ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಕ್ಷೇತ್ರವೇ ಇಲ್ಲ ಎಂಬ ಬಿಜೆಪಿ ನಾಯಕರ ಮಾತಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನನಗೆ ಕ್ಷೇತ್ರವೇ ಇಲ್ಲದೆ ಹೋದರೆ ನನ್ನನ್ನು ಬೇರೆ ಕಡೆಗಳಲ್ಲಿಂದ ಬಂದು ಇಲ್ಲಿಂದಲೇ ಸ್ಪರ್ಧೆ ಮಾಡಿ ಎಂದು ಕರೆಯುತ್ತಾರ? ಎಂದರು.
ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಜನರು ಒತ್ತಾಯ ಮಾಡುತ್ತಿದ್ದಾರೆ. ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಿ ಸಾವಿರಾರು ಜನ ಮಹಿಳೆಯರು ಬಂದು ನಮ್ಮ ಮುಂದೆ ಕುಳಿತುಕೊಳ್ಳುತ್ತೇವೆ ಎಂದು ಪತ್ರ ಬರೆದಿದ್ದಾರೆ. ಆದರೆ ನನ್ನ ಯೋಚನೆ ಬೇರೆ ಇದೆ.
ಪ್ರತಿ ವಾರಕ್ಕೊಮ್ಮೆ ಬಾದಾಮಿ ಕ್ಷೇತ್ರಕ್ಕೆ ಭೇಟಿನೀಡಿ, ಕಾರ್ಯಕರ್ತರನ್ನು ಬೇಟಿಯಾಗಿ, ಜನರ ಸಮಸ್ಯೆಗಳಿಗೆ ತತ್ ಕ್ಷಣದಲ್ಲಿ ಸ್ಪಂದನೆ ನೀಡಬೇಕಿತ್ತು. ಆದರೆ ಅದು ನನ್ನಿಂದ ಸಾಧ್ಯವಾಗುವುದಿಲ್ಲ. ನೀವು ನಿರಂತರ ಭೇಟಿ ನೀಡದಿದ್ದರೂ ಪರವಾಗಿಲ್ಲ ಇಲ್ಲಿಂದಲೇ ಸ್ಪರ್ಧೆಮಾಡಿ ಎಂದು ಜನ ಹೇಳಬಹುದು ಆದರೆ ನನ್ನ ಮನಸು ಇದಕ್ಕೆ ಒಪ್ಪುತ್ತಿಲ್ಲ.
ನಾನು ಬಾದಾಮಿಗೆ ಹೋಗದೆ ಎರಡು ತಿಂಗಳು ಕಳೆದಿದೆ. ಮಂಗಳವಾರ ಭೇಟಿ ನೀಡಬೇಕು ಎಂದುಕೊಂಡಿದ್ದೆ. ಆದರೆ ಬೇರೆ ಯಾವುದೋ ತುರ್ತು ಕೆಲಸ ಬಂದಿರುವುದರಿಂದ ನಾಳೆಯೂ ಹೋಗಲು ಆಗುತ್ತಿಲ್ಲ ಎಂದರು.
ಕೋಲಾರದಿಂದ ಸ್ಪರ್ಧೆ ಮಾಡಿ ಎಂದು ಜನರು ಒತ್ತಾಯ ಮಾಡುತ್ತಿದ್ದಾರೆ. ವರುಣಾದಿಂದ ಸ್ಪರ್ಧೆ ಮಾಡಿ ಎಂದು ನನ್ನ ಪುತ್ರ ಯತೀಂದ್ರ ಹೇಳುತ್ತಿದ್ದಾರೆ, ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡುವಂತೆ ಜಮೀರ್ ಅಹ್ಮದ್ ಕರೆಯುತ್ತಿದ್ದಾರೆ. ಹೀಗೆ ಬೇರೆ ಬೇರೆ ಕಡೆಗಳಿಂದ ಸ್ಪರ್ಧೆಗೆ ಆಹ್ವಾನ ಬರುತ್ತಿದೆ. ಎಲ್ಲಿಂದ ನಿಲ್ಲಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದರು.
ತಮ್ಮ ಮೇಲೆ ಆರೋಪ ಇರುವುದರಿಂದ ಚುನಾವಣೆಗೆ ಸ್ಪರ್ಧೆ ಮಾಡಬಾರದು ಎಂಬ ಎದುರಾಳಿ ಪಕ್ಷದ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಮಿತ್ ಶಾ ಅವರು ಕೊಲೆ ಆರೋಪಿ ಆಗಿರಲಿಲ್ವಾ? ಗಡಿಪಾರಾಗಿದ್ದ ಅವರು ದೇಶದ ಗೃಹ ಸಚಿವರಾಗಿದ್ದಾರೆ. ಕೊಲೆ ಆರೋಪ ಇರುವವರು ಬೇಕಾದಷ್ಟು ಜನ ಶಾಸಕರಾಗಿದ್ದಾರೆ, ಸಂಸದರಾಗಿದ್ದಾರೆ. ಎಲ್ಲಿಯವರೆಗೂ ಅವರು ಅಪರಾಧಿ ಎಂದು ಸಾಬೀತಾಗುವುದಿಲ್ಲವೋ ಅಲ್ಲಿಯವರೆಗೆ ಅವರು ಅಮಾಯಕರು. ಅಪರಾಧಿ ಸ್ಥಾನದಲ್ಲಿ ಇರುವವರು ತಪ್ಪಿತಸ್ಥರಲ್ಲ ಎಂದು ಕ್ರಿಮಿನಲ್ ಕಾನೂನು ಹೇಳುತ್ತದೆ ಎಂದರು.
ಸಿದ್ದರಾಮಯ್ಯ ಒಬ್ಬಂಟಿಯಾಗಿದ್ದಾರೆ ಎಂಬ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ, ಸಿ.ಎಂ. ಇಬ್ರಾಹಿಂ ನನ್ನ ಒಳ್ಳೆಯ ಗೆಳೆಯ ಆದರೆ ಅವರು ನಮ್ಮನ್ನು ಬಿಟ್ಟು ಜೆಡಿಎಸ್‌ಗೆ ಹೊರಟು ಹೋಗಿ ಅಧ್ಯಕ್ಷರಾಗಿದ್ದಾರೆ.
ಅವರು ಭದ್ರಾವತಿಯಿಂದ ಬೇಕಾದರೆ ಸ್ಪರ್ಧೆ ಮಾಡಬಹುದು, ಅಲ್ಲಿ ಅಪ್ಪಾಜಿ ಗೌಡ ಅವರು ತೀರಿಹೋಗಿದ್ದಾರೆ. ನಾನು ಎಲ್ಲಿಂದ ಚುನಾವಣೆಗೆ ನಿಲ್ಲಬೇಕು ಎಂದು ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ, ಜೆಡಿಎಸ್ ಪಕ್ಷ ಅಲ್ಲ. ಆತ್ಮೀಯನಾಗಿ ಬೇಕಾದರೆ ವೈಯಕ್ತಿಕವಾಗಿ ಭೇಟಿ ಮಾಡಿ ಸಲಹೆ ನೀಡಲಿ. ಹಾಲಿ ಶಾಸಕರ ಟಿಕೆಟ್ ತಪ್ಪಿಸಿ ಇಬ್ರಾಹಿಂ ಅವರಿಗೆ ಭದ್ರಾವತಿಯಲ್ಲಿ ಟಿಕೆಟ್ ನೀಡಿದ್ದೆವು. ಆದರೆ ಭದ್ರಾವತಿಯಲ್ಲಿ ಡೆಪಾಸಿಟ್ ಕಳೆದುಕೊಂಡಿದ್ದರು ಅಂದರೆ ಅವರ ಲೆಕ್ಕಾಚಾರ ಸರಿಯಿಲ್ಲ ಎಂದರ್ಥವಲ್ವಾ? ನಾನು ಒಬ್ಬಂಟಿಗನಾಗಿದ್ದರೆ ನನ್ನ ಜೊತೆ ಇಷ್ಟೊಂದು ಜನ ಶಾಸಕರು, ಪಕ್ಷದ ಹಿರಿಯ ನಾಯಕರು, ಎಲ್ಲಾ ಜಾತಿ ಧರ್ಮಗಳ ನಾಯಕರು ಇದ್ದಾರೆ, ಒಬ್ಬಂಟಿಯಾಗಿದ್ದರೆ ಇವರೆಲ್ಲ ನನ್ನ ಜತೆ ಇಲ್ಲಿ ಇರುತ್ತಿದ್ದರಾ? ಎಂದರು.
ಇದನ್ನೂ ಓದಿ | ಬೀದಿಯಲ್ಲಿ ಬಿದ್ದವರನ್ನು ಬಾದಾಮಿಗೆ ತಂದವರಾರು?: ಸಿದ್ದರಾಮಯ್ಯ ಕುರಿತು ಸಿ.ಎಂ. ಇಬ್ರಾಹಿಂ ಪ್ರಶ್ನೆ