ಮೈಸೂರು: ಮೈಸೂರು ಅಭಿವೃದ್ಧಿಗೆ ಯಾರು ಹೆಚ್ಚು ಕೊಡುಗೆ ನೀಡಿದ್ದಾರೆ ಎಂಬ ಕುರಿತು ಬಹಿರಂಗ ಚರ್ಚೆಯ ವಿಚಾರದಲ್ಲಿ ಮೊದಲಿಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಜತೆಗೆ ಚರ್ಚಿಸಿ ಆನಂತರ ನನ್ನ ಬಳಿ ಚರ್ಚಿಸಲಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ಮೈಸೂರು ಅಭಿವೃದ್ಧಿ ಕುರಿತು ತಮ್ಮ ಬಳಿ ಚರ್ಚೆ ನಡೆಸಲಿ ಎಂದು ಸಿದ್ದರಾಮಯ್ಯ ಅವರಿಗೆ ಪ್ರತಾಪ್ ಸಿಂಹ ಸವಾಲೆಸೆದಿದ್ದರು. ಸಿದ್ದರಾಮಯ್ಯ ಅವರಿಗೂ ಮುನ್ನ ತಮ್ಮ ಬಳಿ ಚರ್ಚಿಸಲಿ ಎಂದು ಲಕ್ಷ್ಮಣ್ ದಿನಾಂಕ ನಿಗದಿ ಮಾಡಿದ್ದರು. ಆದರೆ ಪ್ರತಾಪ್ ಸಿಂಹ ಆಗಮಿಸದೆ, ಯುವ ಮೋರ್ಚಾ ಕಾರ್ಯಕರ್ತನನ್ನು ಕಳಿಸಿದ್ದರು. ಈ ವಿಚಾರದಲ್ಲಿ ಕತ್ತೆ, ಹಂದಿ ಎಂದು ಪರಸ್ಪರರ ವಿರುದ್ಧ ದೋಷಾರೋಪಣೆ ನಡೆಯುತ್ತಲೇ ಇದೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅನೇಕ ವಿಚಾರಗಳ ಕುರಿತು ಸಿದ್ದರಾಮಯ್ಯ ಮಾತನಾಡಿದ್ದಾರೆ.
ಪ್ರತಾಪ್ ಸಿಂಹ ಅವರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರತಾಪ್ ಸಿಂಹನಿಗೆ ಸತ್ಯ ಹೇಳಿಯೇ ಗೊತ್ತಿಲ್ಲ. ಅವನೊಬ್ಬ ಯಕಶ್ಚಿತ್ ರಾಜಕಾರಣಿ. ನಮ್ಮ ಪಕ್ಷದ ಲಕ್ಷ್ಮಣ್ ಸೇರಿದಂತೆ ಅನೇಕರು ಅವರಿಗೆ ಸವಾಲು ಹಾಕಿದ್ದಾರೆ, ಅವರ ಜತೆ ಚರ್ಚೆಗೆ ಹೋಗಲಿ.
ಇದನ್ನೂ ಓದಿ | ದಂಡು ಬಂತು, ದಾಳಿ ನಡೆಯಲಿಲ್ಲ: ಆಟೋದಲ್ಲಿ ಬಂದ ಲಕ್ಷ್ಮಣ್, ಹಂದಿ ಜತೆ ಮಾತಾಡಲ್ಲ ಎಂದ ಪ್ರತಾಪ್ ಸಿಂಹ
ನಾನು ಮುಖ್ಯಮಂತ್ರಿಯಾಗಿ 5 ವರ್ಷದಲ್ಲಿ ಮೈಸೂರು ನಗರಕ್ಕೆ ಏನು ಮಾಡಿದ್ದೇನೆ, ಪ್ರತಾಪ್ ಸಿಂಹ ಸಂಸದರಾಗಿ ಏನು ಮಾಡಿದ್ದಾರೆ ಚರ್ಚೆ ಮಾಡಲಿ. ಮಹಾರಾಣಿ ಕಾಲೇಜು ಕಟ್ಟಿಸಿದ್ದು, ಜಿಲ್ಲಾಸ್ಪತ್ರೆ, ಜಯದೇವ ಆಸ್ಪತ್ರೆ ಕಟ್ಟಿಸಿದ್ದು, ಹೆರಿಗೆ ಆಸ್ಪತ್ರೆ ಕಟ್ಟಿಸಿದ್ದು, ಜಯಚಾಮರಾಜೇಂದ್ರ ಪ್ರತಿಮೆ ನಿರ್ಮಾಣ ಮಾಡಿದ್ದು ಪ್ರತಾಪ್ ಸಿಂಹನಾ? ಮೊದಲು ಲಕ್ಷ್ಮಣ್ ಜೊತೆ ಚರ್ಚೆ ಮಾಡಿ ನಂತರ ನನ್ನ ಬಳಿ ಬರಲಿ ಎಂದರು.
ಜನಾಶೀರ್ವಾದದಿಂದ ಬಂದ ಸರ್ಕಾರವಲ್ಲ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನರ ಆಶೀರ್ವಾದದೊಂದಿಗೆ ಬಂದ ಸರ್ಕಾರ ಅಲ್ಲ, ಅನೈತಿಕವಾಗಿ ರಚನೆಯಾಗಿರುವ ಸರ್ಕಾರ ಎಂದ ಸಿದ್ದರಾಮಯ್ಯ, ಕಳೆದ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ, ನಾವು 80 ಹಾಗೂ ಜೆಡಿಎಸ್ 37 ಸ್ಥಾನಗಳನ್ನು ಗೆದ್ದಿತ್ತು. ಶೇಕಡಾವಾರು ಮತಗಳನ್ನು ನೋಡಿದಾಗ ನಮ್ಮ ಪಕ್ಷ ಹೆಚ್ಚು ಮತ ಪಡೆದಿತ್ತು, ನಾವು 38.14% ಮತಗಳನ್ನು ಪಡೆದಿದ್ದೆವು, ಬಿಜೆಪಿ 36.34% ಹಾಗೂ 18% ಮತಗಳನ್ನು ಜೆಡಿಎಸ್ ಪಡೆದಿತ್ತು. ನಾವು 1.8% ಮತಗಳನ್ನು ಹೆಚ್ಚು ಪಡೆದಿದ್ದರೂ ನಮಗೆ 80 ಸೀಟು ಹಾಗೂ ಬಿಜೆಪಿಗೆ 104 ಸೀಟು ಬಂದಿತ್ತು. ಆ ನಂತರ ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡಿ, ಶಾಸಕರನ್ನು ಕೊಂಡುಕೊಂಡು ಹಿಂಬಾಗಿಲಿನಿಂದ ಅಧಿಕಾರ ಹಿಡಿದಿದ್ದಾರೆ.
ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಬಡವರಿಗೆ ಅಕ್ಕಿ ಕೊಡುವುದನ್ನು ನಿಲ್ಲಿಸುತ್ತೇವೆ ಎಂದು ಇತ್ತೀಚೆಗೆ ಉಮೇಶ್ ಕತ್ತಿ ಅವರು ಹೇಳಿದ್ದಾರೆ. ಮಂತ್ರಿಮಂಡಲದಲ್ಲಿ ಅವರು ಮಾಡುವ ಚರ್ಚೆಯ ವಿಷಯವನ್ನು ಹೇಳಿದ್ದಾರೆ. ಇದಕ್ಕೆ 2 ಕಾರಣಗಳಿರಬಹುದು, ಒಂದು ಅಕ್ಕಿ ಕೊಡಲು ದುಡ್ಡಿಲ್ಲದೆ ಇರಬಹುದು, ಇನ್ನೊಂದು ಹಸಿದವರ ಮತ್ತು ಬಡವರ ಮೇಲೆ ಅವರಿಗೆ ವಿರೋಧ ಇರಬಹುದು ಎಂದರು.
ಗುತ್ತಿಗೆದಾರರ ಸಂಘದ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೆಂಪಣ್ಣ ಅವರ ಬಳಿ ದಾಖಲೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ನಿಮ್ಮ ಬಳಿ ಸರಿಯಾದ ದಾಖಲೆಗಳು ಇವೆಯಾ ಎಂದು ನಾನು ಕೆಂಪಣ್ಣ ಅವರನ್ನು ಕೇಳಿದೆ. ಅದಕ್ಕೆ ಕೆಂಪಣ್ಣನವರು, ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ನಮ್ಮ ಬಳಿಯಿರುವ ಎಲ್ಲ ದಾಖಲೆಗಳನ್ನು ತನಿಖೆ ವೇಳೆ ನೀಡುತ್ತೇವೆ, ಒಂದು ವೇಳೆ ನಾವು ಮಾಡಿರುವ ಆರೋಪವನ್ನು ಸಾಬೀತು ಮಾಡಲು ಆಗಿಲ್ಲ ಎಂದಾದರೆ ಯಾವುದೇ ರೀತಿಯ ಕಾನೂನಾತ್ಮಕ ಶಿಕ್ಷೆಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು.
ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕಿರುವ ಸಮಸ್ಯೆ ಏನು? ನಾವು ಪ್ರಾಮಾಣಿಕರು, ಯಾವ ಸಚಿವರು ನಯಾಪೈಸೆ ಲಂಚ ಪಡೆದಿಲ್ಲ ಎಂದು ಹೇಳುವ ಬಿಜೆಪಿ ನಾಯಕರು, ನಾನು ಒಂದು ರೂಪಾಯಿ ಲಂಚ ಮುಟ್ಟಿಲ್ಲ ಎನ್ನುವ ಬಸವರಾಜ ಬೊಮ್ಮಾಯಿ ಅವರು, ತಮ್ಮ ವಿರುದ್ಧ ಮಾಡಿರುವ ಆರೋಪ ಸುಳ್ಳು ಎಂದು ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಮುನಿರತ್ನ, ಲಂಚ ಎಂದರೆ ಏನೆಂದು ನಮಗೆ ಗೊತ್ತಿಲ್ಲ ಎನ್ನುವ ಸುಧಾಕರ್ ನ್ಯಾಯಾಂಗ ತನಿಖೆಗೆ ಯಾಕೆ ಒಪ್ಪುತ್ತಿಲ್ಲ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ | ಜುಲೈ 5ಕ್ಕೆ ಹಂದಿ ಹೊಡೆಯೋರನ್ನ ಕಳಿಸಬೇಡಿ ಎಂದ ಲಕ್ಷ್ಮಣ್: ಪ್ರತಾಪ್ ಸಿಂಹಗೆ ಮತ್ತೆ ಆಹ್ವಾನ