ಶಿವಮೊಗ್ಗ: ಶಿವಮೊಗ್ಗದಲ್ಲಿ ಮೂವರ ಕೊಲೆಯ ಮೂಲಕ ಕೋಮು ಗಲಭೆ ಸೃಷ್ಟಿಸಲು ಸಂಚು ನಡೆಸಲಾಗುತ್ತಿದೆ ಎಂಬ ಒಕ್ಕಣೆಯ ಅನಾಮಧೇಯ ಪತ್ರದಲ್ಲಿ ಇರುವುದೆಲ್ಲ ಕಪೋಲಕಲ್ಪಿತ ಎಂಬುದು ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಮಾತ್ರವಲ್ಲ ಇದರಲ್ಲಿ ಪ್ರೇಮ ಪ್ರಕರಣದ ಆಯಾಮವೂ ಇರುವುದು ತಿಳಿದುಬಂದಿದೆ.
ಅನಾಮಧೇಯ ಪತ್ರದ ರೂವಾರಿಯನ್ನು ಪತ್ತೆ ಮಾಡಲಾಗಿದ್ದು, ಸೂಳೆಬೈಲಿನ ಅಯೂಬ್ ಎಂಬ ಹೆಸರಿನ ಈತನನ್ನು ಬಂಧಿಸಲಾಗಿದೆ. ʼಮಾರ್ಕೆಟ್‌ನಲ್ಲಿ ಮೂವರ ಕೊಲೆಗೆ ಸಂಚು ನಡೆಸಿರುವುದನ್ನು ತಾನು ಕೇಳಿಸಿಕೊಂಡಿದ್ದಾಗಿʼ ಈತ ಪತ್ರ ಬರೆದು ಅಂಗಡಿ ಮಾಲಿಕರೊಬ್ಬರಿಗೆ ಸಿಗುವಂತೆ ಮಾಡಿದ್ದ. ಕೊಲೆ ಸಂಚಿನ ಹಿಂದೆ ಮಹ್ನದ್ ಫೈಸಲ್ ಇದ್ದಾನೆಂದು ಆರೋಪಿಸಿದ್ದ. ಆತ ಪತ್ರದಲ್ಲಿ ಬರೆದಿರುವುದೆಲ್ಲವೂ ಕಪೋಲಕಲ್ಪಿತವಾಗಿವೆ. ಮಾತ್ರವಲ್ಲದೆ ಈತ, ಫೈಜಲ್ ಪತ್ನಿಯೊಂದಿಗೆ ಅಫೇರ್ ಹೊಂದಿದ್ದು, ಮೊಹ್ಮದ್ ಫೈಸಲ್‌ನನ್ನು ಜೈಲಿಗೆ ಕಳುಹಿಸಿ ಆತನ ಪತ್ನಿಯೊಂದಿಗೆ ಸುಖವಾಗಿರಬೇಕೆಂಬ ದುರುದ್ದೇಶದಿಂದ ಪತ್ರ ಬರೆದಿದ್ದ ಎಂದು ಗೊತ್ತಾಗಿದೆ.
ಪ್ರಕರಣವನ್ನು ಕೋಟೆ ಪೊಲೀಸರು ಕ್ಷಿಪ್ರವಾಗಿ ಭೇದಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ತನ್ನ ಸಂಚನ್ನು ಅಯೂಬ್ ಬಾಯ್ಬಿಟ್ಟಿದ್ದಾನೆ. ನಗರದಲ್ಲಿರುವ ಕೋಮು ಉದ್ವಿಗ್ನತೆಯನ್ನು ದುರುದ್ದೇಶಕ್ಕೆ ಬಳಸಲು ಯೋಜಿಸಿದ್ದ ಅಯೂಬ್ ಈಗ ಕಂಬಿ ಎಣಿಸುತ್ತಿದ್ದಾನೆ. ಸೂಕ್ತ ದಿಕ್ಕಿನಲ್ಲಿ ನಡೆದ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಶ್ಲಾಘನೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಾರಿ ಕೋಮು ಗಲಭೆಗೆ ಸಂಚು? ಅಪರಿಚಿತ ಪತ್ರ ತಂದ ಆತಂಕ