Site icon Vistara News

ಸಿದ್ದರಾಮೋತ್ಸವ: ಸಿದ್ದು ಪವರ್‌ ಶೋ ಸಕ್ಸಸ್‌, ಜೈ ಎಂದ ಡಿಕೆಶಿ, ಬಿಜೆಪಿಗೂ ಬಿಸಿ

siddaramaiah

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಆಯೋಜಿಸಿದ ʻಸಿದ್ದರಾಮೋತ್ಸವʼ ಭರ್ಜರಿ ಯಶಸ್ಸು ಗಳಿಸಿದೆ. ರಾಜ್ಯದ ಮೂಲೆ ಮೂಲೆಗಳಿಂದ ಮಳೆಯನ್ನೂ ಲೆಕ್ಕಿಸದೆ ಬಂದ ಸುಮಾರು ಏಳು ಲಕ್ಷ ಅಭಿಮಾನಿಗಳು ಸಿದ್ದರಾಮಯ್ಯ ಅವರ ಜೀವನದ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾದರು. ಒಂದು ಕಡೆ ಇದು ಕಾಂಗ್ರೆಸ್‌ನ ಅಧಿಕೃತ ಕಾರ್ಯಕ್ರಮವೇ ಆಗಿದ್ದರೂ ನಿಜವಾಗಿ ಸಿದ್ದರಾಮಯ್ಯ ಅವರ ಪರ್ಸನಲ್‌ ಪವರ್‌ ಶೋ ಆಗಿ ದಾಖಲಾಯಿತು.

ರಾಜ್ಯದ ಮಧ್ಯ ಭಾಗವಾದ ದಾವಣಗೆರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಎಲ್ಲ ಕಡೆಗಳಿಂದಲೂ ಬೆಂಬಲ ಸಿಕ್ಕಿದೆ. ಯಾರ ಹುಟ್ಟುಹಬ್ಬದ ಆಚರಣೆಯಲ್ಲೂ ಹೆಚ್ಚಾಗಿ ಪಾಲ್ಗೊಳ್ಳದ ರಾಹುಲ್‌ ಗಾಂಧಿ ಅವರು ದಿಲ್ಲಿಯಿಂದ ಇಳಿದುಬಂದು ಆಡಿರುವ ಮಾತುಗಳು ವರಿಷ್ಠರ ಅಧಿಕೃತ ಮುದ್ರೆಯಂತಿದ್ದವು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಸ್ವತಃ ತಾವೇ ಮುಂದಾಗಿ ಸಿದ್ದರಾಮಯ್ಯ ಅವರನ್ನು ಆಲಿಂಗಿಸಿ ಕೈಎತ್ತಿ ಸಂಭ್ರಮಿಸಿದ್ದು ರಾಜ್ಯ ಕಾಂಗ್ರೆಸ್‌ ನೀಡಿದ ಅನುಮೋದನೆ. ಹೀಗೆ ಪಕ್ಷ ಮತ್ತು ಜನ ಎರಡೂ ಕಡೆಯಿಂದ ಸಿದ್ದರಾಮಯ್ಯ ಅವರ ಪ್ರಭಾವಳಿಗೆ ಹೊಸ ಮೆರುಗು ಸಿಕ್ಕಂತಾಗಿದೆ.

ಸಿದ್ದರಾಮೋತ್ಸವ ಎನ್ನುವುದು ೨೦೨೩ರಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯ ಪ್ರೊಜೆಕ್ಷನ್‌ ಎನ್ನುವುದು ಆರಂಭದಿಂದಲೂ ಸ್ಪಷ್ಟವಾಗಿಯೇ ಇದ್ದ ಸಂಗತಿ. ಆದರೆ, ತಾನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಣ್ಣಮಟ್ಟದ ಪ್ರತಿರೋಧವನ್ನು ತೋರಿದ್ದರು. ಈ ಸಮಾವೇಶದಿಂದ ಅಂತರ ಕಾಪಾಡಿಕೊಳ್ಳಲು ಯತ್ನಿಸಿದ್ದ ಅವರು ಹಲವು ವೇದಿಕೆಗಳಲ್ಲಿ ತಾನೂ ಸಿಎಂ ಕ್ಯಾಂಡಿಡೇಟ್‌ ಎಂದು ಸ್ಪಷ್ಟ ಶಬ್ದಗಳಲ್ಲೇ ಹೇಳಿದ್ದರು. ಆದರೆ, ಬುಧವಾರ ವೇದಿಕೆಯಲ್ಲಿ ಅವರು ವೃತ್ತಿಪರ ರಾಜಕಾರಣಿಯಂತೆಯೇ ನಡೆದುಕೊಂಡರು. ಸಿದ್ದರಾಮಯ್ಯ ಅವರ ತಾಕತ್ತು ಸಾಮರ್ಥ್ಯವನ್ನು ಶ್ಲಾಘಿಸಿದ್ದಲ್ಲದೆ ರಾಹುಲ್‌, ಸೋನಿಯಾ, ಕಾಂಗ್ರೆಸ್‌ ಪಕ್ಷದ ಜತೆಗೆ ಸಿದ್ದರಾಮಯ್ಯ ಅವರಿಗೂ ಜಯಕಾರ ಹಾಕಿದರು. ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡು ಕೈ ಎತ್ತಿ ಒಗ್ಗಟ್ಟಿನ ಸಂಕೇತ ತೋರಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಪ್ರತಿ ಭಾಷಣದಲ್ಲೂ ಹೇಳುವ ʻವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯʼ ಎನ್ನುವ ಮಾತನ್ನು ಇಲ್ಲಿ ತಪ್ಪಿಯೂ ಹೇಳಲಿಲ್ಲ. ನಿಜವೆಂದರೆ, ಇತ್ತೀಚೆಗೆ ಸೋರಿಕೆಯಾದ ಅವರ ಕರಡು ಭಾಷಣದಲ್ಲಿ ವ್ಯಕ್ತಿಪೂಜೆಯ ವಿಚಾರ ಇತ್ತು. ಆದರೆ, ಸಮಾವೇಶದ ಅಬ್ಬರದಲ್ಲಿ ಈ ಸಂಗತಿಯನ್ನು ಡಿ.ಕೆ. ಶಿವಕುಮಾರ್‌ ಅವರು ಉದ್ದೇಶಪೂರ್ವಕವಾಗಿ ಮರೆತಂತಿದೆ. ಅಥವಾ ಸಿದ್ದರಾಮಯ್ಯ ಅವಗಿರುವ ಈ ಜನ ಬೆಂಬಲವನ್ನು ಎದುರು ಹಾಕಿಕೊಂಡು ಸಿಎಂ ಹುದ್ದೆಗಾಗಿ ಕಾದಾಟ ಮಾಡುವುದರಿಂದ ಯಾವುದೇ ಲಾಭವಿಲ್ಲ ಎಂದು ಅನಿಸಿದ್ದರೂ ಅಚ್ಚರಿ ಇಲ್ಲ. ಅವರ ಮುಂದಿನ ನಡೆಗಳು ಈ ವಿಚಾರಕ್ಕೆ ಕನ್ನಡಿ ಹಿಡಿಯಲಿವೆ..

ನಾಯಕರ ಬಾಯಲ್ಲಿ ಸಿಎಂ ಸಿದ್ದರಾಮಯ್ಯ
ಸಿದ್ದರಾಮೋತ್ಸವಕ್ಕೂ ಸಿಎಂ ಅಭ್ಯರ್ಥಿತನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪದೇಪದೆ ಹೇಳಲಾಗುತ್ತಿದ್ದರೂ ಬುಧವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಬಹುತೇಕ ನಾಯಕರು ಬೇರೆ ಬೇರೆ ಶಬ್ದ ಮತ್ತು ಭಾವಗಳಲ್ಲಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು. ಅದರಲ್ಲೂ ಮುಖ್ಯವಾಗಿ ಕೆ.ಎನ್‌. ರಾಜಣ್ಣ, ದಿನೇಶ್‌ ಗುಂಡೂ ರಾವ್‌ ಅವರಂಥ ಹಿರಿಯ ನಾಯಕರೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದರು. ಸಾಮಾನ್ಯವಾಗಿ ಇಂಥ ಹೇಳಿಕೆಗಳನ್ನು ನೀಡಿದಾಗ ಕೆಲವರು ಆಕ್ಷೇಪ ವ್ಯಕ್ತಪಡಿಸುವುದಿದೆ. ಅದರೆ, ಇಷ್ಟು ದೊಡ್ಡ ವೇದಿಕೆಯಲ್ಲಿ ಅದಕ್ಕೆ ಯಾವುದೇ ವಿರೋಧದ ಧ್ವನಿ ಕೇಳಿ ಬರಲಿಲ್ಲ. ಅಂದರೆ ಈ ಐಡಿಯಾವನ್ನು ಇಲ್ಲಿ ವ್ಯವಸ್ಥಿತವಾಗಿ ಪ್ರೆಸೆಂಟ್‌ ಮಾಡಲಾಗಿದೆ.

ಯಾರೂ ನಿರೀಕ್ಷಿಸದಷ್ಟು ಜನ ಸಾಗರ
ಸಿದ್ದರಾಮೋತ್ಸವ ಅಂದ ಕೂಡಲೇ ಕೆಲವು ಲಕ್ಷಗಳಷ್ಟು ಜನ ಸೇರಬಹುದು ಎನ್ನುವ ನಿರೀಕ್ಷೆಯೇನೋ ಇತ್ತು. ಆದರೆ, ಎಲ್ಲ ಲೆಕ್ಕಾಚಾರಗಳನ್ನು ಮೀರಿ ಏಳು ಲಕ್ಷದಷ್ಟು ಜನರು ಬಂದಿರುವುದು ವಿಶೇಷ. ಅದರಲ್ಲೂ ಮುಖ್ಯವಾಗಿ ಬಂದವರು ಕಾಂಗ್ರೆಸಿಗರು ಎಂಬ ಅಂಶ ಒಂದೆಡೆಯಾದರೆ, ಸಿದ್ದರಾಮಯ್ಯ ಅಭಿಮಾನಿಗಳು ಅನ್ನುವುದು ಇನ್ನೊಂದು ಪ್ರಮುಖ ಅಂಶ. ಸಿದ್ದರಾಮಯ್ಯ ಅವರೇ ರಾಜ್ಯದ ಎಲ್ಲ ೨೨೪ ಕ್ಷೇತ್ರಗಳಿಂದಲೂ ಜನ ಬಂದಿದ್ದಾರೆ ಎಂದು ಹೇಳುವ ಮೂಲಕ ತಮಗಿರುವ ಪ್ಯಾನ್‌ ಕರ್ನಾಟಕ ಖದರನ್ನು ಹೇಳಿಕೊಂಡಂತಾಯಿತು. ಸಿದ್ದರಾಮಯ್ಯ ಅವರು ದಾವಣಗೆರೆಯಲ್ಲಿ ಎಲ್ಲಿ ಹೋದರೂ ಜನ ಅವರನ್ನು ಮುತ್ತಿಕೊಂಡದ್ದು, ವೇದಿಕೆಗೆ ಬಂದಾಗ, ಎದ್ದು ನಿಂತಾಗ ಜನೋತ್ಸಾಹ ಮೇರೆ ಮೀರಿದ್ದು ಗಮನಿಸಬೇಕಾದ ಅಂಶ.

ಬಿಜೆಪಿ, ಜೆಡಿಎಸ್‌ಗೂ ನಿರ್ಲಕ್ಷಿಸಲಾಗದ ವಿದ್ಯಮಾನ
ಸಿದ್ದರಾಮೋತ್ಸವ ಎಂದಾಗ ನಿಜವಾಗಿ ಸಂಭ್ರಮ ಮನೆ ಮಾಡಿದ್ದು ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳಲ್ಲಿ ಜಗಳ ಶುರುವಾಗಿ ಒಂದು ಕಡೆ ಸಮಾವೇಶವೂ ವಿಫಲವಾಗುತ್ತದೆ. ಇನ್ನೊಂದು ಕಡೆ ಪರಸ್ಪರ ಕಾಲೆಳೆಯುವ ಆಟದಲ್ಲಿ ತಮಗೆ ಲಾಭವಾಗುವ ನಿರೀಕ್ಷೆ ಇತ್ತು. ಆದರೆ, ಈಗ ಸಮಾವೇಶ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿರುವುದನ್ನು ಈ ಎರಡೂ ಪಕ್ಷಗಳು ಗಂಭೀರವಾಗಿ ಪರಿಗಣಿಸುವಂತಾಗಿದೆ. ಅದರಲ್ಲೂ ಮಧ್ಯ ಕರ್ನಾಟಕಕ್ಕೆ ಇಡಿಯ ಕರ್ನಾಟಕವನ್ನು ಎಳೆದು ತಂದ ಸಿದ್ದರಾಮಯ್ಯ ಅವರ ಪವರು ಎರಡೂ ಪಕ್ಷಗಳಿಗೆ ನುಂಗಲಾರದ ತುತ್ತು.

ಕಾಂಗ್ರೆಸ್‌ ನಡೆ ಮುಂದೇನು?
ದಾವಣಗೆರೆ ಸಮಾವೇಶವನ್ನು ಗಮನಿಸಿದಾಗ ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು ಪಕ್ಷದಲ್ಲೂ ಮೇಲುಗೈ ಸಾಧಿಸಿದಂತೆ ಕಾಣುತ್ತದೆ. ಹಾಗಂತ ಸಿದ್ದರಾಮಯ್ಯ ಅವರೇ ಸಿಎಂ ಅಭ್ಯರ್ಥಿ ಎಂದು ರಾಹುಲ್‌ ಗಾಂಧಿಯಾಗಲೀ, ಡಿ.ಕೆ. ಶಿವಕುಮಾರ್‌ ಅವರಾಗಲೀ ಹೇಳಿಲ್ಲ. ರಾಹುಲ್‌ ಅವರು ಒಗ್ಗಟ್ಟಿನಿಂದ ಹೋದರೆ ಬಿಜೆಪಿ ಸರಕಾರವನ್ನು ಉರುಳಿಸಬಹುದು ಎಂದಿದ್ದಾರೆ. ಇದರರ್ಥ ಒಗ್ಗಟ್ಟಿನಿಂದ ಹೋದರೆ ಮಾತ್ರ ಎಂದೇ ತಿಳಿದುಕೊಳ್ಳಬೇಕು. ಡಿ.ಕೆ. ಶಿವಕುಮಾರ್‌ ಅವರಂತೂ ಸಾಮೂಹಿಕ ನಾಯಕತ್ವದ ಮಂತ್ರ ಪಠಿಸಿದ್ದಾರೆ. ಇನ್ನು ಆಗಾಗ ಎದ್ದೇಳುವ ಸಿಎಂ ಅಭ್ಯರ್ಥಿತನದ ಪ್ರಶ್ನೆಗೆ ಕಾಂಗ್ರೆಸ್‌ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದರ ಮೇಲೆ ಈ ಯಶಸ್ಸಿನ ಮುಂದಿನ ಬೆಳವಣಿಗೆಗಳು ನಿರ್ಧಾರವಾಗುತ್ತವೆ.

Exit mobile version