Site icon Vistara News

ನೂರಾರು ಕೋಟಿ ವಂಚಿಸಿ‌ ವಿದೇಶಕ್ಕೆ ಹಾರಿದ್ದ ಕಾರು ಚಾಲಕ ಅರೆಸ್ಟ್!

ಶಿವಾನಂದ ಕುಂಬಾರ್‌

ಬೆಳಗಾವಿ: ಸಿಮೆಂಟ್, ಸ್ಟೀಲ್ ದಂಧೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ ನೂರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಹಾರಿದ್ದ ಒಬ್ಬ ಸಾಮಾನ್ಯ ಕಾರು ಚಾಲಕನನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕೋಡಿ ತಾಲೂಕಿನ ಸದಲಗಾ ಮೂಲದ ಶಿವಾನಂದ ಕುಂಬಾರ್‌ ಎಂಬಾತನೇ ಬಂಧಿತ ಆರೋಪಿ. ಈತ ಕರ್ನಾಟಕ, ಮಹಾರಾಷ್ಟ್ರ ಪೊಲೀಸರಿಗೆ ಬೇಕಾಗಿದ್ದ ಪ್ರಮುಖ ಆರೋಪಿಯಾಗಿದ್ದ. ಈತ ಸಿಮೆಂಟ್, ಸ್ಟೀಲ್ ದಂಧೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುತ್ತದೆ ಎಂದು ಸಾರ್ವಜನಿಕರಿಗೆ ವಂಚಿಸಿ ವಿದೇಶಕ್ಕೆ ಹಾರಿದ್ದ. ಈಗ ಈತನನ್ನು ಬೆಳಗಾವಿ ಅಪರಾಧ ವಿಭಾಗದ ಪೊಲೀಸರು ಮುಂಬೈನಲ್ಲಿ ಬಂಧಿಸಿ ಕರೆ ತಂದಿದ್ದಾರೆ.

ಕಾರು ಚಾಲಕನ ವಂಚನೆಯ ಕಥೆ

ಮಹಾರಾಷ್ಟ್ರದ ಇಚಕರಂಜಿಯಲ್ಲಿ ನೆಲೆಸಿದ್ದ ಆರೋಪಿ ಶಿವಾನಂದ ಕುಂಬಾರ್‌ ಮಹಾರಾಷ್ಟ್ರದ ಕೋಪರಗಾಂವ್ ಬಳಿ ಆಶ್ರಮವೊಂದರ ಕಾರು ಚಾಲಕನಾಗಿದ್ದ. ಇಲ್ಲಿಂದಲೇ ಈತ ತನ್ನ ಮೋಸದ ಜಾಲವನ್ನು ಬೀಸಲು ಪ್ರಾರಂಭಿಸಿದ್ದ ಎನ್ನಲಾಗಿದ್ದು, ಸಿಮೆಂಟ್‌ ಮತ್ತು ಸ್ಟೀಲ್‌ ದಂಧೆಯಲ್ಲಿ ಹಣ ಮಾಡುವ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದ. ಮೊದಲಿಗೆ ಹೆಚ್ಚಿನ ಲಾಭಾಂಶ ನೀಡಿ ಹಣ ಹೂಡಿಕೆ ಮಾಡಿದವರಿಗೆ ನಂಬಿಸಿ ಬಳಿಕ ಕರ್ನಾಟಕ, ಮಹಾರಾಷ್ಟ್ರದಲ್ಲಿ ಉದ್ಯಮಿಗಳ ಬಳಿ 500 ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆದು ಕುಟುಂಬ ಸಮೇತ ಪರಾರಿಯಾಗಿದ್ದ.

ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ

ಇದನ್ನೂ ಓದಿ | ಕನ್ನ ಹಾಕುವುದು ಹೇಗೆಂದು ಯೂಟ್ಯೂಬ್‌ನಲ್ಲಿ ಕಲಿತು ಕಳವು ಮಾಡಿದವ ಅರೆಸ್ಟ್‌ !

ಉದ್ಯಮಿಗಳು, ವ್ಯಾಪಾರಸ್ಥರೇ ಟಾರ್ಗೆಟ್

ಮೊದ ಮೊದಲು ಸಾರ್ವಜನಿಕರಿಗೆ ಈ ದಂಧೆ ಮೂಲಕ ಹಣದ ಆಸೆ ತೋರಿಸುತ್ತಿದ್ದ ಶಿವಾನಂದ ಕುಂಬಾರ್‌ ಬಳಿಕ ಉದ್ಯಮಿಗಳು ಮತ್ತು ವ್ಯಾಪಾರಸ್ಥರನ್ನೇ ಟಾರ್ಗೆಟ್‌ ಮಾಡಿದ್ದ. ಬೆಳಗಾವಿ ಜಿಲ್ಲೆಯ ಹಲವು ಉದ್ಯಮಿಗಳು, ವ್ಯಾಪಾರಸ್ಥರು ಹಣ ಹೂಡಿಕೆ ಮಾಡಿದ್ದರು. ಹೊಲ್ಸೇಲ್‌ ತರಕಾರಿ ವ್ಯಾಪಾರಸ್ಥ ಯಲ್ಲಪ್ಪ ಮನಗುತಕರ್ ಎಂಬುವನ ಮೂಲಕ ಬಹುತೇಕ ವ್ಯಾಪಾರಸ್ಥರು ಕೋಟ್ಯಂತರ ಹಣ ಹೂಡಿಕೆ ಮಾಡಿದ್ದರು. ಆದರೆ, ಈ ಬಗ್ಗೆ ಯಾರೂ ದೂರು ನೀಡಲು ಮುಂದೆ ಬಂದಿರಲಿಲ್ಲ. ಬೆಳಗಾವಿ ತಾಲೂಕಿನ ಜಾಫರವಾಡಿ ನಿವಾಸಿಯೊಬ್ಬರು ಯಲ್ಲಪ್ಪ ಮನಗುತಕರ್‌‌ಗೆ 75 ಲಕ್ಷ ರೂ. ಹಣ ನೀಡಿದ್ದರು. ಹಣ ವಾಪಸ್ ನೀಡದಿದ್ದಾಗ ಕಳೆದ ವರ್ಷ ಬೆಳಗಾವಿ ಸಿಇಎನ್ ಠಾಣೆಗೆ ದೂರು ನೀಡಿದ್ದರು.

ವಿದೇಶಕ್ಕೆ ಪರಾರಿಯಾಗಿದ್ದ ಶಿವಾನಂದ

ಶಿವಾನಂದನನ್ನು ಹಿಡಿಯಲು ಕರ್ನಾಟಕ ಮಹಾರಾಷ್ಟ್ರ ಪೊಲೀಸರು ಸತತ ಪ್ರಯತ್ನ ನಡೆಸಿದ್ದರು. ಆದರೆ, ಈ ಚಾಲಾಕಿ ವಂಚಕ ಈಜಿಪ್ಟ್, ಮಾಲ್ಡೀವ್ಸ್, ದುಬೈ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದನೆಂಬ ಮಾಹಿತಿ ಬಂದಿತ್ತು. ನೇಪಾಳ ಪೊಲೀಸರನ್ನು ಇಂಟರ್‌ಪೋಲ್ ಮೂಲಕ ಸಂಪರ್ಕಿಸಿದ್ದ ಬೆಳಗಾವಿ ಪೊಲೀಸರು ಶಿವಾನಂದ ಕುಂಬಾರ್‌ ಬಂಧನಕ್ಕೆ ಬಲೆ ಬೀಸಿದ್ದರು. ಈ ವೇಳೆ ಹಣಕಾಸಿನ ಅವಶ್ಯಕತೆಗೆ ಆರೋಪಿ ಮುಂಬೈಗೆ ಬರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮುಂಬೈಗೆ ತೆರಳಿ ವಂಚಕ ಶಿವಾನಂದ ಕುಂಬಾರನನ್ನು ಸಿಸಿಬಿ ಇನ್ಸ್‌ಪೆಕ್ಟರ್ ನಿಂಗನಗೌಡ ಪಾಟೀಲ್ ಮತ್ತು ಅವರ ತಂಡ ಜೂನ್ 26ರಂದು ಅರೆಸ್ಟ್ ಮಾಡಿದೆ.

ಬೆಳಗಾವಿಯ ಸಿಇಎನ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 406, 420 ಅಡಿ ಪ್ರಕರಣ ದಾಖಲಾಗಿತ್ತು. ಗಂಭೀರ ಪ್ರಕರಣವಾದ ಹಿನ್ನೆಲೆಯಲ್ಲಿ ತನಿಖೆ ಜವಾಬ್ದಾರಿಯನ್ನು ಅಪರಾಧ ವಿಭಾಗದ ಎಸಿಪಿ ಎನ್.ವಿ.ಬರಮನಿಯವರಿಗೆ ನೀಡಲಾಗಿತ್ತು.

ಇದನ್ನೂ ಓದಿ | ತಲೆ ಕಡಿದರೂ ಗುವಾಹಟಿಗೆ ಹೋಗೊಲ್ಲ, ನಾಳೆ ಇ.ಡಿ. ಕಚೇರಿಗೂ ಹೋಗೊಲ್ಲ, ಅರೆಸ್ಟ್‌ ಮಾಡ್ಲಿ ಎಂದ ಸಂಜಯ್‌ ರಾವತ್‌

ಶಿವಾನಂದ ಕುಂಬಾರ್‌ ವಿರುದ್ಧ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (BUDS Act. 2019)ಯಡಿ ಕೇಸ್ ದಾಖಲಾಗಿದೆ. ಶಿವಾನಂದ ಕುಂಬಾರ್‌ ತನ್ನ ಹಾಗೂ ಕುಟುಂಬಸ್ಥರ ಹೆಸರಿನಲ್ಲಿ ಇದ್ದ ಆಸ್ತಿ, 20 ಲಕ್ಷ ರೂ. ನಗದನ್ನು ಜಪ್ತಿ ಮಾಡಲಾಗಿದೆ.‌ ಶಿವಾನಂದ ಕುಂಬಾರ್‌ಗೆ ಸೇರಿದ 7 ವಿವಿಧ ಬ್ಯಾಂಕ್‌ಗಳ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ | ದಕ್ಷಿಣ ಆಫ್ರಿಕಾದ ಪ್ರಭಾವಿ ಉದ್ಯಮಿಗಳಾದ ಭಾರತ ಮೂಲದ ಗುಪ್ತಾ ಸೋದರರು ಯುಎಇಯಲ್ಲಿ ಅರೆಸ್ಟ್‌ !

Exit mobile version