ಬಳ್ಳಾರಿ: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ನಾನು ಅನಿವಾರ್ಯ ಕಾರಣಕ್ಕಾಗಿ ಒಂದೇ ಬಾರಿ ಕ್ಷೇತ್ರ ಬಿಟ್ಟೆವು. ಅವತ್ತಿನ ಸನ್ನಿವೇಶದಲ್ಲಿ ಕ್ಷೇತ್ರ ಬಿಡಬೇಕಾಯಿತು. ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನಿರ್ಧಾರದಂತೆ ಸಿದ್ದರಾಮಯ್ಯ ನಾನು ಕ್ಷೇತ್ರವನ್ನು ಬಿಡಬೇಕಾಯಿತು. ಸರ್ಕಾರ ರಚನೆಯಾಗಬೇಕಾದರೆ ಪಾಪ್ಯುಲರ್ ಕ್ಯಾಂಡಿಡೇಟ್‌ಗಳು ಬೇರೆ ಬೇರೆ ಕಡೆ ಸ್ಪರ್ಧೆ ಮಾಡಬೇಕಾಗುತ್ತದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿರುವ ಹೊತ್ತಿನಲ್ಲಿಯೇ ಈ ರೀತಿ ಹೇಳುವ ಮೂಲಕ ಸಾಫ್ಟ್ ಕಾರ್ನರ್ ತೋರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಿದ್ದರಾಮಯ್ಯ ಹಾಗೂ ನನ್ನ ಸ್ವಾರ್ಥದ ಆಯ್ಕೆ ಅಲ್ಲ. ಸರ್ಕಾರದ ರಚನೆಗಾಗಿ ಇಬ್ಬರು ಕ್ಷೇತ್ರ ಬಿಟ್ಟೆವು. ಸಿದ್ದರಾಮಯ್ಯ ವರುಣದಲ್ಲಿ ಸ್ಪರ್ಧೆ ಮಾಡಬೇಕು. ಆದರೆ, ಮಗನ ರಾಜಕೀಯಕ್ಕಾಗಿ ವರುಣಕ್ಕೆ ಅವರು ಹೋಗುತ್ತಿಲ್ಲ. ಸಿದ್ದರಾಮಯ್ಯ ಕೂಡ ರಾಜಕೀಯದಲ್ಲಿ ಇರಬೇಕು. ಹೀಗಾಗಿ ಕ್ಷೇತ್ರ ಗೊಂದಲವಾಗುತ್ತಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಎಲ್ಲಿಯೇ ಸ್ಪರ್ಧೆ ಮಾಡಲಿ, ಅದು ಅವರ ಪಕ್ಷಕ್ಕೆ ಬಿಟ್ಟಿದ್ದಾಗಿದೆ. ರಾಜಕೀಯದಲ್ಲಿ ಇದೊಂದು ಸಹಜ ಪಕ್ರಿಯೆಯಾಗಿದೆ. ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಅನ್ನೋದಿಲ್ಲ. ರಾಜಕೀಯದಲ್ಲಿ ಕೆಲವೊಮ್ಮೆ ಪಾಪ್ಯುಲರ್ ಕ್ಯಾಂಡಿಡೇಟ್‌ಗೆ ಸಮಸ್ಯೆ ಬರುತ್ತದೆ. ಯಾವುದೇ ಕ್ಷೇತ್ರದಲ್ಲಿ ನಿಂತು ಗೆಲ್ಲುವವರೇ ಪಾಪ್ಯುಲರ್ ಕ್ಯಾಂಡಿಡೇಟ್. ಕೆಲವೊಮ್ಮೆ ಸಾಹಸ ಮಾಡಬೇಕಾಗುತ್ತದೆ. ಕಳೆದ ಬಾರಿ ನಾವಿಬ್ಬರೂ ಸಾಹಸ ಮಾಡಿದೆವು. ಆದರೆ, ನಮ್ಮ ಸರ್ಕಾರ ಬಂತು. ಅವರು ವಾಮಮಾರ್ಗದಲ್ಲಿ ಸರ್ಕಾರ ರಚನೆ ಮಾಡಿದ್ದರಿಂದ ಸರ್ಕಾರ ಬಿದ್ದುಹೋಯಿತು ಎಂದು ಹೇಳಿದರು.
ಇದನ್ನೂ ಓದಿ: SM Krishna: ಬೆಂಗಳೂರಿಗೆ ಐಟಿ ಗರಿ ಮೂಡಿಸಿದ ಯುವಜನರ ಕಣ್ಮಣಿ, ಪದ್ಮವಿಭೂಷಣ ಎಸ್.ಎಂ. ಕೃಷ್ಣ
ಕಾಂಗ್ರೆಸ್ ನಾಯಕರು ಇಷ್ಟು ದಿನ ಕಿವಿಯಲ್ಲಿ ಹೂವು ಇಡುತ್ತಿದ್ದರು. ಇದೀಗ ಹೈಟೆಕ್ ಮಾದರಿಯಲ್ಲಿ ಗ್ಯಾರಂಟಿ ಕಾರ್ಡ್ ಇಡುವ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಕಾರ್ಡ್, ವಾರಂಟಿ ಕಾರ್ಡ್ ಬಗ್ಗೆ ಜನರಿಗೆ ಗೊತ್ತಿಲ್ಲ. ಯಾಕೆಂದರೆ ಅಧಿಕಾರಕ್ಕೆ ಬಾರದೆ ಇರುವವರು ಏನು ಗ್ಯಾರಂಟಿ ಕೊಡುತ್ತಾರೆ? ಚುನಾವಣೆ ಬಂದಾಗ ಸುಳ್ಳು ಹೇಳುವುದು ಸಾಮಾನ್ಯ. ಇದೀಗ ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ ಗಿಮಿಕ್‌ಗೆ ಜನರು ಮರುಳಾಗುವುದಿಲ್ಲ ಎಂದು ಹೇಳಿದರು.