ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ (Karnataka Election Results) ಪಡೆದಿರುವ ಹಿನ್ನೆಲೆಯಲ್ಲಿ ಸಿಎಂ ಆಯ್ಕೆಗಾಗಿ ಆ ಪಕ್ಷದ ಹೈಕಮಾಂಡ್ ಕಸರತ್ತು ನಡೆಸುತ್ತಿದೆ. ಒಂದೆಡೆ ಸಿಎಂ ಕುರ್ಚಿಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಫೈಟ್ ನಡೆಯುತ್ತಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಅವರ ಅಭಿಮಾನಿಗಳು, ಕಾರ್ಯಕರ್ತರು ಬುಧವಾರ ಪಟಾಕಿ ಸಿಡಿಸಿ, ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಎಂದು ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ನಡೆಸಿದ್ದಾರೆ.
ಸಿದ್ದರಾಮಯ್ಯ ನಿವಾಸದ ಬಳಿ ಮೊಳಗಿದ ಜೈಕಾರ
ಬೆಂಗಳೂರಿನ ಸಿದ್ದರಾಮಯ್ಯ ನಿವಾಸದ ಮುಂದೆ ಬುಧವಾರ ನೂರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜಮಾಯಿಸಿ, ಸಿದ್ದರಾಮಯ್ಯ ಅವರೇ ಸಿಎಂ ಎಂದು ಘೋಷಣೆಗಳನ್ನು ಕೂಗಿದರು. ಫ್ಲೆಕ್ಸ್‌ಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು ಎಂದು ಬರೆಸಿರುವ ಅಭಿಮಾನಿಗಳು, ಸಿದ್ದರಾಮಯ್ಯಗೆ ಜೈಕಾರ ಹಾಕಿ ಕುಣಿದು ಕುಪ್ಪಳಿಸಿದರು.
ಸಿದ್ದರಾಮಯ್ಯ ನಿವಾಸದ ಬಳಿ ಜಮಾಯಿಸಿದ ಅಭಿಮಾನಿಗಳು
ಇದನ್ನೂ ಓದಿ | Government Formation : ಸಿಎಂ ಆಯ್ಕೆ ಬೆನ್ನಲ್ಲೇ ನೂತನ ಸರ್ಕಾರದಲ್ಲಿ ಯಾರೆಲ್ಲಾ ಸಚಿವರು; ಚರ್ಚೆ ಜೋರು!
ಮಸ್ಕಿಯಲ್ಲಿ ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ
ರಾಯಚೂರು: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರೇ ಅಂತಿಮ ಎಂದು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ
ಮೈಸೂರು: ಸಿದ್ದರಾಮಯ್ಯ ಅವರ ಸ್ವಗ್ರಾಮವಾದ ಸಿದ್ದರಾಮನಹುಂಡಿಯಲ್ಲಿ ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸಿದ್ದರಾಮಯ್ಯಗೆ ಸಿಎಂ ಸ್ಥಾನ ಖಚಿತವಾಗಲಿದೆ ಎಂದು ಗ್ರಾಮದ ಯುವಕರು, ಸಿದ್ದರಾಮಯ್ಯ ಜತೆಗೆ ಮೊಮ್ಮಗ ಧವನ್ ಭಾವಚಿತ್ರ ಇರುವ ಫ್ಲೆಕ್ಸ್‌ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಫೋಟೊ ಕೆಳಗೆ “ಈಗಿನ ಅಧಿಪತಿ” ಎಂದು ಬರೆಯಲಾಗಿದ್ದರೆ, ಅವರ ಮೊಮ್ಮಗ, ರಾಕೇಶ್ ಪುತ್ರ ಧವನ್ ಫೋಟೊ ಕೆಳಗೆ “ಮುಂದಿನ ಅಧಿಪತಿ” ಎಂದು ಬರೆಯಲಾಗಿದೆ.
ಬಾದಾಮಿ ಕ್ಷೇತ್ರದಲ್ಲಿ ಸಂಭ್ರಮಾಚರಣೆ
ಬಾಗಲಕೋಟೆ: ಸಿದ್ದರಾಮಯ್ಯ ಸಿಎಂ ಆಗುವ ಸಾಧ್ಯತೆ ಇದೆ ಎಂದು ಬಾದಾಮಿ ಕ್ಷೇತ್ರದ ಗುಳೇದಗುಡ್ಡದ ಚೌ ಬಜಾರ್‌ನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿದ್ದರಾಮಯ್ಯ ಪರ ಜೈಕಾರ ಕೂಗಿ ಸಂಭ್ರಮಾಚರಣೆ ನಡೆಸಿದರು. ಕಳೆದ ಬಾರಿ ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಆಯ್ಕೆಯಾಗಿದ್ದರು. ಹೀಗಾಗಿ ಕ್ಷೇತ್ರದ ಅಭಿಮಾನಿಗಳು ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಭಾವಚಿತ್ರಕ್ಕೆ ಹಾಲಿನ ಅಭಿಷೇಕ
ಗದಗ: ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ಹೆಸರು ಅಂತಿಮವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ರೋಣ ತಾಲೂಕು ಯಾವಗಲ್ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ, ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.
ಇದನ್ನೂ ಓದಿ | Karnataka Election 2023 : ಮುಖ್ಯಮಂತ್ರಿ ನೇಮಕ ಅಂತಿಮವಾಗಿಲ್ಲ ಎಂದ ಸುರ್ಜೇವಾಲಾ; ಕಾಂಗ್ರೆಸ್‌ನಲ್ಲಿ ಗೊಂದಲವೋ ಗೊಂದಲ
ಗದಗದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ
ಗದಗ: ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದು ಗದಗ ಜಿಲ್ಲಾ ಅಹಿಂದ ನಾಯಕ ಫಕೀರಪ್ಪ ಹೆಬಸೂರು ನೇತೃತ್ವದಲ್ಲಿ ಪರಸ್ಪರ ಸಿಹಿ ಹಂಚಿ ಅಹಿಂದ ಮುಖಂಡರು ಸಂಭ್ರಮಾಚರಣೆ ನಡೆಸಿದ್ದಾರೆ.
ಈ ವೇಳೆ ಫಕೀರಪ್ಪ ಹೆಬಸೂರು ಮಾತನಾಡಿ, ಅಹಿಂದ ಜನರಿಗೆ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸ ಇದೆ. ಕಾಂಗ್ರೆಸ್ ಗ್ಯಾರಂಟಿ ಈಡೇರಿಸುತ್ತದೆ ಎನ್ನುವ ವಿಶ್ವಾಸ ಇದೆ. ಈ ಹಿಂದೆ ಯಾವುದೇ ಜಾತಿ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿಲ್ಲ. ವೀರಶೈವ ಲಿಂಗಾಯತ ಸಮಾಜಕ್ಕೆ ನ್ಯಾಯ ಒದಗಿಸುವುದಕ್ಕೆ ಅವರು ಮುಂದಾಗಿದ್ರು. ಸಿದ್ದರಾಮಯ್ಯ ಯಾವುದೇ ತುಷ್ಟೀಕರಣ ರಾಜಕಾರಣ ಮಾಡಿಲ್ಲ. ಇದೀಗ ಅವರು ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದು ಹೇಳಿದರು.