ಬೆಂಗಳೂರು: ಅನೇಕ ದಿನಗಳಿಂದ ನಡೆಯುತ್ತಿದ್ದ ಚರ್ಚೆಯೊಂದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಪ ಮಟ್ಟಿಗಿನ ತೆರೆ ಎಳೆದಿದ್ದಾರೆ. ತಾವು ಕಳೆದ ಬಾರಿ ಕೂದಲೆಳೆ ಅಂತರದಲ್ಲಿ ಜಯಿಸಿ ರಾಜಕೀಯ ಪುನರ್ಜನ್ಮ ನೀಡಿದ್ದ ಬಾದಾಮಿ ವಿಧಾನಸಭೆ ಕ್ಷೇತ್ರದಿಂದ ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಘೋಷಣೆ ಮಾಡಿದ್ದಾರೆ.
ಇದೇ ವೇಳೆ, ತಮ್ಮ ತವರು ಕ್ಷೇತ್ರ ವರುಣಾ-ಚಾಮುಂಡೇಶ್ವರಿಯಲ್ಲೂ ಅಲ್ಲದೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ʼನಾಮಪತ್ರʼ ಸಲ್ಲಿಸಲು ಆಗಮಿಸುತ್ತೇನೆ ಎಂದಿದ್ದಾರೆ. ಅಂದರೆ ಇದೇ ಕ್ಷೇತ್ರದೆಲ್ಲಿ ಸ್ಪರ್ಧೆಯ ಮುನ್ಸೂಚನೆ ನೀಡಿದ್ದಾರೆ.
ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಅವಕಾಶವಿದ್ದರೂ ಅಲ್ಲಿನ ಗೆಲುವು ಅಷ್ಟು ಸುಲಭವಲ್ಲ ಎನ್ನುವುದು ಕಾಂಗ್ರೆಸ್ ಪಕ್ಷದಲ್ಲಿಯೇ ಕೇಳಿಬರುತ್ತಿರುವ ಮಾತು. ಕೋಲಾರ ಜಿಲ್ಲೆ ಒಟ್ಟಾರೆಯಾಗಿ ದಲಿತ ಪ್ರಾಬಲ್ಯವಿರುವ ಕ್ಷೇತ್ರ. ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು ದಲಿತ ಮೀಸಲು ಕ್ಷೇತ್ರಗಳಾಗಿರುವುದೇ ಇದಕ್ಕೆ ಸಾಕ್ಷಿ.
ಕು.ಮು.ದ. ಕಾಂಬಿನೇಷನ್
ಕೋಲಾರ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರ ಅಲ್ಲವಾದರೂ ಇಲ್ಲಿಯೂ ದಲಿತರ ಸಂಖ್ಯೆ ಹೆಚ್ಚಾಗಿದೆ. ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳ ಸುಮಾರು 60 ಸಾವಿರ ಮತದಾರರಿದ್ದಾರೆ ಎನ್ನಲಾಗುತ್ತಿದೆ. ಎರಡನೇ ಸ್ಥಾನದಲ್ಲಿ ಮುಸ್ಲಿಮರಿದ್ದು, ಸುಮಾರು 40 ಸಾವಿರ ಮತಗಳಿವೆ. ಮೂರನೇ ಸ್ಥಾನದಲ್ಲಿ ಒಕ್ಕಲಿಗರು ( 30 ಸಾವಿರ) ಹಾಗೂ ನಾಲ್ಕನೇ ಸ್ಥಾನದಲ್ಲಿ ಕುರುಬ ಸಮುದಾಯ (20 ಸಾವಿರ) ಇದೆ.
ತಾವು ಸಿಎಂ ಆಗಿದ್ದಾಗ ಎಸ್‌ಸಿಎಸ್‌ಟಿ ಸಮುದಾಯಕ್ಕೆ ನೀಡಿದ ಸೌಲಭ್ಯಗಳಿಂದಾಗಿ ಆ ಸಮುದಾಯ ತಮ್ಮ ಕೈ ಹಿಡಿಯುತ್ತದೆ, ಟಿಪ್ಪು ಜಯಂತಿ ಸೇರಿ ಅನೇಕ ವಿಚಾರಗಳಿಂದ ಮುಸ್ಲಿಂ ಸಮುದಾಯಕ್ಕೆ ಫೇವರಿಟ್ ಆಗಿದ್ದೇನೆ ಎಂದು ಸಿದ್ದರಾಮಯ್ಯ ನಂಬಿದ್ದಾರೆ. ಇನ್ನು ಕುರುಬ ಸಮುದಾಯ ತಮ್ಮನ್ನು ಬಿಟ್ಟುಕೊಡುವುದೇ ಇಲ್ಲ ಎನ್ನುವ ಖಾತ್ರಿ. ಕುರುಬ-ಮುಸ್ಲಿಂ-ದಲಿತ (ಕು.ಮು.ದ) ಕಾಂಬಿನೇಷನ್‌ನಲ್ಲಿ ಗೆದ್ದುಬರಬಹುದು ಎಂದು ಲೆಕ್ಕ ಹಾಕಿದ್ದಾರೆ.
ಆದರೆ ಪ್ರಮುಖವಾಗಿ ಒಕ್ಕಲಿಗ ಸಮುದಾಯ ಸಿದ್ದರಾಮಯ್ಯ ವಿರುದ್ಧ ಮತ ಚಲಾಯಿಸುವ ಸಾಧ್ಯತೆಯಿದೆ. ಅದರಲ್ಲೂ ಜೆಡಿಎಸ್ ಅಥವಾ ಬಿಜೆಪಿಯಿಂದ ಪ್ರಬಲ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇ ಆದರೆ ಅಷ್ಟೂ ಮತಗಳು ಸಿದ್ದರಾಮಯ್ಯ ಅವರಿಂದ ದೂರಾಗುತ್ತವೆ.
ದಲಿತ ಮತಗಳ ಲೆಕ್ಕಾಚಾರ
ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕ್ಷೇತ್ರದಲ್ಲಿ ಬಿಜೆಪಿ ಸಂಸದ ಮುನಿಸ್ವಾಮಿ ಸಾಕಷ್ಟು ಹಿಡಿತ ಸಾಧಿಸಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರವು ಜಿಲ್ಲೆಯ ಕೇಂದ್ರ ಆಗಿರುವುದರಿಂದ ಸಾಕಷ್ಟು ಅನುದಾನಗಳನ್ನು ತಂದು ಅಭಿವೃದ್ಧಿ ಕಾರ್ಯವನ್ನೂ ಮಾಡಿದ್ದಾರೆ. ದಲಿತ ಮತಗಳನ್ನು ಸಾಕಷ್ಟು ತಮ್ಮ ಜತೆಗೆ ಗಳಿಸಿಕೊಂಡಿದ್ದಾರೆ. ಇದರ ಜತೆಗೆ ಇತ್ತೀಚೆಗೆ ಬಿಜೆಪಿ ಸರ್ಕಾರವು ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ದಲಿತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದರೂ ಸಾಕಷ್ಟು ಪ್ರಮಾಣದಲ್ಲಿ ದಲಿತ ಮತಗಳು ಕಡಿತ ಆಗುತ್ತವೆ.
ಮುನಿಯಪ್ಪ ಮುನಿಸು
ಸತತ ಏಳು ಬಾರಿ ಕ್ಷೇತ್ರದ ಸಂಸದರಾಗಿರುವ ಕೆ.ಎಚ್. ಮುನಿಯಪ್ಪ ಹಾಗೂ ಸಿದ್ದರಾಮಯ್ಯ ನಡುವೆ ಸ್ನೇಹ ಅಷ್ಟಕ್ಕಷ್ಟೆ. ಇನ್ನೇನು ಮುನಿಯಪ್ಪ ಕಾಂಗ್ರೆಸ್ ತೊರೆಯುತ್ತಾರೆ ಎನ್ನುವ ಹಂತ ತಲುಪಿದ್ದಾಗ ಡಿ.ಕೆ. ಶಿವಕುಮಾರ್ ಸೇರಿ ಅನೇಕರು ಮನವೊಲಿಸಿದ್ದಾರೆ. ಇದೀಗ ಗುಜರಾತ್ ಚುನಾವಣೆ ನೆಪವೊಡ್ಡಿ, ಸಿದ್ದರಾಮಯ್ಯ ಆಗಮನದ ದಿನವೇ ಮುನಿಯಪ್ಪ ದೂರ ಉಳಿದಿದ್ದಾರೆ.
ಚುನಾವಣೆಯಲ್ಲಿ ಮುನಿಯಪ್ಪ ಬಣದಿಂದ ಸಿದ್ದರಾಮಯ್ಯ ಅವರಿಗೆ ಬೆಂಬಲ ಸಿಗುವ ಸಾಧ್ಯತೆಗಳು ಅತ್ಯಂತ ಕಡಿಮೆ. ಈ ವಿಚಾರವೂ ಸಿದ್ದರಾಮಯ್ಯ ಗೆಲುವಿನಲ್ಲಿ ಅಡೆತಡೆಯನ್ನು ತಂದೊಡ್ಡಬಹುದು.
ಸುತ್ತಮುತ್ತಲ ಶಾಸಕರಿಗೆ ಲಾಭ?
ಕೋಲಾರದ ಆರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರಿದ್ದಾರೆ. ಕೆ.ಆರ್. ರಮೇಶ್ ಕುಮಾರ್ ಸೇರಿ ಅನೇಕರಿಗೆ ಆಡಳಿತ ವಿರೋಧಿ ಅಲೆ ಜೋರಾಗಿದೆ. ಸತತ ಗೆಲ್ಲುತ್ತಿರುವ ಕಾರಣ ಸೃಷ್ಟಿಯಾಗಿರುವ ವಿರೋಧಿ ಅಲೆಯನ್ನು ಹೇಗಾದರೂ ಮೆಟ್ಟಿನಿಲ್ಲಬೇಕು ಎಂದು ಎಲ್ಲ ಶಾಸಕರೂ ಚಿಂತನೆ ನಡೆಸಿದ್ದಾರೆ. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಅದರ ಪ್ರಭಾವ ಸುತ್ತಮುತ್ತಲಿನ ಕ್ಷೇತ್ರಗಳ ಮೇಲೆ ಆಗುತ್ತದೆ. ಅದರಿಂದ ತಮ್ಮ ಗೆಲುವೂ ಸುಲಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಇದೇ ಕಾರಣಕ್ಕೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಬೇಕು ಎಂದು ಪದೇಪದೇ ಒತ್ತಾಯ ಮಾಡುತ್ತಲಿದ್ದಾರೆ. ಸಿದ್ದರಾಮಯ್ಯ ಪ್ರಭಾವದಿಂದ ಸುತ್ತಲಿನ ಕ್ಷೇತ್ರಗಳಿಗೆ ಲಾಭವಾಗಬಹುದು. ಆದರೆ ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ. ದೇವೇಗೌಡ, ಬಾದಾಮಿ ಕ್ಷೇತ್ರದಿಂದ, ಆ ಕ್ಷೇತ್ರದ ಪ್ರಬಲ ಸಮುದಾಯದ ಬಿ. ಶ್ರೀರಾಮುಲು ಅವರನ್ನು ಕಣಕ್ಕಿಳಿಸಿ ಸಿದ್ದರಾಮಯ್ಯ ಬೇರೆಡೆ ಸಂಚಾರ ಮಾಡದಂತೆ ನಿರ್ಬಂಧಿಸಲಾಗಿತ್ತು. ಅದೇ ರೀತಿ ಕೋಲಾರದಲ್ಲೂ ಒಕ್ಕಲಿಗ ಅಥವಾ ದಲಿತ ಸಮುದಾಯದ ಪ್ರಬಲ ಅಭ್ಯರ್ಥಿಯನ್ನು ಬಿಜೆಪಿ ಅಥವಾ ಜೆಡಿಎಸ್ ಕಣಕ್ಕಿಳಿಸಿದರೆ ಸಿದ್ದರಾಮಯ್ಯ ಲಾಕ್ ಆಗಿಬಿಡುತ್ತಾರೆ.
ಎರಡನೇ ಕ್ಷೇತ್ರದ ಆಯ್ಕೆ?
ಕೋಲಾರದಿಂದ ತಾವು ಸ್ಪರ್ಧೆ ಮಾಡುವುದಾಗಿ ಸಿದ್ದರಾಮಯ್ಯ ಪರೋಕ್ಷ ಮುನ್ಸೂಚನೆ ನೀಡಿದ್ದರೂ ಮತ್ತೊಂದು ಸೇಫ್ ಕ್ಷೇತ್ರವನ್ನು ಹುಡುಕಿಕೊಳ್ಳುವುದು ಖಚಿತ ಎಂಬ ಮಾತುಗಳು ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿವೆ. ಆ ರೀತಿ ನೋಡಿದರೆ ವರುಣ ಅತ್ಯಂತ ಸುರಕ್ಷಿತ ಕ್ಷೇತ್ರ. ಕೋಲಾರದ ಜತೆಗೆ ವರುಣಾದಲ್ಲಿ ಸ್ಪರ್ಧಿಸಬಹುದು. ಕೋಲಾರದಲ್ಲಿ ಗೆದ್ದ ನಂತರ ವರುಣಾಕ್ಕೆ ರಾಜೀನಾಮೆ ನೀಡಿ ಮತ್ತೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡುಬರಬಹುದು.
ಹಾಗೇನಾದರೂ ಕೋಲಾರದಲ್ಲಿ ಸೋತರೆ, ವರುಣಾದಲ್ಲಿ ಗೆಲ್ಲುವುದರಿಂದ ಮುಂದಿನ ಭವಿಷ್ಯಕ್ಕೆ ಧಕ್ಕೆಯಾಗುವುದಿಲ್ಲ. ಇದೇ ಕೊನೆಯ ಚುನಾವಣೆ ಆಗಿರುವುದರಿಂದ ಮುಂದೆ ಹೇಗಿದ್ದರೂ ಯತೀಂದ್ರ ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಇದ್ದಾರೆ ಎನ್ನಲಾಗಿದೆ. ಆದರೆ ಕಳೆದ ಬಾರಿ ಸಿಎಂ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಅವರಿಗೆ ಎರಡು ಕಡೆ ಟಿಕೆಟ್ ನೀಡಲು ಹೈಕಮಾಂಡ್ ಒಪ್ಪಿತ್ತು. ಆದರೆ ಈ ಬಾರಿ ಡಿ.ಕೆ. ಶಿವಕುಮಾರ್ ಹಾಗೂ ಹೈಕಮಾಂಡ್ ಇದಕ್ಕೆ ಆಸ್ಪದ ನೀಡುತ್ತಾರೆಯೇ ಎನ್ನುವುದು ಕುತೂಹಲ ಮೂಡಿಸಿದೆ.
ಇದ್ನೂ ಓದಿ | Election 2023 | ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಗಿಮಿಕ್?: ವರುಣಾ ಖಚಿತ ಎಂದ ಶ್ರೀರಾಮುಲು