Site icon Vistara News

ಎಲೆಕ್ಷನ್‌ ಹವಾ | ಶಿವಮೊಗ್ಗ ನಗರ | ಈಶ್ವರಪ್ಪ ಉತ್ತರಾಧಿಕಾರಿಯಾಗಲು ಅರ್ಧ ಡಜನ್‌ಗೂ ಹೆಚ್ಚು ಜನರ ಪೈಪೋಟಿ

Assembly Election, assembly elections 2023, Assembly2023, election hava, election hawa, KS Eshwarappa, KS Eshwarappa Announces Resignation, latest, Shivamogga, shivamogga assembly, Shivamogga News

ವಿವೇಕ ಮಹಾಲೆ, ಶಿವಮೊಗ್ಗ
ಭಾರತೀಯ ಜನತಾ ಪಾರ್ಟಿಯ ಶಕ್ತಿಕೇಂದ್ರವಾದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಶಿವಮೊಗ್ಗ ನಗರ ಒಂದು. ರಾಜಕೀಯವಾಗಿ ಶಿವಮೊಗ್ಗ ನಗರ ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಅವರ ಕ್ಷೇತ್ರ. 1957ರಿಂದ 14 ಚುನಾವಣೆಗಳನ್ನು ಕಂಡಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಆರು ಬಾರಿ ಗೆದ್ದಿದೆ. ಆರಂಭದ ಐದು ಚುನಾವಣೆಗಳಲ್ಲಿ ಕಾಂಗ್ರೆಸ್​ ಗೆಲುವು ಪಡೆದಿದ್ದ ಈ ಕ್ಷೇತ್ರದಲ್ಲಿ 1983ರಲ್ಲಿ ಎಂ. ಆನಂದರಾವ್​ ಗೆಲುವಿನ ನಗೆ ಬೀರುವ ಮೂಲಕ ಬಿಜೆಪಿ ಖಾತೆ ತೆರೆದಿತ್ತು.

ಇದಾದ ನಂತರ ನಡೆದ ಎಂಟು ಚುನಾವಣೆಗಳಲ್ಲಿ ಕಾಂಗ್ರೆಸ್​ ಮೂರು ಬಾರಿ ಗೆದ್ದಿದ್ದರೆ, ಬಿಜೆಪಿಗೆ ಐದು ಗೆಲುವು ಲಭಿಸಿದೆ. ವಿಶೇಷವೆಂದರೆ ಬಿಜೆಪಿ, ಕಾಂಗ್ರೆಸ್​ ಬಿಟ್ಟರೆ ಬೇರೆ ಯಾವ ಪಕ್ಷದ ಅಭ್ಯರ್ಥಿಯೂ ಇಲ್ಲಿ ಶಾಸಕರಾಗಿದ್ದಿಲ್ಲ. ಅಭಿವೃದ್ಧಿ, ಸಿದ್ಧಾಂತಗಳಿಗಿಂತ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಕೋಮು ಮತ್ತು ಜಾತಿ ಪ್ರಭಾವವೇ ನಿರ್ಣಾಯಕ. 

ಈಶ್ವರಪ್ಪರ ಗೆಲುವಿನ ಓಟ

ಮಾಜಿ ಸಚಿವ, ಹಾಲಿ ಶಾಸಕ ಕೆ.ಎಸ್​.ಈಶ್ವರಪ್ಪ 1989ರಿಂದ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತ ಬಂದಿದ್ದಾರೆ. ಈ ನಡುವೆ 1999ರಲ್ಲಿ ಮತ್ತು 2013ರಲ್ಲಿ ಸೋತಿದ್ದು, ಬಿಟ್ಟರೆ ಉಳಿದ ಐದು ಚುನಾವಣೆಗಳಲ್ಲಿ ಅವರು ವಿಜಯದ ನಗೆ ಬೀರಿದ್ದಾರೆ. 2013ರಲ್ಲಿ ಬಿಜೆಪಿ ಮತ್ತು ಕೆಜೆಪಿ ನಡುವಿನ ಮತ ವಿಭಜನೆಯಿಂದಾಗಿ ಈಶ್ವರಪ್ಪ ಅವರಿಗೆ ಸೋಲಾಯಿತು ಎನ್ನುವುದು ಸುಳ್ಳಲ್ಲ. ಕೆಜೆಪಿಯಿದ ಸ್ಪರ್ಧಿಸಿದ್ದ ಯಡಿಯೂರಪ್ಪ ಆಪ್ತ ರುದ್ರೇಗೌಡರ ಸ್ಪರ್ಧೆಯಿಂದ ಈಶ್ವರಪ್ಪ ಮೂರನೇ ಸ್ಥಾನಕ್ಕಿಳಿದಿದ್ದರು. ಯಡಿಯೂರಪ್ಪ ಬಿಜೆಪಿಗೆ ವಾಪಸಾದ ಫಲವೆಂಬಂತೆ 2018ರಲ್ಲಿ ಮತ್ತೆ 46,107 ಮತಗಳ ಬೃಹತ್ ಅಂತರದಲ್ಲಿ ಗೆಲುವು ಸಾಧಿಸಿದ್ದರು. 

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಬಹುತೇಕರು ಬಿಜೆಪಿಗೆ ಒಲವು ಹೊಂದಿದವರು. ಇದಲ್ಲದೆ ಅಲ್ಪಸಂಖ್ಯಾತ, ಬ್ರಾಹ್ಮಣರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅದಾದ ನಂತರ ಲಿಂಗಾಯತ, ಕುರುಬ ಮತಗಳಿವೆ. ಬ್ರಾಹ್ಮಣ, ಕುರುಬ ಮತ್ತು ಲಿಂಗಾಯತ ಮತಗಳು ಪ್ಲಸ್​ ಪಾಯಿಂಟ್​​. ಬಿಜೆಪಿಗೆ ಎನ್ನುವುದಕ್ಕಿಂತಲೂ ಯಡಿಯೂರಪ್ಪ ಪರ ಮತಗಳು ಎಂದರೂ ತಪ್ಪಿಲ್ಲ. ಏಕೆಂದರೆ, 2013ರ ಚುನಾವಣೆ ಇದನ್ನು ಮತದಾರರು ಸ್ಪಷ್ಟಪಡಿಸಿದ್ದಾರೆ. ಕೆಜೆಪಿ ಅಭ್ಯರ್ಥಿ ರುದ್ರೇಗೌಡರು ಕೇವಲ 278 ಮತಗಳ ಅಂತರದ ಕೂದಲೆಳೆಯಲ್ಲಿ ಕಾಂಗ್ರೆಸ್​ ವಿರುದ್ಧ ಸೋತಿದ್ದರು.  ಬಿಜೆಪಿ ಅಭ್ಯರ್ಥಿ ಈಶ್ವರಪ್ಪ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

ಈಶ್ವರಪ್ಪ ಅಭ್ಯರ್ಥಿಯಾಗುತ್ತಾರ?

ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಇದಕ್ಕೆ ಉತ್ತರ ಸ್ವತಃ ಈಶ್ವರಪ್ಪ ಬಳಿಯೂ ಇಲ್ಲ. ಶಿವಮೊಗ್ಗ ನಗರ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಈಶ್ವರಪ್ಪ ಸ್ಪರ್ಧಿಸುವುದು ಅನುಮಾನ ಎನ್ನುತ್ತವೆ ಬಿಜೆಪಿ ಮೂಲಗಳು. ಕಾರಣ, ಬಿಜೆಪಿಯ ಅಲಿಖಿತ 17 ವರ್ಷ ವಯೋಮಾನದ ನಿಯಮ. 75 ವರ್ಷ ವಯಸ್ಸಾದ್ದರಿಂದ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಈಶ್ವರಪ್ಪ ಸಚಿವರಾಗಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿರಾಜ್‌ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಹೊರಿಸಿ ಇತ್ತೀಚೆಗೆ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿದ್ದು ಈಶ್ವರಪ್ಪ ಅವರ ರಾಜೀನಾಮೆಗೆ ಕಾರಣವಾಗಿತ್ತು.

ಹೇಗಾದರೂ ಮಾಡಿ ಈ ಸರ್ಕಾರದಲ್ಲಿ ಮತ್ತೆ ಸಚಿವ ಸ್ಥಾನವನ್ನು ಪಡೆಯಬೇಕು ಎಂದು ಸತತ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್​ ಸಿಗುವ ನಿರೀಕ್ಷೆಯಿಲ್ಲದಿರುವುದರಿಂದ ಯಡಿಯೂರಪ್ಪ ಅವರು ಸ್ವತಃ ಮುಂದಿನ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ. ಈಶ್ವರಪ್ಪ ಅವರು ಕೂಡ 75ರ ಸನಿಹದಲ್ಲಿದ್ದು, ಅವರಿಗೆ ಟಿಕೆಟ್​ ಸಿಗುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಇತ್ತೀಚಿನ ವರ್ಷಗಳ ಇತಿಹಾಸ ಗಮನಿಸಿದರೆ ಟಿಕೆಟ್​ ಸಿಗುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಈಶ್ವರಪ್ಪ ಯುಗಾಂತ್ಯಗೊಂಡು ಹೊಸ ಮುಖ ಕಾಣಸಿಕೊಂಡರೂ ಅಚ್ಚರಿಯಿಲ್ಲ.

ಈಶ್ವರಪ್ಪ ಉತ್ತರಾಧಿಕಾರಿ ಯಾರು?

ವಯೋಮಾನದ ಕಾರಣಕ್ಕೆ ಈಶ್ವರಪ್ಪ ಅವರು ಸ್ಪರ್ಧಿಸದಿದ್ದರೆ ಮುಂದಿನ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಮೂಡಿದೆ. ಕೆ.ಎಸ್. ಈಶ್ವರಪ್ಪ ನಂತರ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದ್ದು, ಈಶ್ವರಪ್ಪ ಪುತ್ರ ಕೆ.ಈ. ಕಾಂತೇಶ್ ಅವರ ಹಾದಿ ಅಷ್ಟು ಸಲೀಸಾಗಿಲ್ಲ. ಶಿವಮೊಗ್ಗ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಅರ್ಧ ಡಜನ್‌ಗೂ ಹೆಚ್ಚು ಮುಖಂಡರು ಸಿದ್ಧತೆ ನಡೆಸಿದ್ದಾರೆ. ಕಾಂತೇಶ್‌ ಅವರಲ್ಲದೆ ಎಂಎಲ್‌ಸಿಗಳಾದ ಆಯನೂರು ಮಂಜುನಾಥ, ಎಸ್‌. ರುದ್ರೇಗೌಡ, ಮಾಜಿ ಎಂಎಲ್‌ಸಿ ಎಂ. ಬಿ. ಭಾನುಪ್ರಕಾಶ್‌, ಸೂಡಾ ಮಾಜಿ ಅಧ್ಯಕ್ಷ ಎಸ್‌. ಎಸ್‌. ಜ್ಯೋತಿ ಪ್ರಕಾಶ್‌, ಪಕ್ಷದ ವಿಭಾಗೀಯ ಅಧ್ಯಕ್ಷ ಗಿರೀಶ್‌ ಪಟೇಲ್‌, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿದ್ದ ದತ್ತಾತ್ರಿ, ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಸೇರಿದಂತೆ ಹಲವರು ಮುಂಚೂಣಿಯಲ್ಲಿದ್ದಾರೆ.

ಇದರಲ್ಲಿ ಎಂಎಲ್‌ಸಿ ಆಯನೂರು ಮಂಜುನಾಥ್‌, ಜ್ಯೋತಿ ಪ್ರಕಾಶ್‌, ದತ್ತಾತ್ರಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ನಾಲ್ಕೂ (ವಿಧಾನಸಭೆ, ಪರಿಷತ್‌, ಲೋಕಸಭೆ ಮತ್ತು ರಾಜ್ಯಸಭೆ) ಸದನಗಳನ್ನು ಪ್ರತಿನಿಧಿಸಿದ ದಾಖಲೆ ಹೊಂದಿರುವ ಆಯನೂರು ಮಂಜುನಾಥ್‌ ಅವರು ಹಾಲಿ ಎಂಎಲ್‌ಸಿ ಆಗಿದ್ದರೂ ಮತ್ತೊಮ್ಮೆ ಎಂಎಲ್‌ಎ ಆಗಬೇಕೆಂಬ ಉತ್ಕಟ ಬಯಕೆ ಹೊಂದಿದ್ದಾರೆ. ಪ್ರಥಮ ಬಾರಿಗೆ ಹೊಸ ನಗರದಿಂದ ಎಂಎಲ್‌ಎ ಆದಾಗ 3 ವರ್ಷದೊಳಗೆ ಅವರನ್ನು ಸಂಸತ್‌ ಚುನಾವಣೆಗೆ ನಿಲ್ಲಿಸಲಾಯಿತು. ಚುನಾವಣೆಯಲ್ಲಿ ಗೆದ್ದರೂ ವಾಜಪೇಯಿ ಸರ್ಕಾರ ಕೇವಲ 13 ತಿಂಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರಿಂದ ಅಲ್ಲಿಯೂ ಪೂರ್ಣಾವಧಿ ಉಳಿಯಲು ಆಗಲಿಲ್ಲವೆಂಬ ಬೇಸರ ಅವರಲ್ಲಿದೆ. ಯಡಿಯೂರಪ್ಪ ಅವರ ಆಪ್ತ ರುದ್ರೇಗೌಡರು 2013ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಕೂದಲೆಳೆ ಅಂತರದಿಂದ ಸೋತಿರುವುದರಿಂದ ಅವರನ್ನೇ ನಿಲ್ಲಿಸಿದರೆ ಗೆಲುವು ಶತಸಿದ್ಧ ಎಂಬ ಲೆಕ್ಕಾಚಾರವೂ ನಡೆದಿದೆ.

ಪುತ್ರನಿಗೆ ಈಶ್ವರಪ್ಪ ಒಲವು

ಒಂದು ವೇಳೆ ತಮಗೆ ಟಿಕೆಟ್​ ದಕ್ಕದಿದ್ದರೆ ಮಗನಿಗೆ ಟಿಕೆಟ್​ ಕೊಡಿಸಬೇಕೆಂಬ ಇರಾದೆ ಈಶ್ವರಪ್ಪರದ್ದು. ಹೀಗಾಗಿ, ಈಶ್ವರಪ್ಪ ತಾವು ಕ್ಷೇತ್ರ ಪ್ರವಾಸ ಮಾಡುವಾಗ ತಮ್ಮ ಮಗ ಕೆ.ಈ. ಕಾಂತೇಶ್​ ಅವರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಕ್ಷೇತ್ರದ ಮತದಾರರಿಗೆ ತಮ್ಮ ಪುತ್ರನ ಪರಿಚಯ ಮಾಡಿಸುತ್ತಿದ್ದಾರೆ. ಕೆ.ಈ. ಕಾಂತೇಶ್ ರಾಜಕೀಯವಾಗಿ ದೊಡ್ಡಮಟ್ಟದ ಸ್ಥಾನಮಾನ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಒಮ್ಮೆ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಕೆ.ಈ. ಕಾಂತೇಶ್ ಈಗ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಕಾಂತೇಶ್‌ ಅವರು ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯರಾಗಿದ್ದಾರೆ. ವಾರ್ಡ್‌ ಪ್ರಮುಖರು, ಪದಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಪ್ರಯತ್ನದಲ್ಲಿದ್ದಾರೆ. ವಿವಿಧ ಸಮಾಜಗಳ ಮಠಾಧೀಶರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದರಲ್ಲಿ ಮಗ್ನರಾಗಿದ್ದಾರೆ. 

ಕಾಂಗ್ರೆಸ್​ನಲ್ಲೂ ಪೈಪೋಟಿ

ಕಾಂಗ್ರೆಸ್​ ಪಕ್ಷದಲ್ಲೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ದೊಡ್ಡ ಆಕಾಂಕ್ಷಿತರ ಪಟ್ಟಿಯೇ ಇದೆ. ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್​ ಸೇರಿದಂತೆ 11ಕ್ಕೂ ಹೆಚ್ಚು ಆಕಾಂಕ್ಷಿತರು ಈಗಾಗಲೇ ಕೆಪಿಸಿಸಿ ಬಾಗಿಲು ತಟ್ಟಿದ್ದಾರೆ. ಕೆಲವರು ದೆಹಲಿವರೆಗೂ ಹೋಗಿ ಬಂದಿದ್ದಾರೆ. ಸೇವಾದಳದ ಜಿಲ್ಲಾಧ್ಯಕ್ಷ ವೈ.ಎಚ್​. ನಾಗರಾಜ್​ ಈಗಾಗಲೇ ತಾವು ಟಿಕೆಟ್​ ಆಕಾಂಕ್ಷಿಯೆಂದು ಸಾರಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಎಚ್​.ಎಸ್​. ಸುಂದರೇಶ್​, ಪಾಲಿಕೆ ಸದಸ್ಯ ಎಚ್​.ಸಿ.ಯೋಗೀಶ್​ ಸೇರಿದಂತೆ ಹಲವರು ಆಕಾಂಕ್ಷಿತರಾಗಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಬಣ ರಾಜಕೀಯದ ನೆರಳು ಇಲ್ಲಿಯೂ ಗೋಚರಿಸಿದ್ದು, ಯಾರ ಕೈಮೇಲಾಗುತ್ತೋ ಕಾದು ನೋಡಬೇಕಿದೆ.

ಜೆಡಿಎಸ್​ನಿಂದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್​ ಪಟ್ಟಿಯಲ್ಲಿದ್ದಾರೆ. ಆಮ್​ ಆದ್ಮಿ ಪಾರ್ಟಿ ಕೂಡ ನಗರದಲ್ಲಿ ಚಟುವಟಿಕೆ ಆರಂಭಿಸಿದ್ದು, ಮೂರ್ನಾಲ್ಕು ಜನರು ಅಭ್ಯರ್ಥಿಯಾಗಲು ಪ್ರಯತ್ನ ಮುಂದುವರಿಸಿದ್ದಾರೆ. ಆದರೆ, ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆಯೇ ನೇರ ಸ್ಪರ್ಧೆ ಇರಲಿದ್ದು, ಉಳಿದೆಲ್ಲವೂ ಮತಗಳಿಕೆಗಷ್ಟೇ ಸೀಮಿತವಾಗಲಿವೆ.

2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಕೆ.ಎಸ್.ಈಶ್ವರಪ್ಪ, ಆಯನೂರು ಮಂಜುನಾಥ, ಎಸ್‌. ರುದ್ರೇಗೌಡ, ಎಂ. ಬಿ. ಭಾನುಪ್ರಕಾಶ್‌, ಎಸ್‌. ಎಸ್‌. ಜ್ಯೋತಿ ಪ್ರಕಾಶ್‌, ಗಿರೀಶ್‌ ಪಟೇಲ್‌, ದತ್ತಾತ್ರಿ, ಚನ್ನಬಸಪ್ಪ (ಬಿಜೆಪಿ)
2. ಕೆ.ಬಿ.ಪ್ರಸನ್ನಕುಮಾರ್/ಸುಂದರೇಶ್ (ಕಾಂಗ್ರೆಸ್)
3. ಎಂ.ಶ್ರೀಕಾಂತ್ (ಜೆಡಿಎಸ್)

ಇದನ್ನೂ ಓದಿ | ಎಲೆಕ್ಷನ್ ಹವಾ | ಭದ್ರಾವತಿ | ಬಿಜೆಪಿಯಿಂದ ಇನ್ನೂ ಭೇದಿಸಲಾಗದ ಕಾಂಗ್ರೆಸ್‌-ಜೆಡಿಎಸ್‌ ‘ಭದ್ರʼ ಕೋಟೆ

Exit mobile version