ಮೈಸೂರು/ಮಂಡ್ಯ: ಎಲ್ಲಿ ಬೇಕಾದರೂ ನಿಲ್ಲುವವನು ನಾಯಕ. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶ ಇದೆ. ಜನ ಬಯಸಿದ ಕಡೆ ಸ್ಪರ್ಧೆ ಮಾಡುತ್ತೇನೆ ಎಂದು ಬಿಜೆಪಿ ನಾಯಕರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ. ಯಾರು ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಜನರು ಬಯಸಿದ ಕಡೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಕೋಲಾರದವರು ಬಯಸಿದರೆ ಕೋಲಾರ, ವರುಣದವರು ಬಯಸಿದರೆ ವರುಣ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ಈ ಮೂಲಕ ತಾವು ಎಲ್ಲಿ ಸ್ಪರ್ಧೆ ಮಾಡುತ್ತೇನೆ ಎಂಬ ಬಗ್ಗೆ ಮಾತ್ರ ಸಿದ್ದರಾಮಯ್ಯ ಗುಟ್ಟು ಬಿಟ್ಟುಕೊಟ್ಟಿಲ್ಲ.
ನನಗೆ ಬಹಳ ದಿನ ಬದುಕಲು ಇಷ್ಟ
ನನಗೆ ಬಹಳ ದಿನ ಬದುಕಲು ಇಷ್ಟ. ಜನಸೇವೆ ಮಾಡಲು ಹೆಚ್ಚು ವರ್ಷ ಬದುಕಬೇಕು ಎಂಬುದು ನನ್ನ ಆಸೆ ಆಗಿದೆ. ನನಗೆ ಈಗ 76 ವರ್ಷ ವಯಸ್ಸಾಗಿದೆ. ಇನ್ನು ಎಷ್ಟು ವರ್ಷ ಬದುಕುತ್ತೇನೆ ಎಂಬುದು ಗೊತ್ತಿಲ್ಲ. ಡಯಾಬಿಟಿಸ್ ಬಂದಿದೆ. ಅದು 10 ವರ್ಷ ಆಯಸ್ಸು ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ. ಯೋಗ, ಪ್ರಾಣಾಯಾಮ, ವ್ಯಾಯಾಮ ಮಾಡಿದರೆ ಆರೋಗ್ಯ ವೃದ್ಧಿ ಆಗುತ್ತದೆ. ಆದರೆ, ಇದನ್ನು ನಾವು ಚಿಕ್ಕ ವಯಸ್ಸಿನಲ್ಲಿಯೇ ಆರಂಭಿಸಬೇಕು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಇದನ್ನೂ ಓದಿ | ನಮ್ಮ ಜಿಲ್ಲೆಯವರು ಸಿಎಂ ಆಗಲಿ ಅಂತ ಎಲ್ಲರಿಗೂ ಆಸೆ ಇರ್ತದೆ: ಸಿದ್ದರಾಮಯ್ಯ ಪರ ನಿಂತ ಬಿಜೆಪಿ ಶಾಸಕ ರಾಮದಾಸ್
ಕೊರೊನಾ ಬಂದ ಮೇಲೆ ಜನರಿಗೆ ತೊಂದರೆ ಆಗಿದೆ. ಈಗ ಆರೋಗ್ಯದ ಬಗ್ಗೆ ಕಾಳಜಿ ಬಂದಿದೆ. ಆದರೆ, ಕೊರೊನಾದಿಂದ ಆಸ್ಪತ್ರೆಯವರಿಗೆ ಆರ್ಥಿಕವಾಗಿ ಒಳ್ಳೆಯದಾಗಿದೆ. ಆಸ್ಪತ್ರೆ ಮಾರಲು ಹೊರಟಿದ್ದವರೆಲ್ಲರೂ ಈಗ ಉಳಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಡಾ.ಕರುಣಾಕರ ನಾಗರಾಜೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಬ್ಬು ಪ್ರತಿಭಟನಾಕಾರರಿಗೆ ಬೆಂಬಲ
ಕಬ್ಬು ಹಾಗೂ ಭತ್ತಗಳಿಗೆ ಸೂಕ್ತ ಬೆಲೆ ನಿಗದಿಪಡಿಸಲು ಆಗ್ರಹಿಸಿದ ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಸಿದ್ದರಾಮಯ್ಯ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು.
ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ನಾನು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ವಿಶೇಷವಾಗಿ ಪ್ರಸ್ತಾಪ ಮಾಡಿ ಗಂಭೀರ ಚರ್ಚೆ ನಡೆಸುತ್ತೇನೆ. ಈ ಬಿಜೆಪಿ ಸರ್ಕಾರದ ಸಚಿವರು, ಶಾಸಕರು ಕಳ್ಳರು, ಬರೀ ಸುಳ್ಳು ಹೇಳುತ್ತಾರೆ. ಹೀಗಾಗಿಯೇ ಅವರು ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿಲ್ಲ ಎಂದು ಹೇಳಿದರು.
ಇದೇ ವೇಳೆ ಕೋಲಾರದಿಂದ ಚುನಾವಣೆಗೆ ನಿಲ್ಲುವ ವಿಚಾರವಾಗಿ ಬಾರಿ ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಮುಂದಿನ ಚುನಾವಣೆಯಲ್ಲಿ ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ಹೈಕಮಾಂಡ್‌ನವರು ಎಲ್ಲಿಂದ ಸ್ಪರ್ಧೆ ಮಾಡಲು ಹೇಳುತ್ತಾರೋ ಅಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು. ಈ ವೇಳೆ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಜತೆಗಿದ್ದರು.
ಇದನ್ನೂ ಓದಿ | ಕು.ಮು.ದ. ಲೆಕ್ಕದಲ್ಲಿ ಕೋಲಾರದಿಂದ ಸ್ಪರ್ಧೆ: ಸಿದ್ದರಾಮಯ್ಯ ಗೆಲುವಿಗೆ ನೂರೆಂಟು ತೊಡಕು; ಹಾಗಾದರೆ ಯಾರಿಗೆ ಲಾಭ?