ಶಿವಮೊಗ್ಗ: ಶಿವಮೊಗ್ಗದ ಸಿಗಂದೂರಿಗೆ ತೆರಳುತ್ತಿದ್ದ ಪ್ರವಾಸಿಗರ ಕಾರು (Road Accident) ಪಲ್ಟಿಯಾಗಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಯುವಕ ಮೃತಪಟ್ಟಿದ್ದಾನೆ. ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಕೆರೆಕೋಡಿ ಬಳಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಭತ್ತದ ಗದ್ದೆಗೆ ಪಲ್ಟಿಯಾಗಿದೆ. ಪರಿಣಾಮ ಬೆಂಗಳೂರಿನ ನೆಲಮಂಗಲ ಮೂಲಕ ಚಂದನ್ (26) ಎಂಬಾತ ಮೃತಪಟ್ಟಿದ್ದಾನೆ.
ಕೊಡುಗು ಮೂಲದ ನಂದನ್, ಕೋಲಾರದ ಕೋದಂಡ, ಹಾಸನದ ಭರತ್, ಮಂಡ್ಯ ಜಿಲ್ಲೆಯ ಯೋಗೇಶ್ ಎಂಬುವವರಿಗೆ ಗಂಭೀರ ಗಾಯವಾಗಿದೆ. ಯುವಕರ ತಂಡ ಬೆಂಗಳೂರಿನಿಂದ ಸಿಗಂದೂರಿಗೆ ಪ್ರವಾಸಕ್ಕೆ ಬಂದಿದ್ದರು. ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟರೆ, ಉಳಿದವರಿಗೆ ಗಂಭೀರ ಗಾಯವಾಗಿದೆ. ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಯಾರದ್ದೋ ನಿರ್ಲಕ್ಷ್ಯಕ್ಕೆ ಬಾಲಕ ಬಲಿ
ಯಾರದ್ದೋ ನಿರ್ಲಕ್ಷ್ಯಕ್ಕೆ ಬಾಲಕನೊಬ್ಬ ಬಲಿಯಾಗಿದ್ದಾನೆ. ನಿಲ್ಲಿಸಿದ ಸ್ಕೂಟಿಗೆ ಬಾಲಕನ ಕೈ ಟಚ್ ಆಗಿ ರಸ್ತೆಗೆ ಬಿದ್ದವನ ಮೇಲೆ ಟೆಂಪೋ ಹರಿದಿದೆ. ಚಾಮರಾಜಪೇಟೆಯ ಗುಡ್ಡಳ್ಳಿಯಲ್ಲಿ ಅಪಘಾತ ಸಂಭವಿಸಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಏಳು ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.
ಧಾರವಾಡದಲ್ಲಿ ಹೊತ್ತಿ ಉರಿದ ಕಾರು
ಧಾರವಾಡದ ಸತ್ತೂರು ಬಳಿ ಹುಂಡೈ ಟಿ20 ಕಾರೊಂದು ಬೆಂಕಿಗೆ ಆಹುತಿ ಆಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿರುವ ಶಂಕೆ ಇದೆ. ಧಾರವಾಡ ಮೂಲದವರ ಕಾರು ಎಂದು ತಿಳಿದು ಬಂದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಕಾರಿನಿಂದ ಹೊರಬಂದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಕೂಟರ್‌ಗೆ ಕಾರು ಡಿಕ್ಕಿಯಾಗಿ ಯುವತಿ ಸಾವು
ವಿಜಯದಶಮಿ ದಿನ ತಾತನಿಗೆ ಬನ್ನಿ ಕೊಡಲು ತೆರಳಿದ್ದ ಮೊಮ್ಮಕ್ಕಳ ಬಾಳಲ್ಲಿ ದುರಂತ ನಡೆದಿದೆ. ರಾಯಚೂರಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಓರ್ವ ಯುವತಿ ಮೃತಪಟ್ಟರೆ, ಮತ್ತೋರ್ವ ಯುವತಿಗೆ ಗಂಭೀರ ಗಾಯವಾಗಿದೆ. ರಾಯಚೂರು ನಗರದ ಡಿಸಿ ಬಂಗಲೆ ಬಳಿ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ಸಾಕ್ಷಿ (20) ಎಂಬಾಕೆ ಮೃತಪಟ್ಟರೆ, ಸಂಜನಾ ಎಂಬಾಕೆಗೆ ಗಂಭೀರ ಗಾಯವಾಗಿದೆ.
ಸಂಜನಾ ಮತ್ತು ಸಾಕ್ಷಿ ತಡರಾತ್ರಿ ತಾತನ ಮನೆಗೆ ಬನ್ನಿ ಕೊಡಲು ತೆರಳಿದ್ದರು. ಬನ್ನಿ ಕೊಟ್ಟು ವಾಪಸ್ ಸ್ಕೂಟರ್ ಬರುವ ವೇಳೆ ರೋಡ್ ಕ್ರಾಸ್ ಮಾಡುವಾಗ ಬಸವೇಶ್ವರ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಸ್ವಿಪ್ಟ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಕೂಟರ್‌ನ ಹಿಂದೆ ಕುಳಿತಿದ್ದ ಸಾಕ್ಷಿ, ಕಾರಿನ ಮೇಲೆ ಬಿದ್ದು ಮೃತಪಟ್ಟಿದ್ದಾಳೆ. ಅಪಘಾತದ ಬಳಿಕ ಕಾರು ಬಿಟ್ಟು ಎಸ್ಕೇಪ್ ಕಾರು ಚಾಲಕ ಎಸ್ಕೇಪ್ ಆಗಿದ್ದಾನೆ. ರಾಯಚೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.