ಬೆಂಗಳೂರು: ತಮ್ಮ ಅವಧಿಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದ ಕರ್ನಾಟಕ ಸರ್ಕಾರದ ಸಾರಿಗೆ ವ್ಯವಸ್ಥೆಯನ್ನು ಈಗಿನ ಬಿಜೆಪಿ ಸರ್ಕಾರ ವಿಷ ಹಾಕಿ ಕೊಲ್ಲುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಬಲ್ಕ್ ಡೀಸೆಲ್ ಖರೀದಿಯ ಮೇಲೆ ಸಾರಿಗೆ ನಿಗಮಗಳಿಂದ ಹೆಚ್ಚುವರಿಯಾಗಿ ಕೇಂದ್ರ ಸರ್ಕಾರ 25 ರೂ. ವಸೂಲಿ ಮಾಡುತ್ತಿದೆ. ದೇಶದಲ್ಲಿಯೆ ಅತ್ಯುತ್ತಮ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನುಳ್ಳ ರಾಜ್ಯ ಕರ್ನಾಟಕವಾಗಿತ್ತು. 2013ರಿಂದ 2018ವರೆಗಿನ ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯ ಸಾರಿಗೆಯ ಜನಸ್ನೇಹಿ ಆಡಳಿತಕ್ಕಾಗಿ ಕೇಂದ್ರ ಸರ್ಕಾರವೇ ಹಲವು ಬಾರಿ ಪ್ರಶಸ್ತಿಗಳನ್ನು ನೀಡಿತ್ತು. ಸುವ್ಯವಸ್ಥೆಯಲ್ಲಿದ್ದ ರಾಜ್ಯದ ಸಾರಿಗೆ ವ್ಯವಸ್ಥೆಗೆ ಬಿಜೆಪಿ ಸರ್ಕಾರ ನಿಧಾನವಾಗಿ ವಿಷ ಕೊಟ್ಟು ಕೊಲ್ಲುತ್ತಿದೆ.
ರಾಜ್ಯದ ಕೆಎಸ್‌ಆರ್‌ಟಿಸಿಯ 3 ನಿಗಮಗಳು ಹಾಗೂ ಬಿಎಂಟಿಸಿಯಲ್ಲಿ ಸುಮಾರು 26 ಸಾವಿರ ಬಸ್‌ಗಳಿವೆ. ಪ್ರತಿದಿನ ಲಕ್ಷಾಂತರ ಕಾರ್ಮಿಕರು, ವಿದ್ಯಾರ್ಥಿಗಳು, ರೈತರು ಹಾಗೂ ಜನಸಾಮಾನ್ಯರು ಸರ್ಕಾರಿ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಸುಮಾರು 1,30,000 ನೌಕರರಿಗೆ ಸರ್ಕಾರದ ನಾಲ್ಕೂ ಸಾರಿಗೆ ನಿಗಮಗಳು ಉದ್ಯೋಗ ನೀಡಿವೆ. ಪ್ರತಿದಿನ ಸುಮಾರು 20-25 ಕೋಟಿ ರೂ. ಆದಾಯವಿದೆ. ಇಷ್ಟಿದ್ದರೂ ಬಿಜೆಪಿ ಸರ್ಕಾರವು ಸಮರ್ಥವಾಗಿ ಸಾರಿಗೆ ವ್ಯವಸ್ಥೆಯನ್ನು ನಿಭಾಯಿಸಲು ವಿಫಲವಾಗಿದೆ.
ಇದನ್ನೂ ಓದಿ | ಇಡಿ ಚಾರ್ಜ್‌ಶೀಟ್ ಸಲ್ಲಿಕೆಯಲ್ಲಿ ರಾಜಕಾರಣ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ
ಈ ನಿಗಮಗಳು ಖರೀದಿಸುವ ಪ್ರತಿ ಲೀಟರ್ ಡೀಸೆಲ್ ಮೇಲೆ ನರೇಂದ್ರ ಮೋದಿಯವರ ಸರ್ಕಾರ ಖಾಸಗಿಯವರಿಗಿಂತ 25 ರೂ. ಹೆಚ್ಚು ಸಂಗ್ರಹಿಸುತ್ತಿದೆ. ಬಲ್ಕ್ ಆಗಿ ಖರೀದಿಸುವವರು ಪ್ರತಿ ಲೀಟರ್ ಮೇಲೆ 25 ರೂ. ಹೆಚ್ಚು ಪಾವತಿಸಬೇಕು ಎಂಬ ನಿಯಮದಿಂದಾಗಿ ಈ ಸಮಸ್ಯೆ ಬಂದೊದಗಿದೆ. ಖಾಸಗಿಯವರಿಗೆ ಪ್ರತಿ ಲೀಟರ್ ಡೀಸೆಲ್ 88 ರೂ.ಗೆ ಲಭಿಸಿದರೆ, ಸರ್ಕಾರದ ನಿಗಮಗಳು 113 ರೂ. ಪಾವತಿಸಬೇಕಾಗಿದೆ. ಇದು ಮೋದಿಯವರ ಬಿಜೆಪಿ ಸರ್ಕಾರ ಜನ ಸಾಮಾನ್ಯರ ಸಾರಿಗೆಗೆ ಮಾಡುತ್ತಿರುವ ಕ್ಷಮಿಸಲಾಗದ ದ್ರೋಹ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸರ್ಕಾರಿ ಬಸ್ಸುಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ವಿತರಿಸಬೇಕಾದ ಹಾಗೂ ಡೀಸೆಲ್ ಮೇಲೆ ತೆರಿಗೆ ಮನ್ನಾ ಮಾಡಬೇಕಾದ ಮೋದಿ ಮತ್ತು ಬೊಮ್ಮಾಯಿಯವರ ಬಿಜೆಪಿ ಸರ್ಕಾರ ಜನರನ್ನು ಸುಲಿಗೆ ಮಾಡಲು ನಿಂತಿವೆ. ಜನಪರವಾಗಿ ಯೋಚಿಸುವವರು, ಸಾಮಾನ್ಯ ತಿಳುವಳಿಕೆ ಇರುವವರು ಮಾಡುವ ಕೆಲಸವೆ ಇದು?
ಸರ್ಕಾರಿ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಇಂಧನಕ್ಕೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ನೀಡಬೇಕು ಎಂದಿದ್ದಾರೆ.
ಸಿಬ್ಬಂದಿಯನ್ನು ಮರು ನೇಮಿಸಿ
ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕಳೆದ ಎರಡೂವರೆ ವರ್ಷಗಳಿಂದ ವೇತನ ಪರಿಷ್ಕರಣೆ ಆಗಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನೌಕರರು ರಾಜ್ಯದ ಇತರೆ ಸರ್ಕಾರಿ ನೌಕರರು ಪಡೆಯುತ್ತಿರುವ ವೇತನಗಳಿಗಿಂತ ಶೇ.40 ಕಡಿಮೆ ಪಡೆಯುತ್ತಿದ್ದಾರೆ. ಕಾರ್ಮಿಕರನ್ನು 10-12 ಗಂಟೆ ದುಡಿಸುತ್ತಿದ್ದಾರೆ. ಸರ್ಕಾರದ ಈ ಶೋಷಣೆಯನ್ನು ವಿರೋಧಿಸಿ ಕಳೆದ ವರ್ಷ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂದು ವಜಾ ಮಾಡಿದ್ದ ಸಿಬ್ಬಂದಿಗಳಲ್ಲಿ 1,500 ಜನರನ್ನು ಇದುವರೆಗೂ ಕೆಲಸಕ್ಕೆ ಸೇರಿಸಿಕೊಂಡಿಲ್ಲ.
ರಾಜ್ಯ ಸಾರಿಗೆ ನಿಗಮಗಳ ಸಿಬ್ಬಂದಿಗೆ ನೀಡಬೇಕಾದ ಸವಲತ್ತುಗಳನ್ನು ಕೂಡಲೆ ಬಿಡುಗಡೆ ಮಾಡಬೇಕು. ವಜಾ ಮಾಡಿರುವ ಸಿಬ್ಬಂದಿಯನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಹೆದ್ದಾರಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಶುಲ್ಕ ವಸೂಲಿಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು. ವಿದ್ಯಾರ್ಥಿ, ಕಾರ್ಮಿಕ ಹಾಗೂ ಇತರೆ ಎಲ್ಲಾ ಜನ ಸಾಮಾನ್ಯರಿಗೆ ಉತ್ತಮ ಸೇವೆಯನ್ನು ಕಡಿಮೆ ದರದಲ್ಲಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ಪೆಟ್ರೋಲ್ ಬಂಕ್‌ಗಳ ಮುಂದೆ ಬಿಎಂಟಿಸಿ ಬಸ್‌ಗಳ ಸರತಿ: ನಷ್ಟ ತಪ್ಪಿಸಲು ಉಪಾಯ