ವಿಜಯಪುರ: ನಗರದಲ್ಲಿ ಪಂಚರತ್ನ ಯಾತ್ರೆ ನಡೆದ ಬೆನ್ನಲ್ಲೇ ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜಾಳ (55) (Shivanand Patil Somajal) ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿಜಯಪುರ ನಗರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಶುಕ್ರವಾರ ನಡೆದಿತ್ತು. ರಥಯಾತ್ರೆಯಲ್ಲಿ ಶಿವಾನಂದ ಪಾಟೀಲ ಭಾಗಿಯಾಗಿ, ಬಳಿಕ ಮಧ್ಯಾಹ್ನ ಸಿಂದಗಿಗೆ ತೆರಳಿದ್ದರು. ಸಿಂದಗಿ ಪಟ್ಟಣದ ಪರಿಚಯಸ್ಥರ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಏಕಾಏಕಿ ಕುಸಿದು ಬಿದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಮಾಜಿ ಯೋಧ ಶಿವಾನಂದ ಸೋಮಜಾಳ ಅವರು ಸಿಂದಗಿ ತಾಲೂಕಿನ ಸೋಮಜಾಳ ಗ್ರಾಮದವರು. ಇವರು ಜ.18 ರಂದು ಸಿಂದಗಿಯಲ್ಲಿ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ ಆಯೋಜಿಸಿದ್ದರು. ಅಂದು ವೇದಿಕೆ ಮೇಲೆ ಯೋಧನಂತೆ ಹೋರಾಡಿ ಪಕ್ಷ ಗೆಲ್ಲಿಸುವುದಾಗಿ ಎಚ್‌ಡಿಕೆಗೆ ಮಾತು ಕೊಟ್ಟಿದ್ದರು. ಆದರೆ, ಸಮಾವೇಶ ನಡೆದ 3 ದಿನದಲ್ಲಿ ಮೃತಪಟ್ಟಿದ್ದಾರೆ.
ಹದಿನಾರು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ಸಿಂದಗಿ ಕ್ಷೇತ್ರದಲ್ಲಿ ರಾಜಕೀಯದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿದ್ದ ಅವರ ಹೆಸರನ್ನು ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಘೋಷಿಸಲಾಗಿತ್ತು. ಇವರಿಗೆ ಪತ್ನಿ ವಿಶಾಲಾಕ್ಷಿ, ಪುತ್ರ, ಪುತ್ರಿ ಇದ್ದಾರೆ.
ಇದನ್ನೂ ಓದಿ | Karnataka Election | ಅಭ್ಯರ್ಥಿ ಆಯ್ಕೆಗೆ ಸರ್ವೆ; ಹೆಚ್ಚು ಒಲವಿರುವವರಿಗೆ ಟಿಕೆಟ್ ಎಂದ ಮಾಜಿ ಸಿಎಂ ಯಡಿಯೂರಪ್ಪ