ಮೈಸೂರು: ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ನಮ್ಮ ವೈರಿ ಜೆಡಿಎಸ್, ಬಿಜೆಪಿಯನ್ನು ಕಿತ್ತೆಸಿಯಿರಿ. ರಾಜಕೀಯವಾಗಿ ನನಗೆ ಜನ್ಮ ನೀಡಿದ್ದು ಚಾಮುಂಡೇಶ್ವರಿ ಕ್ಷೇತ್ರ. ಹುಟ್ಟೂರು ಸಿದ್ದರಾಮನಹುಂಡಿಯು ವರುಣ ಕ್ಷೇತ್ರಕ್ಕೆ ಬರುತ್ತದೆ. ಆ ಕಾರಣಕ್ಕೆ ನಾನು ವರುಣಾಗೆ ಹೋಗಿದ್ದೆ. ಕಳೆದ ಬಾರಿ ನನಗೆ ಜನ್ಮ ನೀಡಿದ ಸ್ಥಳಕ್ಕೆ ನಿಂತು ರಾಜಕೀಯ ನಿವೃತ್ತಿ ಬಯಸಿದ್ದೆ. ಆದರೆ, ಜನ ನನ್ನನ್ನು ಸೋಲಿಸಿಬಿಟ್ಟರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಹೇಳಿದವರಿಗೆ ಮತ ನೀಡಿ. ನಿಮ್ಮೆಲ್ಲ ಭಿನ್ನಾಭಿಪ್ರಾಯ ಬದಿಗೊತ್ತಿ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ ಅವರನ್ನು ಸೋಲಿಸಿ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇಂದಿನಿಂದ ನಾವೆಲ್ಲ ಒಂದೇ ತಾಯಿ ಮಕ್ಕಳು. ನಮ್ಮ ವೈರಿ ಜೆಡಿಎಸ್ ಹಾಗೂ ಬಿಜೆಪಿಯಾಗಿದೆ. ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡೋಣ. ಸಭೆಗೆ ಬಾರದೆ ಇರುವವರನ್ನು ಕರೆದು ಮಾತನಾಡುತ್ತೇನೆ. ಈ ಬಾರಿ ಜಿಟಿಡಿಯವರನ್ನು ಸೋಲಿಸಿ ಎಂದು ಕರೆ ನೀಡಿದರು.
ಚಾಮುಂಡೇಶ್ವರಿಯಲ್ಲಿ ಯಾರೇ ಗೆದ್ದರೂ ನಾನೇ ಶಾಸಕ- ಸಿದ್ದರಾಮಯ್ಯ
ಇದು ನನ್ನ ಅಂತಿಮ ಚುನಾವಣೆ. ಚಾಮುಂಡೇಶ್ವರಿ ನನಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರವಾಗಿದೆ. ಇಲ್ಲಿ ಗೆದ್ದರೂ ನಾನೇ ಎಂಎಲ್‌ಎ. ಯಾರೇ ಗೆದ್ದರೂ ನಾನೇ ಶಾಸಕ. ಚಾಮುಂಡೇಶ್ವರಿ ಕ್ಷೇತ್ರವನ್ನು ನಾನೆಂದೂ ಮರೆಯುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಪ್ರೀತಿ, ಗೌರವ, ಅಭಿಮಾನ ಇಂದಿಗೂ ಇದೆ. ನನ್ನ ಮೇಲೆ ಕಿಂಚಿತ್ತು ಗೌರವ, ಅಭಿಮಾನ ಇದ್ದರೆ ಚಾಮುಂಡೇಶ್ವರಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ಕೊಟ್ಟರು.
ಇದನ್ನೂ ಓದಿ: Gold rate : ಬಂಗಾರದ ದರದಲ್ಲಿ 110 ರೂ. ಇಳಿಕೆ, ಬೆಳ್ಳಿ 400 ರೂ. ದುಬಾರಿ
ನಾನೇ ಅಭ್ಯರ್ಥಿ ಎಂದು ಮತ ನೀಡಿ- ಸಿದ್ದರಾಮಯ್ಯ
ಚುನಾವಣೆಯನ್ನು ಯಾರೂ ಲಘುವಾಗಿ ಪರಿಗಣಿಸಬೇಡಿ. ಅತ್ಯಂತ ಗಂಭೀರವಾಗಿ ಕೆಲಸ ಮಾಡಿ, ಸಿದ್ದೇಗೌಡ ಪಕ್ಷದ ಅಭ್ಯರ್ಥಿ ಮಾತ್ರ. ಆದರೆ ಈ ಚುನಾವಣೆಯಲ್ಲಿ ನಾನೇ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿದುಕೊಳ್ಳಿ. ಕಳೆದ ಬಾರಿ ಜಿ.ಟಿ. ದೇವೇಗೌಡ ನನ್ನನ್ನು ಸೋಲಿಸಿದ್ದರು. ಅದಕ್ಕೆ ಹಲವು ರಾಜಕೀಯ ಕಾರಣಗಳಿದ್ದವು. ಬಹಳ ಒಳ್ಳೆಯ ಕೆಲಸ ಮಾಡಿದ್ದರೂ ನನ್ನನ್ನು ಸೋಲಿಸಿದ್ದರು. ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು. ಆ ಪಕ್ಷದವರು ಮನುಷ್ಯ ಮನುಷ್ಯರ ನಡುವೆ ಎತ್ತಿ ಕಟ್ಟುತ್ತಾರೆ. ದೇಶದಲ್ಲಿ ಅಶಾಂತಿ ಉಂಟಾಗುತ್ತದೆ. ಆ ಕಾರಣಕ್ಕೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಗುಂಪು ಮಾಡಲ್ಲ. ಯಾವುದೇ ಕಾರಣಕ್ಕೂ ಪಕ್ಷ ದ್ರೋಹ ಮಾಡಲ್ಲ. ಸಿದ್ದರಾಮಯ್ಯ ಅವರ ಕೈ ಬಲಪಡಿಸುತ್ತೇವೆ ಎಂದು ಶಪಥ ಮಾಡಿ ಎಂದು ಕೋರಿದ ಸಿದ್ದರಾಮಯ್ಯ, ನಮ್ಮ ಬಳಿಯೂ ಗುಂಪುಗಳಿವೆ. ಮರಿಗೌಡ, ಸಿದ್ದೇಗೌಡ ಅವರ ಮುಖ ನೋಡಬೇಡಿ. ಸಿದ್ದರಾಮಯ್ಯ ಮುಖ ನೋಡಿಕೊಂಡು ಒಗ್ಗಟ್ಟಾಗಿ ಕೆಲಸ ಮಾಡಿ. ನನ್ನ ಮೇಲೆ ನಿಮಗೆ ನಂಬಿಕೆ ಇದ್ದರೆ ನನ್ನ ಪರ ಇರಿ. ರಾಜ್ಯದಲ್ಲಿ ಶೇಕಡಾ 200ರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಇದನ್ನೂ ಓದಿ: Asad Encounter: ಮಗ ಎನ್ಕೌಂಟರ್ ಆದ ಸುದ್ದಿ ಕೇಳಿ ಕೋರ್ಟ್ನಲ್ಲಿಯೇ ದೊಡ್ಡದಾಗಿ ಅಳಲು ಶುರುಮಾಡಿದ ಅತೀಕ್ ಅಹ್ಮದ್
ನಾನು ರಕ್ತ ಕೊಡಿ ಎಂದು ಕೇಳುವಾಗ ಜಾತಿ ನೋಡಲ್ಲ. ಮುಸ್ಲಿಂ ಆದರೂ ಸರಿ ಕೊಡಿ ಎಂದು ಕೇಳುತ್ತೇವೆ. ಭೇದ-ಭಾವ ಮಾಡುವುದರಲ್ಲಿ ಬಿಜೆಪಿಯವರು ಮುಂಚೂಣಿಯಲ್ಲಿದ್ದಾರೆ. ಆ ಕಾರಣಕ್ಕೆ ನಾವು ಕಳೆದ ಬಾರಿ ಜೆಡಿಎಸ್‌ಗೆ ಅಧಿಕಾರ ನೀಡಿದೆವು. ಆ ಸಂದರ್ಭದಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಜಿ.ಟಿ.ದೇವೇಗೌಡ ಉನ್ನತ ಶಿಕ್ಷಣ ಸಚಿವರಾದರು. ಅವರಿಗೆ ಹೈಯರ್ ಎಜುಕೇಶನ್ ಜಾಸ್ತಿ ಇದೆ ಅಂತ ಆ ಖಾತೆ ಕೊಟ್ಟಿದ್ದರು. ಆದರೆ, ಕೊನೆಗೆ ಏನಾಯಿತು? ಅವರಿಬ್ಬರ ನಡುವೆ ಹೊಂದಾಣಿಕೆ ಇಲ್ಲದಿದ್ದಾಗ ನನ್ನ ಬಳಿ ಬಂದಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬರ್ತೀನಿ ಎಂದು ಹೇಳಿದ್ದರು. ಆದರೆ ಕೆಲವು ದಿನ ಇದ್ದು ಹೊರಟುಹೋದರು. ಅವನೇ ಬಂದ, ಅವನೇ ಹೋದ. ಈವಾಗ ಜೆಡಿಎಸ್‌ನಿಂದ ಅರ್ಜಿ ಹಾಕಿದ್ದಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಎಷ್ಟೇ ಪಂಚರತ್ನ ಯಾತ್ರೆ ಮಾಡಿದರೂ ಅಧಿಕಾರಕ್ಕೆ ಬರಲ್ಲ. ಇನ್ನೊಬ್ಬರ ಹೆಗಲ ಮೇಲೆ ಕುಳಿತು ಅಧಿಕಾರ ಮಾಡಬೇಕು. ನಾನು ಜೆಡಿಎಸ್ ಪಕ್ಷದಲ್ಲಿದ್ದಾಗ ನನ್ನನ್ನು ಪಕ್ಷದಿಂದ ಹೊರಕ್ಕೆ ಹಾಕಿದ್ದರು. ಆ ವೇಳೆಯೂ ಕೂಡ ಜಿಟಿಡಿ ನನ್ನ ಜತೆ ಬರಲಿಲ್ಲ. ಮಂತ್ರಿ ಮಾಡ್ತಾರೆ ಅನ್ನುವ ಕಾರಣಕ್ಕೆ ಜೆಡಿಎಸ್‌ನಲ್ಲೇ ಉಳಿದುಕೊಂಡ. ಜಿ.ಟಿ.ದೇವೇಗೌಡ ಅವಕಾಶವಾದಿ ರಾಜಕಾರಣಿ. ನಾನು ಜೆಡಿಎಸ್‌ನಲ್ಲಿದ್ದಾಗ 59 ಸ್ಥಾನಗಳನ್ನು ಗೆದ್ದರು. ಈವಾಗ 20-22 ಸ್ಥಾನವನ್ನಷ್ಟೇ ಜೆಡಿಎಸ್ ಗೆಲ್ಲಬಹುದು. ಹಳೇ ಮೈಸೂರು ಬಿಟ್ಟು ಎಲ್ಲೂ ಜೆಡಿಸ್ ಇಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬರಬಾರದು ಎಂಬುದು ಜೆಡಿಎಸ್ ಉದ್ದೇಶ. ತಮ್ಮ ಬೇಳೆ ಬೇಯಿಸಿಕೊಳ್ಳಲು ಜೆಡಿಎಸ್ ಪ್ರಯತ್ನ ಮಾಡುತ್ತಿದೆ. ರಾಜ್ಯದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.
ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ. ಎದುರಾಳಿಯನ್ನು ಎದುರಿಸುವ ಶಕ್ತಿ ಯಾರಿಗೆ ಇದೆಯೋ ಅವರಿಗೆ ಟಿಕೆಟ್ ನೀಡಿದ್ದೇವೆ. ಸಿದ್ದೇಗೌಡ ಒಬ್ಬನೇ ಸಮರ್ಥ ಅಲ್ಲ. ಅರ್ಜಿ ಹಾಕಿದ್ದ 11 ಮಂದಿ ಸಮರ್ಥರಿದ್ದಾರೆ. ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ಆ ಕಾರಣಕ್ಕೆ ಎಲ್ಲರ ಅಭಿಪ್ರಾಯ ಪಡೆದು ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೆಟ್ ನೀಡಲಾಗಿದೆ. ಸಿದ್ದೇಗೌಡರ ಆಯ್ಕೆ ಎಲ್ಲರಿಗೂ ಒಪ್ಪಿಗೆ ಇದೆ ಎಂಬುದು ನನ್ನ ಅಭಿಪ್ರಾಯ. ಸಭೆಯ ಉದ್ದೇಶ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುವುದು. ಸಿದ್ದೇಗೌಡ ಅವರು ಜೆಡಿಎಸ್ ಪಕ್ಷದಿಂದ ಬಂದವರು. ಒಂದು ಸರಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಅವರು ಕಾಂಗ್ರೆಸ್ ಮುಖಂಡರು. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಇದನ್ನೂ ಓದಿ: Modern Bhageeratha: ರಜೆಯಲ್ಲಿ ಏಕಾಂಗಿಯಾಗಿ 24 ಅಡಿ ಆಳದ ಬಾವಿ ಕೊರೆದ ವಿದ್ಯಾರ್ಥಿ: ಮನೆಗೆ ನೀರು ತಂದ ಆಧುನಿಕ ಭಗೀರಥ!
ನಾನು ವರುಣದಲ್ಲಿ ಗೆದ್ದೇ ಗೆಲ್ಲುತ್ತೇನೆ- ಸಿದ್ದರಾಮಯ್ಯ
ನಾನು ವರುಣದಲ್ಲಿ ಗೆದ್ದೇ ಗೆಲ್ಲುತ್ತೇನೆ. ಎಲ್ಲೋ ಬೆಂಗಳೂರಿನಲ್ಲಿ ಇದ್ದವನನ್ನು ಕರೆದುಕೊಂಡು ಬಂದಿದ್ದಾರೆ. ಬೇಡ ಬೇಡ ಎಂದರೂ ಕರೆದುಕೊಂಡು ಬಂದು ನಿಲ್ಲಿಸಿದ್ದಾರೆ. ಪಾಪ, ಯಾರಾದರೂ ಬರಲಿ.
ಅಂತಿಮವಾಗಿ ವರುಣ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ವಿರುದ್ಧ ವ್ಯಂಗ್ಯ.ವಾಡಿದರು.
ಸಿದ್ದರಾಮಯ್ಯ-ಚಿಕ್ಕನಗೌಡರ ರಹಸ್ಯ ಚರ್ಚೆ
ಬೊಮ್ಮಾಯಿ ಸಂಪುಟ ವಿಸ್ತರಣೆ ಮಾಡದಿರುವುದು ಏಕೆ?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಯನ್ನು ಏಕೆ ಮಾಡಲಿಲ್ಲ? ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಸಚಿವರನ್ನಾಗಿ ಮಾಡಬೇಕೆಂಬ ಸಣ್ಣ ಕಾರಣಕ್ಕೆ ಹೀಗೆ ಮಾಡಿದರು. ಇನ್ನು ಎರಡೂ ಪಕ್ಷಗಳು ಸೇರಿಕೊಂಡು ನನ್ನನ್ನು ಮುಗಿಸಲು ಯತ್ನಿಸಿದವು. ಜೆಡಿಎಸ್ ಪಕ್ಷಕ್ಕೂ ನಾನೇ ಟಾರ್ಗೆಟ್. ಬಿಜೆಪಿ ಪಕ್ಷಕ್ಕೂ ನಾನೇ ಟಾರ್ಗೆಟ್. ರಾಷ್ಟ್ರೀಯ ನಾಯಕರೆಲ್ಲ ಸೇರಿ ನನ್ನನ್ನು ಮುಗಿಸುವ ಯತ್ನ ಮಾಡಿದ್ದಾರೆ. ನಾನು ಮಾಡಿದ ತಪ್ಪೇನು? ರಾಜ್ಯದ ಜನರ ಆಶೀರ್ವಾದ ಇರುವಾಗ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ನಿಮ್ಮಿಂದ ಮಾತ್ರ ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು.