Site icon Vistara News

Karnataka Election 2023: ವರುಣದಲ್ಲಿ ಸೋಮಣ್ಣ ಹರಕೆಯ ಕುರಿ; ಇದಕ್ಕೆಲ್ಲ ಬಿ.ಎಲ್.‌ ಸಂತೋಷ್‌ ಕಾರಣವೆಂದ ಸಿದ್ದರಾಮಯ್ಯ

Siddaramaiah lashes out at BL Santhosh Karnataka Election updates

ಮೈಸೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಸಚಿವ ವಿ. ಸೋಮಣ್ಣ ಅವರನ್ನು ಹರಕೆಯ ಕುರಿ ಮಾಡಲಾಗುತ್ತಿದೆ. ಸೋಮಣ್ಣ ಸ್ಪರ್ಧೆಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಒತ್ತಡವೇ ಕಾರಣ. ದುಡ್ಡಿರುವ ಒಬ್ಬನು ಬೇಕು ಎಂದು ಇಲ್ಲಿಗೆ ತಂದು ಹಾಕಲಾಗಿದೆ. ಸೋಮಣ್ಣ ಹೊರ ಜಿಲ್ಲೆಯವನು. ಸೋಮಣ್ಣನಿಗೆ ವರುಣ ಕ್ಷೇತ್ರದ ಬಗ್ಗೆ ಏನು ಗೊತ್ತಿದೆ? ಸೋಮಣ್ಣಗೂ ವರುಣಗೂ ಏನು ಸಂಬಂಧ? ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾನತಾಡಿದ ಅವರು, ಬಿಜೆಪಿ ಈಗ ಬಿ.ಎಲ್. ಸಂತೋಷ್‌ ಕಪಿ ಮುಷ್ಟಿಯಲ್ಲಿ ಸಿಲುಕಿದೆ. ಈಶ್ವರಪ್ಪಂಗೆ ಬಾಯಿ ಸರಿ ಇರಲಿಲ್ಲ. ಅವನಿಗೆ ಸರಿಯಾದ ಬುದ್ಧಿ ಕಲಿಸಿದ್ದಾರೆ. ಆದರೆ ಜಗದೀಶ್ ಶೆಟ್ಟರ್, ಸವದಿ, ರಾಮದಾಸ್ ಅವರ ಏನು ತಪ್ಪು ಮಾಡಿದ್ದರು? ಅವರ ಮೇಲೆ ಯಾವ ಆರೋಪಗಳೂ ಇಲ್ಲ. ಆದರೂ ಟಿಕೆಟ್ ತಪ್ಪಿಸಲಾಗಿದೆ. ಬಿಜೆಪಿ ಈ ಎಲ್ಲ ಬೆಳವಣಿಗೆ ಹಿಂದೆ ಬಿ.ಎಲ್. ಸಂತೋಷ ಕಾರಣ. ಬಿ.ಎಲ್. ಸಂತೋಷ್‌ ಮೇಲೆ ಶೆಟ್ಟರ್ ಮಾಡಿರುವ ಆರೋಪಗಳು ಸರಿ ಇದೆ ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ವರುಣ ರಾಜಕಾರಣಕ್ಕೆ ಮರಿ ಟಗರು ಎಂಟ್ರಿ; ರಾಕೇಶ್‌ ಮಗನ ಆಸಕ್ತಿಗೆ ಸಿದ್ದು ಖುಷ್: ಅಪ್ಪನ ರಕ್ತ ಅಲ್ವಾ ಎಂದ ಮಾಜಿ ಸಿಎಂ

ರಾಮನಗರದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ರಾಜಕೀಯ ಮಾಡಿದವನು ಸೋಮಣ್ಣ. ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ವರುಣಗೆ ಒಂದೇ ಒಂದು ಮನೆ ಕೊಟ್ಟಿದ್ದನಾ? ಈಗ ಬಂದು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾನೆ. ನನ್ನ ಮತ್ತು ವರುಣ ಸಂಬಂಧವನ್ನು ಕಿತ್ತು ಹಾಕಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಬಗ್ಗೆ ವರುಣ ಜನಕ್ಕೆ ಅಪಾರ ಪ್ರೀತಿ ವಿಶ್ವಾಸ ಇದೆ. ಯಾರೇ ಬರಲಿ, ಯಾರೇ ಅಭ್ಯರ್ಥಿಗಳನ್ನು ಬದಲಾಯಿಸಲಿ ಏನೇ ಆದರೂ ನನ್ನ ಗೆಲ್ಲುವು ನಿಶ್ಚಿತ ಎಂದು ಹೇಳಿದರು.

ಸೋಮಣ್ಣ ಗೋವಿಂದರಾಜನಗರದಲ್ಲಿ ಅಭಿವೃದ್ಧಿ ಮಾಡಿದ್ದರೆ, ಅವನೇಕೆ ವರುಣಕ್ಕೆ ಬರುತ್ತಿದ್ದ? ನಾನು ವರುಣ ಕ್ಷೇತ್ರಕ್ಕೆ ಎಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ವರುಣದಲ್ಲಿ ಬಿಜೆಪಿ ಜೆಡಿಎಸ್ ಒಳ ಒಪ್ಪಂದಗಳ ಬಗ್ಗೆ ಎರಡು, ಮೂರು ದಿನದಲ್ಲಿ ಹೇಳುತ್ತೇನೆ. ನಾನು ಇನ್ನೂ ಅವರಿವರ ಮುಖ ನೋಡಿಲ್ಲ‌. ಮುಖಗಳನ್ನು ನೋಡಿದರೆ ಅರ್ಥ ಆಗುತ್ತದೆ. ಆಗ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದರು.

ವರುಣವನ್ನು ತಾಲೂಕು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಹೇಳಿಕೆ ಬಗ್ಗೆ ಕಟುವಾಗಿ ಟೀಕಿಸಿದ ಸಿದ್ದರಾಮಯ್ಯ, ನಾಲ್ಕು ವರ್ಷದ ಆಡಳಿತದಲ್ಲಿ ಯಾಕೆ ಈ ಕೆಲಸವನ್ನು ಮಾಡಲಿಲ್ಲ? ಸಿಎಂ ಬೊಮ್ಮಾಯಿ ನಂಬರ್ ಒನ್ ಸುಳ್ಳುಗಾರ. ವರುಣ ತಾಲೂಕು ಕೇಂದ್ರ ಅಲ್ಲ ಎಂಬುದು ಸಿಎಂ ಗೊತ್ತಿಲ್ಲ ಎನ್ನುವುದಾದರೆ ಆ ತಕ್ಷಣ ಅವರೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಈಗ ಬಂದು ಬರಿ ಸುಳ್ಳು ಹೇಳುತ್ತಿದ್ದಾರೆ. ಇದು ಒಂದು ರೀತಿ ಅಚ್ಛೇ ದಿನ್ ಆಯೇಗಾ ಎಂಬ ರೀತಿಯ ಸುಳ್ಳು ಎಂದು ಸಿದ್ದರಾಮಯ್ಯ ಟೀಕಿಸಿದರು.

ಇದನ್ನೂ ಓದಿ: Karnataka Elections 2023: ಶೆಟ್ಟರ್‌ ಕೈ ಸೇರ್ಪಡೆ ಪ್ರತಿಯಾಗಿ ಬಿಜೆಪಿಯಿಂದ ರಿವರ್ಸ್‌ ಆಪರೇಷನ್‌; ಎಸ್‌.ಆರ್‌ ಪಾಟೀಲ್‌ಗೆ ಗಾಳ

ಸಿದ್ದರಾಮಯ್ಯಗೆ ಜ್ವರ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜ್ವರದಿಂದ ಬಳಲುತ್ತಿದ್ದಾರೆ. ಅವರ ಎಡಗೈಗೆ ಗಾಯವಾಗಿರುವುದರಿಂದ ಜ್ವರ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣಾ ಸಮಯ, ಅದೂ ಇದು ಎಂದು ಹೇಳಿಕೊಂಡು ಜ್ವರ ಬರುವುದಿಲ್ಲ. ಇದು ನಿಸರ್ಗದ ನಿಯಮವಾಗಿದೆ. ಇನ್ನೂ ನಾಲ್ಕೈದು ದಿನ ಸ್ವಲ್ಪ ರೆಸ್ಟ್ ಬೇಕು. ಆಮೇಲೆ ಎಲ್ಲವೂ ಸರಿ ಹೋಗುತ್ತದೆ. ನನ್ನ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದರು.

Exit mobile version