಾವ ಆಧಾರದಲ್ಲಿ ಮತಗಳಿಕೆಯ ಲೆಕ್ಕಾಚಾರ ನಡೆಸುವ ಪಕ್ಷಗಳು ಹೊಸಬರಿಗೆ ಮಣೆ ಹಾಕಲಿದೆಯೇ ಎಂಬುದನ್ನು ಕಾದು ನೋಡಬೇಕು.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಎಚ್. ಹಾಲಪ್ಪ ಹರತಾಳು (ಬಿಜೆಪಿ)
2. ಡಾ.ರಾಜನಂದಿನಿ, ಬಿ.ಆರ್.ಜಯಂತ್, ಮಲ್ಲಿಕಾರ್ಜುನ ಹಕ್ರೆ, ಬೇಳೂರು ಗೋಪಾಲಕೃಷ್ಣ (ಕಾಂಗ್ರೆಸ್)
ಇದನ್ನೂ ಓದಿ | ಎಲೆಕ್ಷನ್ ಹವಾ | ಶಿವಮೊಗ್ಗ ನಗರ | ಈಶ್ವರಪ್ಪ ಉತ್ತರಾಧಿಕಾರಿಯಾಗಲು ಅರ್ಧ ಡಜನ್‌ಗೂ ಹೆಚ್ಚು ಜನರ ಪೈಪೋಟಿ