Site icon Vistara News

Shorapur Election Result 2024: ಸುರಪುರದಲ್ಲಿ ಕಾಂಗ್ರೆಸ್‌ನ ರಾಜಾ ವೇಣುಗೋಪಾಲ ನಾಯಕ್‌ಗೆ ಜಯ

Shorapur Election Result 2024

Shorapur Election Result 2024: Raja Venugopal Naik of INC Wins Against BJP's Raju Gowda In By Election

ಸುರಪುರ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭೆ ಕ್ಷೇತ್ರದ ಫಲಿತಾಂಶ (Shorapur Election Result 2024) ಪ್ರಕಟವಾಗಿದ್ದು, ಕಾಂಗ್ರೆಸ್‌ನ ರಾಜಾ ವೇಣುಗೋಪಾಲ ನಾಯಕ್‌ (Raja Venugopal Naik) ಅವರು ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗದ ಮಾಹಿತಿಯಂತೆ ಕಾಂಗ್ರೆಸ್‌ನ ರಾಜಾ ವೇಣುಗೋಪಾಲ ನಾಯಕ್‌ ಅವರು 1,14,886 ಮತಗಳನ್ನು ಪಡೆದರೆ, ಬಿಜೆಪಿಯ ರಾಜುಗೌಡ (Raju Gowda) (ನರಸಿಂಹ ನಾಯಕ್) ಅವರು 96,566 ಮತಗಳನ್ನು ಪಡೆದು ಸೋಲುಂಡರು.

ವೇಣುಗೋಪಾಲ ನಾಯಕ್‌ ಅವರ ತಂದೆ ರಾಜಾ ವೆಂಕಟಪ್ಪ ಅವರು ಸುರಪುರ ಶಾಸಕರಾಗಿದ್ದರು. ಅವರು ಇದೇ ವರ್ಷದ ಫೆಬ್ರವರಿ 25ರಂದು ನಿಧನರಾದ ಹಿನ್ನೆಲೆಯಲ್ಲಿ ಸುರಪುರ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿತ್ತು. ಮೇ 7ರಂದು ಸುರಪುರದಲ್ಲಿ ಉಪ ಚುನಾವಣೆ ನಡೆದಿತ್ತು. ರಾಜಾ ವೆಂಕಟಪ್ಪ ನಾಯಕ ಅವರ ನಿಧನದ ಹಿನ್ನೆಲೆಯಲ್ಲಿ ಉಂಟಾಗಿದ್ದ ಅನುಕಂಪದ ಅಲೆ, ಅವರ ಕುರಿತು ಕ್ಷೇತ್ರದ ಜನರಿಗೆ ಇದ್ದ ಅಭಿಮಾನದ ಫಲವಾಗಿ ರಾಜಾ ವೇಣುಗೋಪಾಲ ನಾಯಕ್‌ ಅವರಿಗೆ ಗೆಲುವು ದಕ್ಕಿದೆ ಎಂದೇ ಹೇಳಲಾಗುತ್ತಿದೆ.

Election Results 2024

2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜಾ ವೇಣುಗೋಪಾಲ ನಾಯಕ್‌ ಅವರ ತಂದೆ ದಿವಂಗತ ರಾಜಾ ವೆಂಕಟಪ್ಪ ನಾಯಕ ಅವರು ರಾಜು ಗೌಡ ವಿರುದ್ಧ ‌25 ಸಾವಿರ ಮತಗಳ ಅಂತರದಲ್ಲಿ ಗೆಲುವ ಸಾಧಿಸಿದ್ದರು. ರಾಜಾ ವೆಂಕಟಪ್ಪ ನಾಯಕ ಅವರು 1,13,559 ಮತಗಳನ್ನು ಪಡೆದಿದ್ದರೆ, ರಾಜುಗೌಡ ಅವರು 88,336 ಮತಗಳನ್ನು ಮಾತ್ರ ಪಡೆಯಲು ಶಕ್ತರಾಗಿದ್ದರು. ಇದಕ್ಕೂ ಮೊದಲು ರಾಜು ಗೌಡ ಅವರು ಸುರಪುರ ಕ್ಷೇತ್ರದ ಶಾಸಕರಾಗಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ರಾಜು ಗೌಡ ಅವರು ರಾಜಾ ವೆಂಕಟಪ್ಪ ನಾಯಕ ಅವರ ವಿರುದ್ಧ ಸುಮಾರು 22 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ರಾಜು ಗೌಡ ಅವರು 1,04,426 ಮತಗಳನ್ನು ಪಡೆದಿದ್ದರು. ರಾಜಾ ವೆಂಕಟಪ್ಪ ನಾಯಕ ಅವರು 81,858 ಮತ ಪಡೆದಿದ್ದರು. ರಾಜಾ ವೆಂಕಟಪ್ಪ ನಾಯಕ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿದ್ದು, ಸುರಪುರ ವಿಧಾನಸಭೆ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: Narendra Modi : ವಾರಾಣಸಿಯಲ್ಲೂ ಮೋದಿ ಜನಪ್ರಿಯತೆ ಮಸುಕು; ಗೆಲುವಿನ ಅಂತರ ಕೇವಲ 1.5 ಲಕ್ಷ ಮತಗಳು

Exit mobile version