ಹಾವೇರಿ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಹಾವೇರಿ ಎಸ್‌ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಎಂ. ಹಿರೇಮಠ (MM Hiremath) ಅವರು ಪಕ್ಷದ ಟಿಕೆಟ್ ಕೈ ತಪ್ಪಿದ್ದರಿಂದ ತಮ್ಮ ಜಿಲ್ಲಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲೇ ಜಿಲ್ಲಾಡಳಿತ ಶಾಕ್ ನೀಡಿದೆ. ಅವರ ಎಸ್‌ಸಿ ಜಾತಿ ಪ್ರಮಾಣಪತ್ರವನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.
ಜಾತಿ ಪ್ರಮಾಣ ಪತ್ರ ರದ್ದು ಮಾಡಿ ಹಾವೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಬುಧವಾರ (ಮಾ. 29) ಬೆಂಬಲಿಗರ ಸಭೆ ನಡೆಸಿದ್ದ ಹಿರೇಮಠ, ಪಕ್ಷೇತರವಾಗಿ ಸ್ಪರ್ಧೆ ನಡೆಸುವ ಬಗ್ಗೆ ಒಲವು ತೋರಿದ್ದರು. ಆದರೆ, ಈಗ ಇವರು 2022ರಲ್ಲಿ ಹಾವೇರಿ ತಹಸೀಲ್ದಾರ್ ಮೂಲಕ ಬೇಡ ಜಂಗಮ ಎಸ್‌ಸಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದರು. ಈಗ ಇದನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಇದನ್ನೂ ಓದಿ: Karnataka Election: ಚುನಾವಣೆ ಘೋಷಣೆ ಬೆನ್ನಿಗೇ ಗರ್ಜಿಸಿದ ಕಾಂಗ್ರೆಸ್: ʼಮತ್ತೆ ಗರ್ಜಿಸಲಿದೆ ಕರ್ನಾಟಕʼ ಅಭಿಯಾನ ಆರಂಭ
ಕಡೆಗಣಿಸಿದ್ದಕ್ಕೆ ಪಕ್ಷ ತೊರೆದಿದ್ದ ಹಿರೇಮಠ
ನಾಲ್ಕು ವರ್ಷದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಹಾವೇರಿ ಎಸ್‌ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮಾಜಿ ಸಚಿವ ರುದ್ರಪ್ಪ ಲಮಾಣಿಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ತೊರೆದಿದ್ದರು. ಅಲ್ಲದೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದ್ದು, ಬೆಂಬಲಿಗರ ಸಭೆಯನ್ನೂ ನಡೆಸಿದ್ದರು.
ನಾಲ್ಕು ವರ್ಷದಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರಿಂದ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯಲ್ಲಿ ಯಾವ ರೀತಿಯ ಹೆಜ್ಜೆ ಇಡಬಹುದು ಎಂಬ ಲೆಕ್ಕಾಚಾರದಲ್ಲಿದ್ದರು. ಅಲ್ಲದೆ, ರಾಣೆಬೆನ್ನೂರು, ಬ್ಯಾಡಗಿಯಲ್ಲಿಯೂ ಅನೇಕ ಕಾಂಗ್ರೆಸ್ ಮುಖಂಡರು ಪಕ್ಷ ತೊರೆದು ಇವರ ಜತೆ ಬರಲು ಸಿದ್ಧರಿದ್ದಾರೆ ಎಂದು ಹೇಳಲಾಗಿದೆ.
ಮತ್ತೊಂದು ಲೆಕ್ಕಾಚಾರ
50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಅನುಭವಿ, ಹಿರಿಯ ರಾಜಕಾರಣಿ, ಮಾಜಿ ಸಚಿವ ಮನೋಹರ ತಹಶೀಲ್ದಾರ ಹಾನಗಲ್ ಟಿಕೆಟ್ ತಪ್ಪುತ್ತಿದ್ದಂತೆ ಅಸಮಾಧಾನಗೊಂಡು ಕಾಂಗ್ರೆಸ್ ತೊರೆಯಲು ಸಜ್ಜಾಗಿರುವುದರಿಂದ ಪಕ್ಷದ ಮತ ಅಲ್ಲಿಯೂ ಸಹ ಒಡೆಯಲಿದೆ. ಅಲ್ಲದೆ, ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ಕೊಟ್ಟಿಲ್ಲ ಎಂಬ ರೀತಿಯಲ್ಲಿ ಪ್ರಚಾರ ಮಾಡುವ ತಂತ್ರವನ್ನೂ ಹಿರೇಮಠ ಹೊಂದಿದ್ದಾರೆನ್ನಲಾಗಿದೆ.
ಜೆಡಿಎಸ್‌ನತ್ತ ಮುಖ ಮಾಡಿದರೇ ಮನೋಹರ್ ತಹಸೀಲ್ದಾರ್?
ಇತ್ತ ಕಾಂಗ್ರೆಸ್ ಟಿಕೆಟ್ ಕೈ ತಪ್ಪುತ್ತಿದ್ದಂತೆ ವ್ಯಗ್ರರಾಗಿರುವ ಮನೋಹರ್ ತಹಸೀಲ್ದಾರ್, ಬಿಜೆಪಿ ಇಲ್ಲವೇ ಜೆಡಿಎಸ್ ಸೇರ್ಪಡೆಗೊಳ್ಳಲು ಚಿಂತನೆ ನಡೆಸಿದ್ದಾರೆ. ಅಲ್ಲದೆ, ತಮಗೆ ಅನ್ಯಾಯ ಮಾಡಿದ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಜೆಡಿಎಸ್‌ನಿಂದ ಕಣಕ್ಕಿಳಿಯಲು ತಯಾರಿ ಮಾಡಿಕೊಳ್ಳುತ್ತಿದ್ದು, ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಮಾತುಕತೆ ಫಲಪ್ರದವಾದರೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಮುಂದಾಗಿದ್ದಾರೆನ್ನಲಾಗಿದೆ.
ನನಗೆ ಮೋಸ ಮಾಡಿದರು
ಇದು ನನಗೆ ಕೊನೇ ಚುನಾವಣೆಯಾಗಿತ್ತು. ಹೀಗಾಗಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದೆ. ನನಗೊಂದು ಅವಕಾಶ ಮಾಡಿಕೊಡಿ, 50 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿನಿಂದ ಕೆಲಸ ಮಾಡುತ್ತ ಬಂದಿದ್ದೇನೆ. 2018 , 2021ರಲ್ಲಿ ಟಿಕೆಟ್ ಕೊಡಲಿಲ್ಲ. ಎಂಎಲ್‌ಸಿ ಮಾಡುವ ಭರವಸೆ ನೀಡಿದ್ದರು. ಉಪ ಚುನಾವಣೆಯಲ್ಲಿ ಸಹಕಾರ ನೀಡುವಂತೆ ಕೋರಿದ್ದರು. ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿ ಮಾಡುವುದಾಗಿ ಹೇಳಿ ಬಳಿಕ ಸಲೀಂ ಅಹ್ಮದ್‌ಗೆ ಟಿಕೆಟ್ ಕೊಟ್ಟರು. ನನಗೆ ಮೋಸ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದ್ದರು.
ಮಾ. 30ರಂದು ತೀರ್ಮಾನ
ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದೆ. ನನ್ನ ಮಗನಿಗೆ ಟಿಕೆಟ್ ಕೇಳಿರಲಿಲ್ಲ. ನನಗೆ ಟಿಕೆಟ್ ನೀಡಲು ಆಗದಿದ್ದರೆ, ನನ್ನ ತಾಲೂಕಿನವರಿಗೆ ಯಾರಿಗಾದರೂ ಕೊಡಿ ಎಂದು ಹೇಳಿದ್ದೆ. ನನಗೂ ಟಿಕೆಟ್ ಕೊಡಲಿಲ್ಲ, ನನ್ನ ತಾಲೂಕಿನವರಿಗೂ ಕೊಡಲಿಲ್ಲ. ಈ ಸಾರಿ ಹೊರಗಿನವರಿಗೆ ಟಿಕೆಟ್ ಕೊಟ್ಟೆ ನಾವು ಚುನಾವಣೆಗೆ ಸಹಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆವು. ಈ ಹಿನ್ನೆಲೆಯಲ್ಲಿ ಮಾ. 30ರಂದು ನನ್ನ ಬೆಂಬಲಿಗರ ಸಭೆ ಕರೆದಿದ್ದು, ಅಲ್ಲಿ ನಿರ್ಧಾರ ಮಾಡುತ್ತೇನೆ. ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ. ಎಲ್ಲರ ಜತೆ ಸಂಪರ್ಕ ಮಾಡುವ ಅನಿವಾರ್ಯತೆ ಇದೆ. ಮುಂದೇನು ಮಾಡಬೇಕು ಎನ್ನುವ ಚಿಂತನೆ ಮಾಡುತ್ತಿದ್ದೇನೆ. ಬೆಂಗಳೂರಿಗೆ ಹೋಗಿ ಬೇರೆ ಬೇರೆ ನಾಯಕರನ್ನು ಭೇಟಿ ಮಾಡುತ್ತೇನೆ. ಅವರ ಕ್ಯಾಂಡಿಡೇಟ್ ಹೇಗೆ ಗೆಲ್ಲುತ್ತಾರೆ ಎಂಬುದನ್ನು ನಾವೂ ನೋಡ್ತೀವಿ ಎಂದು ಬಹಿರಂಗ ಎಚ್ಚರಿಕೆಯನ್ನು ನೀಡಿದ್ದರು.