ಕೋಲಾರ: ʻಈ ವಿಧಾನಸಭಾ ಚುನಾವಣೆಯಲ್ಲಿ (Karnataka Election) ನಿಮಗೆ ಸುರಕ್ಷಿತ ಎನಿಸದೆ ಹೋದರೆ ಯಾವ ಕಾರಣಕ್ಕೂ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವುದು ಬೇಡ. ಮೈಸೂರಿನ ವರುಣ ಕ್ಷೇತ್ರದಿಂದಲೇ ಸ್ಪರ್ಧಿಸಿʼʼ ಎಂಬ ಸ್ಪಷ್ಟ ಸಲಹೆಯೊಂದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರಿಗೆ ನೀಡಿದ್ದಾರೆ ಎಂಬ ವಿಷಯ ಹರಿದಾಡುತ್ತಿದ್ದಂತೆ ಕೋಲಾರದಲ್ಲಿ ರಾಜಕೀಯ ಬಿಸಿ ಚರ್ಚೆ ಆರಂಭವಾಗಿದೆ. ಅಲ್ಲದೆ, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಮಾತನಾಡಿದ್ದು, ಶಾಸಕ ಶ್ರೀನಿವಾಸಗೌಡ, ಸಿದ್ದರಾಮಯ್ಯ ಬಂದರೆ ಮಾತ್ರ ಕೆಲಸ ಮಾಡುತ್ತೇನೆ, ಇಲ್ಲವಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಘೋಷಿಸಿದ್ದಾರೆ. ಇನ್ನು ಬಿಜೆಪಿ ಸಂಭಾವ್ಯ ಅಭ್ಯರ್ಥಿ ವರ್ತೂರು ಪ್ರಕಾಶ್, ಇಲ್ಲಿ ಬೆಂಕಿ ಹಚ್ಚಿದ ಹಾಗಲ್ಲ, ತಾಕತ್ತಿದ್ದರೆ ನೀವೇ ಬಂದು ಸ್ಪರ್ಧಿಸಿ ಎಂದು ಪಂಥಾಹ್ವಾನ ನೀಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್, ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ, ಬಿಡಲಿ ನನ್ನ ಕೆಲಸವನ್ನು ನಾನು ಮಾಡಿ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.
ರಾಜಕೀಯ ನಿವೃತ್ತಿ- ಶ್ರೀನಿವಾಸಗೌಡ
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯಿಂದ ಹಿಂದೆ ಸರಿಯುವ ವಿಚಾರ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಾಸಕ ಶ್ರೀನಿವಾಸಗೌಡ ಮುನಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸಗೌಡ, ಸಿದ್ದರಾಮಯ್ಯ ಬಂದರೆ ಮಾತ್ರ ಕೆಲಸ ಮಾಡುತ್ತೇನೆ. ಇಲ್ಲವಾದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ. ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ನೋಡಬೇಕು ಎಂಬ ಆಸೆ ನನಗೆ ಇತ್ತು. ನಾನಂತೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನಾನು ಅವರ ಜತೆ ಮಾತನಾಡುವುದಿಲ್ಲ. ಬೇಕಾದರೆ ಅವರೇ ಬಂದು ಮಾತನಾಡಿಸಲಿ. ಅವರ ಜತೆ ಮಾತನಾಡುವ ಅವಶ್ಯಕತೆ ಇಲ್ಲ. ನನ್ನನ್ನು ಕರೆದು ಮಾತನಾಡಿದ ಬಳಿಕ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದೇನೆ. ಈಗ ನನ್ನನ್ನು ಏನೂ ಕೇಳದೆ ಈ ನಿರ್ಧಾರ ತೆಗೆದುಕೊಂಡರೆ ಮಾತನಾಡುವ ಅವಶ್ಯಕತೆ ಇಲ್ಲ. ನಾನು ಅವರಷ್ಟು ದೊಡ್ಡ ಮಟ್ಟದಲ್ಲಿ ರಾಜಕೀಯವಾಗಿ ಬೆಳೆದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Elections: ದಾಖಲೆ ಸಿಕ್ಕಿದೆ, ಮಂಡ್ಯದಲ್ಲಿ ಉರಿ ಗೌಡ-ನಂಜೇಗೌಡ ಪ್ರತಿಮೆ ಸ್ಥಾಪನೆ ಮಾಡ್ತೇವೆ ಎಂದ ಶೋಭಾ ಕರಂದ್ಲಾಜೆ
ಬೆಂಕಿಯಲ್ಲಿ ನೀನೇ ಬೇಯಿ- ವರ್ತೂರು ಪ್ರಕಾಶ್
ಸಿದ್ದರಾಮಯ್ಯ, ನೀನು ಯೂಟರ್ನ್ ಹೊಡೆಯಬೇಡ. ಈಗಾಗಲೇ ಕೋಲಾರದಲ್ಲಿ ಬೆಂಕಿ ಹಚ್ಚಿದ್ದೀಯಾ, ಈಗ ಯೂಟರ್ನ್ ಹೊಡೆದರೆ ಹೇಗೆ? ಬಾ ನೀನೇ ಹಚ್ಚಿದ ಬೆಂಕಿಯಲ್ಲಿ ನೀನೇ ಬೇಯಿ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಏಕವಚನದಲ್ಲಿಯೇ ಪಂಥಾಹ್ವಾನ ನೀಡಿದ್ದಾರೆ. ನಿನ್ನಿಂದ ಅದೆಷ್ಟು ಜನಕ್ಕೆ ನೋವಾಗಿದೆ. ಕಷ್ಟಗಳನ್ನು ಅನುಭವಿಸಿದ್ದಾರೆ. ಅವರೆಲ್ಲ ನಿನ್ನ ನಾಮಪತ್ರ ಹಾಕುವುದಕ್ಕಾಗಿ ಕಾಯುತ್ತಿದ್ದಾರೆ. ಈಗ ನೀನು ಯೂಟರ್ನ್ ಹೊಡೆಯುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಕೋಲಾರಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಏನು? ಕೋಲಾರಕ್ಕೂ ಅವರಿಗೂ ಏನು ಸಂಬಂಧ? ನಾನು ಕ್ಷೇತ್ರದಲ್ಲಿ ನಿರಂತರ ಕೆಲಸ ಮಾಡಿದ್ದೇನೆ. ನನ್ನ ಕೆಲಸವೇ ನನಗೆ ಶ್ರೀರಕ್ಷೆ. ಸಿದ್ದರಾಮಯ್ಯ ಕೋಲಾರಕ್ಕೆ ಬರಬೇಕು. ಅವರು ಬಂದರೆ ನನ್ನ ಲೀಡ್ ಜಾಸ್ತಿ ಆಗುತ್ತೆ. 50 ಸಾವಿರ ಲೀಡ್‌ನಲ್ಲಿ ಗೆಲ್ಲುತ್ತೇನೆ. ಅವರನ್ನು ಸೋಲಿಸಲು ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಸೋಲಿಸಲು ಏನು ಬೇಕೋ ಅದನ್ನು ಮಾಡುತ್ತಿದ್ದಾರೆ. ಬನ್ನಿ ಎಂದು ಕರೆಯುತ್ತಿದ್ದಾರೆ. ಒಳಗೊಳಗೇ ಏನು ಬೇಕೋ ಅದನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಹಿತೈಷಿಗಳ ಸಂಖ್ಯೆ ಜಾಸ್ತಿ ಇದೆ. ಅವರನ್ನು ಮುಗಿಸಲು ಅವರೇ ಸಾಕು. ಸಿದ್ದರಾಮಯ್ಯ ನನ್ನ ವಿರುದ್ಧ ನಿಲ್ಲಬೇಕು. ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಅವರು ಹಾಗೂ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುನಿರತ್ನ ನಿರ್ಮಾಣ, ಸಿ.ಎನ್. ಅಶ್ವತ್ಥನಾರಾಯಣ್ ಕಥೆ; ಮೇ 18ರಂದು ಉರಿಗೌಡ- ನಂಜೇಗೌಡ ಸಿನಿಮಾಕ್ಕೆ ಮುಹೂರ್ತ!
ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ, ಬಿಡಲಿ- ಶ್ರೀನಾಥ್
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂಬ ಸುದ್ದಿ ನನ್ನ ಗಮನಕ್ಕೆ ಬಂದಿದೆ. ಅವರು ಸ್ಪರ್ಧೆ ಮಾಡಲಿ, ಬಿಡಲಿ. ಈಗಾಗಲೇ ಪಕ್ಷದ ಶಾಸಕಾಂಗ ನಾಯಕ ಎಚ್.ಡಿ. ಕುಮಾರಸ್ವಾಮಿ ಟಿಕೆಟ್ ಘೋಷಣೆ ಮಾಡಿದ್ದಾರೆ. ನಾನು ನಾಲ್ಕೈದು ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನಾನು ರೈತರ ಮಗ, ಸಾಮಾಜಿಕ ಕಾರ್ಯಕರ್ತನಾಗಿದ್ದೇನೆ. ನಾನು ಕೋಲಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಎಲ್ಲ ವರ್ಗಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಜಾತಿ, ಮತ, ಪಂಥ ಭೇದವಿಲ್ಲದೆ ಎಲ್ಲರೂ ನನ್ನ ಜತೆ ಇದ್ದಾರೆ. ಸಾಂಪ್ರದಾಯಿಕ ಮತಗಳು ನಮ್ಮ ಜತೆಗಿವೆ. ಸಿದ್ದರಾಮಯ್ಯ ಸ್ಪರ್ಧೆಯಿಂದ ಹೆದರಿಕೆಯಾಗಿಲ್ಲ. ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದೆ. ಯಾವುದೇ ಗೊಂದಲ, ಗಲಿಬಿಲಿ ಇಲ್ಲ. ನಾನು ಸ್ಪಷ್ಟವಾಗಿದ್ದೇನೆ. ಗೆಲುವು ಸಾಧಿಸುತ್ತೇನೆ ಎಂದು ಕೋಲಾರದ ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್. ಶ್ರೀನಾಥ್ ಹೇಳಿದ್ದಾರೆ.